ಪ್ರತಾಪ್ ಸಿಂಹ ಹೇಳಿಕೆಗೆ ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಖಡಕ್ ತಿರುಗೇಟಿನ ಮೂಲಕ ಆಗ್ರಹ
ಡಿಎಸ್‌ಎಸ್ ಕಾರ್ಯಕರ್ತರು ಪ್ರತಿಭಟನೆ ನಡೆಸುವಾಗ ನೀಲಿ ಶಾಲು ಧರಿಸುವುದನ್ನು ಉಲ್ಲೇಖಿಸಿ ಪ್ರತಾಪ್ ಸಿಂಹ ಪ್ರಶ್ನಿಸಿದ್ದರು. “ಏನೇ ಮಾಡಿದರೂ ಡಿಎಸ್‌ಎಸ್‌ನವರು ನೀಲಿ ಶಾಲು ಹಾಕಿಕೊಂಡು ಬರುತ್ತೀರಿ, ಮೊದಲು ಅಂಬೇಡ್ಕರ್ ಅವರನ್ನು ಓದಿಕೊಳ್ಳಿ ಎನ್ನುತ್ತಾ ದಲಿತ ಸಮುದಾಯವನ್ನು ಕೆಣಕಿ ಮಾತನಾಡಿರುವುದು ವಿವಾದಕ್ಕೆ ಕಾರಣವಾಗಿದೆ.
-
ಚಿಕ್ಕಬಳ್ಳಾಪುರ: ದಲಿತ ಸಂಘರ್ಷ ಸಮಿತಿ (ಡಿಎಸ್‌ಎಸ್) ಹಾಗೂ ದಲಿತ ಸಮುದಾಯದ ಸ್ವಾಭಿ ಮಾನದ ಸಂಕೇತವಾಗಿರುವ ನೀಲಿ ಶಾಲಿನ ಕುರಿತು ಮಾಜಿ ಸಂಸದ ಪ್ರತಾಪ್ ಸಿಂಹ(Prathap Simha) ನಾಲಿಗೆ ಹರಿಯಬಿಟ್ಟಿರುವ ವಿಚಾರದಲ್ಲಿ ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ (Pradeep Eshwar) ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ದಲಿತರ ಹಕ್ಕು, ಗೌರವ ಮತ್ತು ಅಸ್ತಿತ್ವದ ವಿಚಾರದಲ್ಲಿ ರಾಜಿ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ ಎಂದು ಖಡಕ್ ಪ್ರತಿಕ್ರಿಯೆ ನೀಡಿದ್ದಾರೆ.
ಈ ಸಂಬಂಧ ಬೆಂಗಳೂರಿನಲ್ಲಿ ನಡೆಸಿದ ಸುದ್ದಿಗೋಷ್ಟಿಯಲ್ಲಿ ಮಾತನಾಡಿರುವ ಅವರು ದಲಿತರ ಬಗ್ಗೆ ಮಾತನಾಡುವ ಮೊದಲು ಅವರ ನೋವು, ಹೋರಾಟ ಮತ್ತು ಇತಿಹಾಸವನ್ನು ಅರ್ಥ ಮಾಡಿಕೊಳ್ಳಬೇಕು. ದಲಿತರ ವಿಚಾರದಲ್ಲಿ ಅನಗತ್ಯವಾಗಿ ಮಾತನಾಡಿದರೆ ಸುಮ್ಮನಿರುವುದಿಲ್ಲ ಎಂದು ನೇರ ಎಚ್ಚರಿಕೆ ನೀಡಿದ್ದಾರೆ.
ಇತ್ತೀಚೆಗೆ ಮೈಸೂರು ಜಿಲ್ಲೆ ಟಿ.ನರಸೀಪುರದಲ್ಲಿ ಡಿಎಸ್‌ಎಸ್ ನೇತೃತ್ವದಲ್ಲಿ ನಡೆಸಿದ್ದ ಸಾಮರಸ್ಯದ ನಡಿಗೆಯಿಂದ ಕೆರಳಿದ್ದ ಪ್ರತಾಪ್ ಸಿಂಹ ನೀಲಿ ಶಾಲಿನ ಕುರಿತು ನೀಡಿದ್ದ ಹಗುರವಾದ ಹೇಳಿಕೆ ಸಾಮಾಜಿಕ ಮತ್ತು ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿತ್ತು.
ಡಿಎಸ್‌ಎಸ್ ಕಾರ್ಯಕರ್ತರು ಪ್ರತಿಭಟನೆ ನಡೆಸುವಾಗ ನೀಲಿ ಶಾಲು ಧರಿಸುವುದನ್ನು ಉಲ್ಲೇಖಿಸಿ ಪ್ರತಾಪ್ ಸಿಂಹ ಪ್ರಶ್ನಿಸಿದ್ದರು. “ಏನೇ ಮಾಡಿದರೂ ಡಿಎಸ್‌ಎಸ್‌ನವರು ನೀಲಿ ಶಾಲು ಹಾಕಿಕೊಂಡು ಬರುತ್ತೀರಿ, ಮೊದಲು ಅಂಬೇಡ್ಕರ್ ಅವರನ್ನು ಓದಿಕೊಳ್ಳಿ ಎನ್ನುತ್ತಾ ದಲಿತ ಸಮುದಾಯವನ್ನು ಕೆಣಕಿ ಮಾತನಾಡಿರುವುದು ವಿವಾದಕ್ಕೆ ಕಾರಣವಾಗಿದೆ.
ಇದನ್ನೂ ಓದಿ: Chinthamani News: ರೈತರ ನಂಬಿಕೆ ಎಂದಿಗೂ ಹುಸಿಗೊಳಿಸುವುದಿಲ್ಲ: ಆವಲಪ್ಪ
ಇದಕ್ಕೆ ತೀವ್ರವಾಗಿ ಪ್ರತಿಕ್ರಿಯಿಸಿರುವ ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್, ನೀನು ಒಂದು ಕೇಸರಿ ಶಾಲು ಹಾಕಿಕೊಂಡು ಬಾ; ನಾವು ಸಾವಿರ ನೀಲಿ ಶಾಲು ಹಾಕಿಕೊಂಡು ಬರುತ್ತೇವೆ ಎಂದು ಸವಾಲಿನ ಧಾಟಿಯಲ್ಲಿ ಹೇಳಿದ್ದಾರೆ. ದಲಿತ ಸಂಘರ್ಷ ಸಮಿತಿ ಹಾಗೂ ದಲಿತ ಸಮುದಾಯದ ಸಂಕೇತಗಳ ಕುರಿತು ಮಾತನಾಡುವಾಗ ಸಂಯಮ ವಹಿಸಬೇಕು. ದಲಿತರ ಭಾವನೆಗಳಿಗೆ ಧಕ್ಕೆ ತರುವ ಹೇಳಿಕೆಗಳನ್ನು ನೀಡಬಾರದು ಎಂದು ಆಗ್ರಹಿಸಿದ್ದಾರೆ.
ಮುಂದುವರೆದು ಈ ದೇಶ ಕಟ್ಟಿದ್ದು ದಲಿತರು. ದಲಿತರನ್ನು ದೇವರಂತೆ ಗೌರವಿಸಬೇಕು. ನಾನು ದಲಿತರ ಪರವಾಗಿ ಹೋರಾಟ ಮಾಡಿದ್ದೇನೆ. ದಲಿತರಿಗೆ ಕಷ್ಟ ಕೊಟ್ಟರೆ ನಾನು ಸುಮ್ಮನಿರುವುದಿಲ್ಲ” ಎಂದು ಈಶ್ವರ್ ಹೇಳಿದ್ದಾರೆ. ಅಲ್ಲದೆ, ದಲಿತರ ಕುರಿತು ನೀಡಿರುವ ಹೇಳಿಕೆಗಳಿಗೆ ಪ್ರತಾಪ್ ಸಿಂಹ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದ್ದಾರೆ.
ನೀಲಿ ಬಣ್ಣ ಮತ್ತು ನೀಲಿ ಶಾಲು ಅಂಬೇಡ್ಕರ್ ಚಿಂತನೆ, ಸಮಾನತೆ, ಸ್ವಾಭಿಮಾನ ಹಾಗೂ ಸಾಮಾ ಜಿಕ ನ್ಯಾಯದ ಸಂಕೇತವೆಂದು ದಲಿತ ಚಳವಳಿಯ ನಾಯಕರು ನಂಬಿದ್ದಾರೆ. ಈ ಹಿನ್ನೆಲೆಯಲ್ಲಿ ನೀಲಿ ಶಾಲಿನ ಕುರಿತು ರಾಜಕೀಯ ನಾಯಕರ ಹೇಳಿಕೆಗಳು ಮತ್ತೊಮ್ಮೆ ದಲಿತ ಸಂಘಟನೆಗಳ ಪಾತ್ರ, ಸಾಮಾಜಿಕ ನ್ಯಾಯ ಮತ್ತು ಸಮುದಾಯದ ಸಂಕೇತಗಳ ಕುರಿತ ಚರ್ಚೆ ಯನ್ನು ಮುನ್ನೆಲೆಗೆ ತಂದಿದ್ದು ಸಮಾಜದಲ್ಲಿ ಅಶಾಂತಿಗೆ ಕಾರಣವಾಗಿರು ಮಾಜಿ ಸಂಸದ ಪ್ರತಾಪಸಿಂಹನ ವಿರುದ್ಧ ಈಗಾಗಲೇ ಎಫ್‌ಐಆರ್ ದಾಖಲಾಗಿದೆ.
ರಾಜ್ಯಾದ್ಯಂತ ಈ ವಿಚಾರದ ಕುರಿತು ಪ್ರತಿಭಟನೆಗಳು, ಆಕ್ರೋಶದ ಹೇಳಿಕೆಗಳು, ಪರ ವಿರೋದದ ಚರ್ಚೆಗಳು ಮುಂದುವರೆದಿವೆ. ಶಾಸಕ ಸಚಿವರು ಈ ಕುರಿತು ಬಹಿರಂಗ ಹೇಳಿಕೆಗಳನ್ನು ನೀಡುತ್ತಾ ಪ್ರತಾಪ ಸಿಂAಹನ ವಿರುದ್ದ ಕ್ರಮಕ್ಕೆ ಆಗ್ರಹಿಸಿದ್ದರೂ, ಜಟ್ಟಿಬಿದ್ದರೂ ಮೀಸೆ ಮಣ್ಣಾಗಲಿಲ್ಲ ಎಂಬಂತೆ ಹುಂಬತನ ಪ್ರದರ್ಶನ ಮಾಡಿರುವ ಪ್ರತಾಪ ಸಿಂಹ ನನ್ನ ಮೇಲೆ 22 ಕೇಸುಗಳಿವೆ. ಇದಕ್ಕೆ ಹೆದರು ವ ಮಗನಲ್ಲ ಎನ್ನುತ್ತಾ ತೊಡೆ ತಟ್ಟಿದ್ದಾರೆ. ಇದಕ್ಕೆ ಹೊಸ ಸೇರ್ಪಡೆಯಾಗಿ ಶಾಸಕ ಪ್ರದೀಪ್ ಈಶ್ವರ್ ಹೇಳಿಕೆ ಸೇರಿಕೊಂಡಿದೆ.
ಅಷ್ಟೇ ಅಲ್ಲದೆ ಪ್ರದೀಪ್ ಈಶ್ವರ್ ಹಾಗೂ ಪ್ರತಾಪ್ ಸಿಂಹ ನಡುವೆ ಈ ಹಿಂದೆಯೂ ಹಲವು ಸಂದರ್ಭಗಳಲ್ಲಿ ತೀವ್ರ ವಾಕ್ಸಮರ ನಡೆದಿದ್ದು, ಇಬ್ಬರ ನಡುವಿನ ರಾಜಕೀಯ ಸಂಘರ್ಷ ಹೊಸ ಹೇಳಿಕೆಯೊಂದಿಗೆ ಮತ್ತೆ ಮುನ್ನೆಲೆಗೆ ಬಂದಿದ್ದು ಇದು ಮುಂದೆ ಯಾವ ಹಂತಕ್ಕೆ ಹೋಗಿ ಮುಟ್ಟುತ್ತದೆಯೋ ಕಾದು ನೋಡಬೇಕಿದೆ.