ENG vs AUS: ಆಸ್ಟ್ರೇಲಿಯಾ ತಂಡವನ್ನು 135 ರನ್ಗಳಿಂದ ಮಣಿಸಿ ಇತಿಹಾಸ ಬರೆದ ಇಂಗ್ಲೆಂಡ್!
ಆಸ್ಟ್ರೇಲಿಯಾ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್ 135 ರನ್ಗಳ ಭರ್ಜರಿ ಗೆಲುವು ದಾಖಲಿಸಿದೆ. ಟಾಮ್ ಬ್ಯಾಂಟನ್ ಶತಕ ಹಾಗೂ ಗುಸ್ ಅಟ್ಕಿನ್ಸನ್ ನಾಲ್ಕು ವಿಕೆಟ್ಗಳ ನೆರವಿನಿಂದ ಇಂಗ್ಲೆಂಡ್ ಸರಣಿಯನ್ನು 1-1ರಲ್ಲಿ ಸಮಬಲಗೊಳಿಸಿ ಐತಿಹಾಸಿಕ ದಾಖಲೆ ನಿರ್ಮಿಸಿದೆ.
ಆಸ್ಟ್ರೇಲಿಯಾ ವಿರುದ್ಧ ಗೆದ್ದು ಇತಿಹಾಸ ಬರೆದ ಇಂಗ್ಲೆಂಡ್. -
ನವದೆಹಲಿ: ಐದು ಪಂದ್ಯಗಳ ಏಕದಿನ ಸರಣಿಯ ಎರಡನೇ ಪಂದ್ಯದಲ್ಲಿ (AUS vs ENG) ಇಂಗ್ಲೆಂಡ್ ತಂಡ ಆಸ್ಟ್ರೇಲಿಯಾ ವಿರುದ್ಧ ಭರ್ಜರಿ ಗೆಲುವು ದಾಖಲಿಸಿದೆ. ಭಾನುವಾರ (ನವೆಂಬರ್ 15) ಅಡಿಲೇಡ್ ಓವಲ್ ಕ್ರೀಡಾಂಗಣದಲ್ಲಿ ನಡೆದಿದ್ದ ಪಂದ್ಯದಲ್ಲಿ ಹ್ಯಾರಿ ಬ್ರೂಕ್ (Harry Brook) ನಾಯಕತ್ವದ ಇಂಗ್ಲೆಂಡ್ ತಂಡ 135 ರನ್ಗಳ ಭರ್ಜರಿ ಗೆಲುವು ಸಾಧಿಸುವ ಮೂಲಕ ಸರಣಿಯನ್ನು 1-1ರಲ್ಲಿ ಸಮಬಲಗೊಳಿಸಿದೆ.
ಬ್ಯಾಟಿಂಗ್, ಬೌಲಿಂಗ್ ಹಾಗೂ ಫೀಲ್ಡಿಂಗ್ ವಿಭಾಗಗಳಲ್ಲಿ ಸಂಘಟಿತ ಪ್ರದರ್ಶನ ನೀಡಿದ ಇಂಗ್ಲೆಂಡ್ ತಂಡ ತವರಿನಲ್ಲೇ ಆಸ್ಟ್ರೇಲಿಯಾಕ್ಕೆ ಸೋಲಿನ ರುಚಿ ತೋರಿಸಿದೆ. ಈ ಗೆಲುವಿನೊಂದಿಗೆ ಇಂಗ್ಲೆಂಡ್ ಏಕದಿನ ಕ್ರಿಕೆಟ್ನಲ್ಲಿ ಐತಿಹಾಸಿಕ ಸಾಧನೆಯನ್ನೂ ಮಾಡಿದೆ.
ಇಂಗ್ಲೆಂಡ್ ಪರ ಟಾಮ್ ಬ್ಯಾಂಟನ್ ತಮ್ಮ ಅದ್ಭುತ ಫಾರ್ಮ್ ಮುಂದುವರಿಸಿದ್ದು, ಕೇವಲ 99 ಎಸೆತಗಳಲ್ಲಿ 121 ರನ್ ಸಿಡಿಸಿದರು. ಇನ್ನು ಅನುಭವಿ ಬ್ಯಾಟರ್ ಜೋ ರೂಟ್ 62 ರನ್, ಜೋರ್ಡನ್ ಕಾಕ್ಸ್ 67 ರನ್ ಹಾಗೂ ವಿಲ್ ಜಾಕ್ಸ್ 54 ರನ್ ಗಳಿಸಿ ಅರ್ಧಶತಕಗಳನ್ನು ದಾಖಲಿಸಿದರು. ಈ ಆಟಗಾರರ ಭರ್ಜರಿ ಬ್ಯಾಟಿಂಗ್ ನೆರವಿನಿಂದ ಇಂಗ್ಲೆಂಡ್ ತಂಡ 50 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 355 ರನ್ ಕಲೆಹಾಕಿತು. ಇದು ಆಸ್ಟ್ರೇಲಿಯಾ ನೆಲದಲ್ಲಿ ಇಂಗ್ಲೆಂಡ್ ದಾಖಲಿಸಿದ ಗರಿಷ್ಠ ಏಕದಿನ ಮೊತ್ತವಾಗಿದೆ.
AUS vs ENG: 50 ರನ್ ಬಾರಿಸಿ ಒಡಿಐ ಕ್ರಿಕೆಟ್ನಲ್ಲಿ ನೂತನ ದಾಖಲೆ ಬರೆದ ಜೋ ರೂಟ್!
ಈ ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾ ತಂಡ ಮ್ಯಾಟ್ ರೆನ್ಶಾ (63) ಹಾಗೂ ಕ್ಯಾಮೆರಾನ್ ಗ್ರೀನ್ (64) ಅವರ ಹೋರಾಟದ ನಡುವೆಯೂ 220 ರನ್ಗಳಿಗೆ ಆಲೌಟ್ ಆಯಿತು. ಇಂಗ್ಲೆಂಡ್ ಪರ ಗಸ್ ಅಟ್ಕಿನ್ಸನ್ 27 ರನ್ ನೀಡಿ ನಾಲ್ಕು ವಿಕೆಟ್ ಪಡೆದು ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.
ಇಂಗ್ಲೆಂಡ್ ತಂಡದಿಂದ ಐತಿಹಾಸಿಕ ಸಾಧನೆ
ಆಸ್ಟ್ರೇಲಿಯಾ ನೆಲದಲ್ಲಿ ಆಸ್ಟ್ರೇಲಿಯಾ ತಂಡವನ್ನು 100ಕ್ಕೂ ಹೆಚ್ಚು ರನ್ಗಳ ಅಂತರದಿಂದ ಸೋಲಿಸಿದ 21ನೇ ಶತಮಾನದ ಮೊದಲ ತಂಡ ಎಂಬ ಹೆಗ್ಗಳಿಕೆಗೆ ಇಂಗ್ಲೆಂಡ್ ಪಾತ್ರವಾಗಿದೆ.
ಅಷ್ಟೇ ಅಲ್ಲದೆ, ಕಳೆದ 39 ವರ್ಷಗಳಲ್ಲಿ ಆಸ್ಟ್ರೇಲಿಯಾ ತಂಡ ತವರಿನಲ್ಲಿ ಏಕದಿನ ಕ್ರಿಕೆಟ್ನಲ್ಲಿ ಅನುಭವಿಸಿದ ಅತಿ ದೊಡ್ಡ ಸೋಲು ಇದಾಗಿದೆ. ಈ ಪಂದ್ಯಕ್ಕೂ ಮೊದಲು ಆಸ್ಟ್ರೇಲಿಯಾ ವಿರುದ್ಧ ಅವರ ತವರಿನಲ್ಲೇ 100ಕ್ಕೂ ಹೆಚ್ಚು ರನ್ಗಳ ಅಂತರದಿಂದ ಗೆದ್ದಿರುವುದು ಕೇವಲ ಎರಡು ತಂಡಗಳು ಮಾತ್ರ.
Good morning England fans 👋 If you're just waking up... We've put 355/6 on the board, our highest ODI total in Aus and Australia are 13-3 in their chase 😮💨 https://t.co/Z1MrpVurfi
— England Cricket (@englandcricket) November 15, 2026
ಕಾಂಗರೂ ನಾಡಿನಲ್ಲಿ ಏಕದಿನ ಕ್ರಿಕೆಟ್ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಅತಿ ದೊಡ್ಡ ಗೆಲುವುಗಳು
ನ್ಯೂಜಿಲೆಂಡ್: 206 ರನ್ (ಅಡಿಲೇಡ್ 1986)
ವೆಸ್ಟ್ ಇಂಡೀಸ್: 164 ರನ್(ಪರ್ತ್ (WACA) 1987)
ಇಂಗ್ಲೆಂಡ್: 135 ರನ್ ( ಅಡಿಲೇಡ್ 2026)
ವೆಸ್ಟ್ ಇಂಡೀಸ್: 128 ರನ್ (ಎಂಸಿಜಿ 1982)
ಭಾರತ: 107 ರನ್ (ಪರ್ತ್ (WACA) 1991)
ಇನ್ನು 2000ರ ವರ್ಷದ ನಂತರ ಆಸ್ಟ್ರೇಲಿಯಾ ತವರಿನಲ್ಲಿ ಏಕದಿನ ಕ್ರಿಕೆಟ್ನಲ್ಲಿ ಅನುಭವಿಸಿದ ಹಿಂದಿನ ಅತಿ ದೊಡ್ಡ ಸೋಲು ದಕ್ಷಿಣ ಆಫ್ರಿಕಾ ವಿರುದ್ಧವಾಗಿತ್ತು. ಕಳೆದ ವರ್ಷ ಕೈರ್ನ್ಸ್ನಲ್ಲಿ ನಡೆದ ಪಂದ್ಯದಲ್ಲಿ ಆಸ್ಟ್ರೇಲಿಯಾ 98 ರನ್ಗಳಿಂದ ಸೋಲನುಭವಿಸಿತ್ತು. ಇದೀಗ ಇಂಗ್ಲೆಂಡ್ 135 ರನ್ಗಳ ಗೆಲುವಿನೊಂದಿಗೆ ಆ ದಾಖಲೆಯನ್ನು ಮೀರಿಸಿದೆ.
ಇಂಗ್ಲೆಂಡ್ ತಂಡ ಆಸ್ಟ್ರೇಲಿಯಾ ವಿರುದ್ಧ ಅವರ ತವರಿನಲ್ಲಿ ಈ ಹಿಂದೆ ದಾಖಲಿಸಿದ್ದ ಅತಿ ದೊಡ್ಡ ಗೆಲುವು 2007ರಲ್ಲಿ ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ಬಂದಿತ್ತು. ಆ ಪಂದ್ಯದಲ್ಲಿ ಇಂಗ್ಲೆಂಡ್ 92 ರನ್ಗಳಿಂದ ಗೆದ್ದಿತ್ತು. ಆದರೆ ಆಸ್ಟ್ರೇಲಿಯಾ ನೆಲದಲ್ಲಿ ಇಂಗ್ಲೆಂಡ್ ಈ ಹಿಂದೆ ಶ್ರೀಲಂಕಾ ವಿರುದ್ಧ 100ಕ್ಕೂ ಹೆಚ್ಚು ರನ್ಗಳ ಅಂತರದಿಂದ ಎರಡು ಗೆಲುವು ದಾಖಲಿಸಿತ್ತು. 1999ರಲ್ಲಿ WACA ಮೈದಾನದಲ್ಲಿ 128 ರನ್ಗಳಿಂದ ಹಾಗೂ 1992ರಲ್ಲಿ ಬಲ್ಲಾರಟ್ನಲ್ಲಿ 106 ರನ್ಗಳಿಂದ ಗೆಲುವು ಸಾಧಿಸಿತ್ತು.
IND vs NZ: 5 ರನ್ಗೆ ಔಟ್ ಆಗಿ ಅನಗತ್ಯ ದಾಖಲೆ ಹೆಗಲೇರಿಸಿಕೊಂಡ ವಿರಾಟ್ ಕೊಹ್ಲಿ!
ಮೊದಲ ಪಂದ್ಯದಲ್ಲಿ ಹೀನಾಯ ಸೋಲು ಕಂಡಿದ್ದ ಇಂಗ್ಲೆಂಡ್
ಈ ಗೆಲುವು ಇಂಗ್ಲೆಂಡ್ ತಂಡಕ್ಕೆ ಮಹತ್ವದ್ದಾಗಿದೆ. ಏಕೆಂದರೆ ಸರಣಿಯ ಮೊದಲ ಪಂದ್ಯದಲ್ಲಿ ಇಂಗ್ಲೆಂಡ್ ಅತ್ಯಂತ ಕಳಪೆ ಪ್ರದರ್ಶನ ನೀಡಿತ್ತು. ಪರ್ತ್ನ ಆಪ್ಟಸ್ ಸ್ಟೇಡಿಯಂನಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್ ತಂಡ ಕೇವಲ 131 ರನ್ಗಳಿಗೆ ಆಲೌಟ್ ಆಗಿತ್ತು.
ಈ ಸುಲಭ ಗುರಿಯನ್ನು ಬೆನ್ನಟ್ಟಿದ ಆಸ್ಟ್ರೇಲಿಯಾ ತಂಡ ಕೇವಲ 23.3 ಓವರ್ಗಳಲ್ಲಿ ಮೂರು ವಿಕೆಟ್ ಕಳೆದುಕೊಂಡು ಗೆಲುವಿನ ದಡ ಸೇರಿತ್ತು. ಇನ್ನೂ 159 ಎಸೆತಗಳು ಬಾಕಿ ಇರುವಾಗಲೇ ಆಸ್ಟ್ರೇಲಿಯಾ ಏಳು ವಿಕೆಟ್ಗಳ ಭರ್ಜರಿ ಗೆಲುವು ದಾಖಲಿಸಿತ್ತು.