ಬೆಂಗಳೂರು-ಹೈದರಾಬಾದ್ ಹೈ-ಸ್ಪೀಡ್ ರೈಲ್ವೆ ಕಾರಿಡಾರ್ ಬೀದರ್‌ವರೆಗೆ ವಿಸ್ತರಿಸಿ; ಕೇಂದ್ರಕ್ಕೆ ಎಚ್.ಡಿ. ದೇವೇಗೌಡರ ಮನವಿ
ಹೈ ಸ್ಪೀಡ್ ರೈಲ್ವೆ ಕಾರಿಡಾರ್‌ಗಳು ದೇಶಾದ್ಯಂತದ ಪ್ರಮುಖ ನಗರ, ಕೈಗಾರಿಕಾ ಮತ್ತು ಆಧ್ಯಾತ್ಮಿಕ ಕೇಂದ್ರಗಳನ್ನು ಸಂಪರ್ಕಿಸುತ್ತವೆ. ಹೀಗಾಗಿ ಬೆಂಗಳೂರು-ಹೈದರಾಬಾದ್ ಹೈ-ಸ್ಪೀಡ್ ರೈಲ್ವೆ ಕಾರಿಡಾರ್ ಅನ್ನು ಬೀದರ್‌ವರೆಗೆ ವಿಸ್ತರಿಸಬೇಕು. ಇದರಿಂದ ಉತ್ತರ ಕರ್ನಾಟಕ ಭಾಗಕ್ಕೆ ಅನುಕೂಲಾಗುತ್ತದೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಮನವಿ ಸಲ್ಲಿಸಿದ್ದಾರೆ.
ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ರನ್ನು ಭೇಟಿಯಾದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ. -
ನವದೆಹಲಿ, ಫೆ. 4: ರಾಷ್ಟ್ರದ ಅಗತ್ಯಗಳಿಗೆ ಮೀರಿ ಕೇಂದ್ರ ಬಜೆಟ್‌ನಲ್ಲಿ ರೈಲ್ವೆ ವಲಯಕ್ಕೆ ಹೆಚ್ಚು ಅನುದಾನ, ಯೋಜನೆಗಳನ್ನು ನೀಡಿರುವ ಬಗ್ಗೆ ಮಾಜಿ ಪ್ರಧಾನಿಗಳಾದ ಎಚ್.ಡಿ. ದೇವೇಗೌಡರು (H.D. Deve Gowda) ಕೇಂದ್ರದ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರನ್ನು ಅಭಿನಂದಿಸಿದ್ದಾರೆ. ರೈಲ್ವೆ ಸಚಿವರನ್ನು ಭೇಟಿಯಾಗಿ ಮನವಿ ಪತ್ರ ಸಲ್ಲಿಸಿರುವ ಮಾಜಿ ಪ್ರಧಾನಿಗಳು, 2026ರ ಬಜೆಟ್‌ನಲ್ಲಿ ಸುಸ್ಥಿರ ಸಾರಿಗೆ ಮತ್ತು ಆರ್ಥಿಕ ಬೆಳವಣಿಗೆಗಾಗಿ ಬೆಳವಣಿಗೆಯ ಕನೆಕ್ಟರ್‌ಗಳಾಗಿ ಸುಮಾರು 4,000 ಕಿ.ಮೀ. ಉದ್ದದ ಏಳು ಹೊಸ ಹೈ-ಸ್ಪೀಡ್ ರೈಲು ಕಾರಿಡಾರ್‌ಗಳನ್ನು (high-speed rail corridor) ಘೋಷಿಸಿದ್ದಕ್ಕಾಗಿ ಅಭಿನಂದನೆ ಸಲ್ಲಿಸಿದ್ದಾರೆ.
ಈ ಪೈಕಿ ಚೆನ್ನೈ-ಬೆಂಗಳೂರು-ಹೈದರಾಬಾದ್ (ಹೈದರಾಬಾದ್-ಚೆನ್ನೈ ಮತ್ತು ಚೆನ್ನೈ-ಬೆಂಗಳೂರು ವಿಭಾಗಗಳೊಂದಿಗೆ) ದಕ್ಷಿಣ ಭಾಗದಲ್ಲಿ ಹೈ-ಸ್ಪೀಡ್ ತ್ರಿಕೋನವನ್ನು ಸೃಷ್ಟಿಸಲಾಗುತ್ತಿದೆ. ಇದು ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು ಮತ್ತು ಕರ್ನಾಟಕದ ಜನರ ಆಕಾಂಕ್ಷೆಗಳು ಮತ್ತು ಅವರ ಚಲನಶೀಲತೆಯ ಅಗತ್ಯಗಳನ್ನು ನೇರವಾಗಿ ಪೂರೈಸುತ್ತದೆ ಮತ್ತು ಕೇರಳ ಮತ್ತು ಪುದುಚೇರಿಗೆ ಪ್ರಯೋಜನವನ್ನು ನೀಡುತ್ತದೆ ಎಂದು ಮಾಜಿ ಪ್ರಧಾನಿಗಳು ಹೇಳಿದ್ದಾರೆ.
ಮುಂಬೈ-ಪುಣೆ, ಪುಣೆ-ಹೈದರಾಬಾದ್, ದೆಹಲಿ-ವಾರಾಣಸಿ ಮತ್ತು ವಾರಣಾಸಿ-ಸಿಲಿಗುರಿಯಂತಹ ಇತರ ಕಾರಿಡಾರ್‌ಗಳು ದೇಶಾದ್ಯಂತದ ಪ್ರಮುಖ ನಗರ, ಕೈಗಾರಿಕಾ ಮತ್ತು ಆಧ್ಯಾತ್ಮಿಕ ಕೇಂದ್ರಗಳನ್ನು ಸಂಪರ್ಕಿಸುತ್ತವೆ. ಪ್ರಯಾಣದ ಸಮಯವನ್ನು ಕಡಿಮೆ ಮಾಡುತ್ತದೆ ಮತ್ತು 16 ಲಕ್ಷ ಕೋಟಿ ರೂ. ಹೂಡಿಕೆಗಳನ್ನು ಆಕರ್ಷಿಸುತ್ತವೆ. ಈ ದೂರದೃಷ್ಟಿಯ ಉಪಕ್ರಮವು ವಿಕಸಿತ ಭಾರತ 2047ರ ಉದಾತ್ತ ಕನಸಿನೊಂದಿಗೆ ಸರಾಗವಾಗಿ ಹೊಂದಿಕೆಯಾಗುತ್ತದೆ. ಜಾಗತಿಕ ದರ್ಜೆಯ ಮೂಲಸೌಕರ್ಯದಿಂದ ನಡೆಸಲ್ಪಡುವ ಅಭಿವೃದ್ಧಿ ಹೊಂದಿದ, ಆಧುನಿಕ ಆರ್ಥಿಕತೆಯತ್ತ ನಮ್ಮ ರಾಷ್ಟ್ರದ ಪ್ರಯಾಣವನ್ನು ವೇಗಗೊಳಿಸುತ್ತದೆ ಎಂದು ಅವರು ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಬೀದರ್ ಸೇರಿಸಲು ಮನವಿ:
ಬೆಂಗಳೂರು-ಹೈದರಾಬಾದ್ ಹೈ-ಸ್ಪೀಡ್ ರೈಲ್ವೆ ಕಾರಿಡಾರ್ ಅನ್ನು ಬೀದರ್ ವರೆಗೆ ವಿಸ್ತರಿಸಬೇಕು. ಇದು ಉತ್ತರ ಕರ್ನಾಟಕ ಮತ್ತು ತೆಲಂಗಾಣ ಪ್ರದೇಶಗಳಿಗೆ ಹೆಚ್ಚು ಅನುಕೂಲ ಆಗುತ್ತದೆ ಎಂದು ಮನವಿ ಮಾಡಿರುವ ಮಾಜಿ ಪ್ರಧಾನಿಗಳು; ಈ ಮೂಲಕ ಬೀದರ್ ಭಾಗದ ಅಗತ್ಯಗಳಿಗೆ ಅನುಕೂಲ ಆಗುತ್ತದೆ ಎಂದಿದ್ದಾರೆ.
ರಾಜ್ಯಕ್ಕೆ ಮತ್ತೊಂದು ಹೈ ಸ್ಪೀಡ್ ರೈಲ್ವೆ ಕಾರಿಡಾರ್; ರೈಲ್ವೆ ಸಚಿವರ ಜತೆ ಎಚ್.ಡಿ. ಕುಮಾರಸ್ವಾಮಿ ಮಾತುಕತೆ
ಕರ್ನಾಟಕ ರಾಜ್ಯದೊಳಗೆ ಸುಧಾರಿತ ಆಂತರಿಕ ಸಂಪರ್ಕದ ಅಗತ್ಯವಾಗಿದೆ. ಬೆಂಗಳೂರು ಮತ್ತು ಬೆಳಗಾವಿ ನಡುವಿನ ಅಂತರವು ಸುಮಾರು 600 ಕಿ.ಮೀ., ಮತ್ತು ಪ್ರಸ್ತುತ ಪ್ರಯಾಣದ ಸಮಯ - ಸಾಮಾನ್ಯವಾಗಿ ರಸ್ತೆ ಅಥವಾ ರೈಲು ಮೂಲಕ 8-10 ಗಂಟೆಗಳು ಆಗುತ್ತದೆ. ಈ ದೀರ್ಘ ಪ್ರಯಾಣವು ಉತ್ತರ ಕರ್ನಾಟಕ ಮತ್ತು ದಕ್ಷಿಣ ಕರ್ನಾಟಕ ಪ್ರದೇಶಗಳಿಗೆ ಪ್ರಗತಿಗೆ ತೀವ್ರವಾಗಿ ಅಡ್ಡಿಯಾಗುತ್ತದೆ. ಬೆಂಗಳೂರು- ಬೆಳಗಾವಿ- ಪುಣೆ-ಮುಂಬೈ ಅನ್ನು ಸಂಪರ್ಕಿಸುವ ವೇಗದ ಹೈ-ಸ್ಪೀಡ್ ರೈಲು ಕಾರಿಡಾರ್ ಅಪಾರ ಪ್ರಯೋಜನಕಾರಿ ಆಗಲಿದೆ ಎಂದು ಅವರು ಹೇಳಿದ್ದಾರೆ.