ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಆಶಾ ಕಾರ್ಯಕರ್ತೆಯರ ಹೋರಾಟಕ್ಕೆ ಜಯ; 2,000 ರೂ. ಗೌರವಧನ ಹೆಚ್ಚಳಕ್ಕೆ ಸರ್ಕಾರದಿಂದ ಲಿಖಿತ ಆದೇಶ

ಫ್ರೀಡಂ ಪಾರ್ಕ್‌ನಲ್ಲಿ 13 ದಿನಗಳಿಂದ ಅಹೋರಾತ್ರಿ ಧರಣಿ ನಡೆಸುತ್ತಿದ್ದ ಆಶಾ ಕಾರ್ಯಕರ್ತೆಯರ ಬೇಡಿಕೆಗೆ ಸ್ಪಂದಿಸಿರುವ ರಾಜ್ಯ ಸರ್ಕಾರ, ಮಾಸಿಕ ಗೌರವಧನವನ್ನು 2,000 ರೂ. ಹೆಚ್ಚಿಸುವ ಕುರಿತು ಅಧಿಕೃತ ಲಿಖಿತ ಟಿಪ್ಪಣಿಯನ್ನು ಹೊರಡಿಸಿದೆ. ಈ ಪರಿಷ್ಕೃತ ಗೌರವಧನವು ಜನವರಿ 1, 2027 ರಿಂದ ಜಾರಿಗೆ ಬರಲಿದೆ.

ಆಶಾ ಕಾರ್ಯಕರ್ತೆಯರ ಹೋರಾಟಕ್ಕೆ ಕೊನೆಗೂ ಸಿಕ್ತು ಜಯ

ಸಂಗ್ರಹ ಚಿತ್ರ -

Vishakha Bhat Heggar
Vishakha Bhat Heggar Nov 29, 2026 1:06 PM

ಬೆಂಗಳೂರು: ಫ್ರೀಡಂ ಪಾರ್ಕ್‌ನಲ್ಲಿ 13 ದಿನಗಳಿಂದ ಅಹೋರಾತ್ರಿ ಧರಣಿ ನಡೆಸುತ್ತಿದ್ದ ಆಶಾ ಕಾರ್ಯಕರ್ತೆಯರ ಬೇಡಿಕೆಗೆ ಸ್ಪಂದಿಸಿರುವ ರಾಜ್ಯ (ASHA Workers Protest) ಸರ್ಕಾರ, ಮಾಸಿಕ ಗೌರವಧನವನ್ನು 2,000 ರೂ. ಹೆಚ್ಚಿಸುವ ಕುರಿತು ಅಧಿಕೃತ ಲಿಖಿತ ಟಿಪ್ಪಣಿಯನ್ನು ಹೊರಡಿಸಿದೆ. ಈ ಪರಿಷ್ಕೃತ ಗೌರವಧನವು ಜನವರಿ 1, 2027 ರಿಂದ ಜಾರಿಗೆ ಬರಲಿದೆ. ಸಿಎಂ ಡಿ.ಕೆ. ಶಿವಕುಮಾರ್ ಅವರು ನೀಡಿದ್ದ ಮೌಖಿಕ ಭರವಸೆಗೆ ಒಪ್ಪದ ಕಾರ್ಯಕರ್ತೆಯರು ಲಿಖಿತ ಆದೇಶಕ್ಕಾಗಿ ಪಟ್ಟು ಹಿಡಿದಿದ್ದರು.

ರಾಜ್ಯ ಸರ್ಕಾರ, ಮಾಸಿಕ ಗೌರವಧನವನ್ನು 2,000 ರೂ. ಹೆಚ್ಚಿಸುವ ಸಂಬಂಧ ಲಿಖಿತ ರೂಪದಲ್ಲಿ ಅಧಿಕೃತ ಟಿಪ್ಪಣಿಯನ್ನು ಹೊರಡಿಸಿದೆ. ಜನವರಿ 1, 2027ರಿಂದ ಜಾರಿಗೆ ಬರುವಂತೆ ಹೆಚ್ಚುವರಿ ಗೌರವಧನ ಪಾವತಿಗೆ ಅಗತ್ಯ ಪ್ರಕ್ರಿಯೆಗಳನ್ನು ಆದ್ಯತೆ ಮೇರೆಗೆ ಆರಂಭಿಸಲು ಮುಖ್ಯಮಂತ್ರಿ ಕಚೇರಿಯಿಂದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಸೂಚನೆ ರವಾನಿಸಲಾಗಿದೆ.

ನವೆಂಬರ್ 17 ರಿಂದ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ಸಾವಿರಾರು ಆಶಾ ಕಾರ್ಯಕರ್ತೆಯರು ಚಳಿ, ಮಳೆಯನ್ನೂ ಲೆಕ್ಕಿಸದೆ ಫ್ರೀಡಂ ಪಾರ್ಕ್‌ನಲ್ಲಿ ನಿರಂತರ ಪ್ರತಿಭಟನೆ ನಡೆಸುತ್ತಿದ್ದರು. ಶುಕ್ರವಾರ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ್ದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಗೌರವಧನ ಹೆಚ್ಚಳದ ಮೌಖಿಕ ಭರವಸೆ ನೀಡಿದ್ದರು. ಆದರೆ, ಸರ್ಕಾರದಿಂದ ಅಧಿಕೃತ ಲಿಖಿತ ಆದೇಶ ಸಿಗುವವರೆಗೂ ಧರಣಿ ಹಿಂಪಡೆಯುವುದಿಲ್ಲ ಎಂದು ಪ್ರತಿಭಟನಾಕಾರರು ಪಟ್ಟು ಹಿಡಿದಿದ್ದರು. ಇದೀಗ ಲಿಖಿತ ರೂಪದಲ್ಲಿ ಆದೇಶ ಸಿಕ್ಕಿದೆ.

ಮೇಕೆದಾಟು ಅಣೆಕಟ್ಟು ವಿವಾದ: ಡಿಕೆ ಶಿವಕುಮಾರ್‌ ವಿರುದ್ಧ ತಮಿಳುನಾಡು ಕಾಂಗ್ರೆಸ್ ಸಂಸದ ಕಿಡಿ; 'ಒಂದು ಇಟ್ಟಿಗೆಯನ್ನೂ ಹಾಕಲು ಬಿಡುವುದಿಲ್ಲ' ಎಂದು ಎಚ್ಚರಿಕೆ

ಮುಖ್ಯಮಂತ್ರಿಗಳ ಕಾರ್ಯದರ್ಶಿ ಎಸ್. ಎಸ್. ನಕುಲ್ (ಭಾ.ಆ.ಸೇ.) ಅವರ ಮೂಲಕ (ಸಂಖ್ಯೆ: ಮುಮಂ/ಕಾ/135/2026) ಈ ಟಿಪ್ಪಣಿಯನ್ನು ಹೊರಡಿಸಿದೆ. ಈ ಪತ್ರದ ಪ್ರತಿಯನ್ನು ಮುಖ್ಯಮಂತ್ರಿಗಳ ಅಪರ ಮುಖ್ಯ ಕಾರ್ಯದರ್ಶಿ, ಮುಖ್ಯಮಂತ್ರಿಗಳ ಆಪ್ತ ಕಾರ್ಯದರ್ಶಿ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರ ಆಪ್ತ ಕಾರ್ಯದರ್ಶಿಗಳ ಮಾಹಿತಿಗಾಗಿಯೂ ಕಳುಹಿಸಲಾಗಿದೆ.