Karnataka Sangha Qatar: ದೋಹಾದಲ್ಲಿ ಡಾ. ವೈಭವ್ ತಾಂಡಲೆಗೆ ಕರ್ನಾಟಕ ಸಂಘ ಕತಾರ್ನಿಂದ ಸನ್ಮಾನ
Karnataka Sangha Qatar: ದೋಹಾದಲ್ಲಿನ ಐಸಿಸಿ ಅಶೋಕ ಹಾಲ್ನಲ್ಲಿ ಬೀಳ್ಕೊಡುಗೆ ಸಮಾರಂಭ ಆಯೋಜಿಸಲಾಗಿತ್ತು. ಕತಾರ್ನಲ್ಲಿರುವ ಭಾರತೀಯ ರಾಯಭಾರ ಕಚೇರಿಯ ಕೌನ್ಸಿಲರ್ ಡಾ. ವೈಭವ್ ತಾಂಡಲೆ ಅವರು ತಮ್ಮ ರಾಜತಾಂತ್ರಿಕ ಸೇವಾವಧಿ ಯಶಸ್ವಿಯಾಗಿ ಪೂರ್ಣಗೊಳಿಸಿದ ಹಿನ್ನೆಲೆಯಲ್ಲಿ ಅವರನ್ನು ಸನ್ಮಾನಿಸಲಾಗಿದೆ.
-
ದೋಹಾ (ಕತಾರ್): ಕತಾರ್ನಲ್ಲಿರುವ ಭಾರತೀಯ ರಾಯಭಾರ ಕಚೇರಿಯ ಕೌನ್ಸಿಲರ್ (ಹೆಡ್ ಆಫ್ ಚಾನ್ಸೆರಿ) ಡಾ. ವೈಭವ್ ತಾಂಡಲೆ (Dr. Vaibhav Tandale) ಅವರು ತಮ್ಮ ರಾಜತಾಂತ್ರಿಕ ಸೇವಾವಧಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಹಿನ್ನೆಲೆಯಲ್ಲಿ ಅವರನ್ನು ಭಾರತೀಯ ಸಾಂಸ್ಕೃತಿಕ ಕೇಂದ್ರದಿಂದ (ICC) ನವೆಂಬರ್ 24ರಂದು ಆತ್ಮೀಯವಾಗಿ ಸನ್ಮಾನಿಸಿ ಬೀಳ್ಕೊಡಲಾಯಿತು.
ದೋಹಾದಲ್ಲಿನ ಐಸಿಸಿ ಅಶೋಕ ಹಾಲ್ನಲ್ಲಿ ಬೀಳ್ಕೊಡುಗೆ ಸಮಾರಂಭ ಆಯೋಜಿಸಲಾಗಿತ್ತು. ಕರ್ನಾಟಕ ಸಂಘ ಕತಾರ್ (KSQ) ಪರವಾಗಿ ಸಮುದಾಯದ ಮುಖಂಡರು ಹಾಗೂ ಕಾರ್ಯಕಾರಿ ಸಮಿತಿಯ ಪ್ರತಿನಿಧಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ, ಕತಾರ್ನಲ್ಲಿರುವ ಅನಿವಾಸಿ ಭಾರತೀಯರು ಮತ್ತು ಸಮುದಾಯ ಸಂಘಟನೆಗಳಿಗೆ ಡಾ. ತಾಂಡಲೆ ಅವರು ನೀಡಿದ ನಿರಂತರ ಬೆಂಬಲ, ಮಾರ್ಗದರ್ಶನ ಹಾಗೂ ನಿಸ್ವಾರ್ಥ ಸೇವೆಗೆ ಕೃತಜ್ಞತೆ ಸಲ್ಲಿಸಿದರು.

ಸಮಾರಂಭದಲ್ಲಿ ಕರ್ನಾಟಕ ಸಂಘ ಕತಾರ್ ನಿಯೋಗವು ಡಾ. ವೈಭವ್ ತಾಂಡಲೆ ಅವರಿಗೆ ಸಾಂಪ್ರದಾಯಿಕ ಶಾಲು ಹೊದಿಸಿ ಗೌರವಪೂರ್ವಕವಾಗಿ ಸನ್ಮಾನಿಸಿತು. ಅಲ್ಲದೆ, ಅವರ ಮುಂದಿನ ರಾಜತಾಂತ್ರಿಕ ಹುದ್ದೆಗಳಲ್ಲಿಯೂ ಯಶಸ್ಸು ಮತ್ತು ಉತ್ತಮ ಆರೋಗ್ಯ ಲಭಿಸಲಿ ಎಂದು ಹೃತ್ಪೂರ್ವಕ ಶುಭ ಹಾರೈಸಿತು.
ಈ ಸಂದರ್ಭದಲ್ಲಿ ವಿವಿಧ ಭಾರತೀಯ ಸಾಮಾಜಿಕ-ಸಾಂಸ್ಕೃತಿಕ ಸಂಘಟನೆಗಳ ಪ್ರತಿನಿಧಿಗಳು, ಸಮುದಾಯದ ಗಣ್ಯರು ಹಾಗೂ ಹಿತೈಷಿಗಳು ಉಪಸ್ಥಿತರಿದ್ದು, ದೋಹಾದಲ್ಲಿನ ತಮ್ಮ ಸೇವಾವಧಿಯಲ್ಲಿ ಸಮುದಾಯದ ಏಳಿಗೆಗಾಗಿ ಡಾ. ತಾಂಡಲೆ ಅವರು ನೀಡಿದ ಕೊಡುಗೆಗಳನ್ನು ಸ್ಮರಿಸಿದರು.