ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Akshipatha Book Release: ರಾಷ್ಟ್ರೋತ್ಥಾನ ಸಾಹಿತ್ಯ 6ನೇ ಕನ್ನಡ ಪುಸ್ತಕ ಹಬ್ಬ; ಡಾ. ಸೋಂದಾ ನಾರಾಯಣ ಭಟ್ಟರ ಅಕ್ಷಿಪಥ ಕೃತಿ ಬಿಡುಗಡೆ

Kannada Pustaka Habba 2026: ರಾಷ್ಟ್ರೋತ್ಥಾನ ಸಾಹಿತ್ಯ ಆಯೋಜಿಸಿರುವ ‘6ನೇ ಕನ್ನಡ ಪುಸ್ತಕ ಹಬ್ಬ–2026’ರ ಅಂಗವಾಗಿ ಬೆಂಗಳೂರು ನಗರದ ಕೆಂಪೇಗೌಡ ನಗರದಲ್ಲಿರುವ ರಾಷ್ಟ್ರೋತ್ಥಾನ ಪರಿಷತ್‌ನ ‘ಕೇಶವಶಿಲ್ಪʼ ಸಭಾಂಗಣದಲ್ಲಿ ಡಾ. ಸೋಂದಾ ನಾರಾಯಣ ಭಟ್ಟರ ಅಕ್ಷಿಪಥ ಕೃತಿ ಬಿಡುಗಡೆ ಮಾಡಲಾಗಿದೆ.

ಕನ್ನಡ ಪುಸ್ತಕ ಹಬ್ಬ; ಡಾ. ಸೋಂದಾ ನಾರಾಯಣ ಭಟ್ಟರ ಅಕ್ಷಿಪಥ ಕೃತಿ ಬಿಡುಗಡೆ

-

Prabhakara R
Prabhakara R Nov 29, 2026 5:15 PM

ಬೆಂಗಳೂರು: ‘ಅಕ್ಷಿಪಥ (Akshipatha book release) ಇದೊಂದು ವೈಚಾರಿಕ ಕೃತಿ. ಸಾಮಾನ್ಯವಾಗಿ ಕಥೆ, ಕಾದಂಬರಿಯಂತಹ ಪ್ರಕಾರದ ಪುಸ್ತಕಗಳು ಮರುಮುದ್ರಣವಾಗುವುದು ಸಹಜ. ಆದರೆ ಒಂದು ವೈಚಾರಿಕ ಕೃತಿ ಅದರಲ್ಲೂ ಘನಗಟ್ಟಿ ಎನ್ನಿಸುವ, ಸಾಮಾನ್ಯ ಜನರು ಜೀರ್ಣಿಸಿಕೊಳ್ಳಲು ಕಷ್ಟಸಾಧ್ಯ ಎಂದು ನಾವು ಭಾವಿಸುವ ಕೃತಿಯೊಂದು ಸುಮಾರು 20 ವರ್ಷಗಳ ನಂತರ ಮರುಮುದ್ರಣವಾಗುವುದು ನಿಜಕ್ಕೂ ವಿಶೇಷ. ಆ ಮೂಲಕ ಈ ಪುಸ್ತಕದ ತಾಕತ್ತು ಹಾಗೂ ಲೇಖಕರಾದ ಸೋಂದಾ ನಾರಾಯಣ ಭಟ್ಟರ ತಾಕತ್ತು ಏನು ಎಂಬುದನ್ನು ನಾವು ಅರ್ಥ ಮಾಡಿಕೊಳ್ಳಬಹುದು’ ಎಂದು ಲೇಖಕ ನಾರಾಯಣ ಶೇವಿರೆ ಅವರು ಹೇಳಿದರು.

ರಾಷ್ಟ್ರೋತ್ಥಾನ ಪರಿಷತ್‌ನ ಕೇಶವಶಿಲ್ಪ ಸಭಾಂಗಣದಲ್ಲಿ ನಡೆದ ಅಕ್ಷಿಪಥ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಅಕ್ಷಿಪಥ ಕೃತಿಯ ಪರಿಚಯ ಹಾಗೂ ಸೋಂದಾ ನಾರಾಯಣ ಭಟ್ಟರ ಕುರಿತು ಅವರು ಮಾತನಾಡಿದ ಅವರು, ಸೋಂದಾ ನಾರಾಯಣ ಭಟ್ಟರ ವ್ಯಕ್ತಿತ್ವದ ಬಗ್ಗೆ ಎಷ್ಟು ವರ್ಣಿಸಿದರೂ ಸಾಲದು, ಅಂತಹ ಅಪರೂಪದ ವ್ಯಕ್ತಿತ್ವ ಅವರದ್ದು. ಅವರು ವೇದಗಳನ್ನು, ಉಪನಿಷತ್ತುಗಳನ್ನು ಅವರು ತಮ್ಮ ಶಾಲಾ–ಕಾಲೇಜು ದಿನಗಳಲ್ಲಿ ಅಭ್ಯಾಸ ಮಾಡಿದವರಲ್ಲ. ಅವರ ಆಸಕ್ತಿಯ ಹಿನ್ನೆಲೆಯಲ್ಲಿ ಅವರು ಅದನ್ನು ತಿಳಿದುಕೊಂಡವರು. ಅವರ ಮುಂದೆ ಮಂತ್ರ ಪಠಿಸುವಾಗ, ಸಂಸ್ಕೃತ ಪದ–ವಾಕ್ಯಗಳನ್ನು ಬಳಸುವಾಗ ಬಹಳ ಎಚ್ಚರಿಕೆ ವಹಿಸಬೇಕಾಗಿತ್ತು. ಪುರೋಹಿತರು ಮಂತ್ರ ತಪ್ಪಾಗಿ ಹೇಳಿದಲ್ಲಿ ಅವರು ಅದನ್ನು ಸೂಕ್ಷ್ಮವಾಗಿ, ಎದುರಿನವರಿಗೆ ಮನಸ್ಸಿಗೆ ನೋವಾಗದಂತೆ ತಿದ್ದಿ ಹೇಳುತ್ತಿದ್ದರು.

Akshipatha book release (1)

ನಾರಾಯಣ ಭಟ್ಟರು ಪರಮ ನಾಸ್ತಿಕನಾಗಿರಲಿಲ್ಲ, ಅವರು ವಿಶಿಷ್ಠ ನಾಸ್ತಿಕನಾಗಿದ್ದರು. ಆದರೆ ಅವರು ಎಂದಿಗೂ ಇನ್ನೊಬ್ಬರ ಆಸ್ತಿಕತೆಯನ್ನು ಪ್ರಶ್ನೆ ಮಾಡುತ್ತಿರಲಿಲ್ಲ, ಆಕ್ಷೇಪ ಎತ್ತುತ್ತಿರಲಿಲ್ಲ. ಅವರು ಯಾವಾಗಲೂ ನಾನು ದೇವರನ್ನು ನಂಬುವುದಿಲ್ಲ, ಸಂಘದ ಪ್ರಚಾರಕರು, ಜನರು, ಸಮಾಜವೇ ದೇವರು ಎನ್ನುತ್ತಿದ್ದರು. ಅವರು ಒಳ್ಳೆಯ ಪಂಡಿತರಾಗಿದ್ದರು. ಪಂಡಿತರಾದವರು ಎಲ್ಲವನ್ನೂ ತಿಳಿದುಕೊಂಡು ಅದನ್ನು ತಮ್ಮ ಬದುಕಿನಲ್ಲಿ ಅನುಷ್ಠಾನಕ್ಕೆ ತರುತ್ತಾರೆ, ಆದರೆ ಅವರಿಗೆ ಅಹಂಕಾರ ಇರುವುದಿಲ್ಲ. ಅಂತಹವರಲ್ಲಿ ಒಬ್ಬರು ನಾರಾಯಣ ಭಟ್ಟರು ಎಂದು ತಿಳಿಸಿದರು.

ನಾರಾಯಣ ಭಟ್ಟರು ಭಾಷಾ ಪಂಡಿತರಾಗಿದ್ದರು. ಅವರು ಯಾವುದೇ ಸಂದರ್ಭದಲ್ಲೂ ತತ್‌ಕ್ಷಣಕ್ಕೆ ಹೊಂದುವ ಹೊಸ ಪದವನ್ನು ಶೋಧಿಸಿ ಬಳಸುವ ಚಾಕಚಕ್ಯತೆ ಇತ್ತು. ಅವರು ತಮ್ಮ ಎದುರು ಮಾತನಾಡುತ್ತಿದ್ದವರು ಯಾವುದೇ ಪದವನ್ನು ತಪ್ಪಾಗಿ ಬಳಸಿದಾಗ ಎದುರಿನವರಿಗೆ ನೋವಾಗದ ರೀತಿ ಅವರು ಅದನ್ನು ತಿದ್ದುತ್ತಿದ್ದರು. ವ್ಯಾಕರಣವನ್ನು ತಿದ್ದುವುದರ ಜತೆಗೆ ಅದನ್ನು ಮತ್ತಷ್ಟು ಸುಂದರಗೊಳಿಸುವುದು ಹೇಗೆ ಎನ್ನುವುದನ್ನು ಅವರು ಹೇಳುತ್ತಿದ್ದರು. ಅವರು ಬಹಳ ಒಳ್ಳೆಯ ಕೇಳುಗ ಮಾತ್ರವಲ್ಲ ಹೇಳುಗ ಕೂಡ ಆಗಿದ್ದರು. ನಾರಾಯಣ ಭಟ್ಟರು ಎಲ್ಲಿ, ಹೇಗೆ, ಯಾವ ರೀತಿ ಹೇಳಬೇಕು ಎಂಬುದನ್ನು ತುಂಬಾ ಚೆನ್ನಾಗಿ ಅರಿತಿದ್ದರು.

ಅಸೀಮಾದಲ್ಲಿ ಅವರು 11 ವರ್ಷಗಳ ಕಾಲ ಸಂಪಾದಕರಾಗಿದ್ದರು. ಅಷ್ಟೂ ವರ್ಷಗಳ ಕಾಲ ಅವರು ಸಂಪಾದಕೀಯ ಬರೆಯುತ್ತಿದ್ದರು. ಅವರು ಸುಮಾರು 3 ತಿಂಗಳ ವಿಷಯವನ್ನು ಸಂಪಾದನೆ ಮಾಡಿಕೊಳ್ಳುತ್ತಿದ್ದರು. ಪ್ರತಿ ತಿಂಗಳ ವಿಷಯ, ಅದರ ಕುರಿತಾದ ಲೇಖನ ತರಿಸುತ್ತಿದ್ದರು. ಯಾವ ಪುಟದಲ್ಲಿ ಯಾವ ಲೇಖನ ಎಂಬುದರ ಕುರಿತು ಮೊದಲೇ ಚರ್ಚೆ ಆಗುತ್ತಿತ್ತು. ಈ ಎಲ್ಲಾ ಲೇಖನಗಳ ಅಂದರೆ ಇಡೀ ಸಂಚಿಕೆಯ ಒಟ್ಟು ಸಾರವನ್ನು ಅವರು ಸಂಪಾದಕೀಯದಲ್ಲಿ ಬರೆಯುತ್ತಿದ್ದರು. ಕವಿ ಪ್ರತಿಭೆ, ಕವಿ ಹೃದಯ ಎರಡೂ ಒಂದೇ ವ್ಯಕ್ತಿಯಲ್ಲಿ ಇರುವುದಿಲ್ಲ. ಆದರೆ ನಾರಾಯಣ ಭಟ್ಟರಲ್ಲಿ ಈ ಎರಡೂ ಇತ್ತು. ಅಕ್ಷಿಪಥ ಪುಸ್ತಕ ಓದುವುದರಿಂದ ನಾವು ಹೇಗೆ ಯೋಚಿಸಬೇಕು, ಚಿಂತಿಸಬೇಕು, ಬರೆಯಬೇಕು ಹಾಗೂ ನಾವು ಹೇಗೆ ಬದುಕಬೇಕು ಎಂಬುದನ್ನು ಕಲಿಯಬಹುದುʼ ಎಂದು ಅವರು ಪುಸ್ತಕ ಪರಿಚಯಿಸಿ ಮಾತನಾಡಿದವರು.

ಸೋಂದಾ ನಾರಾಯಣ ಭಟ್ಟರ ಪತ್ನಿ ವಿಲಾಸಿನಿ ಭಟ್ ಮಾತನಾಡಿ ‘ಅವರ ಜತೆ ನಾನು ಬದುಕಿದ್ದು ಕೇವಲ 17 ವರ್ಷಗಳಾದರೂ ಅವರು ನನಗೆ ಸುಮಾರು 50 ವರ್ಷಗಳ ಬದುಕಿನ ಅನುಭವವನ್ನು ಕೊಟ್ಟವರು. ಅವರ ಒಳ್ಳೆಯತನ, ಅವರ ಸದ್ವಿಚಾರ ಎಲ್ಲವೂ ನಮ್ಮ ಬದುಕಿಗೆ ಆಧಾರವಾಗಿರುವಂತೆ ಮಾಡಿದೆ. ಅವರು ನಡೆದು ಹೋದ ದಾರಿ, ಅವರು ಸಮಾಜಕ್ಕೆ ಕೊಟ್ಟ ಕೊಡುಗೆ ಈ ಎಲ್ಲವೂ ನಮ್ಮ ಬದುಕಿಗೆ ಮಾರ್ಗದರ್ಶನ. ಈ ಪುಸ್ತಕದಲ್ಲಿರುವ ವಿಷಯವನ್ನಷ್ಟು ತಿಳಿದುಕೊಂಡರೆ ಸಾಕು ನಾನು ಬದುಕಿನಲ್ಲಿ ಎಡವಲು ಸಾಧ್ಯವಿಲ್ಲ’ ಎಂದರು.

ಕನ್ನಡ ನಾಡು, ನುಡಿ, ಸಂಸ್ಕೃತಿಯ ವೈಭವ ಸಾರಿದ ಸಪ್ತಧಾರ ಕನ್ನಡ ಹಬ್ಬ 2026

ಪುಸ್ತಕ ಬಿಡುಗಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರೊ, ಮಲ್ಲೇಪುರಂ ವೆಂಕಟೇಶ್ ಮಾತನಾಡಿ, ‘ಸೋಂದಾ ನಾರಾಯಣ ಭಟ್ಟರಿಗೆ ಸಂಸ್ಕೃತದ ಜ್ಞಾನ ಎಷ್ಟು ಅಪಾರವಾಗಿತ್ತು ಎಂಬುದನ್ನು ಈ ಸಂಪಾದಕೀಯ ಬರಹಗಳನ್ನು ನೋಡಿದರೆ ತಿಳಿಯುತ್ತದೆ. ಈ ಪುಸ್ತಕದಲ್ಲಿ ಅವರ ಒಟ್ಟು 134 ಸಂಪಾದಕೀಯ ಬರಹಗಳಿವೆ. ಈ ಸಂಪಾದಕೀಯ ಸಂಗ್ರಹದಲ್ಲಿ ತುಂಬಾ ಅಪರೂಪದ ವಿಷಯಗಳ ಪ್ರಸ್ತಾಪವಿದೆ. ಅಷ್ಟೂ ಸಂಪಾದಕೀಯಗಳಲ್ಲಿ ಅವರು ಆರಂಭ ಮಾಡುವುದು ಹಿಂದೂ ಭಾರತ ಹಾಗೂ ಗ್ರಾಮ ಭಾರತ ಎಂಬ ಈ ಎರಡು ಅಂಶಗಳಿಂದ. ವ್ಯಕ್ತಿ ವಿಕಾಸ ಮಜಲುಗಳು, ಶಾಸ್ತ್ರದರ್ಶನ, ಮೌಲ್ಯಪ್ರಜ್ಞೆ, ಮತಾಂತರ, ರಾಷ್ಟ್ರದರ್ಶನ, ಕಮ್ಯೂನಿಸಂ, ಮನರಂಜನೆ ಸೇರಿದಂತೆ ಹಲವು ವಿಚಾರಗಳ ಮೇಲೆ ಈ ಸಂಪಾದಕೀಯಗಳನ್ನು ಬರೆದಿದ್ದಾರೆ. ನಾರಾಯಣ ಭಟ್ಟರ ಸಂಪಾದಕೀಯ ಬರಹ ಏಕಗ್ರಾಹಿಯದದ್ದಲ್ಲ, ಅದು ಅನೇಕ ಸಂಗತಿಗಳನ್ನು ಸಂದರ್ಭಗಳನ್ನು ಕಾಲ ಕಾಲಕ್ಕೆ ಹೊಂದಿಸಿಕೊಂಡು ವಸ್ತು ಸಂಗತಿಗಳನ್ನು ಪುನರಾವಲೋಕನ ಮಾಡುತ್ತಾ, ಅವುಗಳನ್ನು ವಿಚಾರ ಬೆಳಕಲ್ಲಿ ವೈಜ್ಞಾನಿಕ ಆಕೃತಿಯಲ್ಲಿ ವೈಚಾರಿಕ ತಾತ್ವಿಕ ನೆಲೆಯಲ್ಲಿ ಅವರು ಅದನ್ನು ಪ್ರವೇಶ ಮಾಡುತ್ತಿದ್ದರು. ಹಾಗಾಗಿ ಅವರ ಸಂಪಾದಕೀಯ ಬರಹಗಳು ಕೇವಲ ಬರಹಗಳಾಗಿದರೆ ನಮ್ಮ ಸಮಾಜವನ್ನು, ರಾಷ್ಟವನ್ನು ತಿಳಿಯಲು ಇವು ದಾರಿದೀಪವಾಗಿವೆ. ಅಷ್ಟು ಮಾತ್ರವಲ್ಲ ಇವತ್ತಿನ ಸಂದರ್ಭದಲ್ಲಿ ಭಾರತದ ಸಂಸ್ಕೃತಿಯನ್ನು ಅರ್ಥ ಮಾಡಿಕೊಳ್ಳಲು ಈ ಪುಸ್ತಕದಲ್ಲಿನ ಸಂಪಾದಕೀಯ ಬರಹಗಳು ಕೀಲಿಕೈಗಳಾಗಿವೆ‘ ಎಂದು ಅಕ್ಷಿಪಥ ಪುಸ್ತಕ ಓದುವುದು ಎಷ್ಟು ಮುಖ್ಯ ಎಂಬುದನ್ನು ವಿವರಿಸಿದರು. ಈ ಕಾರ್ಯಕ್ರಮದಲ್ಲಿ ರಾಷ್ಟ್ರೋತ್ಥಾನ ಪರಿಷತ್‌ನ ಕೋಶಾಧ್ಯಕ್ಷರಾದ ಕೆ. ಎಸ್‌. ನಾರಾಯಣ ಉಪಸ್ಥಿತರಿದ್ದರು.

ನಾರಾಯಣ ಶೇವಿರೆ ಅವರ 3 ಪುಸ್ತಕಗಳ ಲೋಕಾರ್ಪಣೆ

ನವೆಂಬರ್ 28, ಶನಿವಾರ ಲೇಖಕ, ಅಂಕಣಕಾರರಾದ ಶ್ರೀ ನಾರಾಯಣ ಶೇವಿರೆ ಅವರ ಉನ್ಮೇಷ, ಸುವ್ಯಕ್ತ, ಎಲೆಮರೆಯ ಹೂ ಈ 3 ಕೃತಿಗಳು ಲೋಕಾರ್ಪಣೆಗೊಂಡವು.

ಡಿಸೆಂಬರ್‌ 6ರವರೆಗೆ ಕನ್ನಡ ಪುಸ್ತಕ ಹಬ್ಬ

ರಾಷ್ಟ್ರೋತ್ಥಾನ ಸಾಹಿತ್ಯ ಕನ್ನಡ ಪುಸ್ತಕ ಹಬ್ಬ ಡಿಸೆಂಬರ್ 6ರವರೆಗೆ ಪ್ರತಿದಿನ ಬೆಳಿಗ್ಗೆ 10ರಿಂದ ರಾತ್ರಿ 9 ಗಂಟೆಯವರೆಗೆ ನಡೆಯಲಿದೆ.