ನ್ಯಾಯಕ್ಕಾಗಿ ಹೋರಾಡುವ ಧೈರ್ಯವಿರಲಿ : ಕಾನೂನು ವಿದ್ಯಾರ್ಥಿಗಳಿಗೆ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಸಲಹೆ
ಕಾನೂನು ಶಿಕ್ಷಣದ ಉದ್ದೇಶವು ಅಪರಾಧ ಕಾನೂನು ಅಥವಾ ಸಂವಿಧಾನಾತ್ಮಕ ಕಾನೂನಿನ ತತ್ವಗಳನ್ನು ಕಲಿಯು ವುದಕ್ಕೆ ಮಾತ್ರ ಸೀಮಿತವಾಗಿಲ್ಲ. ವಿಭಿನ್ನ ದೃಷ್ಟಿಕೋನಗಳನ್ನು ಹೊಂದಿ ರುವ ಜನರನ್ನು ಅರ್ಥಮಾಡಿಕೊಳ್ಳುವುದು, ವಿಚಾರಗಳ ವಿನಿಮಯ ನಡೆಸುವುದು ಹಾಗೂ ತಮ್ಮ ನಿಲುವು ಗಳನ್ನು ಮರುಪರಿಶೀಲಿಸುವುದೂ ಶಿಕ್ಷಣದ ಭಾಗವಾಗಿದೆ.
-
ಬೆಂಗಳೂರು: ಭಿನ್ನಾಭಿಪ್ರಾಯಗಳನ್ನು ಎದುರಿಸುವ ಸಂದರ್ಭದಲ್ಲಿ ಮತ್ತೊಬ್ಬರ ಗೌರವಕ್ಕೆ ಧಕ್ಕೆಯಾಗದಂತೆ ನಡೆದುಕೊಳ್ಳ ಬೇಕು. ಬೌದ್ಧಿಕ ಸ್ವಾತಂತ್ರ್ಯ ನ್ಯಾಯಸಮ್ಮತತೆ ಹಾಗೂ ವಿಭಿನ್ನ ಅಭಿಪ್ರಾಯಗಳನ್ನು ಗೌರವಿಸುವ ಗುಣವನ್ನು ಕಾನೂನು ಪದವೀಧರರು ಬಳೆಸಿಕೊಳ್ಳಬೇಕು ಎಂದು ಕಾನೂನು ಪದವೀಧರರಿಗೆ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ (Supreme Court Chief Justice Surya Kant) ಸಲಹೆ ನೀಡಿದರು.
ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ 34ನೇ ವಾರ್ಷಿಕ ಘಟಿಕೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು, ಕಾನೂನು ವೃತ್ತಿಗೆ ಕಾನೂನುಗಳ ವಿಧಿಗಳು ಮತ್ತು ನ್ಯಾಯಾಲಯದ ಪೂರ್ವನಿದರ್ಶನಗಳ ಜ್ಞಾನವಷ್ಟೇ ಸಾಲದು. ನ್ಯಾಯಯುತ ವಾದುದನ್ನು ಸಮರ್ಥಿಸುವ ಧೈರ್ಯ ಹಾಗೂ ಕಡೆಗಣಿಸಲ್ಪಟ್ಟವರ ಧ್ವನಿಗೆ ಕಿವಿಗೊಡುವ ವಿನಯ ಅತ್ಯಗತ್ಯ ಎಂದು ತಿಳಿಸಿದರು.
ಕಾನೂನು ಶಿಕ್ಷಣದ ಉದ್ದೇಶವು ಅಪರಾಧ ಕಾನೂನು ಅಥವಾ ಸಂವಿಧಾನಾತ್ಮಕ ಕಾನೂನಿನ ತತ್ವಗಳನ್ನು ಕಲಿಯು ವುದಕ್ಕೆ ಮಾತ್ರ ಸೀಮಿತವಾಗಿಲ್ಲ. ವಿಭಿನ್ನ ದೃಷ್ಟಿಕೋನಗಳನ್ನು ಹೊಂದಿ ರುವ ಜನರನ್ನು ಅರ್ಥಮಾಡಿಕೊಳ್ಳುವುದು, ವಿಚಾರಗಳ ವಿನಿಮಯ ನಡೆಸುವುದು ಹಾಗೂ ತಮ್ಮ ನಿಲುವುಗಳನ್ನು ಮರುಪರಿಶೀಲಿಸುವುದೂ ಶಿಕ್ಷಣದ ಭಾಗವಾಗಿದೆ.
ಕಾನೂನು ಶಾಲೆಗಳಲ್ಲಿ ವಿಭಿನ್ನ ವಿಚಾರಗಳು ಮುಖಾಮುಖಿಯಾಗುತ್ತವೆ. ನಂಬಿಕೆಗಳು ಪರೀಕ್ಷೆಗೆ ಒಳಗಾ ಗುತ್ತವೆ ಮತ್ತು ಸಂವಾದದ ಮೂಲಕ ಹೊಸ ತಿಳುವಳಿಕೆ ಮೂಡುತ್ತದೆ. ವಿಭಿನ್ನ ಅಭಿಪ್ರಾಯಗಳನ್ನು ಆಲಿಸುವುದರಿಂದ ನ್ಯಾಯದ ಪರಿಕಲ್ಪನೆ ಇನ್ನಷ್ಟು ಸಮೃದ್ಧವಾಗುತ್ತದೆ. ಕಾನೂನು ಸ್ಥಿರವಾದುದಲ್ಲ. ಅದನ್ನು ಅಭ್ಯಾಸ ಮಾಡುವವರ ಚಿಂತನೆ ಮತ್ತು ಕಾರ್ಯಗಳ ಮೂಲಕ ಅದು ಉಸಿರಾಡುತ್ತದೆ, ವಿಕಸನಗೊಳ್ಳುತ್ತದೆ ಎಂದರು.
ನ್ಯಾಯಾಂಗ ತರಬೇತಿಗೆ ಪ್ರತ್ಯೇಕ ಸಂಸ್ಥೆ ಕಾನೂನು ಪದವೀಧರರಿಗೆ ನ್ಯಾಯಾಂಗ ಸೇವಾ ಪರೀಕ್ಷೆ ಗಳ ತರಬೇತಿ ನೀಡಲು ಹಾಗೂ ಯುವ ವಕೀಲರಿಗೆ ನಿರಂತರ ಶಿಕ್ಷಣ ಒದಗಿಸಲು ರಾಜ್ಯ ಸರಕಾರ ಪ್ರತ್ಯೇಕ ಸಂಸ್ಥೆ ಸ್ಥಾಪಿಸಲಿದೆ. ಎನ್ಎಲ್ʼಎಸ್ಐಯುನಲ್ಲಿ ಸ್ಟಾರ್ಟ್ಅಪ್ ಕಾನೂನು ಕ್ಲಿನಿಕ್ ಸ್ಥಾಪನೆಗೆ ಸರಕಾರದ ಬೆಂಬಲ ನೀಡಲಿದೆ. ಈ ಕೇಂದ್ರದ ಮೂಲಕ ವಿದ್ಯಾರ್ಥಿಗಳು, ಅಧ್ಯಾಪಕರು ಮತ್ತು ಯುವ ಉದ್ಯಮಿಗಳಿಗೆ ಉಚಿತ ಕಾನೂನು ಸಲಹೆ ಒದಗಿಸಲಾಗುವುದು. ಉದ್ಯಮ ಆರಂಭಿಸುವವರು ಎದುರಿಸುವ ಕಾನೂನು ಸಂಬಂಧಿತ ಸಮಸ್ಯೆಗಳಿಗೆ ನೆರವು ನೀಡುವುದು ಇದರ ಉದ್ದೇಶವಾಗಿದೆ ಎಂದು ಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.
ಪ್ರಜಾಪ್ರಭುತ್ವದಲ್ಲಿ ಪ್ರಶ್ನಿಸುವ ಸ್ವಾತಂತ್ರ್ಯ ಮುಖ್ಯ: ಡಿಕೆಶಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಾತನಾಡಿ, ಪ್ರಜಾಪ್ರಭುತ್ವದ ಶಕ್ತಿ ಸರಕಾರವನ್ನು ಪ್ರಶ್ನಿಸುವ ಸ್ವಾತಂತ್ರ್ಯದಲ್ಲಿದೆ. ಸಂವಿಧಾನದ ಮೌಲ್ಯಗಳನ್ನು ರಕ್ಷಿಸುವುದರ ಜತೆಗೆ ಜನಸಾಮಾನ್ಯರ ಹಕ್ಕುಗಳಿಗಾಗಿ ಧ್ವನಿ ಎತ್ತುವ ಜವಾಬ್ದಾರಿ ಯುವ ವಕೀಲರು ನಿಭಾಯಿ ಸಬೇಕು. ಸರಕಾರದ ಪ್ರತಿಯೊಂದು ನಿರ್ಧಾರವನ್ನೂ ಒಪ್ಪಿಕೊಳ್ಳು ವುದೇ ಸದೃಢ ಪ್ರಜಾಪ್ರಭುತ್ವವಲ್ಲ.
ಸರಕಾರವನ್ನು ಪ್ರಶ್ನಿಸುವ, ಭಿನ್ನಾಭಿಪ್ರಾಯ ವ್ಯಕ್ತಪಡಿಸುವ ಮತ್ತು ನಿರ್ಧಾರಗಳನ್ನು ವಿಮರ್ಶಿ ಸುವ ಸ್ವಾತಂತ್ರ್ಯ ನಾಗರಿಕರಿಗೆ ಇರಬೇಕು. ಕಾನೂನು ಪದವೀಧರರು ಪ್ರಶ್ನಿಸುವುದರ ಜತೆಗೆ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಜವಾಬ್ದಾರಿಯನ್ನೂ ಹೊರಬೇಕು ಎಂದರು. ಕಾರ್ಯ ಕ್ರಮದಲ್ಲಿ ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ(Basavaraj Rayareddy), ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್ ನ್ಯಾಯಮೂರ್ತಿಗಳು ಉಪಸ್ಥಿತರಿದ್ದರು.
![]()
ಸಂವಿಧಾನದ ತತ್ವಗಳು ಪುಸ್ತಕದ ಪುಟಗಳಿಗೆ ಸೀಮಿತವಾಗದೆ ಆಡಳಿತ ಮತ್ತು ಸಾರ್ವಜನಿಕ ಜೀವನದಲ್ಲಿ ಅನುಷ್ಠಾನಗೊಳ್ಳಬೇಕು. ಪ್ರಜಾಪ್ರಭುತ್ವದ ಸಂಸ್ಥೆಗಳು ಸವಾಲುಗಳನ್ನು ಎದುರಿಸುತ್ತಿರುವ ಸಂದರ್ಭದಲ್ಲಿ ಸಂವಿಧಾನದ ಆಶಯಗಳನ್ನು ಎತ್ತಿಹಿಡಿಯುವ ಹೊಣೆ ಯುವ ವಕೀಲರು ಮತ್ತು ನೀತಿ ನಿರೂಪಕರ ಮೇಲಿದೆ.
-ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ
![]()
ವಕೀಲರು ತಮ್ಮ ವೃತ್ತಿಜೀವನದಲ್ಲಿ ವಾದಿಸುವ ಪ್ರಕರಣಗಳು, ಸಿದ್ಧಪಡಿಸುವ ಒಪ್ಪಂದಗಳು, ನೀಡುವ ಸಲಹೆಗಳು ಹಾಗೂ ಬರೆಯುವ ತೀರ್ಪುಗಳು ದೇಶದ ನ್ಯಾಯವ್ಯವಸ್ಥೆಯ ವಿಶಾಲ ಪರಿಕಲ್ಪನೆಯನ್ನು ಸಾಕಾರಗೊಳಿಸಲು ನೆರವಾಗುತ್ತವೆ. ಹೀಗಾಗಿ, ಕಾನೂನು ವೃತ್ತಿಯು ಕೇವಲ ವೃತ್ತಿಪರ ಕೌಶಲವಲ್ಲ, ಅದು ಸಾಮಾಜಿಕ ಹೊಣೆಗಾರಿಕೆ ಮತ್ತು ನ್ಯಾಯದ ಪರವಾದ ಬದ್ಧತೆ ಯನ್ನೂ ಒಳಗೊಂಡಿದೆ.
- ಸೂರ್ಯಕಾಂತ್, ಸಿಜೆಐ