ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಧನುಷ್ ನಟನೆಯ 'ಓಂ' ಸಿನಿಮಾದಲ್ಲಿ 2015ರಲ್ಲಿ ಆಂಧ್ರಪ್ರದೇಶದಲ್ಲಿ ನಡೆದ ಆ ಭೀಕರ ಎನ್‌ಕೌಂಟರ್ ಕಥೆ ಇದೆಯಾ?

Dhanush Om Movie: ಧನುಷ್‌ ನಟನೆಯ ʻಓಂʼ ಸಿನಿಮಾದ ಸುತ್ತ ತೀವ್ರ ಕುತೂಹಲ ಸೃಷ್ಟಿಯಾಗಿದ್ದು, ಚಿತ್ರವು 2015ರ ಶೇಷಾಚಲಂ ಅರಣ್ಯದಲ್ಲಿ ನಡೆದ ಭೀಕರ ಎನ್‌ಕೌಂಟರ್ ಕಥೆಯನ್ನು ಆಧರಿಸಿದೆ ಎಂಬ ಮಾತುಗಳು ಹರಿದಾಡುತ್ತಿವೆ. ಅಂದು ಆಂಧ್ರ ಪೊಲೀಸರಿಂದ ಹತರಾದ 20 ತಮಿಳು ಕೂಲಿ ಕಾರ್ಮಿಕರ ಕಥೆಯನ್ನು ಈ ಸಿನಿಮಾ ಹೊಂದಿದೆಯಾ ಎಂಬುದು ನವೆಂಬರ್ 20ಕ್ಕೆ ಗೊತ್ತಾಗಲಿದೆ.

Dhanush: ‘ಓಂ’ ಚಿತ್ರದಲ್ಲಿ 2015ರ ಆಂಧ್ರ ಪೊಲೀಸರ ಎನ್‌ಕೌಂಟರ್ ಕರಾಳ ಸತ್ಯ?

-

Avinash GR
Avinash GR Oct 28, 2026 9:12 PM

ಧನುಷ್ ನಟನೆಯ 'ಓಂ: ಚಾಪ್ಟರ್ 1' ಸಿನಿಮಾವು ಈಗಾಗಲೇ ಭಾರಿ ಕುತೂಹಲ ಮೂಡಿಸಿದೆ. 'ಅಮರನ್' ಖ್ಯಾತಿಯ ರಾಜ್‌ಕುಮಾರ್ ಪೆರಿಯಸಾಮಿ ನಿರ್ದೇಶನದ ಈ ಚಿತ್ರದಲ್ಲಿ ಸಾಯಿ ಪಲ್ಲವಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಪೊಲೀಸ್‌ ಅಧಿಕಾರಿ ನಿತ್ಯಾ ರೆಡ್ಡಿ ಎಂಬ ಪಾತ್ರವನ್ನು ಪರಿಚಯಿಸುವ ಅವರ ಗ್ಲಿಂಪ್ಸ್ ಇತ್ತೀಚೆಗೆ ಬಿಡುಗಡೆಯಾಗಿದ್ದು, ಸಿನಿಪ್ರಿಯರಿಂದ ಅಪಾರ ಮೆಚ್ಚುಗೆ ಪಡೆದುಕೊಂಡಿದೆ.

ʻಪುಷ್ಪʼ ಮಾದರಿಯ ಕಥೆ ಇದೆಯಾ?

ಅಂದಹಾಗೆ, ಈವರೆಗೂ ಬಿಡುಗಡೆಯಾಗಿರುವ ಈ ಚಿತ್ರದ ಟೀಸರ್, ಪ್ರೋಮೋ ಮತ್ತು ಗ್ಲಿಂಪ್ಸ್‌ಗಳು ಶೇಷಾಚಲಂ ಅರಣ್ಯದಲ್ಲಿ ನಡೆಯುವ ರಕ್ತಚಂದನ ಕಳ್ಳಸಾಗಣೆಯ ಸುತ್ತ ಕಥೆ ಸಾಗುವುದನ್ನು ಸೂಚಿಸುತ್ತವೆ. ರಕ್ತಚಂದನದ ಮರಗಳನ್ನು ಕಡಿಯುವ ಕಾಯಕದಲ್ಲಿ ತೊಡಗಿರುವ ಕೂಲಿ ಕಾರ್ಮಿಕರ ಜೊತೆ ಸಂಪರ್ಕ ಹೊಂದಿರುವ ಯುವಕನ ಪಾತ್ರದಲ್ಲಿ ಧನುಷ್ ಕಾಣಿಸಿಕೊಂಡಂತಿದೆ. ಅಲ್ಲು ಅರ್ಜುನ್ ನಟನೆಯ 'ಪುಷ್ಪ' ಸಿನಿಮಾದಲ್ಲೂ ರಕ್ತಚಂದನದ ಕಥೆ ಇತ್ತು, ಆದರೆ 'ಓಂ' ಸಿನಿಮಾವು ಬೇರೆಯದೇ ಸುಳಿವು ನೀಡಿದೆ.

ಹೌದು, ಎಲ್ಲರಿಗೂ ಗೊತ್ತಿರುವ 'ಪುಷ್ಪ' ಮಾದರಿಯ ಕಥೆಯನ್ನು ಹೇಳುವ ಬದಲು, ರಕ್ತಚಂದನದ ದಂಧೆಯಲ್ಲಿ ಭಾಗಿಯಾಗಿರುವ ಕಾರ್ಮಿಕರ ಬದುಕು ಮತ್ತು ಈ ಅಕ್ರಮ ಜಾಲದ ಹಿಂದಿರುವ ಬೃಹತ್ ನೆಟ್‌ವರ್ಕ್ ಮೇಲೆ ಚಿತ್ರವು ಹೆಚ್ಚು ಗಮನ ಹರಿಸಿರುವಂತೆ ಕಾಣುತ್ತದೆ. ಎಲ್ಲಕ್ಕಿಂತ ಹೆಚ್ಚಾಗಿ, 2015ರಲ್ಲಿ ಶೇಷಾಚಲಂ ಕಾಡುಗಳಲ್ಲಿ ನಡೆದ ಭೀಕರ ಎನ್‌ಕೌಂಟರ್ ಕುರಿತೇ 'ಓಂ' ಸಿನಿಮಾವನ್ನು ಮಾಡಿರಬಹುದೇ ಎಂಬ ಪ್ರಶ್ನೆ ಎಲ್ಲರಲ್ಲೂ ಮೂಡಿದೆ.

2015ರಲ್ಲಿ ಶೇಷಾಚಲಂ ಅರಣ್ಯದಲ್ಲಿ ಏನಾಗಿತ್ತು?

ಅಂದು ರಕ್ತಚಂದನ ಕಳ್ಳಸಾಗಣೆಯಲ್ಲಿ ಭಾಗಿಯಾಗಿದ್ದಾರೆ ಎಂಬ ಶಂಕೆಯ ಮೇಲೆ 20 ಮಂದಿಯನ್ನು ಆಂಧ್ರಪ್ರದೇಶದ ಪೊಲೀಸರು ಎನ್‌ಕೌಂಟರ್‌ನಲ್ಲಿ ಗುಂಡಿಕ್ಕಿ ಕೊಂದಿದ್ದರು. ಮೃತಪಟ್ಟವರಲ್ಲಿ ಬಹುತೇಕರು ತಮಿಳುನಾಡು ಮೂಲದ ಕೂಲಿ ಕಾರ್ಮಿಕರೆಂದು ವರದಿಯಾಗಿತ್ತು. ಆ ಕಾರ್ಮಿಕರ ಗುಂಪು ಪೊಲೀಸರ ಮೇಲೆ ಹಲ್ಲೆ ನಡೆಸಿದ್ದರಿಂದ ಆತ್ಮರಕ್ಷಣೆಗಾಗಿ ಗುಂಡು ಹಾರಿಸಬೇಕಾಯಿತು ಎಂದು ಆಂಧ್ರಪ್ರದೇಶ ಸರ್ಕಾರ ಸಮರ್ಥಿಸಿಕೊಂಡಿತ್ತು. ಆದರೆ, ಈ ಘಟನೆ ಬಗ್ಗೆ ತೀವ್ರ ಟೀಕೆಗೆ ಗುರಿಯಾಗಿತ್ತು, ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದಿಂದಲೂ ತನಿಖೆ ನಡೆದಿತ್ತು.

Kriti Sanon: ಧನುಷ್-ಕೃತಿ ನಟನೆಯ ʻತೇರೆ ಇಷ್ಕ್ ಮೇʼ ಒಟಿಟಿ ಎಂಟ್ರಿ ಯಾವಾಗ? ಸ್ಟ್ರೀಮಿಂಗ್‌ ಎಲ್ಲಿ?

ತಮಿಳುನಾಡು ಸರ್ಕಾರದಿಂದ ಆಕ್ರೋಶ

ಅಲ್ಲದೆ, ಆ ಸಮಯದಲ್ಲಿ ಆಂಧ್ರಪ್ರದೇಶ ಮತ್ತು ತಮಿಳುನಾಡು ಸರ್ಕಾರಗಳ ನಡುವೆ ವಿಷಮ ಪರಿಸ್ಥಿತಿ ನಿರ್ಮಾಣವಾಗಿತ್ತು. "ತಮಿಳುನಾಡಿನ ಅಮಾಯಕರನ್ನು ಆಂಧ್ರ ಪೊಲೀಸರು ಹತ್ಯೆ ಮಾಡಿದ್ದಾರೆ" ಎಂದು ತಮಿಳುನಾಡು ಸರ್ಕಾರ ಆಕ್ರೋಶ ವ್ಯಕ್ತಪಡಿಸಿದರೆ, ಅತ್ತ ಅಂದಿನ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಆಂಧ್ರ ಪೊಲೀಸರ ಕ್ರಮವನ್ನು ಸಮರ್ಥಿಸಿಕೊಂಡಿದ್ದರು.

ನವೆಂಬರ್‌ 20ಕ್ಕೆ ಗ್ರ್ಯಾಂಡ್‌ ರಿಲೀಸ್‌

ಇದೀಗ ಅದೇ ಘಟನೆಯನ್ನು ಆಧರಿಸಿ 'ಓಂ' ಸಿನಿಮಾ ರೂಪಿಸಿದ್ದರೆ, ಬಿಡುಗಡೆಯ ನಂತರ ಆಂಧ್ರಪ್ರದೇಶ ಮತ್ತು ತಮಿಳುನಾಡಿನಲ್ಲಿ ದೊಡ್ಡ ಮಟ್ಟದ ಚರ್ಚೆಗಳು ಶುರುವಾಗುವ ಸಾಧ್ಯತೆಯಿದೆ. ನಿರ್ದೇಶಕ ರಾಜ್‌ಕುಮಾರ್ ಪೆರಿಯಸಾಮಿ ಈ ಸೂಕ್ಷ್ಮ ವಿಷಯವನ್ನು ಬಹಳ ಎಚ್ಚರಿಕೆಯಿಂದ ನಿಭಾಯಿಸಿರಬಹುದು ಎಂಬ ಮಾತುಗಳು ಕೇಳಿಬರುತ್ತಿವೆ. ಅಂತಿಮವಾಗಿ ಇದೆಲ್ಲದಕ್ಕೂ ನವೆಂಬರ್ 20ರಂದು ಅಧಿಕೃತ ಉತ್ತರ ಸಿಗಲಿದ್ದು, ಈ ಸಿನಿಮಾ ತಮಿಳು ಮತ್ತು ತೆಲುಗು ಭಾಷೆಯಲ್ಲಿ ಏಕಕಾಲಕ್ಕೆ ತೆರೆಗೆ ಬರಲಿದೆ.