Yettinahole Project: ಎತ್ತಿನಹೊಳೆ ಯೋಜನೆಯನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸುತ್ತೇವೆ ಎಂದ ಸಿಎಂ
Yettinahole Project: ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆಯಡಿ 14.056 ಟಿಎಂಸಿ ಕುಡಿಯುವ ನೀರು, 9.953 ಟಿಎಂಸಿ ನೀರು ಕೆರೆಯನ್ನು ತುಂಬಿಸಲು ಡಿಪಿಆರ್ ಮಾಡಲಾಗಿದೆ. ಯೋಜನೆಗೆ 23,251.66 ಕೋಟಿ ರೂ. ಪರಿಷ್ಕೃತ ಅಂದಾಜು ಮಾಡಲಾಗಿದ್ದು, ಇದುವರೆಗೆ ರೂ.17,147 ಕೋಟಿ ವೆಚ್ಚವಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಮಾಹಿತಿ ನೀಡಿದ್ದಾರೆ.


ಬೆಂಗಳೂರು: ಎತ್ತಿನಹೊಳೆ ನೀರಾವರಿ ಯೋಜನೆಯಲ್ಲ, ಕುಡಿಯುವ ನೀರಿನ ಮತ್ತು ಕೆರೆ ತುಂಬಿಸುವ ಯೋಜನೆಯಾಗಿದೆ. ಯೋಜನಾ ವ್ಯಾಪ್ತಿಯ ಎಲ್ಲಾ 7 ಜಿಲ್ಲೆಗಳಿಗೆ ಕುಡಿಯುವ ನೀರು ಒದಗಿಸುವುದು ಸರ್ಕಾರದ ಗುರಿ. ಎತ್ತಿನಹೊಳೆ ಯೋಜನೆಯನ್ನು (Yettinahole Project) ನಿಗದಿತ ಅವಧಿಯೊಳಗೆ ಪೂರ್ಣಗೊಳಿಸುವುದು ಸರ್ಕಾರದ ಆದ್ಯತೆಯಾಗಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ. ಸಿಎಂ ಅಧಿಕೃತ ನಿವಾಸ ಕಾವೇರಿಯಲ್ಲಿ ಶುಕ್ರವಾರ ನಡೆದ ಎತ್ತಿನಹೊಳೆ ಯೋಜನೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿದರು.
ಕುಡಿಯುವ ನೀರಿನ ಪೂರೈಕೆಗೆ ಬೇಕಾದಷ್ಟು ನೀರು ಸರಾಸರಿ ಲಭ್ಯವಿದೆ. ಪ್ರಾರಂಭಿಕ ಹಂತದಲ್ಲಿ ಕುಡಿಯುವ ನೀರಿನ ಕಾಮಗಾರಿಗಳನ್ನು ಪೂರ್ಣಗೊಳಿಸಿ ಬಳಿಕ ಕೆರೆಗಳನ್ನು ತುಂಬಿಸುವ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಬೇಕು. ಯೋಜನಾ ವ್ಯಾಪ್ತಿಯ ಎಲ್ಲಾ ಜಿಲ್ಲೆಗಳಲ್ಲಿ ಕುಡಿಯುವ ನೀರಿಗೆ ಯಾವುದೇ ತೊಂದರೆಯಾಗದಂತೆ ಖಾತ್ರಿಪಡಿಸಬೇಕು. ಕುಡಿಯುವ ನೀರು ಕಾಮಗಾರಿ ಪೂರ್ಣಗೊಳಿಸಲು ಇರುವ ಎಲ್ಲಾ ತಾಂತ್ರಿಕ ಅಡಚಣೆಗಳನ್ನು ನಿವಾರಿಸಬೇಕು ಎಂದು ಮುಖ್ಯಮಂತ್ರಿ ಅವರು ಸೂಚನೆ ನೀಡಿದರು.
ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆಯಡಿ 14.056 ಟಿಎಂಸಿ ಕುಡಿಯುವ ನೀರು, 9.953 ಟಿಎಂಸಿ ನೀರು ಕೆರೆಯನ್ನು ತುಂಬಿಸಲು ಡಿಪಿಆರ್ ಮಾಡಲಾಗಿದೆ. ಯೋಜನೆಗೆ 23,251.66 ಕೋಟಿ ರೂ. ಪರಿಷ್ಕೃತ ಅಂದಾಜು ಮಾಡಲಾಗಿದ್ದು, ಇದುವರೆಗೆ ರೂ.17,147 ಕೋಟಿ ವೆಚ್ಚವಾಗಿದೆ.

ಒಂದನೇ ಹಂತದಲ್ಲಿ ನದಿ ಪಾತ್ರದ ಏತ ಕಾಮಗಾರಿಗಳಲ್ಲಿ 7ಪ್ಯಾಕೇಜ್ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದೆ. ಹಂತ 2ರಲ್ಲಿ ಗುರುತ್ವ ಮುಖ್ಯ ಕಾಲುವೆ ಕಾಮಗಾರಿಗಳಲ್ಲಿ 33 ಪ್ಯಾಕೇಜ್ಗಳ ಪೈಕಿ 11 ಪ್ಯಾಕೇಜ್ ಪೂರ್ಣಗೊಳಿಸಲಾಗಿದೆ. 16 ಕಿಮೀ ವ್ಯಾಪ್ತಿಯ ಕಾಮಗಾರಿ ಪ್ರಾರಂಭಿಸಬೇಕಿದ್ದು, ಇದರಲ್ಲಿ 6ಎಕ್ರೆ ಅರಣ್ಯ ಪ್ರದೇಶ ಹಾಗೂ 10ಕಿಮೀ ಭೂಸ್ವಾಧೀನ ಪ್ರಕ್ರಿಯೆ ಕೈಗೊಳ್ಳಬೇಕಾಗಿದೆ. ಯೋಜನೆಯನ್ನು 2027ರ ಮಾರ್ಚ್ ಒಳಗಾಗಿ ಪೂರ್ಣಗೊಳಿಸಲು ಕಾಲಾವಧಿ ನಿಗದಿಪಡಿಸಲಾಗಿದೆ ಎಂದು ತಿಳಿಸಿದರು.
ಕಳೆದ ಏಳು ವರ್ಷಗಳಲ್ಲಿ ಸರಾಸರಿ 18.08 ಟಿಎಂಸಿ ನೀರು ಯೋಜನೆಗೆ ಲಭ್ಯವಿದ್ದು, ಉಳಿದ 6ಟಿಎಂಸಿ ನೀರಿನ ಕೊರತೆಯನ್ನು ನೀಗಿಸಲು ಹೆಚ್ಚುವರಿ ನೀರನ್ನು ತಿರುವುಗೊಳಿಸುವ (Augmentation) ಕುರಿತು ಕಾರ್ಯಸಾಧ್ಯತಾ ವರದಿಯನ್ನು ತಯಾರಿಸಲು ಸಮಾಲೋಚಕರನ್ನು ನೇಮಕ ಮಾಡಲಾಗಿದೆ ಎಂದು ಹೇಳಿದರು.
ಸಭೆಯಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವರಾದ ಡಾ.ಜಿ.ಪರಮೇಶ್ವರ್, ಕೆ.ಎಚ್.ಮುನಿಯಪ್ಪ, ಕೃಷ್ಣ ಭೈರೇಗೌಡ, ಡಾ.ಎಂ.ಸಿ.ಸುಧಾಕರ್, ಭೈರತಿ ಸುರೇಶ್, ಮುಖ್ಯಮಂತ್ರಿ ಅವರ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್, ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಮುಖ್ಯಮಂತ್ರಿ ಅವರ ಅಪರ ಮುಖ್ಯ ಕಾರ್ಯದರ್ಶಿ ಅಂಜುಂ ಪರ್ವೇಜ್ ಸೇರಿ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ಈ ಸುದ್ದಿಯನ್ನೂ ಓದಿ | MP Dr K Sudhakar: ಬಯಲುಸೀಮೆಗೆ ಒತ್ತು ನೀಡಿ, ಎತ್ತಿನಹೊಳೆ ಯೋಜನೆ ಪೂರ್ಣಗೊಳಿಸಿ, ಎಚ್ಎನ್ ವ್ಯಾಲಿಯಲ್ಲಿ ತೃತೀಯ ಹಂತದ ಶುದ್ಧೀಕರಣ ಮಾಡಿ: ಸಂಸದ ಡಾ.ಕೆ.ಸುಧಾಕರ್ ಆಗ್ರಹ
ಅಲ್ಪಸಂಖ್ಯಾತರಿಗೆ ಗುಡ್ನ್ಯೂಸ್; ವಸತಿ ಹಂಚಿಕೆಯಲ್ಲಿ ಮೀಸಲು ಹೆಚ್ಚಿಸಿದ ರಾಜ್ಯ ಸರ್ಕಾರ
ಬೆಂಗಳೂರು: ವಸತಿ ಇಲಾಖೆಯಿಂದ ನಗರ ಪ್ರದೇಶಗಳಲ್ಲಿ ನಿರ್ಮಿಸಲಾಗಿರುವ ವಸತಿಗಳು ಹೆಚ್ಚಾಗಿ ಖಾಲಿ ಇದ್ದು, ಅಲ್ಪಸಂಖ್ಯಾತರು ಈ ಮನೆಗಳಿಗೆ ಹೋಗಲು ಮುಂದಾಗಿದ್ದಾರೆ. ಹೀಗಾಗಿ ಅವರಿಗೆ ನೀಡಲಾಗಿದ್ದ ವಸತಿ ಹಂಚಿಕೆ ಮೀಸಲಾತಿಯನ್ನು ಶೇ. 10ರಿಂದ 15ಕ್ಕೆ ಏರಿಕೆ ಮಾಡುತ್ತಿದ್ದೇವೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ (DK Shivakumar) ತಿಳಿಸಿದರು. ವಿಧಾನಸೌಧದ ಆವರಣದಲ್ಲಿ ಮಾಧ್ಯಮಗಳಿಗೆ ಗುರುವಾರ ಪ್ರತಿಕ್ರಿಯೆ ನೀಡಿದ ಅವರು, ಕೆಲವು ನಗರ ಪ್ರದೇಶಗಳಲ್ಲಿ ಅಲ್ಪಸಂಖ್ಯಾತ ಸಮುದಾಯದ ಶೇ. 20-30ರಷ್ಟು ಬಡವರು ಇದ್ದಾರೆ. ಹೀಗಾಗಿ ಅವರಿಗೆ ಮೀಸಲಾತಿ ಹೆಚ್ಚಳ ಮಾಡಲು ಪ್ರಸ್ತಾವನೆ ಬಂದಿದೆ. ಈ ಮನೆಗಳಿಗೆ ಹಣ ಪಾವತಿ ಮಾಡಬೇಕು. ಇತರರು ಇದಕ್ಕೆ ಹೆಚ್ಚಿನ ಆಸಕ್ತಿ ತೋರಿಲ್ಲ. ಬೆಂಗಳೂರಿನಲ್ಲೂ ಅನೇಕ ವಸತಿ ಕಟ್ಟಡಗಳಲ್ಲಿ ಮನೆಗಳು ಖಾಲಿ ಇವೆ. ಮನೆಗಳ ನಿರ್ಮಾಣಕ್ಕೆ ಕೇಂದ್ರ ಸರ್ಕಾರದ ಸಹಾಯಧನ ತೀರಾ ಕಡಿಮೆ ಇದೆ. ಈ ಮನೆಗಳನ್ನು ಕಟ್ಟಿದ ನಂತರ ಖಾಲಿ ಬಿದ್ದಿವೆ. ಇವುಗಳನ್ನು ಯಾರಿಗೆ ನೀಡಬೇಕು? ಎಂದು ಪ್ರಶ್ನಿಸಿದರು.
ಮಂಡ್ಯದಲ್ಲಿಯೂ ಕಟ್ಟಡಗಳನ್ನು ನಿರ್ಮಿಸಲಾಗಿದೆ. ಆದರೆ ಅಲ್ಲಿಗೆ ಯಾರು ಹೋಗದೇ ಖಾಲಿ ಬಿದ್ದಿವೆ. ಈ ಮನೆಗಳಿಗೆ ಹೋಗಲು ಅಲ್ಪಸಂಖ್ಯಾತರು ಮುಂದಾಗಿದ್ದಾರೆ. ಹೀಗಾಗಿ ಸರ್ಕಾರ ಈ ತೀರ್ಮಾನ ಮಾಡಿದೆ ಎಂದು ತಿಳಿಸಿದರು.
ಈ ಸುದ್ದಿಯನ್ನೂ ಓದಿ | KGID: ಕೆಜಿಐಡಿ ಪಾಲಿಸಿ ಮೆಚ್ಯೂರಿಟಿ ವಯಸ್ಸನ್ನು 60 ವರ್ಷಕ್ಕೆ ಹೆಚ್ಚಿಸುವ ಕುರಿತು ಚರ್ಚೆ
ಇದು ಓಲೈಕೆ ರಾಜಕಾರಣ ಎಂಬ ಬಿಜೆಪಿ ನಾಯಕರ ಹೇಳಿಕೆ ಬಗ್ಗೆ ಕೇಳಿದಾಗ, ʼಯಾರು ಏನಾದರೂ ಹೇಳಿಕೊಳ್ಳಲಿ. ನಾವು ಬಡ ವರ್ಗದ ಜನರಿಗೆ ನೆರವು ನೀಡುತ್ತಿದ್ದೇವೆ. ಈ ಮನೆಗಳಿಗೆ ಯಾರೂ ಅರ್ಜಿ ಹಾಕದೇ ಇದ್ದಾಗ ನಾವು ಏನು ಮಾಡಬೇಕು? ಮನೆಯನ್ನು ಹಾಗೇ ಖಾಲಿ ಬಿಡಬೇಕೇ? ಉಳಿದ ವಿಚಾರವನ್ನು ಕಾನೂನು ಸಚಿವರು ವಿವರಿಸಲಿದ್ದಾರೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.