Bengaluru Karaga 2025: ಬೆಂಗಳೂರು ಕರಗ; ಧರ್ಮರಾಯಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ, ಪೂಜೆ ಸಲ್ಲಿಸಿದ ಸಿಎಂ
Bengaluru Karaga 2025: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬೆಂಗಳೂರಿನ ತಿಗಳರಪೇಟೆಯ ಶ್ರೀ ಧರ್ಮರಾಯಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿ, ಕರಗ ಶಕ್ತ್ಯೋತ್ಸವ ಮಹಾರಥೋತ್ಸವಕ್ಕೆ ಶುಭ ಕೋರಿ ನಮನ ಸಲ್ಲಿಸಿದರು. ಶನಿವಾರ ರಾತ್ರಿ 12:30ಕ್ಕೆ ಬೆಂಗಳೂರು ಕರಗಕ್ಕೆ ಚಾಲನೆ ನೀಡಲಾಗುತ್ತದೆ.



ಬೆಂಗಳೂರಿನ ಐತಿಹಾಸಿಕ ಕರಗ ಶಕ್ತ್ಯೋತ್ಸವಕ್ಕೆ ಶನಿವಾರ ರಾತ್ರಿ 12:30ಕ್ಕೆ ಚಾಲನೆ ನೀಡಲಾಗುತ್ತದೆ. ಇದಕ್ಕೂ ಮೊದಲು ಸಿಎಂ ಸಿದ್ದರಾಮಯ್ಯ ನಗರದ ತಿಗಳರಪೇಟೆಯ ಶ್ರೀ ಧರ್ಮರಾಯಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿ, ಕರಗ ಶಕ್ತ್ಯೋತ್ಸವ ಮಹಾರಥೋತ್ಸವಕ್ಕೆ ಶುಭ ಕೋರಿ ನಮನ ಸಲ್ಲಿಸಿದರು.

ಉತ್ಸವದ ಹಿನ್ನೆಲೆ ಧರ್ಮರಾಯಸ್ವಾಮಿ ದೇಗುಲ ನವ ವಧುವಿನಂತೆ ಸಿಂಗಾರಗೊಂಡಿದ್ದು, ಮಲ್ಲಿಗೆ ಹೂವುಗಳಿಂದ ಕರಗ ಸಿಂಗಾರಗೊಂಡಿದೆ. ಅರ್ಚಕ ಜ್ಞಾನೇಂದ್ರ ಅವರು 15ನೇ ಬಾರಿಗೆ ಕರಗ ಹೊರುತ್ತಿರುವ ಎಲ್ಲರ ಗಮನಸೆಳೆಯಲಿದ್ದಾರೆ. ಕರಗ ವೀಕ್ಷಿಸಲು ಹೀಗಾಗಲೇ ಸಾವಿರಾರು ಜನರು ಧರ್ಮರಾಯಸ್ವಾಮಿ ದೇಗುಲದ ಬಳಿ ಜಮಾಯಿಸಿದ್ದಾರೆ.

ಕರಗ ಉತ್ಸವವು ರಾತ್ರಿ 1 ರಿಂದ 2 ಗಂಟೆ ಒಳಗೆ ಮೆರವಣಿಗೆ ಧರ್ಮರಾಯಸ್ವಾಮಿ ದೇಗುಲವನ್ನು ಪ್ರದಕ್ಷಿಣೆ ಹಾಕಿ, ಕುಂಬಾರಪೇಟೆ ರೋಡ್, ರಾಜ ಮಾರ್ಕೆಟ್ ಸರ್ಕಲ್-ಸಿಟಿ ಮಾರ್ಕೆಟ್ ಸರ್ಕಲ್, ಕೋಟೆ ಆಂಜನೇಯ ಸ್ವಾಮಿ ದೇಗುಲವನ್ನು ತಲುಪಲಿದೆ.

ಸಿಟಿ ಮಾರ್ಕೆಟ್ ಸರ್ಕಲ್-ಪೊಲೀಸ್ ರೋಡ್ ಮೂಲಕ ಮಸ್ತಾನ್ ಸಾಬ್ ದರ್ಗಾಕ್ಕೆ ತೆರಳಿ ನಂತರ ಬಾಳೇಪೇಟೆ ಸರ್ಕಲ್ ಮೂಲಕ ಅಣ್ಣಮ್ಮ ದೇವಿಯ ದೇವಸ್ಥಾನಕ್ಕೆ ಹೋಗಲಿದೆ. ಕೊನೆಗೆ ಕಬ್ಬನ್ ಪೇಟೆ ಮುಖ್ಯ ರಸ್ತೆಯಿಂದ ಶ್ರೀಧರ್ಮರಾಯ ಸ್ವಾಮಿ ದೇಗುಲ ಪ್ರವೇಶ ಮಾಡಲಿದೆ.

ಬೆಂಗಳೂರು ಕರಗ ಶಕ್ತ್ಯೋತ್ಸವದ ಹಿನ್ನೆಲೆಯಲ್ಲಿ ನಗರದ ಪ್ರಮುಖ ರಸ್ತೆಗಳಲ್ಲಿ ಪೊಲೀಸರು ಮಾರ್ಗ ಬದಲಾವಣೆ ಮಾಡಿದ್ದಾರೆ. ಬೆಂಗಳೂರು ಕರಗೋತ್ಸವ ಇರುವುದರಿಂದ ಎರಡು ದಿನಗಳ ಕಾಲ ಕೆಲವು ರಸ್ತೆಗಳಲ್ಲಿ ವಾಹನ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ. ಈ ಬಗ್ಗೆ ಟ್ರಾಫಿಕ್ ಪೊಲೀಸರು ಮಾಹಿತಿ ನೀಡಿದ್ದಾರೆ.

ತಿಗಳರಪೇಟೆಯ ಧರ್ಮರಾಯಸ್ವಾಮಿ ದೇವಸ್ಥಾನದಲ್ಲಿ ಕರಗದ ಆಚರಣೆಗಳು ನಡೆಯುವುದರಿಂದ ಏಪ್ರಿಲ್ 12ರ ರಾತ್ರಿ 10 ಗಂಟೆಯಿಂದ ಏಪ್ರಿಲ್ 13ರ ಸಂಜೆ 6 ಗಂಟೆಯವರೆಗೆ ಅವೆನ್ಯೂ ರಸ್ತೆ, ಕೆ.ಆರ್ ಮಾರ್ಕೆಟ್ ರಸ್ತೆ, ಮಾರುಕಟ್ಟೆ ವೃತ್ತ, ಕಾಟನ್ಪೇಟ್, ಕೆ.ಜಿ.ರಸ್ತೆ, ಚಿಕ್ಕಪೇಟೆ ಸೇರಿದಂತೆ ಹಲವು ರಸ್ತೆಗಳಲ್ಲಿ ವಾಹನಗಳ ಸಂಚಾರಕ್ಕೆ ಅವಕಾಶ ಇರುವುದಿಲ್ಲ.

ಧರ್ಮರಾಯಸ್ವಾಮಿ ದೇವಸ್ಥಾನದಿಂದ ಮೆರವಣಿಗೆ ಹೊರಡುವುದರಿಂದ ಆ ಸಮಯದಲ್ಲೂ ವಾಹನಗಳ ಸಂಚಾರಕ್ಕೆ ಅವಕಾಶವಿರುವುದಿಲ್ಲ ಎಂದು ತಿಳಿಸಲಾಗಿದೆ. ವಾಹನ ಸವಾರರು ಈ ದಿನಗಳಂದು ಪರ್ಯಾಯ ಮಾರ್ಗಗಳನ್ನು ಬಳಸುವಂತೆ ಸಲಹೆ ನೀಡಿದ್ದಾರೆ.

ಮಾರ್ಕೆಟ್ ವೃತ್ತದಿಂದ ಕೆ.ಜಿ.ರಸ್ತೆ, ಆನಂದ್ರಾವ್ ಸರ್ಕಲ್ ಮೂಲಕ ಮೆಜೆಸ್ಟಿಕ್ ಕಡೆಗೆ ಚಲಿಸಬಹುದು. ಎಎಸ್ ಚಾರ್ ಸ್ಟ್ರೀಟ್ನಿಂದ ಸಿಸಿಬಿ ಜಂಕ್ಷನ್, ಮೆಡಿಕಲ್ ಜಂಕ್ಷನ್, ಮಿನರ್ವಾ ಸರ್ಕಲ್ ಮತ್ತು ಜೆಸಿ ರಸ್ತೆ ಮೂಲಕ ಟೌನ್ಹಾಲ್ ಕಡೆಗೆ ಚಲಿಸಬಹುದು. ಶಾಂತಲಾ ಜಂಕ್ಷನ್ನಿಂದ ಖೋಡೆ ಜಂಕ್ಷನ್, ಹುಣಸೆಮರ ಜಂಕ್ಷನ್, ಟ್ಯಾಂಕ್ಬಂಡ್ ರಸ್ತೆ ಮೂಲಕ ಮೈಸೂರು ರಸ್ತೆ ಕಡೆಗೆ ತೆರಳಬಹುದು.

ಬೆಂಗಳೂರು ಐತಿಹಾಸಿಕ ಕರಗ ಶಕ್ತ್ಯೋತ್ಸವದಲ್ಲಿ ಪಾಲ್ಗೊಳ್ಳಲಿರುವ ಗಣ್ಯರು ಮತ್ತು ಭಕ್ತರು, ಈ ಮಹೋತ್ಸವದ ಸೊಬಗು ನೋಡುವ ನಿರೀಕ್ಷೆಯಲ್ಲಿ ಕುತೂಹಲದಿಂದ ಕಾಯುತ್ತಿದ್ದಾರೆ.

ರಾಜಧಾನಿಗೆ ರಾಜ ಕಳೆ ಕೊಡುವ ಬೆಂಗಳೂರು ಕರಗಕ್ಕೆ ಹಲವು ವರ್ಷಗಳ ಇತಿಹಾಸ ಇದೆ. ಬೆಂಗಳೂರು ಕರಗಕ್ಕೆ 8 ಶತಮಾನಗಳ ಇತಿಹಾಸ ಇದೆ ಎಂಬುವುದು ಗಮನಾರ್ಹ.