Public Works Department: ಲೋಕೋಪಯೋಗಿ ಇಲಾಖೆಯಲ್ಲಿ ಅನ್ಯ ಇಲಾಖೆಗಳ ಅಧಿಕಾರಿಗಳ ನಿಯೋಜನೆ ತಕ್ಷಣ ಸ್ಥಗಿತಗೊಳಿಸಿ: ಮುಖ್ಯ ಕಾರ್ಯದರ್ಶಿಗಳಿಗೆ ಮನವಿ
ಲೋಕೋಪಯೋಗಿ ಇಲಾಖೆಯೊಳಗಿನ ಅಧಿಕಾರಿಗಳ ಸೇವಾ ಹಕ್ಕು, ಹಿರಿತನ ಹಾಗೂ ಪದೋನ್ನತಿ ಅವಕಾಶಗಳಿಗೆ ಗಂಭೀರ ಅನ್ಯಾಯವಾಗುತ್ತಿದೆ. ಇಲಾಖೆಯಲ್ಲಿಯೇ ಅನೇಕ ಅರ್ಹ ಅಧಿಕಾರಿಗಳು ಸಮರ್ಪಕ ಹುದ್ದೆ ಹಂಚಿಕೆ ಮತ್ತು ಆಡಳಿತಾತ್ಮಕ ಜವಾಬ್ದಾರಿಗಳಿಲ್ಲದೇ ಕಾರ್ಯನಿರ್ವಹಿಸುತ್ತಿರುವ ಸಂದರ್ಭದಲ್ಲಿ, ಇತರೆ ಇಲಾಖೆಗಳ ಅಧಿಕಾರಿ ಗಳಿಗೆ ಆದ್ಯತೆ ನೀಡುತ್ತಿರುವುದು ಆಡಳಿತಾತ್ಮಕ ಅಸಮತೋಲನಕ್ಕೆ ಕಾರಣವಾಗಿದೆ
-
ಬೆಂಗಳೂರು: ಲೋಕೋಪಯೋಗಿ ಇಲಾಖೆ(Public Works Department)ಯಲ್ಲಿ ಈಗಾಗಲೇ ಅರ್ಹ ಸಹಾಯಕ ಕಾರ್ಯಪಾಲಕ ಅಭಿಯಂತರರು, ಕಾರ್ಯಪಾಲಕ ಅಭಿಯಂತರರು ಹಾಗೂ ಮೇಲ್ದರ್ಜೆಯ ಅಧಿಕಾರಿಗಳು ಲಭ್ಯವಿದ್ದರೂ, ಇತರೆ ಇಲಾಖೆಗಳ ಅಧಿಕಾರಿಗಳನ್ನು ವರ್ಗಾವಣೆ, ನಿಯೋಜನೆ ಹಾಗೂ ಪ್ರಭಾರಿಯಾಗಿ ನಿಯೋಜಿಸುತ್ತಿರುವ ಕ್ರಮವನ್ನು ತಕ್ಷಣ ಸ್ಥಗಿತಗೊಳಿಸಿ, ಈಗಾಗಲೇ ನಿಯೋಜನೆಗೊಂಡಿರುವ ಅಧಿಕಾರಿಗಳನ್ನು ತಮ್ಮ ಮೂಲ ಇಲಾಖೆಗೆ ವಾಪಸ್ ಕಳುಹಿಸಬೇಕು ಎಂದು ಕರ್ನಾಟಕ ರಾಜ್ಯ ಯುವ ಸಮೂಹದ ರಾಜ್ಯಾಧ್ಯಕ್ಷರಾದ ಡಾ. ಎಸ್. ಸಂಗಮೇಶ್ ಆಗ್ರಹಿಸಿದ್ದಾರೆ.
ಈ ಕುರಿತು ಮುಖ್ಯ ಕಾರ್ಯದರ್ಶಿಗಳಿಗೆ ಮನವಿ ಸಲ್ಲಿಸಿರುವ ಅವರು, ಲೋಕೋಪಯೋಗಿ ಇಲಾಖೆ ಯೊಳಗಿನ ಅಧಿಕಾರಿಗಳ ಸೇವಾ ಹಕ್ಕು, ಹಿರಿತನ ಹಾಗೂ ಪದೋನ್ನತಿ ಅವಕಾಶಗಳಿಗೆ ಗಂಭೀರ ಅನ್ಯಾಯವಾಗುತ್ತಿದೆ. ಇಲಾಖೆಯಲ್ಲಿಯೇ ಅನೇಕ ಅರ್ಹ ಅಧಿಕಾರಿಗಳು ಸಮರ್ಪಕ ಹುದ್ದೆ ಹಂಚಿಕೆ ಮತ್ತು ಆಡಳಿತಾತ್ಮಕ ಜವಾಬ್ದಾರಿಗಳಿಲ್ಲದೇ ಕಾರ್ಯನಿರ್ವಹಿಸುತ್ತಿರುವ ಸಂದರ್ಭದಲ್ಲಿ, ಇತರೆ ಇಲಾಖೆಗಳ ಅಧಿಕಾರಿ ಗಳಿಗೆ ಆದ್ಯತೆ ನೀಡುತ್ತಿರುವುದು ಆಡಳಿತಾತ್ಮಕ ಅಸಮತೋಲನಕ್ಕೆ ಕಾರಣ ವಾಗಿದೆ ಎಂದು ತಿಳಿಸಿದ್ದಾರೆ.
ಕರ್ನಾಟಕ ಲೋಕೋಪಯೋಗಿ ಇಲಾಖೆ ಅಭಿಯಂತರರ ಸಂಘವು ಕೂಡ ಈಗಾಗಲೇ ಸರ್ಕಾರಕ್ಕೆ ಮನವಿ ಸಲ್ಲಿಸಿ, “ಪ್ರತಿ ಇಲಾಖೆಯ ಅಧಿಕಾರಿಗಳು ತಮ್ಮ ಮೂಲ ಇಲಾಖೆಯಲ್ಲಿಯೇ ಕಾರ್ಯ ನಿರ್ವಹಿಸುವಂತೆ ಕ್ರಮ ಕೈಗೊಳ್ಳಬೇಕು ಹಾಗೂ ಲೋಕೋಪಯೋಗಿ ಇಲಾಖೆಗೆ ನಿಯೋಜನೆ ಗೊಂಡಿರುವ ಇತರೆ ಇಲಾಖೆಗಳ ಅಧಿಕಾರಿಗಳನ್ನು ಹಿಂಪಡೆಯಬೇಕು. ಇಲಾಖೆಯೊಳಗೆ ಅರ್ಹ ಅಧಿಕಾರಿಗಳು ಲಭ್ಯವಿರುವಾಗ ಹೊರಗಿನ ಇಲಾಖೆಗಳ ಅಧಿಕಾರಿಗಳಿಗೆ ಆದ್ಯತೆ ನೀಡುವುದು ಸಂವಿಧಾನಾತ್ಮಕ ಸಮಾನತೆ ಮತ್ತು ಸೇವಾ ನ್ಯಾಯತತ್ವಗಳಿಗೆ ವಿರುದ್ಧವಾಗಿದೆ ಎಂದು ಹೇಳಿದ್ದಾರೆ.
ಸೇವಾ ನ್ಯಾಯಶಾಸ್ತ್ರ ಮತ್ತು ಆಡಳಿತಾತ್ಮಕ ಕಾನೂನು ತತ್ವಗಳ ಪ್ರಕಾರ ಡೆಪ್ಯುಟೇಶನ್ ಒಂದು ತಾತ್ಕಾಲಿಕ ಹಾಗೂ ಅಪವಾದಾತ್ಮಕ ವ್ಯವಸ್ಥೆಯಾಗಿದ್ದು, ಇಲಾಖೆಯೊಳಗಿನ ಅಧಿಕಾರಿಗಳ ಹಕ್ಕು ಗಳಿಗೆ ಧಕ್ಕೆ ಉಂಟುಮಾಡುವ ರೀತಿಯಲ್ಲಿ ಬಳಸಲಾಗಬಾರದು. ಸುಪ್ರೀಂ ಕೋರ್ಟ್ʼನ ಹಲವು ತೀರ್ಪುಗಳ ಪ್ರಕಾರ ಹೊರಗಿನ ಇಲಾಖೆಗಳ ಅಧಿಕಾರಿಗಳಿಗೆ ಅನಗತ್ಯ ಆದ್ಯತೆ ನೀಡುವುದು ಸೇವಾ ಸಮತೋಲನ ಹಾಗೂ ಆಡಳಿತಾತ್ಮಕ ನ್ಯಾಯತತ್ವಗಳಿಗೆ ವಿರುದ್ಧವಾಗಿದೆ ಎಂದು ತಿಳಿಸಿದ್ದಾರೆ.
ಸರ್ಕಾರ ಹೊರಗಿನ ಇಲಾಖೆಗಳ ಅಧಿಕಾರಿಗಳ ನಿಯೋಜನೆ ಸ್ಥಗಿತಗೊಳಿಸಬೇಕು,. ಈಗಾಗಲೇ ನಿಯೋಜನೆಗೊಂಡಿರುವ ಅಧಿಕಾರಿಗಳನ್ನು ಮೂಲ ಇಲಾಖೆಗೆ ಕಳುಹಿಸಬೇಕು. ಲೋಕೋಪ ಯೋಗಿ ಇಲಾಖೆಯ ಅಧಿಕಾರಿಗಳಿಗೆ ಮೊದಲ ಆದ್ಯತೆ ನೀಡಬೇಕು. ಇಲಾಖೆಯ ಅಧಿಕಾರಿಗಳ ಸೇವಾ ಹಕ್ಕು, ಹಿರಿತನ ಹಾಗೂ ಆಡಳಿತಾತ್ಮಕ ಗೌರವವನ್ನು ಕಾಪಾಡುವುದು ಸರ್ಕಾರದ ಕಾನೂನುಬದ್ಧ ಮತ್ತು ಸಂವಿಧಾನಾತ್ಮಕ ಹೊಣೆಗಾರಿಕೆಯಾಗಿದೆ ಎಂದು ಡಾ.ಎಸ್.ಸಂಗಮೇಶ್ ತಿಳಿಸಿದ್ದಾರೆ.