ಗೋಲ್ಡ್ ಸ್ಮಗ್ಲಿಂಗ್ ಕೇಸ್; ನಟಿ ರನ್ಯಾ ರಾವ್‌ಗೆ 89 ಕೋಟಿ ದಂಡ ವಿಧಿಸಿದ ಕಸ್ಟಮ್ ಇಲಾಖೆ
ದುಬೈನಿಂದ ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಅಕ್ರಮವಾಗಿ ಸುಮಾರು 14.8 ಕೆಜಿ ಚಿನ್ನ ಕಳ್ಳಸಾಗಣೆ ಮಾಡಲು ಯತ್ನಿಸಿದ ಆರೋಪ ಹೊತ್ತಿರುವ ನಟಿ ರನ್ಯಾ ರಾವ್ ಕಸ್ಟಮ್ ಇಲಾಖೆ ಬರೋಬ್ಬರಿ 89 ಕೋಟಿ ದಂಡ ವಿಧಿಸಿದೆ.
ಸಂಗ್ರಹ ಚಿತ್ರ -
ಬೆಂಗಳೂರು: ದುಬೈನಿಂದ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಅಕ್ರಮವಾಗಿ ಸುಮಾರು 14.8 ಕೆಜಿ ಚಿನ್ನ ಕಳ್ಳಸಾಗಣೆ ಮಾಡಲು ಯತ್ನಿಸಿದ ಆರೋಪ ಹೊತ್ತಿರುವ ನಟಿ ರನ್ಯಾ ರಾವ್ (Ranya Roa) ಕಸ್ಟಮ್ ಇಲಾಖೆ (Customs Department) ಬರೋಬ್ಬರಿ 89 ಕೋಟಿ ದಂಡ ವಿಧಿಸಿದೆ. 399 ಪುಟಗಳ ಆದೇಶ ಹೊರಬಂದಿದ್ದು, ಒಂದು ವರ್ಷದ ಅವಧಿಯಲ್ಲಿ 113 ಕೆಜಿ ಚಿನ್ನ ಸಾಗಾಟ ಸಾಬೀತಾಗಿದೆ. ಕಸ್ಟಮ್ಸ್ ಜಂಟಿ ನಿರ್ದೇಶಕ ಸಂದೀಪ್ ಅವರು ಹೊರಡಿಸಿರುವ 399 ಪುಟಗಳ ಸುದೀರ್ಘ ಆದೇಶದಲ್ಲಿ ನಟಿ ರನ್ಯಾರಾವ್ ಅಂತರರಾಷ್ಟ್ರೀಯ ಮಟ್ಟದ ಗೋಲ್ಡ್ ಸ್ಮಗ್ಲಿಂಗ್ ಜಾಲದಲ್ಲಿ ಸಕ್ರಿಯವಾಗಿ ತೊಡಗಿಸಿ ಕೊಂಡಿರುವುದನ್ನು ಸಾಕ್ಷಿ ಸಮೇತ ಸಾಬೀತು ಪಡಿಸಲಾಗಿದೆ.
ಮಾರ್ಚ್ 7, 2024 ಮತ್ತು ಫೆಬ್ರವರಿ 2, 2025ರ ನಡುವಿನ ಕೇವಲ ಒಂದು ವರ್ಷದ ಅವಧಿಯಲ್ಲಿ ಈ ದಂಧೆ ನಡೆದಿದೆ. ದುಬೈನಿಂದ ಭಾರತಕ್ಕೆ ಬರೋಬ್ಬರಿ 113 ಕೆ.ಜಿ. ಚಿನ್ನವನ್ನು ಅಕ್ರಮವಾಗಿ ಸಾಗಾಟ ಮಾಡಿರುವುದು ತನಿಖೆಯಲ್ಲಿ ತಿಳಿದು ಬಂದಿದೆ. ರನ್ಯಾರಾವ್ ತನ್ನ ಸಹ ಆರೋಪಿಗಳಾದ ತರುಣ್ ಸೇರಿದಂತೆ ಇತರ ಮೂವರ ಜೊತೆಗೂಡಿ ಈ ಬೃಹತ್ ಚಿನ್ನದ ಕಳ್ಳಸಾಗಣೆ ವಹಿವಾಟು ನಡೆಸಿದ್ದಾರೆ ಎನ್ನಲಾಗಿದೆ.
ಡಿಆರ್‌ಐ ಅಧಿಕಾರಿಗಳು ರನ್ಯಾರಾವ್ ಮನೆ ಮೇಲೆ ದಾಳಿ ನಡೆಸಿದ ಸಂದರ್ಭದಲ್ಲಿ 2.5 ಕೋಟಿ ರೂ. ನಗದು ಮತ್ತು 2.06 ಕೋಟಿ ರೂ. ಮೌಲ್ಯದ ಚಿನ್ನಾಭರಣಗಳು ಪತ್ತೆಯಾಗಿದ್ದವು. ತರುಣ್ ಸೇರಿ ಇನ್ನುಳಿದ ಮೂವರ ಬಳಿ ಚಿನ್ನದ ವ್ಯವಹಾರ ಹೊಂದಿದ್ದ ರನ್ಯಾ ರಾವ್‌ಗೆ ಕಸ್ಟಮ್ಸ್ ಇಲಾಖೆ 89 ಕೋಟಿ ದಂಡ ವಿಧಿಸಿದ್ದು, ಈ ಸಂಬಂಧ ಕಸ್ಟಮ್ಸ್ ಜಂಟಿ ನಿರ್ದೇಶಕ ಸಂದೀಪ್ ಅವರು ಆದೇಶ ಹೊರಡಿಸಿದ್ದಾರೆ.
Ranya Rao: ಚಿನ್ನ ಸ್ಮಗ್ಲಿಂಗ್ ಕೇಸ್: ರನ್ಯಾ ರಾವ್‌ಗೆ ಸೇರಿದ 34.12 ಕೋಟಿ ರೂ. ಮೌಲ್ಯದ ಆಸ್ತಿ ಮುಟ್ಟುಗೋಲು
ಕನ್ನಡ ಚಿತ್ರರಂಗದ ಮಾಜಿ ನಟಿ ಮತ್ತು ಮಾಡೆಲ್ ಆಗಿದ್ದ ರನ್ಯಾ 2014 ರಲ್ಲಿ ತೆರೆಕಂಡ ಕಿಚ್ಚ ಸುದೀಪ್ ಅಭಿನಯದ ಮಾಣಿಕ್ಯ ಚಿತ್ರದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟದ್ದರು. ತಮಿಳಿನಲ್ಲಿ ವಿಕ್ರಮ್ ಪ್ರಭು ಜೊತೆ 'ವಾಗ್ಗಾ' (2016) ಹಾಗೂ ಕನ್ನಡದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಎದುರು 'ಪಟಾಕಿ' (2017) ಚಿತ್ರಗಳಲ್ಲಿ ನಟಿಸಿದ್ದಾರೆ. 2017ರ ನಂತರ ಇವರು ಚಿತ್ರರಂಗದಿಂದ ದೂರ ಉಳಿದಿದ್ದರು. ಮಾರ್ಚ್ 3, 2025 ರಂದು ದುಬೈನಿಂದ ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಾಗ, ಬಟ್ಟೆಯಲ್ಲಿ ಅಡಗಿಸಿಟ್ಟುಕೊಂಡು ಅಕ್ರಮವಾಗಿ ತರುತ್ತಿದ್ದ 14.2 ಕೆಜಿಗೂ ಹೆಚ್ಚು ಚಿನ್ನದೊಂದಿಗೆ ಕಂದಾಯ ಗುಪ್ತಚರ ನಿರ್ದೇಶನಾಲಯ (DRI) ಅಧಿಕಾರಿಗಳಿಗೆ ಸಿಕ್ಕಿಬಿದ್ದು ಬಂಧನಕ್ಕೊಳಗಾಗಿದ್ದರು.