ಫೆಬ್ರವರಿ 13, 14ರಂದು ಬೆಂಗಳೂರಿನಲ್ಲಿ ಅಂತಾರಾಷ್ಟ್ರೀಯ ಅಣೆಕಟ್ಟು ಸುರಕ್ಷತಾ ಸಮ್ಮೇಳನ
DK Shivakumar: ಬೆಂಗಳೂರಿನಲ್ಲಿ ಫೆಬ್ರವರಿ 13 ಹಾಗೂ 14ರಂದು ಅಂತಾರಾಷ್ಟ್ರೀಯ ಅಣೆಕಟ್ಟು ಸುರಕ್ಷತಾ ಸಮ್ಮೇಳನವನ್ನು ಆಯೋಜಿಸಲಾಗಿದೆ. ಅಣೆಕಟ್ಟು ಸುರಕ್ಷತೆ ವಿಚಾರದಲ್ಲಿ 46 ಸಂಶೋಧನಾ ವರದಿಗಳನ್ನು ಮಂಡಿಸಲು ಈ ಸಮ್ಮೇಳನದಲ್ಲಿ ನಾವು ಅನುಮತಿ ನೀಡಿದ್ದೇವೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ಡಿಸಿಎಂ ಡಿ.ಕೆ. ಶಿವಕುಮಾರ್ (ಸಂಗ್ರಹ ಚಿತ್ರ) -
ನವದೆಹಲಿ, ಫೆ. 12: ಕರ್ನಾಟಕ ಸರ್ಕಾರ ಅಧಿಕಾರಕ್ಕೆ ಬಂದು ಸಾವಿರ ದಿನಗಳನ್ನು ಪೂರೈಸುತ್ತಿರುವ ಸಂದರ್ಭದಲ್ಲೇ ಬೆಂಗಳೂರಿನಲ್ಲಿ ಎರಡು ದಿನಗಳ ಅಂತಾರಾಷ್ಟ್ರೀಯ ಅಣೆಕಟ್ಟು ಸುರಕ್ಷತಾ ಸಮ್ಮೇಳನವನ್ನು ಆಯೋಜಿಸಲಾಗಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ (DK Shivakumar) ತಿಳಿಸಿದರು. ದೆಹಲಿಯ ಕರ್ನಾಟಕ ಭವನದಲ್ಲಿ ಗುರುವಾರ ಮಾಧ್ಯಮಗೋಷ್ಠಿ ಉದ್ದೇಶಿಸಿ ಅವರು ಮಾತನಾಡಿದರು.
ಫೆಬ್ರವರಿ13 ಹಾಗೂ 14ರಂದು ಭಾರತೀಯ ವಿಜ್ಞಾನ ಸಂಸ್ಥೆಯ ಜೆ.ಜೆ. ಟಾಟಾ ಸಭಾಂಗಣದಲ್ಲಿ ಎರಡು ದಿನಗಳ ಸಮ್ಮೇಳನ ನಡೆಯಲಿದ್ದು, ಶುಕ್ರವಾರ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಮ್ಮೇಳನಕ್ಕೆ ಚಾಲನೆ ನೀಡಲಿದ್ದಾರೆ. ಭಾರತದಲ್ಲಿ 6,628 ಅಣೆಕಟ್ಟುಗಳಿದ್ದು, ಕರ್ನಾಟಕ 231 ಅಣೆಕಟ್ಟುಗಳನ್ನು ಹೊಂದಿದೆ. ಅಣೆಕಟ್ಟುಗಳ ಸುರಕ್ಷತೆ ಬಗ್ಗೆ ದೇಶದೆಲ್ಲೆಡೆ ಚರ್ಚೆಯಾಗುತ್ತಿದೆ. ಒಂದೂವರೆ ವರ್ಷಗಳ ಹಿಂದೆ ಜೈಪುರದಲ್ಲಿ ಈ ಸಮ್ಮೇಳನ ಆಯೋಜಿಸಲಾಗಿತ್ತು. ಜಲಶಕ್ತಿ ಸಚಿವಾಲಯ ಸಹಯೋಗದಲ್ಲಿ ಕರ್ನಾಟಕ ಸರ್ಕಾರ ಈ ಸಮ್ಮೇಳನ ಆಯೋಜಿಸುತ್ತಿದೆ. ಇದಕ್ಕೆ ಕೇಂದ್ರ ಜಲಶಕ್ತಿ ಆಯೋಗವು ಅನೇಕ ಸಲಹೆ ಮಾರ್ಗದರ್ಶನ ನೀಡಿದೆ ಎಂದು ಮಾಹಿತಿ ನೀಡಿದರು.
ಅಣೆಕಟ್ಟು ಸುರಕ್ಷತೆ ವಿಚಾರದಲ್ಲಿ 46 ಸಂಶೋಧನಾ ವರದಿಗಳನ್ನು ಮಂಡಿಸಲು ಈ ಸಮ್ಮೇಳನದಲ್ಲಿ ನಾವು ಅನುಮತಿ ನೀಡಿದ್ದೇವೆ. ಕೇಂದ್ರ ಸಚಿವರಾದ ವಿ. ಸೋಮಣ್ಣ, ರಾಜ್ ಭೂಷಣ್ ಚೌಧರಿ, ರಾಜ್ಯ ಸಚಿವ ಬೋಸರಾಜು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. 10 ದೇಶಗಳ 25 ಅಂತಾರಾಷ್ಟ್ರೀಯ ತಜ್ಞರು ಸೇರಿದಂತೆ 400ಕ್ಕೂ ಹೆಚ್ಚು ಜನ ಈ ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ. ತಾಂತ್ರಿಕ ವಿಚಾರ ಸಂಕಿರಣ, ವಸ್ತುಪ್ರದರ್ಶನ ನಡೆಯಲಿವೆ. ಕರ್ನಾಟಕದ ಹಿತಾಸಕ್ತಿ ಕಾಪಾಡಲು ನಾವು ಈ ಅವಕಾಶವನ್ನು ಬಳಸಿಕೊಳ್ಳುತ್ತಿದ್ದೇವೆ. ಅಣೆಕಟ್ಟುಗಳು ನೀರಾವರಿ, ಇಂಧನ ಉತ್ಪಾದನೆ, ಪ್ರವಾಹ ನಿಯಂತ್ರಣ, ನೀರು ಸರಬರಾಜು ಹಾಗೂ ಮಣ್ಣಿನ ಸಂರಕ್ಷಣೆಯ ಆಧಾರವಾಗಿವೆ. ಸುದೀರ್ಘ ಕಾಲದ ಯೋಜನೆ ಗಮನದಲ್ಲಿಟ್ಟುಕೊಂಡು ಈ ಸಮ್ಮೇಳನ ಆಯೋಜಿಸಲಾಗುತ್ತಿದೆ ಎಂದು ತಿಳಿಸಿದರು.
ಉಚಿತ ಸ್ಪೆಷಲ್ ಇ ಖಾತಾ ಅಭಿಯಾನ ಪ್ರಾರಂಭಕ್ಕೆ ಡಿ.ಕೆ. ಶಿವಕುಮಾರ್ ಸೂಚನೆ
ರಾಜ್ಯದ 58 ಅಣೆಕಟ್ಟುಗಳ ಸುರಕ್ಷತೆಗೆ 1,500 ಕೋಟಿ ವೆಚ್ಚದಲ್ಲಿ ದುರಸ್ತಿ ಕಾಮಗಾರಿ
ನಮ್ಮಲ್ಲಿರುವ 75% ಅಣೆಕಟ್ಟುಗಳು 25 ವರ್ಷಕ್ಕಿಂತ ಹಳೆಯದಾಗಿದ್ದು, ಈ ವಿಚಾರದಲ್ಲಿ ರಾಜಿಯಾಗಲು ನಾವು ಬಯಸುವುದಿಲ್ಲ. ಪ್ರತಿ ವರ್ಷ ಅಣೆಕಟ್ಟುಗಳಲ್ಲಿ ಒಂದಲ್ಲ ಒಂದು ಸಮಸ್ಯೆಗಳು ಎದುರಾಗುತ್ತಿದೆ. ಅಣೆಕಟ್ಟುಗಳಲ್ಲಿ ಹೈಡ್ರೋ ಪವರ್, ಕುಡಿಯುವ ನೀರಿನ ಯೋಜನೆಗಳನ್ನು ನಡೆಸಲಾಗುತ್ತಿದೆ. ಹೀಗಾಗಿ ನಾವು ಅಣೆಕಟ್ಟಿನ ಸುರಕ್ಷತೆ ಬಗ್ಗೆ ಕಾಳಜಿ ವಹಿಸಬೇಕಿದೆ. ಈಗಾಗಲೇ 19 ರಾಜ್ಯಗಳಲ್ಲಿ 733 ಅಣೆಕಟ್ಟುಗಳ ಸುರಕ್ಷತೆಗೆ 10,211 ಕೋಟಿ ರುಪಾಯಿ ವೆಚ್ಚ ಮಾಡಲಾಗಿದೆ. ಕೇಂದ್ರ ಸರ್ಕಾರ ವಿಶ್ವಬ್ಯಾಂಕ್ ಹಾಗೂ ಎಐಐಬಿಯ ಬಾಹ್ಯ ಬೆಂಬಲದೊಂದಿಗೆ ಅಣೆಕಟ್ಟು ಪುನರ್ವಸತಿ ಮತ್ತು ಸುಧಾರಣಾ ಯೋಜನೆ (DRIP) ಎರಡನೇ ಹಂತವನ್ನು ಅನುಷ್ಠಾನಗೊಳಿಸುತ್ತಿದೆ. ಕರ್ನಾಟಕದಲ್ಲಿ 58 ಅಣೆಕಟ್ಟುಗಳ ಸುರಕ್ಷತೆಗೆ 1,500 ಕೋಟಿ ರುಪಾಯಿ ವೆಚ್ಚ ಮಾಡುತ್ತಿದ್ದೇವೆ. ಈಗಾಗಲೇ ತುಂಗಭದ್ರಾ ಅಣೆಕಟ್ಟು ಕ್ರಸ್ಟ್ ಗೇಟ್‌ಗಳ ಬದಲಾವಣೆ ಕಾರ್ಯ ಆರಂಭವಾಗಿದೆ. ಅದೇ ರೀತಿ ರಾಜ್ಯದ ಎಲ್ಲ ಅಣೆಕಟ್ಟುಗಳ ಸುರಕ್ಷತೆ ಬಗ್ಗೆ ಸಮೀಕ್ಷೆ ನಡೆಸಿದ್ದು, ಆದ್ಯತೆ ಮೇರೆಗೆ ದುರಸ್ತಿ ಕಾಮಗಾರಿ ಕೈಗೊಂಡಿದ್ದೇವೆ ಎಂದು ವಿವರಿಸಿದರು.
ಡಬಲ್ ಡೆಕ್ಕರ್ ಯೋಜನೆಗೆ ನಿರಾಕರಣೆ; ಕೇಂದ್ರ ಸಚಿವರ ಜತೆ ಚರ್ಚೆ
ಡಬಲ್ ಡೆಕ್ಕರ್ ಸೇರಿದಂತೆ ಮೆಟ್ರೋ ಯೋಜನೆಯನ್ನು ಕೇಂದ್ರ ಸರ್ಕಾರ ತಿರಸ್ಕರಿಸಿದೆ ಎಂಬ ಪಿ.ಸಿ. ಮೋಹನ್ ಹೇಳಿಕೆ ಬಗ್ಗೆ ಕೇಳಿದಾಗ ನನಗೆ ಈ ವಿಚಾರ ತಿಳಿದಿಲ್ಲ. ಬೆಂಗಳೂರಿನಲ್ಲಿ ಈಗಾಗಲೇ ನಿರ್ಮಾಣವಾಗಿರುವ ಡಬಲ್ ಡೆಕ್ಕರ್ ಮೆಲ್ಸೇತುವೆಯನ್ನು ಸ್ವತಃ ಪ್ರಧಾನಮಂತ್ರಿಗಳು ನೋಡಿದ್ದಾರೆ. ಈ ಯೋಜನೆ ವೆಚ್ಚವನ್ನು ಮೆಟ್ರೋ ಸಂಸ್ಥೆ 50% ಅನುದಾನ ಹಾಕಿದರೆ, ಕರ್ನಾಟಕ ಸರ್ಕಾರ (ಜಿಬಿಎ) 50% ಅನುದಾನ ಭರಿಸಲಿದೆ. ರಸ್ತೆ ಅಗಲೀಕರಣ ಕಷ್ಟವಾಗಿರುವ ಹಿನ್ನೆಲೆಯಲ್ಲಿ ಈ ಯೋಜನೆ ಮಾಡುತ್ತಿದ್ದೇವೆ. ಕೇಂದ್ರ ಸರ್ಕಾರವೇ ಈ ಯೋಜನೆ ಮಾಡಬೇಕು ಎಂದು ಹೇಳಿದ್ದು, ಅದನ್ನು ಮುಂದುವರಿಸುತ್ತಿದ್ದೇವೆ. ಕೇಂದ್ರ ಸರ್ಕಾರದವರು ತಾಂತ್ರಿಕ ವಿಚಾರದಲ್ಲಿ ಮರುಪರಿಶೀಲನೆಗೆ ಸಲಹೆ ನೀಡಿರಬಹುದು ಎಂದು ತಿಳಿಸಿದರು.
ಯತೀಂದ್ರ ಅವರ ಮಾತೇ ನಮಗೆ ವೇದವಾಕ್ಯ ಎಂದ ಡಿ.ಕೆ. ಸುರೇಶ್!
ಡಬಲ್ ಡೆಕ್ಕರ್ ಮಾಡಿದರೆ ಮೆಟ್ರೋ ರೈಲಿಗೆ ಪ್ರಯಾಣಿಕರ ಸಂಖ್ಯೆ ಕಡಿಮೆಯಾಗುತ್ತಾರೆ ಎಂಬ ಕಾರಣ ಕೊಟ್ಟಿದ್ದಾರೆ ಎಂದು ಕೇಳಿದಾಗ ರಸ್ತೆಯಲ್ಲಿ ಓಡಾಡುವ ಪ್ರಯಾಣಿಕರೇ ಬೇರೆ, ಮೆಟ್ರೋ ಬಳಸುವ ಪ್ರಯಾಣಿಕರೇ ಬೇರೆ. ಈ ಯೋಜನೆಯಲ್ಲಿ ಏನಾದರೂ ಸಮಸ್ಯೆ ಇದ್ದರೆ ಕೇಂದ್ರ ಸಚಿವರನ್ನು ಭೇಟಿ ಮಾಡಿ ಚರ್ಚೆ ಮಾಡುತ್ತೇನೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.