Plastivision India 2027: ಜನವರಿ 21ರಿಂದ ಅಂತಾರಾಷ್ಟ್ರೀಯ ಪ್ಲಾಸ್ಟಿಕ್ ಪ್ರದರ್ಶನ, ಸಮ್ಮೇಳನ
ಜನವರಿ 21ರಿಂದ ಅಂತಾರಾಷ್ಟ್ರೀಯ ಪ್ಲಾಸ್ಟಿಕ್ ಪ್ರದರ್ಶನ ಮತ್ತು ಸಮ್ಮೇಳನ ಪ್ಲಾಸ್ಟಿವಿಷನ್ ಇಂಡಿಯಾ- 2027 ಐದು ದಿನಗಳ ಕಾಲ ನಡೆಯಲಿದ್ದು, ಪ್ರದರ್ಶನ ಮತ್ತು ಸಮಾವೇಶದಲ್ಲಿ 100ಕ್ಕೂ ಹೆಚ್ಚು ರಾಷ್ಟ್ರಗಳ ಪ್ರದರ್ಶಕರು, ಹೂಡಿಕೆದಾರರು, ಪ್ಲಾಸ್ಟಿಕ್ ಕೈಗಾರಿಕೆಗಳು, ವೃತ್ತಿಪರರು ಮತ್ತು ಗ್ರಾಹಕರು ಭಾಗಿಯಾಗಲಿದ್ದಾರೆ. ಪ್ಲಾಸ್ಟಿಕ್ ಮೆಷಿನರಿ, ಪ್ಲಾಸ್ಟಿಕ್ ಉತ್ಪನ್ನಗಳು ಕಚ್ಚಾ ವಸ್ತುಗಳು ತಂತ್ರಜ್ಞಾನ ಮತ್ತು ಸಂಬಂಧಿತ ಉದ್ಯಮಗಳಿಗೆ ಜಾಗತಿಕ ಮಾರುಕಟ್ಟೆ ಒದಗಿಸುವುದು ಪ್ರಮುಖ ಸಮಾವೇಶದ ಉದ್ದೇಶ ಎಂದು ಪ್ಲಾಸ್ಟಿವಿಷನ್ ಇಂಡಿಯಾ- 2027 ಗೌರವ ಅಧ್ಯಕ್ಷ ಜಯೇಶ್ ಖಿಮ್ಜಿ ರಂಭಿಯಾ ಹೇಳಿದ್ದಾರೆ.
ಪ್ಲಾಸ್ಟಿವಿಷನ್ ಇಂಡಿಯಾ- 2027 ಬಗ್ಗೆ ಬೆಂಗಳೂರನಲ್ಲಿ ನಡೆದ ಸುದ್ದಿಗೋಷ್ಠಿ ನಡೆಯಿತು -
ಬೆಂಗಳೂರು, ನ .28: ಅಂತಾರಾಷ್ಟ್ರೀಯ ಪ್ಲಾಸ್ಟಿಕ್ ಪ್ರದರ್ಶನ ಮತ್ತು ಸಮ್ಮೇಳನ ಪ್ಲಾಸ್ಟಿವಿಷನ್ ಇಂಡಿಯಾ- 2027 (Plastivision India 2027) ಮುಂಬೈಯ ಬಾಂಬೆ ಎಕ್ಸಿಬಿಷನ್ ಸೆಂಟರ್ನಲ್ಲಿ ಜನವರಿ 21ರಿಂದ 25ರವರೆಗೆ ನಡೆಯಲಿದೆ. ದೇಶದ ಪ್ಲಾಸ್ಟಿಕ್ ಉದ್ಯಮಕ್ಕೆ ಅಂತಾರಾಷ್ಟ್ರೀಯ ಮಾರುಕಟ್ಟೆ ಒದಗಿಸುವುದು ಈ ಸಮಾವೇಶದ ಉದ್ದೇಶ ಎಂದು ಪ್ಲಾಸ್ಟಿವಿಷನ್ ಇಂಡಿಯಾ- 2027 ಗೌರವ ಅಧ್ಯಕ್ಷ ಜಯೇಶ್ ಖಿಮ್ಜಿ ರಂಭಿಯಾ ಹೇಳಿದ್ದಾರೆ. ಈ ಸಮಾವೇಶದ ಅಂಗವಾಗಿ ಬೆಂಗಳೂರಿನಲ್ಲಿ ಹಮ್ಮಿಕೊಳ್ಳಲಾಗಿರುವ ರೋಡ್ ಶೋನಲ್ಲಿ ಭಾಗಿಯಾಗಲು ಆಗಮಿಸಿರುವ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ದಿ ಆಲ್ ಇಂಡಿಯಾ ಪ್ಲಾಸ್ಟಿಕ್ಸ್ ಮ್ಯಾನುಫ್ಯಾಕ್ಚರರ್ಸ್ ಅಸೋಸಿಯೇಷನ್ (AIPMA) ಆಯೋಜಿಸುತ್ತಿರುವ ಈ ಪ್ರದರ್ಶನವು 2ನೇ ಅತಿ ದೊಡ್ಡ ಪ್ಲಾಸ್ಟಿಕ್ ಪ್ರದರ್ಶನವಾಗಿ ಗುರುತಿಸಿಕೊಂಡಿದೆ. ಕಚ್ಚಾ ವಸ್ತುಗಳು ಮತ್ತು ಯಂತ್ರೋಪಕರಣಗಳಿಂದ ಹಿಡಿದು ಅಚ್ಚುಗಳು, ಸಂಸ್ಮರಣಾ ತಂತ್ರಜ್ಞಾನ, ಸಿದ್ಧ ಉತ್ಪನ್ನಗಳು ಮತ್ತು ಸೇವೆಗಳವರೆಗೆ ಪ್ಲಾಸ್ಟಿಕ್ ಉದ್ಯಮದ ಸಂಪೂರ್ಣ ಸರಪಳಿಯನ್ನು ಇದು ಒಂದೇ ವೇದಿಕೆಯಲ್ಲಿ ಒಗ್ಗೂಡಿಸಲಿದೆ ಎಂದರು.
ಈ ಐದು ದಿನಗಳ ಪ್ರದರ್ಶನ ಮತ್ತು ಸಮಾವೇಶದಲ್ಲಿ 100ಕ್ಕೂ ಹೆಚ್ಚು ರಾಷ್ಟ್ರಗಳ ಪ್ರದರ್ಶಕರು, ಹೂಡಿಕೆದಾರರು, ಪ್ಲಾಸ್ಟಿಕ್ ಕೈಗಾರಿಕೋದ್ಯಮಿಗಳು, ವೃತ್ತಿಪರರು ಮತ್ತು ಗ್ರಾಹಕರು ಭಾಗಿಯಾಗಲಿದ್ದಾರೆ. ಪ್ಲಾಸ್ಟಿಕ್ ಮೆಷಿನರಿ, ಪ್ಲಾಸ್ಟಿಕ್ ಉತ್ಪನ್ನಗಳು ಕಚ್ಚಾ ವಸ್ತುಗಳು ತಂತ್ರಜ್ಞಾನ ಮತ್ತು ಸಂಬಂಧಿತ ಉದ್ಯಮಗಳಿಗೆ ಜಾಗತಿಕ ಮಾರುಕಟ್ಟೆ ಒದಗಿಸುವುದು ಪ್ರಮುಖ ಸಮಾವೇಶದ ಉದ್ದೇಶ. ಜಾಗತಿಕ ಉತ್ಪಾದನಾ ಕೇಂದ್ರವಾಗಿ ಭಾರತದ ಸ್ಥಾನವನ್ನು ಮತ್ತಷ್ಟು ಬಲಗೊಳ್ಳಲಿದೆ ಎಂದು ಹೇಳಿದರು.
ಅಖಿಲ ಭಾರತ ಪ್ಲಾಸ್ಟಿಕ್ ಉತ್ಪಾದಕರ ಅಸೋಶಿಯೇಷನ್ 1992ರಲ್ಲಿ ಆರಂಭಗೊಂಡಿದ್ದು ಅಂದಿನಿಂದ ಪ್ರತಿ ಮೂರು ವರ್ಷಗಳಿಗೊಮ್ಮೆ ಈ ಪ್ರದರ್ಶನ ಮತ್ತು ಸಮ್ಮೇಳನವನ್ನು ಆಯೋಜಿಸುತ್ತಾ ಬರುತ್ತಿದೆ. ಕಚ್ಚಾ ವಸ್ತುಗಳ ಉತ್ಪಾದಕರು, ತಯಾರಕರು ಮತ್ತು ಪ್ಲಾಸ್ಟಿಕ್ ಉದ್ಯಮಿಗಳ ನಡುವೆ ಕೊಂಡಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಆಟೋಮೇಷನ್, ರೋಬೋಟಿಕ್ಸ್ ಮತ್ತು ಪುನರ್ ಬಳಕೆ ಕುರಿತಾದ ತಂತ್ರಜ್ಞಾನವನ್ನು ಒದಗಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತಾ ಬಂದಿದೆ ಎಂದು ವಿವರಿಸಿದರು.
ಪ್ಲಾಸ್ಟಿವಿಷನ್ ಕೇವಲ ವ್ಯಾಪಾರ ಪ್ರದರ್ಶನವಲ್ಲ; ಇದು ಭಾರತೀಯ ಪ್ಲಾಸ್ಟಿಕ್ ಉದ್ಯಮದ ಬೆಳವಣಿಗೆಯ ಪ್ರಮುಖ ಪಾಲುದಾರವಾಗಿದೆ. ಭಾರತೀಯ ಉದ್ಯಮಗಳನ್ನು ಜಾಗತಿಕ ತಂತ್ರಜ್ಞಾನ, ಮಾರುಕಟ್ಟೆಗಳು ಮತ್ತು ಅವಕಾಶಗಳೊಂದಿಗೆ ಸಂಪರ್ಕಿಸುವುದರ ಜತೆಗೆ, ವಿಶ್ವ ವೇದಿಕೆಯಲ್ಲಿ ಹೊಸ ಆವಿಷ್ಕಾರ ಮಾಡಲು, ಸ್ಪರ್ಧಿಸಲು ಮತ್ತು ಬೆಳೆಯಲು ಸಹಾಯ ಮಾಡುತ್ತದೆ ಎಂದರು.
ಸುಸ್ಥಿರತೆ ಮತ್ತು ಪುನರ್ ಬಳಕೆ ಸಮಾವೇಶದ ಪ್ರಮುಖ ಉದ್ದೇಶ. ಜಾಗತಿಕ ಮಟ್ಟದಲ್ಲಿ ಪ್ಲಾಸ್ಟಿಕ್ ಉದ್ಯಮದ ಬೆಳವಣಿಗೆ, ಪ್ರೊಸೆಸಿಂಗ್, ಕಚ್ಚಾ ವಸ್ತುಗಳು, ತಂತ್ರಜ್ಞಾನ ಸಂಶೋಧನೆ, ಸುಸ್ಥಿರತೆ ಮತ್ತು ಮರುಬಳಕೆ, ಸ್ಮಾರ್ಟ್ ಅಪ್ಗಳು, ಬಿ2ಬಿ, ಎಂಎಸ್ಎಂಇ ಮತ್ತು ಸಂಬಂಧಿತ ಕೈಗಾರಿಕೆಗಳ ಸ್ಥಾಪನೆ ಬೆಳವಣಿಗೆ ಕುರಿತು ವಿಸ್ತೃತ ಚರ್ಚೆ ನಡೆಯಲಿದೆ. ಜತೆಗೆ ದಕ್ಷಿಣ ಭಾರತ ಅದರಲ್ಲೂ ಕರ್ನಾಟಕದಲ್ಲಿ ಪ್ಲಾಸ್ಟಿಕ್ ಉದ್ಯಮದ ಬೆಳವಣಿಗೆಗೆ ಸಹಾಯಕವಾಗಲಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಏಕಕಾಲಕ್ಕೆ 21 ಕಾರ್ಯಕ್ರಮ
ಪ್ರದರ್ಶನದಲ್ಲಿ ಏಕಕಾಲಕ್ಕೆ 21 ಕಾರ್ಯಕ್ರಮಗಳು ನಡೆಯಲಿದ್ದು, ತಂತ್ರಜ್ಞಾನ ಪರಿಚಯ, ಜ್ಞಾನ ಹಂಚಿಕೆ, ಸಂಪರ್ಕ ಜಾಲ ನಿರ್ಮಾಣ ಮತ್ತು ವ್ಯಾಪಾರ ಅವಕಾಶಗಳ ಮೂಲಕ ಸಂದರ್ಶಕರಿಗೆ ಹೆಚ್ಚಿನ ಮೌಲ್ಯ ಒದಗಿಸಲಿವೆ. ಈ ಮೂಲಕ ಇಡೀ ಪ್ಲಾಸ್ಟಿಕ್ ಸರಪಳಿಯನ್ನು ಒಂದೇ ವೇದಿಕೆಗೆ ಕರೆತರಲಾಗುತ್ತದೆ. ಕಚ್ಚಾ ವಸ್ತುಗಳಿಂದ ಹಿಡಿದು ಮೌಲ್ಡ್ಸ್, ಪ್ರೊಸೆಸಿಂಗ್ ತಂತ್ರಜ್ಞಾನ, ಅಂತಿಮ ಉತ್ಪನ್ನ ಮತ್ತು ಸೇವಾದಾರರು ಭಾಗಿಯಾಗಲಿದ್ದಾರೆ. ಪ್ಲಾಸ್ಟಿಕ್ ಉದ್ಯಮದಲ್ಲಿ ಕೃತಕ ಬುದ್ದಿಮತ್ತೆಯ ಬಳಕೆ ಕುರಿತು ಚರ್ಚೆ ನಡೆಯಲಿದ್ದು, ಗುಣಮಟ್ಟ ವೃದ್ಧಿಯಾಗಲಿದೆ. ಪ್ಲಾಸ್ಟಿಕ್ ಉದ್ಯಮದ ಇಂಜಿನಿಯರ್ಗಳು ಒಂದಾಗಿ ಸೇರಲು ಈ ವೇದಿಕೆ ಅವಕಾಶ ಕಲ್ಪಿಸಲಿದ್ದು, ಅವಕಾಶಗಳು ಮತ್ತು ವ್ಯಾವಹಾರಿಕ ಅವಕಾಶಗಳನ್ನು ಕುರಿತು ಚರ್ಚೆ ನಡೆಸಲಿದ್ದಾರೆ. ಪ್ಲಾಸ್ಟಿಕ್ ಉದ್ಯಮದ ಪರಿಣಿತರು ಉದ್ಯಮದ ಸವಾಲುಗಳು, ಅವಕಾಶಗಳು ಮತ್ತು ಭವಿಷ್ಯದ ತಂತ್ರಗಳನ್ನು ಕುರಿತು ಚರ್ಚೆ ನಡೆಸಿ ಪರಿಹಾರ ಮತ್ತು ಮಾರ್ಗೋಪಾಯಗಳನ್ನು ಕಂಡುಕೊಳ್ಳಲಾಗುತ್ತದೆ ಎಂದರು.
ಇದು ಜೆನ್ ಝೀಗಳ ಯುಗ. ಅವರನ್ನೂ ಪ್ಲಾಸ್ಟಿಕ್ ಉದ್ಯಮದ ಪಾಲುದಾರರನ್ನಾಗಿ ಮಾಡುವಲ್ಲಿಯೂ ಸಮಾವೇಶ ಚಿಂತನೆ ನಡೆಸಲಿದೆ. ಭಾರತೀಯ ಪ್ಲಾಸ್ಟಿಕ್ ಉದ್ಯಮವನ್ನು ಜಾಗತಿಕ ತಂತ್ರಜ್ಞಾನ ಮತ್ತು ಅವಕಾಶಗಳೊಂದಿಗೆ ಸಂಪರ್ಕಿಸುವ ವೇದಿಕೆಯಾಗಲಿದೆ. ಪ್ರದರ್ಶನದ ಅಂಗವಾಗಿ ಬೆಂಗಳೂರಿನಲ್ಲಿ ರೋಡ್ ಶೋ ನಡೆಯಲಿದ್ದು, ಉತ್ಪಾದಕರು, ಎಂಎಸ್ಎಂಇ ಮತ್ತು ಪ್ಲಾಸ್ಟಿಕ್ ವಲಯದ ಸಂಬಂಧಿತ ಭಾಗೀದಾರರು, ನೀತಿ ನಿರೂಪಕರು ಮತ್ತು ಸಂಘಸಂಸ್ಥೆಗಳು ಭಾಗಿಯಾಗಲಿವೆ. ಇವರೆಲ್ಲರೂ ದೇಶದ ಪ್ಲಾಸ್ಟಿಕ್ ಬೆಳವಣಿಗೆ ಮತ್ತು ಭವಿಷ್ಯ ಕುರಿತು ಚರ್ಚೆ ನಡೆಸಲಿದ್ದಾರೆ.
33 ವರ್ಷಗಳಿಂದ ನಡೆದುಕೊಂಡು ಬರುತ್ತಿರುವ ಈ ಪ್ರದರ್ಶನಕ್ಕೆ ಕೇಂದ್ರ ಸರ್ಕಾರದ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಸಹಕಾರ ನೀಡಿದೆ. ಪ್ಲಾಸ್ಟಿಕ್ ಉದ್ಯಮವು ದೇಶದ ಜಿಡಿಪಿಗೆ ಶೇ. 2.5 ರಷ್ಟು ಕೊಡುಗೆ ನೀಡುತ್ತಿದ್ದು ಸುಮಾರು 5 ಮಿಲಿಯನ್ ಉದ್ಯೋಗಗಳನ್ನು ಸೃಷ್ಟಿಸಿದೆ. ಜಾಗತಿಕ ಮಟ್ಟದಲ್ಲಿ ವಾರ್ಷಿಕ ಪ್ಲಾಸ್ಟಿಕ್ ಬಳಕೆ ಪ್ರತಿ ವ್ಯಕ್ತಿಗೆ 50 ಕೆಜಿಗಳಷ್ಟಿದ್ದರೆ ಭಾರತದಲ್ಲಿ ಕೇವಲ 16 ಕೆಜಿಗಳಷ್ಟಿದೆ. ಇದು ಪ್ಲಾಸ್ಟಿಕ್ ಉದ್ಯಮದ ಬೆಳವಣಿಗೆಯನ್ನು ತೋರಿಸುತ್ತದೆ ಎಂದೂ ಹೇಳಿದರು.
2023ರಲ್ಲಿ ನಡೆದ ಸಮಾವೇಶದಲ್ಲಿ 20 ದೇಶಗಳ 1,238 ಪ್ರದರ್ಶಕರು, 26 ದೇಶಗಳ 102 ಅರ್ಹ ಅಂತಾರಾಷ್ಟ್ರೀಯ ಖರೀದಿದಾರರು ಭಾಗವಹಿಸಿದ್ದು ಮತ್ತೊಂದು ವಿಶೇಷ. 84 ದೇಶಗಳ, ಭಾರತದ 600 ನಗರಗಳ ಸುಮಾರು 234,000 ಮಂದಿ ಸಮಾವೇಶದಲ್ಲಿ ಭಾಗವಹಿಸುವ ಮೂಲಕ ದಾಖಲೆ ನಿರ್ಮಿಸಲಾಗಿದೆ ಎಂದೂ ತಿಳಿಸಿದರು.
AIPMA (ದಕ್ಷಿಣ) ಉಪಾಧ್ಯಕ್ಷ ರೋಹಿತ್ ಕನೂಗಾ, Plastivision India 2027 ಕರ್ನಾಟಕ ರಾಜ್ಯ ಪಾಲಿಮರ್ ಅಸೋಸಿಯೇಷನ್ ಅಧ್ಯಕ್ಷ ವಿಜಯ್ ಕುಮಾರ್ ಹಾಗೂ ಆಡಳಿತ ಮಂಡಳಿ ಅಧ್ಯಕ್ಷ ಹರಿರಾಂ ಥಕ್ಕರ್ ಉಪಸ್ಥಿತರಿದ್ದರು.
ವಿದೇಶಿ ನೇರ ಬಂಡವಾಳ ಹೂಡಿಕೆಯಲ್ಲಿ ದೇಶದಲ್ಲಿಯೇ ಪ್ರಥಮ ಸ್ಥಾನ
ಕರ್ನಾಟಕದಲ್ಲಿ ಪಾಲಿಮರ್ ಉದ್ಯಮ
ಕರ್ನಾಟಕದಲ್ಲಿಯೂ ಪಾಲಿಮರ್ ಮತ್ತು ಪ್ಲಾಸ್ಟಿಕ್ ಉದ್ಯಮ ವೇಗವಾಗಿ ಬೆಳೆಯುತ್ತಿದೆ. ಇಡೀ ದೇಶಕ್ಕೆ ರಾಜ್ಯದಿಂದ ಪ್ಲಾಸ್ಟಿಕ್ ಗಣನೀಯ ಪ್ರಮಾಣದಲ್ಲಿ ಪೂರೈಕೆಯಾಗುತ್ತಿದೆ. ರಾಜ್ಯದಲ್ಲಿ ಸುಮಾರು 800 ನೊಂದಾಯಿತ ರಬ್ಬರ್ ಮತ್ತು ಪ್ಲಾಸ್ಟಿಕ್ ಕೈಗಾರಿಕೆಗಳಿದ್ದು, ಪರಿಸರಕ್ಕೆ ಧಕ್ಕೆಯಾಗದಂತೆ ಕಾರ್ಯ ನಿರ್ವಹಿಸುತ್ತಿವೆ. ಬೆಂಗಳೂರಿನ ಪೀಣ್ಯ, ಬೊಮ್ಮಸಂದ್ರ ಮತ್ತು ಬಿಡದಿ, ಮೈಸೂರು, ಹುಬ್ಬಳ್ಳಿ ಧಾರವಾಡ, ಬೆಳಗಾವಿ ಮತ್ತು ಮಂಗಳೂರಿನಲ್ಲಿ ಈ ಕೈಗಾರಿಕೆಗಳು ಸ್ಥಾಪನೆಯಾಗಿವೆ.
ರಾಜ್ಯದ ಪ್ಲಾಸ್ಟಿಕ್ ಮತ್ತು ಪಾಲಿಮರ್ ಉದ್ಯಮದ ವಿಶೇಷವೇನೆಂದರೆ ಈ ಕೈಗಾರಿಕೆಗಳು ಮಾಹಿತಿ ತಂತ್ರಜ್ಞಾನ ವಲಯದ ಹಾರ್ಡ್ವೇರ್, ಏರೋಸ್ಪೇಸ್, ರಕ್ಷಣಾ ಕ್ಷೇತ್ರ, ಆಟೋಮೊಬೈಲ್, ಇವಿ ಕಂಪನಿಗಳು, ವೈದ್ಯಕೀಯ ಉಪಕರಣಗಳು ಮತ್ತು ಪ್ಯಾಕೇಜಿಂಗ್ಗೆ ಪೂರಕವಾಗಿ ಉತ್ಪನ್ನಗಳನ್ನು ಪೂರೈಕೆ ಮಾಡುತ್ತಿವೆ.
ರಾಜ್ಯದಲ್ಲಿ ಏಕ ಬಳಕೆಯ ಪ್ಲಾಸ್ಟಿಕ್ ಅನ್ನು ನಿಷೇಧ ಮಾಡಿರುವುದರಿಂದ ಇಡೀ ದೇಶದಲ್ಲೇ ಬೆಂಗಳೂರಿನಲ್ಲಿ ಬಯೋ ಪಾಲಿಮರ್, ಗೊಬ್ಬರವಾಗಿ ಪರಿವರ್ತನೆಯಾಗುವ ಪರ್ಯಾಯ ಪ್ಲಾಸ್ಟಿಕ್, ಮತ್ತು ಮರುಬಳಕೆಯ ತಂತ್ರಜ್ಞಾನ ಬಳಸಿಕೊಂಡು ಪ್ಲಾಸ್ಟಿಕ್ ಉತ್ಪಾದಿಸಲಾಗುತ್ತಿದೆ. ಏಕಮುಖ ಬಳಕೆಯ ಪ್ಲಾಸ್ಟಿಕ್ ನಿಷೇಧಕ್ಕೆ ಸಂಬಂಧಿಸಿದಂತೆ ಕರ್ನಾಟಕ ರಾಜ್ಯ ಪಾಲಿಮರ್ಸ್ ಅಸೋಸಿಯೇಷನ್ ಬೆಂಗಳೂರು, ಮೈಸೂರಿನಲ್ಲಿ CIPET (Central Institute of Petrochemicals Engineering & Technology) ಸ್ಥಾಪಿಸಿದೆ.