'ಧ್ರುವ್-ತಾರಾ' ಲೋಕಾರ್ಪಣೆ, ಅಮಿಶ್ ತ್ರಿಪಾಠಿ ಕಥಾಲೋಕದಲ್ಲಿ ಮಿಂದೆದ್ದ ಬೆಂಗಳೂರಿಗರು
ಭಾರತದ ನಂ.1 ಪೌರಾಣಿಕ ಕಥೆಗಾರ ಹಾಗೂ ಜನಪ್ರಿಯ ಲೇಖಕ ಅಮಿಶ್ ತ್ರಿಪಾಠಿ ಅವರ ಬಹು ನಿರೀಕ್ಷಿತ ಹೊಸ ಕಾದಂಬರಿ 'ಧ್ರುವ್ ಮತ್ತು ತಾರಾ' ಇದೇ ವೇದಿಕೆಯಲ್ಲಿ ಅದ್ದೂರಿಯಾಗಿ ಬಿಡುಗಡೆ ಗೊಂಡಿತು. ಇದರಿಂದ ಬರೀ ಶಾಪಿಂಗ್ ತಾಣವಾಗಿದ್ದ ಗ್ಯಾಲರಿಯಾ ಮಾಲ್, ಸಂಜೆ ಕಥೆ, ಪುರಾಣ ಮತ್ತು ಅರ್ಥಪೂರ್ಣ ಸಂವಾದಗಳ ಸಾಂಸ್ಕೃತಿಕ ಕೇಂದ್ರವಾಗಿ ಕಂಗೊಳಿಸಿತು.
-
ಬೆಂಗಳೂರು: ಯಲಹಂಕದಲ್ಲಿರುವ ದಿ ಗ್ಯಾಲರಿಯಾ ಮಾಲ್ ಅಪರೂಪದ ಸಾಹಿತ್ಯ ಸಂಜೆ ಯೊಂದಕ್ಕೆ ಸಾಕ್ಷಿಯಾಯಿತು. ಸ್ವಪ್ನ ಬುಕ್ ಹೌಸ್ ಸಹಯೋಗದೊಂದಿಗೆ ಮಾಲ್‌ನಲ್ಲಿ ಆಯೋಜಿಸ ಲಾಗಿದ್ದ 'ಸ್ವಪ್ನ ರೈಸ್ ವಿತ್ ಅಮಿಶ್ ತ್ರಿಪಾಠಿ' ಕಾರ್ಯಕ್ರಮವು ನೂರಾರು ಪುಸ್ತಕ ಪ್ರೇಮಿಗಳು ಹಾಗೂ ಸಾಹಿತ್ಯಾಸಕ್ತರ ಸಮ್ಮುಖದಲ್ಲಿ ಯಶಸ್ವಿಯಾಗಿ ನೆರವೇರಿತು.
ಭಾರತದ ನಂ.1 ಪೌರಾಣಿಕ ಕಥೆಗಾರ ಹಾಗೂ ಜನಪ್ರಿಯ ಲೇಖಕ ಅಮಿಶ್ ತ್ರಿಪಾಠಿ ಅವರ ಬಹು ನಿರೀಕ್ಷಿತ ಹೊಸ ಕಾದಂಬರಿ 'ಧ್ರುವ್ ಮತ್ತು ತಾರಾ' ಇದೇ ವೇದಿಕೆಯಲ್ಲಿ ಅದ್ದೂರಿಯಾಗಿ ಬಿಡುಗಡೆಗೊಂಡಿತು. ಇದರಿಂದ ಬರೀ ಶಾಪಿಂಗ್ ತಾಣವಾಗಿದ್ದ ಗ್ಯಾಲರಿಯಾ ಮಾಲ್, ಸಂಜೆ ಕಥೆ, ಪುರಾಣ ಮತ್ತು ಅರ್ಥಪೂರ್ಣ ಸಂವಾದಗಳ ಸಾಂಸ್ಕೃತಿಕ ಕೇಂದ್ರವಾಗಿ ಕಂಗೊಳಿಸಿತು.
ಗ್ಯಾಲರಿಯಾ ಮಾಲ್‌ನ ಎರಡನೇ ಮಹಡಿಯಲ್ಲಿರುವ ಸ್ವಪ್ನ ಬುಕ್ ಹೌಸ್ ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ, ಅಮಿಶ್ ತ್ರಿಪಾಠಿ ಅವರು ಖುದ್ದಾಗಿ ತಮ್ಮ ಹೊಸ ಪುಸ್ತಕ ಧ್ರುವ್ ಮತ್ತು ತಾರಾದ ಆಯ್ದ ಭಾಗಗಳನ್ನು ಓದಿ ಪ್ರೇಕ್ಷಕರಿಗೆ ವಿವರಿಸಿದರು.
ಇದನ್ನೂ ಓದಿ: Krantiya Kidigalu Book Release: ರಾಷ್ಟ್ರೋತ್ಥಾನ ಸಾಹಿತ್ಯದ ‘ಕ್ರಾಂತಿಯ ಕಿಡಿಗಳುʼ ಪುಸ್ತಕ ಲೋಕಾರ್ಪಣೆ
ಬಳಿಕ ನಡೆದ ಸಂವಾದದಲ್ಲಿ, ತಮ್ಮ ಬರವಣಿಗೆಯ ಹಾದಿ, ಅದಕ್ಕಿರುವ ಸ್ಫೂರ್ತಿ ಮತ್ತು ಭಾರತೀಯ ಪೌರಾಣಿಕ ಕಥೆಗಳನ್ನು ಆಧುನಿಕ ಜಗತ್ತಿಗೆ ತಕ್ಕಂತೆ ಹೆಣೆಯುವ ತಮ್ಮ ವಿಶಿಷ್ಟ ಶೈಲಿಯ ಬಗ್ಗೆ ಅಮಿಶ್ ಅವರು ಮನಬಿಚ್ಚಿ ಮಾತನಾಡಿದರು. ನೆರೆದಿದ್ದ ಓದುಗರು ಕೇಳಿದ ಅನೇಕ ಪ್ರಶ್ನೆಗಳಿಗೆ ಅವರು ಬಹಳ ಉತ್ಸಾಹದಿಂದ ಉತ್ತರಿಸಿದ್ದು, ಎಲ್ಲಾ ವಯಸ್ಸಿನ ಸಾಹಿತ್ಯಾಸಕ್ತರಿಗೂ ಇದೊಂದು ಮರೆಯಲಾಗದ ಅನುಭವ ನೀಡಿತು.
ನೆಚ್ಚಿನ ಲೇಖಕರೊಂದಿಗೆ ಮುಖಾಮುಖಿ
ಈ ಸಾಹಿತ್ಯ ಸಂಜೆಯ ಅತಿ ದೊಡ್ಡ ಆಕರ್ಷಣೆಯೆಂದರೆ, ಕಾರ್ಯಕ್ರಮದ ಕೊನೆಯಲ್ಲಿ ನಡೆದ ಮುಖಾಮುಖಿ ಭೇಟಿ ಹಾಗೂ ಆಟೋಗ್ರಾಫ್ ಸೆಷನ್. ಅಭಿಮಾನಿಗಳು ತಮ್ಮ ನೆಚ್ಚಿನ ಲೇಖಕರನ್ನು ಖುದ್ದಾಗಿ ಭೇಟಿಯಾಗಿ, ತಮ್ಮ ಪುಸ್ತಕದ ಮೇಲೆ ಅವರ ಸಹಿ ಪಡೆದುಕೊಂಡರು. ಜೊತೆಗೆ ಅಮಿಶ್ ಅವರೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದರು. ಕಾರ್ಯಕ್ರಮಕ್ಕೆ ಓದುಗರಿಂದ ಸಿಕ್ಕ ಸ್ಪಂದನೆ, ಇಂದಿಗೂ ಜನರಲ್ಲಿ ಸಾಹಿತ್ಯದ ಮೇಲಿನ ಒಲವು ಎಷ್ಟಿದೆ ಎಂಬುದನ್ನು ಸಾಬೀತುಪಡಿಸಿತು.
ಶಾಪಿಂಗ್ ಮಾಲ್ ಎಂದರೆ ಕೇವಲ ವ್ಯಾಪಾರ-ವಹಿವಾಟು ಮಾತ್ರವಲ್ಲ, ಅದು ಕಲೆ, ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಬೆಸೆಯುವ ವೇದಿಕೆಯೂ ಆಗಬೇಕು ಎಂಬುದು ದಿ ಗ್ಯಾಲರಿಯಾ ಮಾಲ್‌ನ ಉದ್ದೇಶ. ಈ ವಿಶಿಷ್ಟ ಕಾರ್ಯಕ್ರಮದ ಯಶಸ್ಸು ಆ ಉದ್ದೇಶವನ್ನು ಮತ್ತಷ್ಟು ಬಲಪಡಿಸಿದೆ.