ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

NICE Road Project: 2ಜಿ, ಕಲ್ಲಿದ್ದಲು ಹಗರಣಗಳನ್ನೂ ಮೀರಿಸಿದ ನೈಸ್ ಅಕ್ರಮ; ಡಿಕೆಶಿ-ಖೇಣಿ ವಿರುದ್ಧ ದಾಖಲೆ ಬಿಡುಗಡೆ ಮಾಡಿದ ಎಚ್‌ಡಿಕೆ

ನೈಸ್‌ ಯೋಜನೆ ಹಗರಣ ಸಂಬಂಧ ದಾಖಲೆ ಬಿಡುಗಡೆ ಮಾಡಿರುವ ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಅವರು, ಈ ಕೂಡಲೇ ಮುಖ್ಯಮಂತ್ರಿ ಸ್ಥಾನಕ್ಕೆ ಡಿ.ಕೆ.ಶಿವಕುಮಾರ್ ರಾಜೀನಾಮೆ ಕೊಡಬೇಕು. ಅಥವಾ ಆ ಪಕ್ಷದ ಹೈಕಮಾಂಡ್ ಇಂತಹ ಅನೈತಿಕ ವ್ಯಕ್ತಿಯನ್ನು ಕಿತ್ತೊಗೆಯಬೇಕು ಎಂದು ಒತ್ತಾಯ ಮಾಡಿದರು. ಹಾಗೆಯೇ ನೈಸ್ ಗುತ್ತಿಗೆದಾರ ಅಶೋಕ್ ಖೇಣಿಯನ್ನು ಬಂಧಿಸಬೇಕು ಹಾಗೂ ಆತನ ಪಾಸ್‌ಪೋರ್ಟ್ ಅನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು ಎಂದು ಕೇಂದ್ರ ಸಚಿವರು ಆಗ್ರಹಿಸಿದ್ದಾರೆ.

ನೈಸ್ ಯೋಜನೆ ಅಕ್ರಮ; ದಾಖಲೆ ಬಿಡುಗಡೆ ಮಾಡಿದ ಎಚ್‌ಡಿಕೆ

-

Prabhakara R
Prabhakara R Sep 29, 2026 8:19 PM

ಬೆಂಗಳೂರು, ಸೆಪ್ಟೆಂಬರ್ 29: ಬೆಂಗಳೂರು-ಮೈಸೂರು ಇನ್ಫ್ರಾಸ್ಟ್ರಕ್ಚರ್ ಕಾರಿಡಾರ್ (NICE Road Project) ಯೋಜನೆಯ ನೆಪದಲ್ಲಿ ಹಾಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಯೋಜನೆಯ ಗುತ್ತಿಗೆದಾರ ಅಶೋಕ್ ಖೇಣಿ ಇಬ್ಬರೂ ಕುಮ್ಮಕ್ಕಾಗಿ ಅಪಾರ ಪ್ರಮಾಣದ ಭೂಮಿಯನ್ನು ಲಪಟಾಯಿಸಿದ್ದಾರೆ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ದಾಖಲೆಗಳ ಸಮೇತ ಆರೋಪ ಮಾಡಿದ್ದಾರೆ.

ಬೆಂಗಳೂರಿನಲ್ಲಿ ಸೋಮವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು; ಡಿಕೆ (ಡಿ.ಕೆ. ಶಿವಕುಮಾರ್) ಮತ್ತು ಎಕೆ (ಅಶೋಕ್ ಖೇಣಿ) ಸೇರಿ ಯೋಜನೆಗಾಗಿ ಮುಗ್ಧ ಜನರಿಂದ ಸ್ವಾಧೀನ ಪಡೆಸಿಕೊಳ್ಳಲಾಗಿದ್ದ ಭೂಮಿಯನ್ನು ಅಪಾರ ಪ್ರಮಾಣದಲ್ಲಿ ಲೂಟಿ ಹೊಡೆದಿದ್ದಾರೆ. ಅದರಲ್ಲಿಯೂ ಮುಖ್ಯಮಂತ್ರಿ ಡಿಕೆಶಿ ತಮ್ಮ ಕುಟುಂಬ ಸದಸ್ಯರ ಹೆಸರಿನಲ್ಲಿಯೇ ನೈಸ್ ಭೂಮಿಯನ್ನು ಅಕ್ರಮವಾಗಿ ಕೊಳ್ಳೆ ಹೊಡೆದಿದ್ದಾರೆ ಎಂದು ದೂರಿದರು.

NICE Road Project (1)

ಅಶೋಕ್ ಖೇಣಿಯನ್ನು ಬಂಧಿಸಿ, ಪಾಸ್‌ಪೋರ್ಟ್ ಮುಟ್ಟುಗೋಲು ಹಾಕಿಕೊಳ್ಳಿ

ನೈಸ್‌ ಯೋಜನೆ ಹಗರಣ ಸಂಬಂಧ ಎಲ್ಲಾ ಮೂಲ ದಾಖಲೆಗಳ ಪ್ರತಿಗಳನ್ನು ಸಚಿವರು ಮಾಧ್ಯಮಗಳಿಗೆ ಬಿಡುಗಡೆ ಮಾಡಿದರಲ್ಲದೆ; ಕೂಡಲೇ ಮುಖ್ಯಮಂತ್ರಿ ಸ್ಥಾನಕ್ಕೆ ಡಿಕೆಶಿ ರಾಜೀನಾಮೆ ಕೊಡಬೇಕು. ಅಥವಾ ಆ ಪಕ್ಷದ ಹೈಕಮಾಂಡ್ ಇಂತಹ ಅನೈತಿಕ ವ್ಯಕ್ತಿಯನ್ನು ಕಿತ್ತೊಗೆಯಬೇಕು ಎಂದು ಒತ್ತಾಯ ಮಾಡಿದರು. ಹಾಗೆಯೇ ನೈಸ್ ಗುತ್ತಿಗೆದಾರ ಅಶೋಕ್ ಖೇಣಿಯನ್ನು ಬಂಧಿಸಬೇಕು ಹಾಗೂ ಆತನ ಪಾಸ್‌ಪೋರ್ಟ್ ಅನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು ಎಂದು ಕೇಂದ್ರ ಸಚಿವರು ಆಗ್ರಹಪಡಿಸಿದರು.

ನೈಸ್ ಯೋಜನೆ ದೇವೇಗೌಡರ ಕೂಸು ಎಂದು ಮುಖ್ಯಮಂತ್ರಿ ಡಿಕೆಶಿ ಅಪಪ್ರಚಾರ ನಡೆಸುತ್ತಿದ್ದಾರೆ. ಆದರೆ ಸ್ವತಃ ಡಿಕೆಶಿಯೇ ಶಾಮೀಲಾಗಿರುವ ಈ ಹಗರಣವು 2ಜಿ ಹಗರಣ, ಕಲ್ಲಿದ್ದಲು ಹಗರಣಕ್ಕಿಂತಲೂ ದೊಡ್ಡದು ಎಂದು ಕುಮಾರಸ್ವಾಮಿ ದೂರಿದರು.



ನೈಸ್ ಯೋಜನೆ ಹೆಸರಲ್ಲಿ ರೈತರ ಬದುಕಿನ ಜತೆ ಚೆಲ್ಲಾಟ

ನೈಸ್ ಯೋಜನೆ ಹೆಸರಲ್ಲಿ ರೈತರ ಬದುಕಿನ ಜತೆ ಚೆಲ್ಲಾಟ ಆಡುತ್ತಿದ್ದಾರೆ. ಗುಲಾಮಗಿರಿ ವ್ಯವಸ್ಥೆಯಲ್ಲಿ ರಾಜ್ಯ ಸರ್ಕಾರ ಕೆಲಸ ಮಾಡುತ್ತಿದೆ ಎನ್ನುವಂತೆ ಆಗಿದೆ. ಯಾವನೋ ಒಬ್ಬನ ಗುತ್ತಿಗೆದಾರನ ಮರ್ಜಿಯಲ್ಲಿ ಸರ್ಕಾರ ಕೆಲಸ ಮಾಡುತ್ತಿದೆ ಎಂದು ಅನಿಸುತ್ತಿದೆ ಎಂದು ಕೇಂದ್ರ ಸಚಿವರು ಕಿಡಿಕಾರಿದರು.

ಅಮೆರಿಕಕ್ಕೆ ತೆರಳುವ ಮೊದಲು ಇಡೀ ದೇಶವೇ ಅಲ್ಲೋಲಕಲ್ಲೋಲ ಆಗುವ ದಾಖಲೆಯನ್ನು ಬಿಡುಗಡೆ ಮಾಡುವೆ ಎಂದು ತಿಳಿಸಿದ್ದ ಕೇಂದ್ರ ಸಚಿವರು; ಅದರಂತೆಯೇ ರಾಜ್ಯದ ಮುಖ್ಯಮಂತ್ರಿ ಹಿತಾಸಕ್ತಿಯ ಸಂಘರ್ಷಕ್ಕೆ ತುತ್ತಾಗಿ ಬೃಹತ್ ಹಗರಣದಲ್ಲಿ ನೇರವಾಗಿ ಶಾಮೀಲಾಗಿರುವ ಅತ್ಯಂತ ಮಹತ್ವದ ದಾಖಲೆಗಳನ್ನು ಬಿಡುಗಡೆ ಮಾಡಿದರು.



ಈ ವಿಷಯದಲ್ಲಿ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ಯಾರು ಯಾರು ಬಂದು ಚೌಕಾಸಿಗೆ ನಿಂತಿದ್ದಾರೆ ಎಂಬುದನ್ನು ಇಲ್ಲಿ ಹೇಳಲಾರೆ. ಆದರೆ ರೈತರಿಂದ ಅನ್ಯಾಯವಾಗಿ ಕಿತ್ತುಕೊಂಡ ಭೂಮಿಯನ್ನು ಮರಳಿ ಅವರಿಗೆ ಕೊಡುವವರೆಗೂ ಬಿಡುವುದಿಲ್ಲ. ಎಕರೆಗೆ ಒಂದು ಸೈಟ್ ಪಡೆಯಲು ರೈತರೇನು ಭಿಕ್ಷುಕರೇ ಎಂದ ಅವರು; ವಿಧಾನಸೌಧದ ಮೆಟ್ಟಿಲ ಮೇಲೆಯೇ ಇದರ ಬಗ್ಗೆ ಚರ್ಚೆಗೆ ನಾನು ತಯಾರಿದ್ದೇನೆ. ಶಿವಕುಮಾರ್ ಅಷ್ಟೇ ಅಲ್ಲ, ಅವರ ಸಂಪುಟ ಸದಸ್ಯರು ಶಾಸಕರನ್ನು ಜೊತೆಯಲ್ಲಿ ಕರೆದುಕೊಂಡು ಬರಲಿ ಎಂದು ಸವಾಲು ಹಾಕಿದರು.

ದೇವೇಗೌಡರು ಮತ್ತು ಜೆ.ಎಚ್. ಪಟೇಲ್ ಅವರು ಇರುವ ತನಕ ಸರಿದಾರಿಯಲ್ಲಿ ನಡೆಯುತ್ತಿದ್ದ ಯೋಜನೆಯು; ಎಸ್ ಎಂ.ಕೃಷ್ಣ ಅವರು ಸಿಎಂ ಆದ ನಂತರ ದಾರಿ ತಪ್ಪಿತು. ಅವರ ಸರ್ಕಾರದಲ್ಲಿ ನಗರಾಭಿವೃದ್ಧಿ ಮಂತ್ರಿ ಆಗಿದ್ದ ಡಿ.ಕೆ. ಶಿವಕುಮಾರ್ ಅವರು ಈ ಯೋಜನೆಗೆ ಪ್ರವೇಶ ಮಾಡಿದ ನಂತರ ಅಕ್ರಮಗಳು ಸರಣಿಯಾಗಿ ಆರಂಭವಾದವು. ಬಹಳ ದೀರ್ಘ ಕಾಲದಿಂದ ಚರ್ಚೆಯಲ್ಲಿದ್ದು ತೀವ್ರ ವಿವಾದಕ್ಕೆ ತುತ್ತಾಗಿರುವ ನೈಸ್ ರಸ್ತೆ ಯೋಜನೆಯು ಕೆಲ ಖಾಸಗಿ ವ್ಯಕ್ತಿಗಳ ಲೂಟಿಗೆ ರಾಜಮಾರ್ಗವಾಗಿದೆ ಎಂದ ಕೇಂದ್ರ ಸಚಿವರು; ಯೋಜನೆಯ ಮೂಲ ಚೌಕಟ್ಟು ಒಪ್ಪಂದ (ಒರಿಜಿನಲ್ ಫ್ರೇಮ್ ವರ್ಕ್ ಅಗ್ರಿಮೆಂಟ್) ಅನ್ನು ಬದಲಾಯಿಸಿ ಮನಸೋ ಇಚ್ಛೆ ಯೋಜನೆಯನ್ನು ವಿರೂಪಗೊಳಿಸಿದ್ದಾರೆ. ಆ ಮೂಲಕ ಬಡ ರೈತರ ಭೂಮಿಯನ್ನು ರಿಯಲ್ ಎಸ್ಟೇಟ್ ಉದ್ದೇಶಕ್ಕೆ ಕೊಳ್ಳೆ ಹೊಡೆಯುವ ಉಪಾಯವನ್ನು ಕಂಡುಕೊಂಡಿದ್ದಾರೆ. ಅಲ್ಲದೆ ಅನೇಕ ಕೆರೆಗಳನ್ನು ನಾಮಾವಶೇಷಗೊಳಿಸಿದರು. ಪರಿಸರಕ್ಕೆ ಸರಿಪಡಿಸಲಾರದಷ್ಟು ಹಾನಿ ಉಂಟು ಮಾಡಿದ್ದಾರೆ ಎಂದು ಆರೋಪಿಸಿದರು.

NICE Road Project

ಔಟ್ ಲೈನ್ ಡೆವಲಪ್ಮೆಂಟ್ ಪ್ಲಾನ್‌ಗೆ ಡಿಕೆಶಿ ಸಹಿ

ಮಾಧ್ಯಮಗೋಷ್ಠಿಯ ಸಂದರ್ಭದಲ್ಲಿ ಕೇಂದ್ರ ಸಚಿವರು ಸಮಗ್ರ ಮಾಹಿತಿಯನ್ನು ಒಳಗೊಂಡ ದಾಖಲೆಗಳ ಸಮೇತ ಇರುವ ಪ್ರತ್ಯಕ್ಷತೆಯನ್ನು ಸುದ್ದಿಗಾರರ ಮುಂದೆ ಪ್ರಸ್ತುತಪಡಿಸಿದರೆ ಅಲ್ಲದೆ; ಪ್ರತಿಯೊಂದು ದಾಖಲೆಗೂ ಅಗತ್ಯ ವಿವರಣೆಯನ್ನು ನೀಡಿದರು.

1995ರಲ್ಲಿ ದೇವೇಗೌಡರು ಮುಖ್ಯಮಂತ್ರಿ ಆಗಿದ್ದಾಗ ಮಾಡಿಕೊಳ್ಳಲಾದ ಮೂಲ ಒಪ್ಪಂದ ಮತ್ತು ತದನಂತರ ರೂಪಿಸಲಾದ ಮೂಲ ಚೌಕಟ್ಟು ಒಪ್ಪಂದದ ಕುರಿತ ದಾಖಲೆ ಹಾಗೂ ಡಿಕೆ ಶಿವಕುಮಾರ್ ಅವರು ನೈಸ್ ಯೋಜನಾ ಪ್ರಾಧಿಕಾರದ (ಬಿಎಂಐಸಿಪಿಎ) ಅಧ್ಯಕ್ಷರಾದ ಮೇಲೆ ತಿರುಚಲಾದ ಔಟ್ ಲೈನ್ ಡೆವಲಪ್ಮೆಂಟ್ ಪ್ಲಾನ್ ದಾಖಲೆಯನ್ನು ಸಚಿವರು ಬಿಡುಗಡೆ ಮಾಡಿದರು. ಔಟ್ ಲೈನ್ ಡೆವಲಪ್ಮೆಂಟ್ ಪ್ಲಾನ್ ಗೆ ಸ್ವತಃ ಡಿಕೆಶಿ ಅವರೇ ಸಹಿ ಮಾಡಿದ್ದಾರೆ.

'ಬೆಂಗಳೂರು- ಮೈಸೂರು ಮೂಲಸೌಕರ್ಯ ಕಾರಿಡಾರ್' ಎಂದು ರಾಜ್ಯದ ರೂಪಿಸಲಾಗಿದ್ದ ಮೂಲ ಯೋಜನೆಯ ತಿಳಿವಳಿಕೆ ಪತ್ರಕ್ಕೆ (MoU) ಅಂದಿನ ಮುಖ್ಯಮಂತ್ರಿ ದೇವೇಗೌಡರ ಕಾಲದಲ್ಲಿ 1995ರ ಫೆಬ್ರವರಿ 20ರಂದು ಸಹಿ ಹಾಕಲಾಗಿತ್ತು ಎಂದು ಕುಮಾರಸ್ವಾಮಿ ಅವರು ಹೇಳಿದರು. ಮೂಲ ಒಪ್ಪಂದವನ್ನು ಕೇವಲ ನೈಸ್ ಸಂಸ್ಥೆಯೊಂದಿಗೆ ಆಗಿರಲಿಲ್ಲ, ಬದಲಾಗಿ ಸಿಎಚ್'ಬಿ, ಕಲ್ಯಾಣಿ ಗ್ರೂಪ್ ಮತ್ತು ಎಸ್.ಎ.ಎಂಜಿನಿಯರಿಂಗ್ ಅಂಡ್ ಕನ್ಸ್ಟ್ರಕ್ಷನ್ ಸಂಸ್ಥೆಗಳನ್ನು ಒಳಗೊಂಡ ಒಕ್ಕೂಟದೊಂದಿಗೆ (consortium) ಈ ಒಪ್ಪಂದ ಮಾಡಿಕೊಳ್ಳಲಾಗಿತ್ತು ಎಂದು ಅವರು ತಿಳಿಸಿದರು.



"ಮೊದಲ ಒಪ್ಪಂದಕ್ಕೆ ಯಾರು ಸಹಿ ಹಾಕಿದರು ಎಂಬುದು ಪ್ರಶ್ನೆಯಲ್ಲ. ಬದಲಾಗಿ, ನಂತರದ ದಿನಗಳಲ್ಲಿ ಯೋಜನೆಯನ್ನು ಹೇಗೆ ಬದಲಾಯಿಸಲಾಯಿತು ಮತ್ತು ಆ ಬದಲಾವಣೆಗಳಿಗೆ ಯಾರು ಅನುಮೋದನೆ ನೀಡಿದರು ಎಂಬುದು ಮುಖ್ಯ ಪ್ರಶ್ನೆ ಎಂದ ಕುಮಾರಸ್ವಾಮಿ ಅವರು; ಈ ಯೋಜನೆಯು ನಂತರ ವಿವಿಧ ಹಂತಗಳನ್ನು ದಾಟಿ ಮುಂದುವರಿಯಿತು; ಇದರಲ್ಲಿ 1997ರಲ್ಲಿ ಸಹಿ ಹಾಕಲಾದ 'ಚೌಕಟ್ಟು ಒಪ್ಪಂದ'ವೂ (Framework Agreement) ಸೇರಿದೆ. ಈ ಯೋಜನೆಯ ಅನುಷ್ಠಾನಕ್ಕಾಗಿ ಖಾಸಗಿ ಮಾಲೀಕರಿಂದ ಸ್ವಾಧೀನಪಡಿಸಿಕೊಳ್ಳಬೇಕಾದ ಭೂಮಿ ಹಾಗೂ ಸರ್ಕಾರಿ ಭೂಮಿ ಸೇರಿದಂತೆ ಒಟ್ಟು 20,193 ಎಕರೆ ಭೂಮಿಯನ್ನು ನೀಡುವ ಒಪ್ಪಂದ ಇದಾಗಿತ್ತು ಎಂದರು.

ಮೂಲ ಪ್ರಸ್ತಾವನೆಯಲ್ಲಿ 7 ಟೌನ್‌ ಶಿಪ್‌ಗಳಿದ್ದವು, ಆದರೆ ನಂತರ ಸಚಿವ ಸಂಪುಟವು 5ಕ್ಕೆ ಅನುಮೋದನೆ ನೀಡಿತು. ಇದಕ್ಕೆಲ್ಲಾ ಖಾಸಗಿ ಒಕ್ಕೂಟವು (consortium) ಹೂಡಿಕೆ ಮಾಡುತ್ತದೆ ಮತ್ತು ಟೋಲ್ ಸಂಗ್ರಹ ಸೇರಿದಂತೆ ಯೋಜನೆಯ ಮೂಲಕ ತನ್ನ ವೆಚ್ಚವನ್ನು ಮರು ಪಡೆಯುತ್ತದೆ ಎಂಬ ತಿಳಿವಳಿಕೆಯ ಆಧಾರದ ಮೇಲೆ ಈ ಯೋಜನೆಯನ್ನು ರೂಪಿಸಲಾಗಿತ್ತು ಎಂದು ಅವರು ಮಾಹಿತಿ ನೀಡಿದರು. ಆದರೆ, ಈಗ ತಿರುಚಲಾಗಿರುವ ಯೋಜನೆ ದೇವೇಗೌಡರ ಕೂಸು ಎಂದು ಅಪಪ್ರಚಾರ ಮಾಡಲಾಗುತ್ತಿದೆ. ಆದರೆ ಅದು ಸತ್ಯವಲ್ಲ ಎಂದು ಸಚಿವರು ಹೇಳಿದರು.

ಡಿಕೆಶಿ-ನೈಸ್ ಗುತ್ತಿಗೆದಾರನಿಗೂ ಇರುವ ಸಂಬಂಧವೇನು?

ದೇವೇಗೌಡರು ಒಪ್ಪಂದಕ್ಕೆ ಸಹಿ ಹಾಕಿದರು ಎಂಬುದೇನೋ ಸರಿ. ಆದರೆ ಆ ನಂತರ ಆಗಿರುವ ಔಟ್ ಲೈನ್ ಡೆವಲಪ್ಮೆಂಟ್ ಪ್ಲ್ಯಾನ್‌ಗೆ ದೇವೇಗೌಡರು ಹೇಗೆ ಹೊಣೆಗಾರರಾಗುತ್ತಾರೆ? ಅದಕ್ಕೆ ಡಿ.ಕೆ. ಶಿವಕುಮಾರ್ ಮುಖ್ಯ ಕಾರಣರಾಗಿದ್ದಾರೆ. ಅವರಿಗೂ ಮತ್ತು ನೈಸ್ ಗುತ್ತಿಗೆದಾರನಿಗೂ ಇರುವ ಸಂಬಂಧವೇನು? ಒಟ್ಟಿಗೆ ಸೇರಿ ಭೂಮಿಯನ್ನು ಕೊಳ್ಳೆ ಹೊಡೆಯುವ ದುರುದ್ದೇಶದಿಂದಲೇ ಮೂಲ ಚೌಕಟ್ಟು ಒಪ್ಪಂದವನ್ನು ಕಾನೂನುಬಾಹಿರವಾಗಿ ಬದಲಾಯಿಸಿಕೊಂಡರು ಎಂದು ಕುಮಾರಸ್ವಾಮಿ ಅವರು ಆರೋಪಿಸಿದರು.

ಹೈಕೋರ್ಟ್ ಸುಪ್ರೀಂಕೋರ್ಟ್‌ನಲ್ಲಿ ಪ್ರೇಮ್‌ವರ್ಕ್ ಅಗ್ರಿಮೆಂಟ್‌ಗೆ ನೈಸ್ ಒಪ್ಪುತ್ತದೆ. ಆದರೆ 1999 ಏಪ್ರಿಲ್ 23ರಂದು ನೈಸ್ ಗುತ್ತಿಗೆದಾರ ರಾಜ್ಯ ಸರಕಾರಕ್ಕೆ ಒಂದು ಪತ್ರವನ್ನು ಬರೆದು ಮೂಲಚೌಕಟ್ಟು ಒಪ್ಪಂದ ಬದಲಾವಣೆ ಮಾಡಬೇಕು ಎಂದು ಆ ಪತ್ರದಲ್ಲಿ ಬರೆಯುತ್ತಾನೆ. ನಂದಿ ಎಕಾನಾಮಿಕ್ ಕಾರಿಡಾರ್ ಎಂದು ಮತ್ತೊಂದನ್ನು ತರುತ್ತಾರೆ. ಇದರೊಂದಿಗೆ ಅಗಸ್ಟ್ 2002ರಲ್ಲಿ ಒಪ್ಪಂದ ಆಗುತ್ತದೆ. 2003 ಮೇ 21ರಂದು ಅಂದಿನ ನಗರಾಭಿವೃದ್ಧಿ ಸಚಿವ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಬಿಎಂಐಸಿಪಿಎ ರಚನೆ ಮಾಡಲಾಗುತ್ತದೆ. ಇದರಲ್ಲಿ ರಾಜರಾಜೇಶ್ವರಿ ನಗರದ ನಿವಾಸಿ ಹನುಮಂತರಾಯಪ್ಪ ಎಂಬ ವ್ಯಕ್ತಿಯೂ ಇದ್ದರು. ಈಗ ರಾಜರಾಜೇಶ್ವರಿ ನಗರದಲ್ಲಿ ಯಾರನ್ನೋ ಶಾಸಕರನ್ನಾಗಿ ಮಾಡಬೇಕು ಎಂದು ಅಣ್ಣ ತಮ್ಮ ಓಡಾಡುತ್ತಿದ್ದಾರಲ್ಲಾ, ಆ ಹೆಣ್ಣುಮಗಳ ಅಪ್ಪ ಆತ. ಆಗಲೇ ಇವರೆಲ್ಲರೂ ನೈಸ್ ಭೂಮಿಯನ್ನು ಒಳ್ಳೆ ಹೊಡೆಯಲು ಒಂದು ಸಿಂಡಿಕೇಟ್ ಮಾಡಿಕೊಂಡು ವ್ಯವಸ್ಥಿತವಾದ ಸಂಚು ಮಾಡಿಕೊಂಡು ಬಂದರು ಎಂದು ಸಚಿವ ಕುಮಾರಸ್ವಾಮಿ ಅವರು ಗಂಭೀರ ಆರೋಪ ಮಾಡಿದರು.

ಮೂಲ ಚೌಕಟ್ಟು ಒಪ್ಪಂದ ಉಲ್ಲಂಘಿಸಿ, ನಂತರ ಮಾಡಿಕೊಂಡ ಔಟ್ಲೈನ್ ಡೆವಲಪ್ಮೆಂಟ್ ಪ್ಲಾನ್ ಪ್ರಕಾರ ಬೆಂಗಳೂರು ನಗರ ಭಾಗದಲ್ಲಿ ಸ್ವಾಧೀನ ಮಾಡಿಕೊಳ್ಳಲಾಗಿದ್ದ ಭೂಮಿಯ ಪ್ರಮಾಣ ಕುಗ್ಗಿಸಿ ಬೆಂಗಳೂರಿನ ಸುತ್ತಮುತ್ತ ಅಷ್ಟು ಭೂಮಿಯನ್ನು ಸಂಗ್ರಹ ಮಾಡಿದರು. ಅಂದರೆ ಸ್ವಾದಿನ ಮಾಡಿಕೊಂಡರು. ಹಾಗೆ ಸಾಧೀನ ಮಾಡಿಕೊಂಡ ಭೂಮಿಯ ಮೂಲಕ ರಿಯಲ್ ಎಸ್ಟೇಟ್ ದಂಧೆ ಮಾಡಬಹುದು ಎಂದು ಅವರೆಲ್ಲರೂ ಮೊದಲೇ ಹೊಂಚು ಹಾಕಿದ್ದರು. ಅದರ ಭಾಗವಾಗಿ ಟೋಲ್ ರಸ್ತೆಯ ಜಾಗವನ್ನು ಹಿಗ್ಗಿಸಿಕೊಂಡರು. ಅದನ್ನು ಮಾಡಿದ್ದು ಇದೇ ಅಕ್ಕ-ಬುಕ್ಕರು (ಡಿಕೆಶಿ ಮತ್ತು ಅಶೋಕ್ ಖೇಣಿ). ನೈಸ್ ಯೋಜನೆಯಲ್ಲಿ ಈ ಡಿಕೆ ಮತ್ತು ಎಕೆ ನಡೆಸಿರುವ ಅಕ್ರಮಗಳು ಒಂದಲ್ಲ ಎರಡಲ್ಲ ಎಂದು ಸಚಿವರು ಹೇಳಿದರು.



ಫ್ರೇಮ್ ವರ್ಕ್ ಅಗ್ರಿಮೆಂಟ್ ಬದಲಿಸಲು ಅನುಮತಿ ಕೊಟ್ಟವರು ಯಾರು?

ದೇವೇಗೌಡರು ಕರ್ನಾಟಕದಲ್ಲಿ ಇರುವ ತನಕ ಈ ಯೋಜನೆಯಲ್ಲಿ ಅಕ್ರಮ ಎಸಗಲು ಯಾರಿಗೂ ಧೈರ್ಯ ಬಂದಿರಲಿಲ್ಲ. ಆನಂತರ ಜೆ.ಎಚ್. ಪಟೇಲ್ ಅವರು ಇದ್ದಾಗಲೂ ಯೋಜನೆ ಸರಿದಾರಿಯಲ್ಲಿಯೇ ಮುಂದುವರೆದಿತ್ತು. ಮೂಲ ಚೌಕಟ್ಟು ಒಪ್ಪಂದ (ಪ್ರೇಮ್ ವರ್ಕ್ ಅಗ್ರಿಮೆಂಟ್) ಅಂತಿಮ ಎಂದು 1998ರಲ್ಲಿ ಸುಪ್ರೀಂ ಕೋರ್ಟ್ ಆದೇಶ ನೀಡಿತ್ತು. ಅದಾದ ಬಳಿಕ 2002ರಲ್ಲಿ ತ್ರಿಪಕ್ಷೀಯ ಒಪ್ಪಂದ ಎಂದು ಮಾಡಿಕೊಳ್ಳುತ್ತಾರೆ. ನೈಸ್, ನೇಸ್ ಹಾಗೂ ರಾಜ್ಯ ಸರ್ಕಾರದ ನಡುವೆ ತ್ರಿಪಕ್ಷೀಯ ಒಪ್ಪಂದ ಆಗುತ್ತದೆ. ಇದು ಆಕ್ಸ್‌ಫರ್ಡ್ ಯುನಿವರ್ಸಿಟಿಯಿಂದ ಡಿಗ್ರಿ ಪಡೆದುಕೊಂಡು ಬಂದವರು ಮುಖ್ಯಮಂತ್ರಿ ಆಗಿದ್ದಾಗ ನಡೆದ ಅಕ್ರಮ ಎಂದು ಎಸ್.ಎಂ. ಕೃಷ್ಣ ಅವರ ಹೆಸರನ್ನು ಹೇಳದೆಯೇ ಸಚಿವರು ದೂರಿದರು.

ದೇವೇಗೌಡ ಕಾಲದಲ್ಲಿ ಫ್ರೇಮ್ ವರ್ಕ್ ಅಗ್ರಿಮೆಂಟ್ ಇದ್ದ ಟೌನ್ ಶಿಪ್ ನಲ್ಲಿ ಜಾಗದ ಅಳತೆಯನ್ನ ಡಿ.ಕೆ. ಶಿವಕುಮಾರ್ ಬದಲಾವಣೆ ‌ಮಾಡುತ್ತಾರೆ. ಟೌನ್ ಶಿಪ್ ಮತ್ತು ಟೋಲ್ ರೋಡ್ ಗೆ ಜಾಗ ಜಾಸ್ತಿ ಮಾಡಿಕೊಳ್ಳುತ್ತಾರೆ. 12-02-2004ರಲ್ಲಿ ಔಟ್ ಲೈನ್ ಡೆವಲಪ್ಮೆಂಟ್ ಪ್ಲಾನ್ (ODP) ಮೂಲಕ ಫ್ರೇಮ್ ವರ್ಕ್ ಅಗ್ರಿಮೆಂಟ್ ಬದಲಾವಣೆ ಮಾಡಿಸುತ್ತಾರೆ ಡಿಕೆಶಿ. ಫ್ರೇಮ್ ವರ್ಕ್ ಅಗ್ರಿಮೆಂಟ್ ಬದಲಾವಣೆ ಮಾಡಲು ಅನುಮತಿ ಕೊಟ್ಟವರು ಯಾರು ಇವರಿಗೆ? ಇದರ ಬಗ್ಗೆ ಕ್ಯಾಬಿನೆಟ್ ‌ನಲ್ಲಿ ಯಾಕೆ ತೀರ್ಮಾನ ಮಾಡಲಿಲ್ಲ? ಇವರಿಗೆ ಯಾರು ಅನುಮತಿ ಕೊಟ್ಟರು? 2700 ಎಕರೆ ಭೂಮಿಯನ್ನು ಬೆಂಗಳೂರು ಸುತ್ತಮುತ್ತ ಲೂಟಿ ಮಾಡಲು ಯಾರು ಪ್ರೇರೇಪಣೆ ಕೊಟ್ಟರು? ಇಂತಹವರನ್ನು ಸಿಎಂ ಮಾಡಿದರೆ ರಾಜ್ಯ ಉಳಿಯುತ್ತದೆಯೇ? ಎಂದು ಕೇಂದ್ರ ಸಚಿವರು ಆಕ್ರೋಶ ವ್ಯಕ್ತಪಡಿಸಿದರು.

ಫ್ರೇಮ್ ವರ್ಕ್ ಅಗ್ರಿಮೆಂಟ್ ಬದಲಾವಣೆ ಮಾಡಿದ್ದು ಡಿ.ಕೆ.ಶಿವಕುಮಾರ್ ಅವರೇ ಅವರೇ ಎಂದು ಒತ್ತಿ ಒತ್ತಿ ಹೇಳಿದ ಕೇಂದ್ರ ಸಚಿವರು; AK (ಅಶೋಕ್ ಖೇಣಿ) ಮತ್ತು DK- (ಡಿ.ಕೆ.ಶಿವಕುಮಾರ್) ಇಬ್ಬರು ಒಟ್ಟಿಗೆ ಸೇರಿ ಅಕ್ರಮ ನಡೆಸಿದ್ದಾರೆ. ರಾಜ್ಯಾಂಗ, ಕಾರ್ಯಾಂಗ ದುರುಪಯೋಗ ಮಾಡಿಕೊಂಡು, ನ್ಯಾಯಾಂಗಕ್ಕೆ ಸುಳ್ಳು ಮಾಹಿತಿ ನೀಡಿ ಅಕ್ರಮವಾಗಿ ಭೂಮಿಯನ್ನು ಲಪಟಾಯಿಸಿದ್ದಾರೆ. ಈ ಅಕ್ರಮ ಹೊರಗೆತರಲು ಹೋದಾಗ ನ್ಯಾಯಾಲಯದಲ್ಲಿ ಸುಳ್ಳು ದಾಖಲಾತಿಗಳನ್ನು ಕೊಟ್ಟು ಅಧಿಕಾರಿಗಳನ್ನು ದುರ್ಬಳಕೆ ಬಳಸಿಕೊಂಡು ಕೇಸ್ ಗಳನ್ನು ಹಾಕಿಸಿದ. ಮಾಜಿ ಸಚಿವರಾದ ಮಾಧುಸ್ವಾಮಿ ಅವರು ನ್ಯಾಯಾಲಯದ ಮುಂದೆ ಹೋಗಿದ್ದಾಗ ಅವರಿಗೆ 5 ಲಕ್ಷ ದಂಡ ಹಾಕಿಸಿದ ಹಾಕಿಸಿದ್ದ. ಈ ವ್ಯಕ್ತಿಯಿಂದ ಅನೇಕ ಸಲ ರಾಜ್ಯ ಸರ್ಕಾರವು ತೀವ್ರ ಮುಜುಗರ ಮತ್ತು ಅಪಮಾನಕ್ಕೆ ತುತ್ತಾಗಿತ್ತು ಎಂದು ಕುಮಾರಸ್ವಾಮಿ ಅವರು ಹೇಳಿದರು.

ಭೂಮಿ ಲೂಟಿ ಹೊಡೆದಿದ್ದರಿಂದ ಇಷ್ಟು ಆಸ್ತಿ ಸಂಪಾದನೆ

ಹಾಲಿ ಮುಖ್ಯಮಂತ್ರಿ ಡಿಕೆಶಿ ಅವರದು 2003 ರಲ್ಲಿ ಕೇವಲ 4 ಕೋಟಿ ಇದ್ದ ಆಸ್ತಿ 2023 ಕ್ಕೆ 1413 ಕೋಟಿ ಮೀರಿದೆ! ಇದು ಹೇಗೆ ಸಾಧ್ಯ? ಇಷ್ಟು ಬೇಗವಾಗಿ ಹಣ ಸಂಪಾದಿಸುವುದು ಹೇಗೆ? ಮೂಲ ಚೌಕಟ್ಟು ಒಪ್ಪಂದವನ್ನು ಹಾಳು ಮಾಡಿ ಓಡಿಪಿ ಮಾಡಿಕೊಂಡು ಭೂಮಿಯನ್ನು ಲೂಟಿ ಹೊಡೆದ ಪರಿಣಾಮ ಇಷ್ಟು ಆಸ್ತಿ ಸಂಪಾದನೆ ಆಗಿದೆ ಎಂದು ಆರೋಪಿಸಿದ ಕುಮಾರಸ್ವಾಮಿ ಅವರು; ಈ ಅಶೋಕ್ ಖೇಣಿ ಎನ್ನುವವನು 420 ಜನರಿಗೆ ಎನ್ ಓ ಸಿ ಕೊಡುತ್ತಾನೆ. ನೈಸ್ ಯೋಜನೆಗೆ ಸ್ವಾಧೀನ ಮಾಡಿಕೊಂಡ ಭೂಮಿಯನ್ನು ಮಾರಾಟ ಮಾಡುತ್ತಾನೆ. ಯಾರಪ್ಪನ ಆಸ್ತಿಯೆಂದು ಅವನು ಈ ಆಸ್ತಿಯನ್ನು ಮಾರಾಟ ಮಾಡಿದ್ದಾನೆ?.ಸಿದ್ದಗಂಗಾ ಮಠದ ಹೆಸರಿನಲ್ಲಿ ಇದ್ದ 7 ಎಕರೆ ಭೂಮಿ ಯೋಜನೆಗೆ ತಗೊಂಡಿದ್ದರು. ಹೈಟೆಕ್ ಅಡುಗೆ ಮನೆ ಮಾಡಿಕೊಡುತ್ತೇನೆ ಎಂದು ಹಿರಿಯ ಸ್ವಾಮೀಜಿಗಳಿಗೆ ಈ ಗುತ್ತಿಗೆದಾರ ಹೇಳಿದ್ದ. ಅವರಿಗೆ ಅಡುಗೆ ಮನೆಯನ್ನು ಕಟ್ಟಿಕೊಡಲಿಲ್ಲ, ಇತ್ತ ಎನ್ ಓ ಸಿಯನ್ನು ಕೊಡಲಿಲ್ಲ ಎಂದ ಸಚಿವರು ಈ ವ್ಯಕ್ತಿ ಸಿದ್ದಗಂಗಾ ಸ್ವಾಮೀಜಿಗಳ ಬಗ್ಗೆ ಮಾತನಾಡಿದ ಆಡಿಯೋವನ್ನು ಸುದ್ದಿಗಾರರಿಗೆ ಕೇಳಿಸಿದರು.

ಸಿಎಂ ಡಿಕೆ ಶಿವಕುಮಾರ್ ಮತ್ತು ಅವರ ಸಹೋದರ ಡಿಕೆ ಸುರೇಶ್ ಲಪಟಾಯಿಸಿರುವ ಭೂಮಿಯ ದಾಖಲೆಗಳನ್ನು ಕೂಡ ಬಿಡುಗಡೆ ಮಾಡಿದ ಸಚಿವರು; ಸಿಎಂ ಕುಟುಂಬದ ಸದಸ್ಯರ ಹೆಸರಿನಲ್ಲಿ ನೋಂದಣಿ ಆಗಿರುವ ನೈಸ್ ಆಸ್ತಿಗಳ ದಾಖಲೆಗಳನ್ನು ಇದೇ ಸಂದರ್ಭದಲ್ಲಿ ಬಿಡುಗಡೆ ಮಾಡಿದರು. ಅಲ್ಲದೆ ಸಿಎಂ ಅವರ ತಾಯಿ ಅವರ ಹೆಸರಿನಲ್ಲಿ ನೋಂದಣಿ ಆಗಿರುವ ಆಸ್ತಿ ಕ್ರಯ ಪತ್ರಗಳನ್ನು ಕೂಡ ಕೇಂದ್ರ ಸಚಿವರು ಮಾಧ್ಯಮಗಳಿಗೆ ನೀಡಿದರು.

2004 ನಂಬರ್ ಮೂರರಂದು KIADB ನೋಟಿಫಿಕೇಶನ್ ಮಾಡಿದ್ದ ಜಮೀನನ್ನು ಡಿ.ಕೆ. ಸುರೇಶ್ ಖರೀದಿ ಮಾಡುತ್ತಾರೆ. ನೈಸ್ ಯೋಜನೆಗೆ ನೋಟಿಫಿಕೇಶನ್ ಆಗಿದ್ದ ಈ ಭೂಮಿಯನ್ನು ಯಾವ ಆಧಾರದ ಮೇಲೆ ಸುರೇಶ್ ಖರೀದಿಸಿದ್ದಾರೆ ಎಂದು ಪ್ರಶ್ನಿಸಿದ ಸಚಿವರು; ಅಂದು 10 ಎಕರೆ ಭೂಮಿಯನ್ನು ಅಮಾಸೆ ಗೌಡ ಎಂಬ ವ್ಯಕ್ತಿ ಹೆಸರಿನಲ್ಲಿ ಖರೀದಿ ಮಾಡಿ, ನಂತರ ಅದನ್ನು ತಮ್ಮ ತಾಯಿ ಗೌರಮ್ಮ ಅವರ ಹೆಸರಿಗೆ ಮಾಡಿಸಿಕೊಳ್ಳುತ್ತಾರೆ. ಡಿಕೆ ಶಿವಕುಮಾರ್ ಎಸಗಿರುವ ಅಕ್ರಮಕ್ಕೆ ಇದೊಂದು ಜ್ವಲಂತ ಸಾಕ್ಷಿ ಎಂದು ಹೇಳಿದರು.

ನೈಸ್ ಯೋಜನೆಯ ಸುಮಾರು 300 ಎಕರೆಗೂ ಭೂಮಿಯನ್ನು ಡಿಕೆಶಿ ಕುಟುಂಬ ಲಪಟಾಯಿಸಿದ ಎಂದು ಆರೋಪಿಸಿದ ಕೇಂದ್ರ ಸಚಿವರು; ಕೆರೆಗಳನ್ನು ಮತ್ತು ಗೋಮಾಳಗಳನ್ನು ಕೂಡ ಬಿಡದೆ ನುಂಗಿ ಹಾಕಿದ್ದಾರೆ. ಇವರು ರಾಜ್ಯವನ್ನು ಉಳಿಸುತ್ತಾರಂತೆ! ಅಷ್ಟೇ ಯಾಕೆ ಹೊಸಕೆರಳ್ಳಿ ಬಳಿ ಇರುವ ಶೋಭಾ ಅಪಾರ್ಟ್ಮೆಂಟ್ ಕೂಡ ಡಿಕೆಶಿ ಕುಟುಂಬ ಹಾಗೂ ಶೋಭಾ ಗ್ರೂಪ್ ಕಂಪನಿ ಜತೆ ಜಂಟಿ ಪಾಲುದಾರಿಕೆಯಲ್ಲಿ ನಿರ್ಮಾಣವಾಗಿದೆ. ಈಗ ನೋಡಿದರೆ ನೈಸ್ ಕಂಪನಿಯನ್ನು ನಾನೇಕೆ ಖರೀದಿಸಲಿ, ನನಗೇನು ತಲೆಕೆಟ್ಟಿದೆ ಎನ್ನುವ ಮುಖ್ಯಮಂತ್ರಿ ಬೇನಾಮಿ ಕಂಪನಿಗಳ ಮೂಲಕ ನಡೆಸಿರುವ ವ್ಯವಹಾರವನ್ನು ಮುಚ್ಚಿ ಹಾಕಲು ಸಾಧ್ಯವಿಲ್ಲ. ಬಹಳಷ್ಟು ನೈಸ್ ಆಸ್ತಿಗಳು ಆಭರಣ ಎನ್ನುವರ ಹೆಸರಿನಲ್ಲಿ ನೋಂದಣಿ ಆಗಿವೆ. ದಾನ ಮತ್ತು ಪ್ರತಿದಾನಗಳು ನಡೆದಿವೆ. ಎಂದು ಗುಡುಗಿದರು. ಅಂದಹಾಗೆ ಈ ಆಭರಣ ಎನ್ನುವವರು ಯಾರು? ಎಂದು ಸಚಿವರು ಪ್ರಶ್ನಿಸಿದರು.

5 ಕೋಟಿ ಹೂಡಿ 2500 ಕೋಟಿ ಸಂಪಾದನೆ

ನೈಸ್ ಗೆ ಸ್ವಾಧೀನ ಮಾಡಿಕೊಡಲಾಗಿದ್ದ ಭೂಮಿಯನ್ನು 2004ರಲ್ಲಿ ಡಿಕೆ ಸುರೇಶ್ ಖರೀದಿ ಮಾಡುತ್ತಾರೆ. 2008ರಲ್ಲಿ ಡಿ.ಕೆ. ಸುರೇಶ್ ಭೂ ಪರಿವರ್ತನೆಗೆ ಅರ್ಜಿ ಸಲ್ಲಿಸುತ್ತಾರೆ. ವಿಚಿತ್ರವೆಂದರೆ ಅರ್ಜಿ ಹಾಕುವುದು ಡಿಕೆ ಸುರೇಶ್. ಆದರೆ ಆದೇಶ ಪತ್ರ ನೀಡುವುದು ಡಿಕೆ ಶಿವಕುಮಾರ್ ಹೆಸರಿಗೆ!

ಅದು ಹೊಸಕೆರೆಹಳ್ಳಿ ಬಳಿ ಇರುವ ಟೋಲ್ ಪ್ಲಾಜಾದ ಸಮೀಪದ ಜಾಗ. ಡಿಕೆ ಸುರೇಶ್ ಅವರಿಗೆ ಡಿ.ಕೆ. ಶಿವಕುಮಾರ್ ಬೇನಾಮಿನಾ? 2011ರಲ್ಲಿ ಶೋಭಾ ಡೆವಲಪರ್ ಜತೆ ಅಗ್ರಿಮೆಂಟ್ ಆಗುತ್ತದೆ. ಈ ಜಮೀನು ನಮ್ಮ ಸ್ವಂತ ‌ಲ್ಯಾಂಡ್ ಅಂತ ಅರ್ಜಿ ಹಾಕಿಕೊಳ್ತಾರೆ. 2007ರಲ್ಲಿ ನೈಸ್ ಕಂಪನಿಗೆ 5 ಕೋಟಿ ಹಣ ಕೊಟ್ಟಿರುತ್ತಾರೆ. ಶೋಭಾ ಡೆವಲಪರ್ ಗೆ NOC ದೊರೆಯುತ್ತದೆ. 2015ರಲ್ಲಿ NOC ಶೋಭಾ ಡೆವಲಪರ್ ಕಂಪನಿಗೆ ಕೊಡಲಾಗುತ್ತದೆ. ಆ ಯೋಜನೆಯಲ್ಲಿ ಡಿಕೆ ಕುಟುಂಬಕ್ಕೆ ಸುಮಾರು 400 ಪ್ಲಾಟ್ ಗಳು ದೊರೆಯುತ್ತವೆ. ಇವತ್ತು ಅವುಗಳ ಬೆಲೆ ಏನಿಲ್ಲವೆಂದರೂ ₹2000 ದಿಂದ ₹2500 ಕೋಟಿ!! ಕೇವಲ ₹5 ಕೋಟಿ ಹೂಡಿ ಇಷ್ಟು ಹಣ ದುಡಿಯುವುದು ಎಂದರೆ ತಮಾಷೆಯ ಸಂಗತಿಯೇ ಎಂದು ಸಚಿವರು ಲೇವಡಿ ಮಾಡಿದರು.

HD Kumaraswamy: ಸಿಎಂ ಡಿಕೆಶಿ ಕುಟುಂಬದ ವಿರುದ್ಧ ಭೂಕಬಳಿಕೆ ಆರೋಪ; ಸ್ಫೋಟಕ ಆಡಿಯೊ ಬಾಂಬ್‌ ಸಿಡಿಸಿದ ಎಚ್‌ಡಿಕೆ!

ಸದ್ಯಕ್ಕೆ ನೈಸ್ ಅಕ್ರಮದ ಭಾಗ ಒಂದನ್ನಷ್ಟೇ ಬಿಡುಗಡೆ ಮಾಡಿದ್ದೇನೆ. ಅತಿ ಶೀಘ್ರದಲ್ಲಿಯೇ ಭಾಗ ಎರಡರ ಮೂಲಕ ಮತ್ತಷ್ಟು ದಾಖಲೆಗಳನ್ನು ಬಿಡುಗಡೆ ಮಾಡುತ್ತೇನೆ ಎಂದು ಸಚಿವರು ಗುಡುಗಿದರು.