ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ರಾಜ್ಯ ಸರ್ಕಾರಿ ನೌಕರರು ಈ ದಿನಗಳಂದು ಖಾದಿ ಬಟ್ಟೆ ಧರಿಸುವುದು ಕಡ್ಡಾಯ; ಮುಖ್ಯ ಕಾರ್ಯದರ್ಶಿ ಆದೇಶ

Dress code for government employees: 77ನೇ ಗಣರಾಜ್ಯೋತ್ಸವದ ಶುಭಸಂದರ್ಭದಲ್ಲಿ ಸಾರ್ವಜನಿಕ ಸೇವೆಯನ್ನು ದೇಶದ ಸ್ವಾತಂತ್ರ್ಯ ಹೋರಾಟದೊಂದಿಗೆ ಮರುಸಂಪರ್ಕಗೊಳಿಸುವ ಉದ್ದೇಶದಿಂದ ರಾಜ್ಯ ಸರ್ಕಾರವು ಖಾದಿ ಬಳಕೆಯನ್ನು ಉತ್ತೇಜಿಸಲು ಈ ಮಹತ್ವದ ನಿರ್ಧಾರವನ್ನು ಕೈಗೊಂಡಿದೆ. ಈ ಬಗ್ಗೆ ಮುಖ್ಯ ಕಾರ್ಯದರ್ಶಿ ಮಹತ್ವದ ಸುತ್ತೋಲೆ ಹೊರಡಿಸಿದ್ದಾರೆ.

ರಾಜ್ಯ ಸರ್ಕಾರಿ ನೌಕರರು ಖಾದಿ ಬಟ್ಟೆ ಧರಿಸುವುದು ಕಡ್ಡಾಯ

ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್‌ -

Prabhakara R
Prabhakara R Jan 29, 2026 11:44 PM

ಬೆಂಗಳೂರು: ರಾಜ್ಯ ಸರ್ಕಾರಿ ನೌಕರರಿಗೂ (Government employees) ಡ್ರೆಸ್ ಕೋಡ್ (Dress code) ಜಾರಿ ಮಾಡಿ ರಾಜ್ಯ ಸರ್ಕಾರ ಸುತ್ತೋಲೆ ಹೊರಡಿಸಿದೆ. ಸರ್ಕಾರಿ ನೌಕರರು "ಸ್ವಯಂ ಪ್ರೇರಣೆಯಿಂದ ಪ್ರತಿ ತಿಂಗಳ ಮೊದಲ ಶನಿವಾರದಂದು ಖಾದಿ ಉಡುಪನ್ನು (khadi clothes) ಧರಿಸುವುದಲ್ಲದೇ, ಎಲ್ಲಾ ಸರ್ಕಾರಿ ಕಾರ್ಯಕ್ರಮಗಳಲ್ಲಿ ಖಾದಿ ಉಡುಪನ್ನು ಧರಿಸಬೇಕು ಎಂದು ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್‌ ಸೂಚಿಸಿದ್ದಾರೆ.

ಈ ಬಗ್ಗೆ ಸುತ್ತೋಲೆ ಹೊರಡಿಸಿರುವ ಅವರು, "ಖಾದಿ" ಕೇವಲ ಒಂದು ಉಡುಪು ಮಾತ್ರವಲ್ಲ, ಅದು ರಾಷ್ಟ್ರದ ಗೌರವ ಮತ್ತು ಹೆಮ್ಮೆಯ ಪ್ರತೀಕವಾಗಿದೆ. ಪ್ರಸ್ತುತ ಖಾದಿ ನೇಕಾರರು ನೂತನ ಶೈಲಿಯ ವಿನ್ಯಾಸದಲ್ಲಿ ಉಡುಪುಗಳನ್ನು ತಯಾರಿಸಲು ಮುಂದಾಗಿದ್ದಾರೆ. ಅಲ್ಲದೇ, ಖಾದಿ ಉತ್ಪಾದನೆಯು ಗ್ರಾಮೀಣ ಆರ್ಥಿಕತೆಯ ಮೂಲ ಆಧಾರವಾಗಿದ್ದು, ರಾಜ್ಯದ ಸಾವಿರಾರು ಗ್ರಾಮೀಣ ನೂಲುಗಾರರು ಮತ್ತು ನೇಕಾರರಿಗೆ ನೇರ ಹಾಗೂ ಪರೋಕ್ಷವಾಗಿ ಜೀವನೋಪಾಯವನ್ನು ಒದಗಿಸುತ್ತಿದೆ. ಆದುದರಿಂದ, 77ನೇ ಗಣರಾಜ್ಯೋತ್ಸವದ ಶುಭಸಂದರ್ಭದಲ್ಲಿ ಸಾರ್ವಜನಿಕ ಸೇವೆಯನ್ನು ದೇಶದ ಸ್ವಾತಂತ್ರ್ಯ ಹೋರಾಟದೊಂದಿಗೆ ಮರುಸಂಪರ್ಕಗೊಳಿಸುವ ಉದ್ದೇಶದಿಂದ ರಾಜ್ಯ ಸರ್ಕಾರವು ಖಾದಿ ಬಳಕೆಯನ್ನು ಉತ್ತೇಜಿಸಲು ಒಂದು ಮಹತ್ವದ ನಿರ್ಧಾರವನ್ನು ಕೈಗೊಂಡಿದೆ.

ರಾಜ್ಯದ ಎಲ್ಲಾ ಸರ್ಕಾರಿ, ಅನುದಾನಿತ ಸಂಸ್ಥೆಗಳು, ನಿಗಮ, ಮಂಡಳಿ, ಸ್ವಾಯತ್ತ ಸಂಸ್ಥೆಗಳು, ವಿಶ್ವವಿದ್ಯಾಲಯಗಳ ಅಧಿಕಾರಿ, ನೌಕರರುಗಳು "ಸ್ವಯಂ ಪ್ರೇರಣೆಯಿಂದ ಪ್ರತಿ ತಿಂಗಳ ಮೊದಲ ಶನಿವಾರದಂದು ಖಾದಿ ಉಡುಪನ್ನು ಧರಿಸುವುದು ಅಲ್ಲದೇ, ಸ್ವಾತಂತ್ರ್ಯ ದಿನಾಚರಣೆ ಮತ್ತು ಗಣರಾಜ್ಯೋತ್ಸವ ಸೇರಿದಂತೆ ಎಲ್ಲಾ ಅಧಿಕೃತ ಸರ್ಕಾರಿ ಕಾರ್ಯಕ್ರಮಗಳಲ್ಲಿ ಭಾಗವಹಿಸುವಾಗ ಖಾದಿ ಉಡುಪನ್ನು ಧರಿಸುವಂತೆ ತಮ್ಮ ಇಲಾಖೆಗಳ ಅಧಿಕಾರಿ, ಸಿಬ್ಬಂದಿಗಳಿಗೆ ನಿರ್ದೇಶನ ನೀಡಬೇಕು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿದ್ದಾರೆ.

ಈ ಕ್ರಮವು ಸರ್ಕಾರಿ ಅಧಿಕಾರಿ, ನೌಕರರುಗಳಲ್ಲಿ ಸ್ವದೇಶಿ ಉತ್ಪನ್ನಗಳ ಬಗ್ಗೆ ಗೌರವ, ಐಕ್ಯತೆ, ರಾಷ್ಟ್ರೀಯ ಭಾವನೆ, ಭಾರತೀಯತೆ, ಸ್ವಾಭಿಮಾನ ಮತ್ತು ಸಾಮಾಜಿಕ ಜವಾಬ್ದಾರಿಯ ಭಾವನೆಯನ್ನು ಬೆಳೆಸುವಲ್ಲಿ ಸಹಾಯಕವಾಗಲಿದೆ ಎಂದು ಭಾವಿಸಿದೆ. ಎಲ್ಲಾ ಜಿಲ್ಲೆಗಳಲ್ಲಿ ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ 176 ಖಾದಿ ಸಂಘ-ಸಂಸ್ಥೆಗಳ ಹೆಸರು, ವಿಳಾಸ ಹಾಗೂ ಉತ್ಪನ್ನಗಳ ವಿವರಗಳನ್ನು https://khadi.karnataka.gov.in ದಲ್ಲಿ ಪಡೆಯಬಹುದಾಗಿದೆ ಎಂದು ಸೂಚಿಸಿದ್ದಾರೆ.