5ನೇ ಪಂದ್ಯದಲ್ಲಿ 3 ವಿಕೆಟ್ ಕಿತ್ತ ಅರ್ಷದೀಪ್ ಸಿಂಗ್ ಬಗ್ಗೆ ಶ್ರೇಯಸ್ ಅಯ್ಯರ್ ದೊಡ್ಡ ಹೇಳಿಕೆ!
ನ್ಯೂಜಿಲೆಂಡ್ ವಿರುದ್ಧದ ಐದನೇ ಏಕದಿನ ಪಂದ್ಯದಲ್ಲಿ ಅರ್ಷದೀಪ್ ಸಿಂಗ್ 30 ರನ್ ನೀಡಿ ಮೂರು ವಿಕೆಟ್ ಪಡೆದು ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಅವರ ಬೌಲಿಂಗ್ ಪ್ರದರ್ಶನವನ್ನು ಶ್ರೇಯಸ್ ಅಯ್ಯರ್ ಶ್ಲಾಘಿಸಿದ್ದು, ಭಾರತ ತಂಡ 3-1 ಅಂತರದಲ್ಲಿ ಸರಣಿ ಗೆದ್ದುಕೊಂಡಿತು.
ಅರ್ಷದೀಪ್ ಸಿಂಗ್ ಅವರನ್ನು ಶ್ಲಾಘಿಸಿದ ಶ್ರೇಯಸ್ ಅಯ್ಯರ್. -
ಮೌಂಟ್ ಮೌಂಗನುಯಿ: ನ್ಯೂಜಿಲೆಂಡ್ ವಿರುದ್ಧದ ಐದನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ (IND vs NZ) ವೇಗದ ಬೌಲರ್ ಅರ್ಷದೀಪ್ ಸಿಂಗ್ ಅವರ ಅದ್ಭುತ ಪ್ರದರ್ಶನಕ್ಕೆ ಭಾರತ ತಂಡದ ಹಂಗಾಮಿ ನಾಯಕ ಶ್ರೇಯಸ್ ಅಯ್ಯರ್ (Shreyas Iyer) ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆರಂಭಿಕ ಎರಡು ಓವರ್ಗಳಲ್ಲಿ ಲಯ ಕಂಡುಕೊಳ್ಳಲು ಪರದಾಡಿದರೂ, ಬಳಿಕ ಅದ್ಭುತವಾಗಿ ಕಮ್ಬ್ಯಾಕ್ ಮಾಡಿದ ಅರ್ಷದೀಪ್ ಅವರ ಅನುಭವ, ಪರಿಸ್ಥಿತಿಗೆ ತಕ್ಕಂತೆ ಬೌಲ್ ಮಾಡುವ ಸಾಮರ್ಥ್ಯ ಹಾಗೂ ಪಂದ್ಯದ ಗತಿಯನ್ನೇ ಬದಲಿಸುವ ಗುಣವನ್ನು ಅಯ್ಯರ್ ಶ್ಲಾಘಿಸಿದ್ದಾರೆ.
ಬೇ ಓವಲ್ನಲ್ಲಿ ನಡೆದಿದ್ದ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಭಾರತ 22 ರನ್ಗಳ ಗೆಲುವು ದಾಖಲಿಸಿತು. ಈ ಮೂಲಕ ಐದು ಪಂದ್ಯಗಳ ಏಕದಿನ ಸರಣಿಯನ್ನು ಭಾರತ 3-1 ಅಂತರದಿಂದ ಗೆದ್ದುಕೊಂಡಿತು. ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ ಅರ್ಷದೀಪ್ ಸಿಂಗ್ (Arshdeep Singh) ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ಆರಂಭಿಕ ಎರಡು ಓವರ್ಗಳಲ್ಲಿ ಬೌಲಿಂಗ್ ಲಯ ಕಂಡುಕೊಳ್ಳಲು ಅರ್ಷದೀಪ್ ಪರದಾಡಿದ್ದರು. ಆದರೆ ನಂತರ ತಮ್ಮ ಬೌಲಿಂಗ್ನಲ್ಲಿ ಸುಧಾರಣೆ ಮಾಡಿಕೊಂಡು ಪರಿಣಾಮಕಾರಿ ದಾಳಿ ನಡೆಸಿದರು. ಈ ಕುರಿತು ಮಾತನಾಡಿದ ಶ್ರೇಯಸ್ ಅಯ್ಯರ್, ಅರ್ಷದೀಪ್ ಅವರ ಮಾನಸಿಕ ಸ್ಥೈರ್ಯವನ್ನು ಮೆಚ್ಚಿಕೊಂಡಿದ್ದಾರೆ.
IND vs NZ: 5 ರನ್ಗೆ ಔಟ್ ಆಗಿ ಅನಗತ್ಯ ದಾಖಲೆ ಹೆಗಲೇರಿಸಿಕೊಂಡ ವಿರಾಟ್ ಕೊಹ್ಲಿ!
"ಇಂದು (ನವೆಂಬರ್ 15) ಅವರು ಕಮ್ಬ್ಯಾಕ್ ಮಾಡಿದ ರೀತಿ ಅದ್ಭುತವಾಗಿತ್ತು. ಮೊದಲ ಎರಡು ಓವರ್ಗಳಲ್ಲಿ ಅವರ ಬೌಲಿಂಗ್ ಲಯ ಸರಿಯಾಗಿ ಹೊಂದಿಕೆಯಾಗಿರಲಿಲ್ಲ. ಚೆಂಡು ಕೆಲವೊಮ್ಮೆ ಹೆಚ್ಚು ದೂರ ಪಿಚ್ ಆಗುತ್ತಿತ್ತು. ಆದರೆ ನಂತರ ಬೌಲರ್ ಆಗಿ ಮತ್ತೆ ಲಯ ಕಂಡುಕೊಂಡು ಉತ್ತಮವಾಗಿ ಬೌಲ್ ಮಾಡಿದರು. ಆ ಸಂದರ್ಭದಲ್ಲಿ ಅವರು ತೋರಿದ ಮಾನಸಿಕ ಸ್ಥೈರ್ಯ ನಿಜಕ್ಕೂ ಮೆಚ್ಚುವಂತದ್ದು," ಎಂದು ಅಯ್ಯರ್ ಹೇಳಿದ್ದಾರೆ.
ಅರ್ಷದೀಪ್ ಅವರ ಅನುಭವ ಹಾಗೂ ಪಿಚ್ನ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳುವ ಸಾಮರ್ಥ್ಯವೂ ಭಾರತದ ಗೆಲುವಿಗೆ ನೆರವಾಯಿತು ಎಂದು ಅಯ್ಯರ್ ತಿಳಿಸಿದ್ದಾರೆ.
Stood tall when it mattered most 👏 Arshdeep Singh is the Player of the Match in the 5️⃣th and final ODI 🫡 Scorecard ▶️ https://t.co/wqxhoXb2WC #TeamIndia | #NZvIND | @arshdeepsinghh https://t.co/2LlZr0wC50
— BCCI (@BCCI) November 15, 2026
"ಅವರು ನಿರಂತರವಾಗಿ ಪಂದ್ಯಗಳನ್ನು ಆಡುತ್ತಿದ್ದಾರೆ. ಹೀಗಾಗಿ ಅವರಿಗೆ ಸಾಕಷ್ಟು ಅನುಭವವಿದೆ. ಪರಿಸ್ಥಿತಿಯನ್ನು ಚೆನ್ನಾಗಿ ಅರ್ಥಮಾಡಿಕೊಳ್ಳುವ ಆಟಗಾರ ಅವರು. ಯಾವ ಲೆನ್ತ್ನಲ್ಲಿ ಬೌಲ್ ಮಾಡಿದರೆ ಚೆಂಡು ಪರಿಣಾಮಕಾರಿಯಾಗುತ್ತದೆ ಎಂಬುದನ್ನು ಅರಿತುಕೊಂಡರು. ನಂತರ ಅದೇ ಲೆನ್ತ್ನಲ್ಲಿ ಸತತವಾಗಿ ಬೌಲ್ ಮಾಡಿದರು. ಇದರಿಂದ ತಂಡಕ್ಕೂ ಸಾಕಷ್ಟು ಲಾಭವಾಯಿತು," ಎಂದು ಅವರು ಹೇಳಿದ್ದಾರೆ.
IND vs NZ: 5ನೇ ಒಡಿಐ ಗೆದ್ದರೂ ಭಾರತ ತಂಡದ ನಿರ್ಧಾರಗಳನ್ನು ಟೀಕಿಸಿದ ಮುರಳಿ ಕಾರ್ತಿಕ್!
ಅರ್ಷದೀಪ್ ಅವರೊಂದಿಗಿನ ಅನುಭವ ಹಂಚಿಕೊಂಡ ಅಯ್ಯರ್
"ಅವರೊಂದಿಗೆ ಆಡಿದ ಸಮಯ ತುಂಬಾ ಚೆನ್ನಾಗಿತ್ತು. ಅವರ ಮುಂದಿನ ಪ್ರಯತ್ನಗಳಿಗೆ ನನ್ನ ಕಡೆಯಿಂದ ಶುಭ ಹಾರೈಕೆಗಳು," ಎಂದು ಅಯ್ಯರ್ ತಿಳಿಸಿದ್ದಾರೆ.
ಈ ಸರಣಿಯಲ್ಲಿ ಅರ್ಷದೀಪ್ ಸಿಂಗ್ ಹೆಚ್ಚಾಗಿ ಬಳಸಿದ ವಾಬಲ್ ಸೀಮ್ (Wobble Seam) ಎಸೆತದ ಬಗ್ಗೆಯೂ ಶ್ರೇಯಸ್ ಅಯ್ಯರ್ ಮಾತನಾಡಿದ್ದಾರೆ. ಆದರೆ ನೆಟ್ಸ್ನಲ್ಲಿ ತಾವು ಈ ರೀತಿಯ ಎಸೆತವನ್ನು ಎದುರಿಸಿಲ್ಲ ಎಂದು ತಿಳಿಸಿದ್ದಾರೆ.
"ನಾನು ನೆಟ್ಸ್ನಲ್ಲಿ ಅವರ ವಾಬಲ್ ಸೀಮ್ ಎಸೆತವನ್ನು ಎದುರಿಸಿಲ್ಲ. ಮಾರ್ನೆ ಮಾರ್ಕೆಲ್ ಅವರೊಂದಿಗೆ ಅವರು ಯಾವ ರೀತಿಯ ಯೋಜನೆ ರೂಪಿಸಿಕೊಂಡಿದ್ದಾರೆ ಎಂಬುದು ನನಗೆ ತಿಳಿದಿಲ್ಲ. ಈ ಬಗ್ಗೆ ಮಾತನಾಡಲು ಮಾರ್ಕೆಲ್ ಅವರೇ ಸೂಕ್ತ ವ್ಯಕ್ತಿ. ಏಕೆಂದರೆ ಕಳೆದ ಒಂದು ತಿಂಗಳಿನಿಂದ ನ್ಯೂಜಿಲೆಂಡ್ನಲ್ಲಿ ಹಾಗೂ ಅದಕ್ಕೂ ಮೊದಲು ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯಲ್ಲೂ ಅವರು ಅರ್ಷದೀಪ್ ಜೊತೆ ನಿರಂತರವಾಗಿ ಕೆಲಸ ಮಾಡಿದ್ದಾರೆ. ಹೀಗಾಗಿ ಈ ಪ್ರಶ್ನೆಗೆ ಅವರೇ ಸರಿಯಾದ ಉತ್ತರ ನೀಡಬಲ್ಲರು," ಎಂದು ಅಯ್ಯರ್ ಹೇಳಿದ್ದಾರೆ.