ಕನ್ನಡ ನಾಡು, ನುಡಿ, ಸಂಸ್ಕೃತಿಯ ವೈಭವ ಸಾರಿದ ಸಪ್ತಧಾರ ಕನ್ನಡ ಹಬ್ಬ 2026
ಕನ್ನಡ ಭಾಷೆ, ಕನ್ನಡ ನಾಡು, ನೆಲ, ಜಲ ಹಾಗೂ ಸಂಸ್ಕೃತಿಯ ಅಭಿಮಾನವನ್ನು ವಿದ್ಯಾರ್ಥಿಗಳಲ್ಲಿ ಮೂಡಿಸುವ ಉದ್ದೇಶದಿಂದ ಎಂ.ಕೆ.ಪಿ.ಎಂ. ಆರ್.ವಿ ಇನ್ಸ್ಟಿಟ್ಯೂಟ್ ಆಫ್ ಲೀಗಲ್ ಸ್ಟಡೀಸ್ ವತಿಯಿಂದ ಜಯನಗರದ ಕಾಲೇಜು ಆವರಣದಲ್ಲಿ ‘ಸಪ್ತಧಾರ – ಕನ್ನಡ ಸಾಂಸ್ಕೃತಿಕ ಸಂಭ್ರಮ 2026’ ಕಾರ್ಯಕ್ರಮವನ್ನು ವಿಜೃಂಭಣೆಯಿಂದ ನಡೆಯಿತು.
-
ಬೆಂಗಳೂರು: ಕನ್ನಡ ಭಾಷೆ, ಕನ್ನಡ ನಾಡು, ನೆಲ, ಜಲ ಹಾಗೂ ಸಂಸ್ಕೃತಿಯ ಅಭಿಮಾನವನ್ನು ವಿದ್ಯಾರ್ಥಿಗಳಲ್ಲಿ ಮೂಡಿಸುವ ಉದ್ದೇಶದಿಂದ ಎಂ.ಕೆ.ಪಿ.ಎಂ. ಆರ್.ವಿ ಇನ್ಸ್ಟಿಟ್ಯೂಟ್ ಆಫ್ ಲೀಗಲ್ ಸ್ಟಡೀಸ್ ವತಿಯಿಂದ ಜಯನಗರದ ಕಾಲೇಜು ಆವರಣದಲ್ಲಿ ‘ಸಪ್ತಧಾರ – ಕನ್ನಡ ಸಾಂಸ್ಕೃತಿಕ ಸಂಭ್ರಮ 2026’ ಕಾರ್ಯಕ್ರಮವನ್ನು ವಿಜೃಂಭಣೆಯಿಂದ ನಡೆಯಿತು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ವಿಧಾನ ಪರಿಷತ್ ಸದಸ್ಯರು ಹಾಗೂ ವಕೀಲರಾದ ಎ.ಪಿ.ರಂಗನಾಥ್(A P Ranganath) ಅವರು ಮಾತನಾಡಿ, ಕರ್ನಾಟಕದ ಇತಿಹಾಸ, ಪರಂಪರೆ, ಕನ್ನಡ ಭಾಷೆಯ ಶ್ರೀಮಂತಿಕೆ ಹಾಗೂ ಕನ್ನಡಿಗರ ಸಾಂಸ್ಕೃತಿಕ ವೈಶಿಷ್ಟ್ಯಗಳನ್ನು ಕೊಂಡಾಡಿದರು.
ಇದನ್ನೂ ಓದಿ; Bangalore News: ಎಪಿಎಸ್ ವಿಜ್ಞಾನ ಮತ್ತು ವಾಣಿಜ್ಯ ವಸ್ತುಪ್ರದರ್ಶನದಲ್ಲಿ ವಿದ್ಯಾರ್ಥಿಗಳ ಪ್ರತಿಭೆ ಪ್ರದರ್ಶನ
ಕನ್ನಡ ಭಾಷೆಯ ಉಳಿವು ಮತ್ತು ಬೆಳವಣಿಗೆಯಲ್ಲಿ ಯುವಜನತೆ ಪ್ರಮುಖ ಪಾತ್ರ ವಹಿಸಬೇಕು. ಕನ್ನಡವನ್ನು ಕೇವಲ ಮಾತನಾಡುವುದಕ್ಕೆ ಸೀಮಿತಗೊಳಿಸದೆ, ಶಿಕ್ಷಣ, ಆಡಳಿತ, ಸಾಹಿತ್ಯ ಹಾಗೂ ದೈನಂದಿನ ಬದುಕಿನಲ್ಲಿ ಹೆಚ್ಚು ಹೆಚ್ಚು ಬಳಸುವ ಮೂಲಕ ಅದರ ಗೌರವವನ್ನು ಎತ್ತಿ ಹಿಡಿಯಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಿ.ಎ.ಡಾ. ವಿಷ್ಣುಭರತ್ ಅಲಂಪಲ್ಲಿ, ಸದಸ್ಯರು, ಆಡಳಿತ ಮಂಡಳಿ, ಎಂ.ಕೆ.ಪಿ.ಎಂ. ಆರ್.ವಿ. ಇನ್ಸ್ಟಿಟ್ಯೂಟ್ ಆಫ್ ಲೀಗಲ್ ಸ್ಟಡೀಸ್ ಹಾಗೂ ಟ್ರಸ್ಟಿ, ಆರ್.ವಿ. ಶಿಕ್ಷಣ ಸಂಸ್ಥೆಗಳು ಅವರು ಮಾತನಾಡಿ, ಕರ್ನಾಟಕದ ವೈಭವ ಕೇವಲ ಅದರ ಭೌಗೋಳಿಕ ವಿಸ್ತಾರದಲ್ಲಿಲ್ಲ ಸಾವಿರಾರು ವರ್ಷಗಳ ಇತಿಹಾಸ, ಸಾಹಿತ್ಯ, ಕಲೆ, ಸಂಗೀತ, ಶಿಲ್ಪಕಲೆ, ವಾಸ್ತುಶಿಲ್ಪ ಹಾಗೂ ಮಾನವೀಯ ಮೌಲ್ಯಗಳಲ್ಲಿದೆ ಎಂದು ತಿಳಿಸಿದರು.
ಕನ್ನಡಿಗರಾದ ನಾವು ನಮ್ಮ ಭಾಷೆ ಮತ್ತು ಸಂಸ್ಕೃತಿಯ ಬಗ್ಗೆ ಹೆಮ್ಮೆ ಹೊಂದುವುದರ ಜೊತೆಗೆ ಮುಂದಿನ ಪೀಳಿಗೆಗೆ ಅದನ್ನು ಪರಿಚಯಿಸಿ, ಉಳಿಸಿ ಬೆಳೆಸುವ ಜವಾಬ್ದಾರಿಯನ್ನು ನಿರ್ವಹಿಸಬೇಕು. ಜಗತ್ತಿನ ಯಾವುದೇ ಭಾಗದಲ್ಲಿದ್ದರೂ ನಮ್ಮ ಮಾತೃಭಾಷೆ ಮತ್ತು ತಾಯ್ನಾಡಿನ ಮೇಲಿನ ಅಭಿಮಾನವನ್ನು ಮರೆಯಬಾರದು. ಇಂತಹ ಕಾರ್ಯಕ್ರಮಗಳು ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ, ಸೃಜನಶೀಲತೆ, ಸಾಂಸ್ಕೃತಿಕ ಪ್ರಜ್ಞೆ ಹಾಗೂ ನಾಡಿನ ಬಗ್ಗೆ ಅಭಿಮಾನವನ್ನು ಬೆಳೆಸುತ್ತವೆ ಎಂದು ಅಭಿಪ್ರಾಯಪಟ್ಟರು.
ಗೌರವಾನ್ವಿತ ಅತಿಥಿಗಳಾಗಿ ಭಾಗವಹಿಸಿದ್ದ ರಂಗಭೂಮಿ ಕಲಾವಿದರು ಹಾಗೂ ನಟರಾದ ಎಂ.ಎನ್.ಸುರೇಶ್(M N Suresh) ಮತ್ತು ನೀನಾಸಂ ಅಶ್ವಥ್(Neenasam Ashwath), ತಮ್ಮ ಮಾತುಗಳಲ್ಲಿ ಕನ್ನಡ ರಂಗಭೂಮಿ, ಚಲನಚಿತ್ರ ಮತ್ತು ಕಲಾ ಕ್ಷೇತ್ರದ ಕೊಡುಗೆಯನ್ನು ಸ್ಮರಿಸಿ, ಕನ್ನಡ ಕಲೆಯ ಬೆಳವಣಿಗೆಯಲ್ಲಿ ಯುವ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ಅಗತ್ಯವನ್ನು ಒತ್ತಿ ಹೇಳಿದರು. ಮತ್ತೊಬ್ಬ ಗೌರವಾನ್ವಿತ ಅತಿಥಿ ಎಸ್.ಬಿ. ರಾಜಣ್ಣ ಅವರು ಸಹ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಈ ವರ್ಷದ ‘ಸಪ್ತಧಾರ’ ಎಂಬ ಶೀರ್ಷಿಕೆಯು ಕನ್ನಡದ ಒಂದೇ ಮೂಲದಿಂದ ಹರಿದುಬರುವ ಏಳು ಸಾಂಸ್ಕೃತಿಕ ಧಾರೆಗಳ ಸಂಗಮವನ್ನು ಪ್ರತಿನಿಧಿಸುತ್ತದೆ. ಕಲೆ, ಸಾಹಿತ್ಯ, ಸಂಗೀತ, ನೃತ್ಯ, ಜನಪದ ಮತ್ತು ಸೃಜನಶೀಲತೆಯ ವಿವಿಧ ಆಯಾಮಗಳನ್ನು ಒಳಗೊಂಡ ಕಾರ್ಯಕ್ರಮಗಳು ವಿದ್ಯಾರ್ಥಿ ಗಳು ಹಾಗೂ ಪ್ರೇಕ್ಷಕರ ಮನಸೂರೆಗೊಂಡವು.
ವಿಶೇಷ ಆಕರ್ಷಣೆಯಾಗಿ ನಟ ಪ್ರೇಮ್(Sandalwood Actor Prem) ಅವರ ಉಪಸ್ಥಿತಿ ಹಾಗೂ ದರ್ಶನ ನಾರಾಯಣ ಅವರ ಸಂಗೀತ ಸಂಜೆ ಕಾರ್ಯಕ್ರಮಕ್ಕೆ ವಿಶೇಷ ಮೆರುಗು ನೀಡಿದವು.
ಕಾರ್ಯಕ್ರಮದಲ್ಲಿ ಆರ್.ವಿ. ಶಿಕ್ಷಣ ಸಂಸ್ಥೆಗಳ ಗೌರವಾನ್ವಿತ ಕಾರ್ಯದರ್ಶಿಗಳಾದ ಡಾ. (ಎಚ್.ಸಿ.) ಎ.ವಿ.ಎಸ್. ಮೂರ್ತಿ, ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಡಾ. ಅಂಜಿನ ರೆಡ್ಡಿ ಕೆ.ಆರ್., ಆಡಳಿತ ಮಂಡಳಿಯ ಸದಸ್ಯರು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಹಾಗೂ ಗಣ್ಯರು ಉಪಸ್ಥಿತರಿದ್ದರು.
ಕನ್ನಡ ನಾಡು, ನುಡಿ ಮತ್ತು ಸಂಸ್ಕೃತಿಯ ಬಗ್ಗೆ ಅತಿಥಿಗಳು ಹಾಗೂ ಅಧ್ಯಕ್ಷರು ವ್ಯಕ್ತಪಡಿಸಿದ ಅಭಿಮಾನಪೂರ್ಣ ಮಾತುಗಳು ಕಾರ್ಯಕ್ರಮಕ್ಕೆ ವಿಶೇಷ ಅರ್ಥ ಮತ್ತು ಮೆರುಗು ನೀಡಿದವು.
ವಿದ್ಯಾರ್ಥಿಗಳಲ್ಲಿ ಕನ್ನಡದ ಬಗ್ಗೆ ಹೆಮ್ಮೆ ಹಾಗೂ ಸಾಂಸ್ಕೃತಿಕ ಜಾಗೃತಿ ಮೂಡಿಸುವಲ್ಲಿ ‘ಸಪ್ತಧಾರ – ಕನ್ನಡ ಹಬ್ಬ 2026’ ಒಂದು ಅರ್ಥಪೂರ್ಣ ಕಾರ್ಯಕ್ರಮವಾಗಿ ಮೂಡಿಬಂದಿತು.