Free Bus pass: ವಾರದಲ್ಲೇ ಗ್ರಾಮೀಣ ಪತ್ರಕರ್ತರ ಬಸ್ ಪಾಸ್ ವಿತರಣೆಗೆ ವಾರ್ತಾ ಇಲಾಖೆ ಸಿದ್ಧತೆ
Free bus pass for rural journalists: ಅನುಮೋದನೆಗೊಂಡಿರುವ ಗ್ರಾಮೀಣ ಪತ್ರಕರ್ತರ ಬಸ್ ಪಾಸ್‌ಗಳು ಬಂದಿದ್ದು, ಈ ವಾರದಲ್ಲೇ ಜಿಲ್ಲಾಮಟ್ಟದಲ್ಲಿ ವಿತರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ವಾರ್ತಾ ಇಲಾಖೆ ಆಯುಕ್ತರಾದ ಎಂ.ಎನ್. ಅನುಚೇತ್ ಆಯುಕ್ತರು ತಿಳಿಸಿದ್ದಾರೆ.
-
ಬೆಂಗಳೂರು, ಸೆ.29: ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್ ಪಾಸ್ (Free Bus pass) ವಿತರಿಸುವ ಪ್ರಕ್ರಿಯೆಗೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಮುಂದಾಗಿದ್ದು, ಅನುಮೋದನೆಗೊಂಡಿರುವ ಪಾಸ್‌ಗಳನ್ನು ಈ ವಾರದಲ್ಲೇ ಜಿಲ್ಲಾ ಮಟ್ಟದಲ್ಲಿ ವಿತರಿಸಲು ಸಿದ್ಧತೆ ನಡೆಸಿದೆ.
ಈ ಕುರಿತು ವಾರ್ತಾ ಇಲಾಖೆ ಆಯುಕ್ತರಾದ ಎಂ.ಎನ್. ಅನುಚೇತ್ ಅವರನ್ನು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (ಕೆಯುಡಬ್ಲ್ಯೂಜೆ) ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅವರು ಭೇಟಿ ಮಾಡಿ ಚರ್ಚಿಸಿದರು.
ಈ ಸಂದರ್ಭದಲ್ಲಿ ಅನುಮೋದನೆಗೊಂಡಿರುವ ಗ್ರಾಮೀಣ ಪತ್ರಕರ್ತರ ಬಸ್ ಪಾಸ್‌ಗಳು ಬಂದಿದ್ದು, ಈ ವಾರದಲ್ಲೇ ಜಿಲ್ಲಾಮಟ್ಟದಲ್ಲಿ ವಿತರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಆಯುಕ್ತರು ಖಚಿತಪಡಿಸಿದರು. ಈ ಬಗ್ಗೆ ಕೂಡಲೇ ಇಲಾಖೆ ಅಧಿಕಾರಿಗಳಿಗೆ ಸೂಚನೆಯನ್ನು ನೀಡಿದರು.
ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್ ಪಾಸ್ ನೀಡುವ ಯೋಜನೆಯಡಿ, ಅಗತ್ಯ ದಾಖಲೆಗಳೊಂದಿಗೆ ಸಲ್ಲಿಸಲಾಗಿದ್ದ ಸುಮಾರು 400 ಅರ್ಜಿಗಳಿಗೆ ಆಗಸ್ಟ್ 7ರಂದು ವಾರ್ತಾ ಇಲಾಖೆ ಅನುಮೋದನೆ ನೀಡಿತ್ತು. ಆಯುಕ್ತ ಎಂ.ಎನ್. ಅನುಚೇತ್ ಅವರ ಅಧ್ಯಕ್ಷತೆಯಲ್ಲಿ ನಡೆದ ಗ್ರಾಮೀಣ ಪತ್ರಕರ್ತರ ಬಸ್ ಪಾಸ್ ಸಮಿತಿ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿತ್ತು.
ಗ್ರಾಮೀಣ ಪತ್ರಕರ್ತರ ಬಹುದಿನಗಳ ಬೇಡಿಕೆಯಾಗಿದ್ದ ಬಸ್ ಪಾಸ್ ಯೋಜನೆ ಜಾರಿಗೆ ಕೆಯುಡಬ್ಲ್ಯೂಜೆ ನಿರಂತರವಾಗಿ ಒತ್ತಾಯಿಸುತ್ತಾ ಬಂದಿದ್ದು, ಇದೀಗ ಅನುಮೋದನೆಗೊಂಡಿರುವ ಪಾಸ್‌ಗಳ ವಿತರಣೆಗೆ ಇಲಾಖೆ ಮುಂದಾಗಿರುವುದನ್ನು ಕೆಯುಡಬ್ಲ್ಯೂಜೆ ಸ್ವಾಗತಿಸಿದೆ.
ದಾಖಲೆಗಳ ಪರಿಶೀಲನೆ ನಡೆಸಿ ಬಸ್ ಪಾಸ್‌ಗಳಿಗೆ ಅನುಮೋದನೆ ನೀಡಿರುವ ವಾರ್ತಾ ಇಲಾಖೆಗೆ ಕೆಯುಡಬ್ಲ್ಯೂಜೆ ಕೃತಜ್ಞತೆ ಸಲ್ಲಿಸಿದೆ. ಇನ್ನೂ ಅರ್ಜಿ ಸಲ್ಲಿಸದಿರುವ ಅರ್ಹ ಗ್ರಾಮೀಣ ಪತ್ರಕರ್ತರು ನಿಯಮಾನುಸಾರ ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸುವಂತೆ ಸಂಘ ಮನವಿ ಮಾಡಿದೆ. ಭೇಟಿ ಸಂದರ್ಭದಲ್ಲಿ ವಾರ್ತಾ ಇಲಾಖೆ ಆಯುಕ್ತ ಎಂ.ಎನ್. ಅನುಚೇತ್ ಅವರಿಗೆ ಕೆಯುಡಬ್ಲ್ಯೂಜೆ ಧನ್ಯವಾದಗಳನ್ನು ತಿಳಿಸಿದೆ.