ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ನವೆಂಬರ್‌ 15ರಂದು ಮೆಟ್ರೋ ಪಿಂಕ್‌ ಲೈನ್‌ ಉದ್ಘಾಟನೆ; ದೇಶದ 2ನೇ ಅತೀ ದೊಡ್ಡ ಮೆಟ್ರೋ ಜಾಲವಾಗಲು ಬೆಂಗಳೂರು ಸಜ್ಜು

Bengaluru Metro's Pink Line: ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್‌ನ್ಯೂಸ್‌ ಹೊರಬಿದ್ದಿದೆ. ಬಹು ನಿರೀಕ್ಷಿತ ನಮ್ಮ ಮೆಟ್ರೋ ಪಿಂಕ್​​ ಲೈನ್​​ ಆರಂಭಕ್ಕೆ ದಿನಗಣನೆ ಆರಂಭವಾಗಿದೆ. ಪ್ರಧಾನಿ ನರೇಂದ್ರ ಮೋದಿ ನವೆಂಬರ್‌ 15ರಂದು ಬೆಂಗಳೂರಿಗೆ ಆಗಮಿಸುತ್ತಿದ್ದು, ಈ ವೇಳೆ ಅವರು ನಮ್ಮ ಮೆಟ್ರೋದ ಪಿಂಕ್ ರೈಲು ಮಾರ್ಗವನ್ನು ಉದ್ಘಾಟಿಸಲಿದ್ದಾರೆ.

ನವೆಂಬರ್‌ 15ರಂದು ಮೆಟ್ರೋ ಪಿಂಕ್‌ ಲೈನ್‌ಗೆ ಪ್ರಧಾನಿ ಮೋದಿ ಚಾಲನೆ

ಸಾಂದರ್ಭಿಕ ಚಿತ್ರ -

Ramesh Ballamoole
Ramesh Ballamoole Oct 28, 2026 9:20 PM

ಬೆಂಗಳೂರು, ಅ. 28: ಸಿಲಿಕಾನ್‌ ಸಿಟಿಯ ಟ್ರಾಫಿಕ್‌ ಸಮಸ್ಯೆಗೆ ಬಹುದೊಡ್ಡ ಪರಿಹಾರವಾಗಿ 15 ವರ್ಷಗಳ ಹಿಂದೆ ಅಂದರೆ 2011ರಲ್ಲಿ ಪರಿಚಯಸಲ್ಪಟ್ಟ ನಮ್ಮ ಮೆಟ್ರೋ (Namma Metro) ರೈಲು ತನ್ನ ಜಾಲವನ್ನು ವಿಸ್ತರಿಸುತ್ತಲೇ ಇದೆ. ಈಗಾಗಲೇ ಪರ್ಪಲ್‌, ಗ್ರೀನ್‌ ಮತ್ತು ಯೆಲ್ಲೋ ಲೈನ್‌ ಕಾರ್ಯ ನಿರ್ವಹಿಸುತ್ತಿದ್ದು, ಈ ಸಾಲಿಗೆ ಸದ್ಯದಲ್ಲೇ ಪಿಂಕ್‌ ಲೈನ್‌ ಸೇರ್ಪಡೆಯಾಗಲಿದೆ. ಇದಕ್ಕಾಗಿ ಮುಹೂರ್ತ ನಿಗದಿಯಾಗಿದೆ. ಪ್ರಧಾನಿ ನರೇಂದ್ರ ಮೋದಿ (Narendra Modi) ನವೆಂಬರ್‌ 15ರಂದು ಬೆಂಗಳೂರಿಗೆ ಆಗಮಿಸುತ್ತಿದ್ದು, ಈ ವೇಳೆ ಅವರು ನಮ್ಮ ಮೆಟ್ರೋದ ಪಿಂಕ್ ರೈಲು ಮಾರ್ಗವನ್ನು (Bengaluru Metro's Pink Line) ಉದ್ಘಾಟಿಸಲಿದ್ದಾರೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.

ಪಿಂಕ್ ಮೆಟ್ರೋ ಮಾರ್ಗ ಕಾಳೇನ ಅಗ್ರಹಾರದಿಂದ ನಾಗವಾರವನ್ನು ಸಂಪರ್ಕಿಸುತ್ತದೆ. ಈ ಮಾರ್ಗದ ಒಟ್ಟು ಉದ್ದ ಸುಮಾರು 21.25 ಕಿ.ಮೀ. ಒಟ್ಟು 18 ನಿಲ್ದಾಣಗಳಿದೆ. ಸದ್ಯ 7.5 ಕಿ.ಮೀ. ಎತ್ತರಿಸಿದ (Elevated) ಮಾರ್ಗ ಉದ್ಘಾಟನೆಗೆ ಸಿದ್ಧವಾಗಿದೆ. ಬನ್ನೇರುಘಟ್ಟಕ್ಕೆ ತೆರಳುವವರಿಗೆ ಪಿಂಕ್‌ ಮಾರ್ಗ ಅನುಕೂಲವಾಗಲಿದೆ.

ನವೆಂಬರ್‌ 15ರಂದು ಮೋದಿ 7.5 ಕಿ.ಮೀ. ಉದ್ದದ ಎಲಿವೇಟೆಡ್ ಪಿಂಕ್‌ ಮೆಟ್ರೋ ಮಾರ್ಗವನ್ನು ಉದ್ಘಾಟಿಸಲಿದ್ದು, ಉಳಿದ 13.76 ಕಿ.ಮೀ. ಭೂಗತ ಸುರಂಗ ಮಾರ್ಗದ ಕಾಮಗಾರಿ ನಡೆಯುತ್ತಿದೆ. ಈ ಮಾರ್ಗ ಮುಂದಿನ ವರ್ಷ ಸಾರ್ವಜನಿಕರಿಗೆ ತೆರೆಯುವ ಸಾಧ್ಯತೆ ಇದೆ.

ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್ ; ಬ್ಲೂ ಲೈನ್ ಸಂಚಾರಕ್ಕೆ ಸಿದ್ಧತೆ

ಪಿಂಕ್‌ ಮಾರ್ಗದ ವೈಶಿಷ್ಟ್ಯ

ಈ ಪಿಂಕ್‌ ಲೈನ್‌ ಬೆಂಗಳೂರಿನ ದಕ್ಷಿಣ ಭಾಗವಾದ ಕಾಳೇನ ಅಗ್ರಹಾರವನ್ನು ಉತ್ತರದ ಭಾಗವಾದ ನಾಗವಾರದ ಜತೆ ಸಂಪರ್ಕ ಕಲ್ಪಿಸುತ್ತದೆ. ಇದರ ಒಟ್ಟು ಉದ್ದ 21.25 ಕಿ.ಮೀ. ಆಗಿದ್ದು, ಈ ಪ್ರದೇಶದ ಸಂಚಾರ ದಟ್ಟಣೆಯನ್ನು ಪರಿಣಾಮಕಾರಿಯಾಗಿ ತಗ್ಗಿಸುವ ನಿರೀಕ್ಷೆ ಇದೆ. ಸದಾ ವಾಹನಗಳಿಂದ ತುಂಬಿರುವ ಡೈರಿ ಸರ್ಕಲ್‌ನಿಂದ ಶಿವಾಜಿನಗರ ಹಾಗೂ ಕಂಟೋನ್ಮೆಂಟ್ ಮೂಲಕ ನಾಗವಾರವರೆಗೆ ಈ ಮಾರ್ಗ ಸಾಗುತ್ತದೆ. ನವೆಂಬರ್‌ 15ರಂದು ಉದ್ಘಾಟನೆಯಾಗಲಿರುವ 7.5 ಕಿ.ಮೀ. ಉದ್ದದ ಮಾರ್ಗವು ಕಾಳೇನ ಅಗ್ರಹಾರ, ಹುಳಿಮಾವು, ಐಐಎಂಬಿ, ಜೆ.ಪಿ. ನಗರ 4ನೇ ಹಂತ, ಜಯದೇವ ಆಸ್ಪತ್ರೆ ಮತ್ತು ತಾವರೆಕೆರೆ ಸೇರಿ ಒಟ್ಟು 6 ನಿಲ್ದಾಣಗಳನ್ನು ಒಳಗೊಂಡಿದೆ.

ಸೆಂಚುರಿ ಬಾರಿಸಲಿದೆ ನಮ್ಮ ಮೆಟ್ರೋ

ವಿಶೇಷ ಎಂದರೆ 7.5 ಕಿ.ಮೀ. ಉದ್ದದ ಪಿಂಕ್‌ ಮಾರ್ಗದ ಉದ್ಘಾಟನೆಯೊಂದಿಗೆ ನಮ್ಮ ಮೆಟ್ರೋ ಸೆಂಚುರಿ ಬಾರಿಸಲಿದೆ. ಈಗಾಗಲೇ ನಮ್ಮ ಮೆಟ್ರೋ 3 ಮಾರ್ಗಗಳ ಮೂಲಕ ಸುಮಾರು 96.1 ಕಿ.ಮೀ. ಕಾರ್ಯಾಚರಿಸುತ್ತಿದೆ. ನವೆಂಬರ್‌ 15ರ ಬಳಿಕ ಇದು 103.6 ಕಿ.ಮೀ.ಗೆ ಏರಿಕೆಯಾಗಲಿದೆ. ಇದರೊಂದಿಗೆ ದೇಶದ 2ನೇ ಅತೀ ದೊಡ್ಡ ಮೆಟ್ರೋ ಜಾಲ ಎನ್ನುವ ಹೆಗ್ಗಳಿಕೆಗೆ ನಮ್ಮ ಮೆಟ್ರೋ ಪಾತ್ರವಾಗಲಿದೆ. 416 ಕಿ.ಮೀ. ಮೂಲಕ ದಿಲ್ಲಿ ಮೆಟ್ರೋ ಮೊದಲ ಸ್ಥಾನದಲ್ಲಿದೆ. ಮುಂಬೈ ಮೆಟ್ರೋದ ಉದ್ದ 102.6 ಕಿ.ಮೀ.

ನಮ್ಮ ಮೆಟ್ರೋ ದರ ಏರಿಕೆಗೆ ಸಂಸದ ತೇಜಸ್ವಿ ಸೂರ್ಯ ಖಾಲಿ ಟ್ರಂಕ್‌ ಹಿಡಿದು ಪ್ರತಿಭಟನೆ, ಬಂಧನ

ಕಾಳೇನ ಅಗ್ರಹಾರ–ತಾವರೆಕೆರೆ ನಡುವಿನ 7.5 ಕಿ.ಮೀ. ಎಲಿವೇಟೆಡ್ ಮಾರ್ಗದ ಸುರಕ್ಷತಾ ಪರಿಶೀಲನೆ ಮಾಸಾರಂಭದಲ್ಲಿ ಪೂರ್ಣಗೊಂಡಿತ್ತು. ಅಕ್ಟೋಬರ್ 6ರಿಂದ 8ರವರೆಗೆ ದಕ್ಷಿಣ ವಲಯ ಮೆಟ್ರೋ ರೈಲ್ವೆ ಸುರಕ್ಷತಾ ಆಯುಕ್ತ (ಸಿಎಂಆರ್‌ಎಸ್) ವಿ. ವೆಂಕಟಸುಬ್ರಮಣಿಯನ್ ನೇತೃತ್ವದಲ್ಲಿ ಪರಿಶೀಲನಾ ಕಾರ್ಯ ನಡೆದಿತ್ತು.

ರಾಜ್ಯದ ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ.

ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ.