ಗುಟ್ಕಾ, ಪಾನ್ ಮಸಾಲಾ ನಿಷೇಧ ಆದೇಶ ಹಿಂಪಡೆದ ರಾಜ್ಯ ಸರ್ಕಾರ!
ಮೊನ್ನೆಯಷ್ಟೇ ರಾಜ್ಯಾದ್ಯಂತ ಜಾರಿ ಮಾಡಲಾಗಿದ್ದ ಪಾನ್ ಮಸಾಲಾ ಉತ್ಪನ್ನಗಳ ಮೇಲೆ ಒಂದು ವರ್ಷದ ಬ್ಯಾನ್ ಇದೀಗ ರದ್ದಾಗಿದೆ. ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಆದೇಶ ವಾಪಾಸ್ ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಪಾನ್ ಮಸಾಲಾ ನಿಷೇಧ ಹಿಂಪಡೆದ ಸರ್ಕಾರ -
ಬೆಂಗಳೂರು: ಮೊನ್ನೆಯಷ್ಟೇ ರಾಜ್ಯಾದ್ಯಂತ ಜಾರಿ ಮಾಡಲಾಗಿದ್ದ ಪಾನ್ ಮಸಾಲಾ (Pan Masala) ಉತ್ಪನ್ನಗಳ ಮೇಲೆ ಒಂದು ವರ್ಷದ ಬ್ಯಾನ್ ಇದೀಗ ರದ್ದಾಗಿದೆ. ಮುಖ್ಯಮಂತ್ರಿ ಡಿಕೆ ಶಿವಕುಮಾರ್ (CM DK Shivakumar) ಅವರು ಆದೇಶ ವಾಪಾಸ್ ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ ಎಂದು ತಿಳಿದು ಬಂದಿದೆ. ಗುಟ್ಕಾ ಹಾಗೂ ತಂಬಾಕು ಅಥವಾ ನಿಕೋಟಿನ್ ಒಳಗೊಂಡ ಪಾನ್ ಮಸಾಲಾ ಉತ್ಪನ್ನಗಳ ತಯಾರಿಕೆ, ದಾಸ್ತಾನು, ವಿತರಣೆ, ಸಾಗಣೆ ಮತ್ತು ಮಾರಾಟವನ್ನು ಆಹಾರ ಸುರಕ್ಷತಾ ಆಯುಕ್ತರು ನಿಷೇಧಿಸಿದ್ದರು. ಇದೀಗ ಸಿಎಂ ಸೂಚನೆ ಮೇರೆಗೆ ಆದೇಶವನ್ನು ಹಿಂಪಡೆಯಲಾಗಿದೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ವಿಭಾಗವು ಈ ಆದೇಶವನ್ನು ಹೊರಡಿಸಿತ್ತು. ತನಗೆ ಮಾಹಿತಿ ನೀಡದೆ ಈ ಆದೇಶ ಹೊರಡಿಸಲಾಗಿದೆ. ಇದರಿಂದ ಹಲವಾರು ರೈತರು ನಷ್ಟ ಅನುಭವಿಸಲಿದ್ದಾರೆ ಎಂದು ಸಿಎಂ ಗರಂ ಆಗಿದ್ದು, ಕೂಡಲೇ ಆದೇಶ ಹಿಂಪಡೆಯುವಂತೆ ಸೂಚಿಸಿದ್ದಾರೆ ಎಂದು ವರದಿಯಾಗಿದೆ.
ನಿಷೇಧ ಜಾರಿ ಮಾಡಿದ ಕೂಡಲೇ ರುವಾರ ಬಿಜೆಪಿ ಮತ್ತು ಕಾಂಗ್ರೆಸ್ ಶಾಸಕರ ನಿಯೋಗವೊಂದು ಸಿಎಂ ಬಳಿ ತೆರಳಿ ಆದೇಶ ಹಿಂಪಡೆಯುವಂತೆ ಮನವಿ ಮಾಡಿದ್ದರು. ಬಿಜೆಪಿ ಶಾಸಕ ಆರಗ ಜ್ಞಾನೇಂದ್ರ, ಕಾಂಗ್ರೆಸ್ ಶಾಸಕ ಡಿಜಿ ಶಾಂತನೇಗೌಡ ನೇತೃತ್ವದ ನಿಯೋಗವು ಈ ಮನವಿ ಮಾಡಿತ್ತು. ರಾಜ್ಯ ಸರ್ಕಾರದ ಆದೇಶದಿಂದ ರೈತರು ಗಾಬರಿಯಾಗಿದ್ದಾರೆ. ಮಾರುಕಟ್ಟೆ ಮೇಲೆ ಇದು ಪರಿಣಾಮ ಬೀಳಲಿದ್ದು, ಅಡಕೆ ಬೆಳೆಗಾರರಿಗೆ ಸರ್ಕಾರ ರಕ್ಷಣೆ ಕೊಡಬೇಕು ಎಂದು ನಿಯೋಗ ಮನವಿ ಮಾಡಿತ್ತು.
ಆಹಾರ ಸುರಕ್ಷತಾ ಇಲಾಖೆ ಆದೇಶದಲ್ಲೇನಿತ್ತು?
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ವಿಭಾಗ ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ, 2006ರ ಕಲಂ 30(2)(a) ಹಾಗೂ ಆಹಾರ ಸುರಕ್ಷತೆ ಮತ್ತು ಗುಣಮಟ್ಟ (ಮಾರಾಟದ ಮೇಲಿನ ನಿಷೇಧ ಮತ್ತು ನಿರ್ಬಂಧಗಳು) ನಿಯಮಗಳು 2011ರ ನಿಯಮ 2.3.4ರ ಅಡಿಯಲ್ಲಿ ನೀಡಿರುವ ಅಧಿಕಾರವನ್ನು ಬಳಸಿ ಸರ್ಕಾರವು 2026ರ ಆಗಸ್ಟ್ 10 ರಂದು ಅಧಿಕೃತ ಅಧಿಸೂಚನೆ ಹೊರಡಿಸಿದೆ. ಈ ಅಧಿಸೂಚನೆ ಹೊರಬಿದ್ದ ದಿನಾಂಕದಿಂದ ಒಂದು ವರ್ಷದ ಅವಧಿಗೆ ರಾಜ್ಯಾದ್ಯಂತ ಈ ನಿಷೇಧ ಜಾರಿಯಲ್ಲಿರಲಿದೆ ಎಂದು ತಿಳಿಸಿತ್ತು.