Full Meals Movie: ಲಿಖಿತ್ ಶೆಟ್ಟಿ ಅಭಿನಯದ ‘ಫುಲ್ ಮೀಲ್ಸ್’ ಚಿತ್ರದ ಟ್ರೈಲರ್ ಶೀಘ್ರದಲ್ಲೇ ರಿಲೀಸ್
Full Meals Movie: ವೆಡ್ಡಿಂಗ್ ಫೋಟೋಗ್ರಾಫರ್ ಸುತ್ತ ಸುತ್ತುವ ಕಥಾ ಹಂದರವನ್ನು ಹೊಂದಿರುವ ಲಿಖಿತ್ ಶೆಟ್ಟಿ ಅಭಿನಯದ ‘ಫುಲ್ ಮೀಲ್ಸ್’ ಸಿನಿಮಾದ ಟ್ರೈಲರ್ ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ತಿಳಿಸಿದೆ. ಈ ಕುರಿತ ವಿವರ ಇಲ್ಲಿದೆ.
ಬೆಂಗಳೂರು, ಜ.23, 2025: ಲಿಖಿತ್ ಶೆಟ್ಟಿ ನಾಯಕನಾಗಿ, ಖುಷಿ ರವಿ ಮತ್ತು ತೇಜಸ್ವಿನಿ ಶರ್ಮ ನಾಯಕಿಯರಾಗಿ ನಟಿಸುತ್ತಿರುವ ‘ಫುಲ್ ಮೀಲ್ಸ್’ ಚಿತ್ರದ (Full Meals Movie) ಟ್ರೈಲರ್ ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ತಿಳಿಸಿದೆ. ಚಿತ್ರದ ನಾಯಕಿ ಖುಷಿ ರವಿ ಹುಟ್ಟುಹಬ್ಬದ ಪ್ರಯುಕ್ತ ಸಣ್ಣ ತುಣುಕೊಂದನ್ನು ಬಿಡುಗಡೆ ಮಾಡಿರುವ ಚಿತ್ರತಂಡ ವೀಡಿಯೋ ಕೊನೆಯಲ್ಲಿ ಶೀಘ್ರದಲ್ಲೇ ಟ್ರೈಲರ್ ಬರಲಿದೆ ಎಂದು ತಿಳಿಸಿದೆ.
ಈ ಹಿಂದೆ ಸಂಕಷ್ಟಕರ ಗಣಪತಿ, ಫ್ಯಾಮಿಲಿ ಪ್ಯಾಕ್ ಮತ್ತು ಅಬ್ಬಬ್ಬ ಸಿನೆಮಾಗಳ ಮೂಲಕ ಸಾಕಷ್ಟು ಖ್ಯಾತಿಯನ್ನು ಪಡೆದಿದ್ದ ನಾಯಕ ನಟ ಲಿಖಿತ್ ಶೆಟ್ಟಿ ಈಗ ಮತ್ತೊಮ್ಮೆ ವಿಶೇಷವಾದ ಕಥೆಯೊಂದಿಗೆ ಬರುತ್ತಿದ್ದಾರೆ. ಮೊದಲ ಬಾರಿ ಪೂರ್ಣ ಪ್ರಮಾಣದ ನಿರ್ಮಾಣದ ಜವಾಬ್ದಾರಿಯನ್ನೂ ಸಹ ಅವರೇ ವಹಿಸಿಕೊಂಡಿದ್ದು, ಶೀಘ್ರದಲ್ಲೇ ಸಿನೆಮಾ ಬಿಡುಗಡೆ ಮಾಡುವ ಆಲೋಚನೆಯಲ್ಲಿದ್ದು, ಟ್ರೈಲರ್‌ನೊಂದಿಗೆ ಬಿಡುಗಡೆಯ ದಿನಾಂಕವನ್ನು ಕೂಡ ಪ್ರಕಟಿಸುವುದಾಗಿ ತಿಳಿಸಿದ್ದಾರೆ.
ವೆಡ್ಡಿಂಗ್ ಫೋಟೋಗ್ರಾಫರ್ ಸುತ್ತ ಸುತ್ತುವ ಕಥಾ ಹಂದರವನ್ನು ಹೊಂದಿರುವ ಸಿನಿಮಾ, ಮನೋರಂಜನೆಯ ಜತೆಗೆ ಸಾಕಷ್ಟು ಹೊಸ ವಿಷಯಗಳನ್ನು ಒಳಗೊಂಡಿದ್ದು, ಪ್ರೇಕ್ಷಕರು ಸಿನಿಮಾವನ್ನು ಇಷ್ಟಪಡುತ್ತಾರೆಂಬ ವಿಶ್ವಾಸ ಚಿತ್ರತಂಡಕ್ಕಿದೆ. ಚಿತ್ರದುರ್ಗದ ಪ್ರತಿಭೆ ಎನ್. ವಿನಾಯಕ ಚಿತ್ರದ ಮೂಲಕ ಮೊದಲ ಬಾರಿಗೆ ನಿರ್ದೇಶನದ ಜವಾಬ್ದಾರಿ ಹೊತ್ತಿದ್ದಾರೆ. ಸಿನಿಮಾಗೆ ಹರೀಶ್ ಗೌಡ ಸಂಭಾಷಣೆ ಬರೆದಿದ್ದು, ಮನೋಹರ್ ಜೋಷಿ ಛಾಯಾಗ್ರಹಣ, ಗುರು ಕಿರಣ್ ಸಂಗೀತ, ದೀಪು ಎಸ್ ಕುಮಾರ್ ಸಂಕಲನ, ವಿಶ್ವಾಸ್ ಕಶ್ಯಪ್ ಕಲಾ ನಿರ್ದೇಶನ, ಅರ್ಜುನ್ ರಾಜ್ ಸಾಹಸ ನಿರ್ದೇಶನ ಚಿತ್ರಕ್ಕಿದೆ.
ಈ ಸುದ್ದಿಯನ್ನೂ ಓದಿ | Winter Saree Layer Look 2025: ಚಳಿಗಾಲದ ಫ್ಯಾಷನ್‌ನಲ್ಲಿ ಸೀರೆಗೂ ಸಿಕ್ತು ಲೇಯರ್ ಲುಕ್
ಉಳಿದಂತೆ ತಾರಾಗಣದಲ್ಲಿ ರಂಗಾಯಣ ರಘು, ಸೂರಜ್ ಲೋಕ್ರೆ, ವಿಜಯ್ ಚಂಡೂರ್, ರವಿ ಶಂಕರ್ ಗೌಡ, ರಾಜೇಶ್ ನಟರಂಗ, ಸುಜಯ್ ಶಾಸ್ತ್ರಿ, ಚಂದ್ರಕಲಾ ಮೋಹನ್, ಹೂನ್ನವಳ್ಳಿ ಕೃಷ್ಣ, ರಮೇಶ್ ಪಂಡಿತ್, ಚೇತನ್ ದುರ್ಗಾ, ನಾಗೇಂದ್ರ ಅರಸ್, ಮೂಗು ಸುರೇಶ್ ಸೇರಿದಂತೆ ಬಹು ದೊಡ್ಡ ತಾರಾ ಬಳಗವೇ ಇದೆ.