ಬೇಡಿಕೆಗೆ ತಕ್ಕಷ್ಟು ಪ್ರಶ್ನೆ ಪತ್ರಿಕೆ ಪೂರೈಸದ ಕೊಪ್ಪಳ ವಿವಿ
ಪರಿಕ್ಷಾರ್ಥಿಗಳಿಗೆ ಸಮರ್ಪಕ ಪ್ರಶ್ನೆ ಪತ್ರಿಕೆ ಹಾಗೂ ಉತ್ತರ ಪತ್ರಿಕೆ ಪೂರೈಕೆ ಮಾಡದ ಕೊಪ್ಪಳ ವಿಶ್ವ ವಿದ್ಯಾಲಯದ ಸ್ಥಿತಿ ಈ ಮೇಲಿನ ಮಾತಿಗೆ ಪುಷ್ಠಿ ನೀಡಿದೆ. ಇತ್ತೀಚೆಗಷ್ಟೇ ಕೊಪ್ಪಳ ವಿಶ್ವ ವಿದ್ಯಾಲಯ ಡಿಜಿಟಲ್ ಮೌಲ್ಯಮಾಪನಕ್ಕೆ ಮುಂದಾಗಿರುವ ಬಗ್ಗೆ ವರದಿ ಆಗಿತ್ತು. ಆದರೆ, ಗುರುವಾರ ನಡೆದ ವಿವಿಧ ಓಪನ್ ಎಲೆಕ್ಟಿವ್ ವಿಷಯಗಳ ಪರೀಕ್ಷೆಯಲ್ಲಿ ಸಾಕಷ್ಟು ಅಪರಾತಪರ ಆಗಿದೆ.
-
ಶರಣಬಸವ ಹುಲಿಹೈದರ ,ಕೊಪ್ಪಳ
ಪ್ರಶ್ನೆ ಪತ್ರಿಕೆ ಪೂರೈಸಲಾಗದ ವಿವಿ
ಡಿಜಿಟಲ್ ಮೌಲ್ಯಮಾಪನದ ಪ್ರಚಾರ
ವಿದ್ಯಾರ್ಥಿಗಳ ಪರದಾಟ
"ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ, ಜುಟ್ಟಿಗೆ ಮಲ್ಲಿಗೆ ಹೂ ಬೇಡಿದ್ದರಂತೆ. ಮೂಲ ಸೌಲಭ್ಯಕ್ಕೆ ಅನುಕೂಲತೆ ಇಲ್ಲದಿದ್ದರೂ, ಐಷಾರಾಮಿ ಜೀವನಕ್ಕೆ ಹಾತೊರೆಯುವ ಮನಃಸ್ಥಿತಿಗೆ ಸೂಚ್ಚವಾಗಿ ಈ ಗಾದೆ ಹೇಳುತ್ತಾರೆ. ಈ ಗಾದೆಗೆ ಸದ್ಯಕ್ಕೆ ಕೊಪ್ಪಳ ವಿಶ್ವವಿದ್ಯಾಲಯದ ಆಡಳಿತ ಮಂಡಳಿ ನಡೆಗೆ ಅನ್ವರ್ಥಕ ಎನ್ನುವಂತಿದೆ.
ಪರಿಕ್ಷಾರ್ಥಿಗಳಿಗೆ ಸಮರ್ಪಕ ಪ್ರಶ್ನೆ ಪತ್ರಿಕೆ ಹಾಗೂ ಉತ್ತರ ಪತ್ರಿಕೆ ಪೂರೈಕೆ ಮಾಡದ ಕೊಪ್ಪಳ ವಿಶ್ವವಿದ್ಯಾಲಯದ ಸ್ಥಿತಿ ಈ ಮೇಲಿನ ಮಾತಿಗೆ ಪುಷ್ಠಿ ನೀಡಿದೆ. ಇತ್ತೀಚೆಗಷ್ಟೇ ಕೊಪ್ಪಳ ವಿಶ್ವ ವಿದ್ಯಾಲಯ ಡಿಜಿಟಲ್ ಮೌಲ್ಯಮಾಪನಕ್ಕೆ ಮುಂದಾಗಿರುವ ಬಗ್ಗೆ ವರದಿ ಆಗಿತ್ತು. ಆದರೆ, ಗುರುವಾರ ನಡೆದ ವಿವಿಧ ಓಪನ್ ಎಲೆಕ್ಟಿವ್ ವಿಷಯಗಳ ಪರೀಕ್ಷೆಯಲ್ಲಿ ಸಾಕಷ್ಟು ಅಪರಾತಪರ ಆಗಿದೆ. ಸರಿಯಾಗಿ ಸಾಮಾನ್ಯ ಪರೀಕ್ಷೆ ನಡೆಸಲು ಪರದಾಡುವ ವಿವಿ ಆಡಳಿತ ಮಂಡಳಿ, ಮುಂದೆ ಬರುವ ಡಿಜಿಟಲ್ ಮೌಲ್ಯಮಾಪನದ ಪ್ರಕ್ರಿಯೆ ಹೇಗೆ ನಡೆಸುತ್ತದೆ ಎಂಬ ಪ್ರಶ್ನೆ ಮೂಡಿಸಿದೆ.
ಆಗಿದ್ದೇನು?: ಕೊಪ್ಪಳ ವಿಶ್ವವಿದ್ಯಾಲಯದ ಮುಖ್ಯ ಕ್ಯಾಂಪಸ್ ಸೇರಿ ವಿವಿ ವ್ಯಾಪ್ತಿಯ ಸ್ನಾತಕೋತ್ತರ ಕೇಂದ್ರ ಮತ್ತು ಸಂಯೋಜಿತ ಕಾಲೇಜಿನಲ್ಲಿ ಸ್ನಾತಕೋತ್ತರ ಪದವಿಯ ಪರೀಕ್ಷೆ ನಡೆಯುತ್ತಿವೆ. ಗುರುವಾರ ಸಮಾಜಶಾಸ್ತ್ರ, ಅರ್ಥಶಾಸ್ತ್ರ, ರಾಜ್ಯಶಾಸ್ತ್ರ, ಇತಿಹಾಸ, ಪತ್ರಿಕೋದ್ಯಮ, ಕನ್ನಡ ಸೇರಿ ವಿವಿಧ ಓಪನ್ ಎಲೆಕ್ಟಿ ವ್ ವಿಷಯಗಳ ಪರೀಕ್ಷೆ ಇದ್ದವು. ವಿದ್ಯಾರ್ಥಿಗಳು ಕೇವಲ 30 ಅಂಕಗಳಿಗೆ ಪರೀಕ್ಷೆ ಬರೆಯಬೇಕಿದ್ದು, ಬೆಳಗ್ಗೆ 10 ಗಂಟೆಯಿಂದ 11 ಗಂಟೆ ವರೆಗೆ ಸಮಯ ನಿಗದಿ ಆಗಿತ್ತು. ಆದರೆ, ತಳಕಲ್ ಇಂಜಿನಿಯರಿಂಗ್ ಕಾಲೇಜಿನಲ್ಲಿನ ಕೊಪ್ಪಳ ವಿಶ್ವವಿದ್ಯಾಲಯದ ಮುಖ್ಯ ಕ್ಯಾಂಪಸ್ ನಲ್ಲಿ ಗುರುವಾರ ಅನೇಕ ಅಪರಾತಪರ ನಡೆದಿವೆ.
ಇದನ್ನೂ ಓದಿ: Roopa Gururaj Column: ಬಾಸ್ಕೆಟ್ ಬಾಲ್ ಆಟದ ಮೂಲಕ ಪ್ರದ್ಯೋತ್ ವೊಲೇಟಿ ಶಿಕ್ಷಣ ಯಜ್ಞ
ಕೆಲ ವಿದ್ಯಾರ್ಥಿಗಳಿಗೆ ನೋಂದಣಿ ಸಂಖ್ಯೆ ಹಾಗೂ ಪರೀಕ್ಷೆ ಬರೆಯುವ ಡೆಸ್ಕ್ ಇರಲಿಲ್ಲವಂತೆ. ಸಮಾಜಶಾಸ್ತ್ರ ವಿಷಯದ ವಿದ್ಯಾರ್ಥಿಗಳಿಗೆ ಪದವಿ ಪರೀಕ್ಷೆಗಳ ಉತ್ತರ ಪತ್ರಿಕೆ ನೀಡಿದ್ದಾರೆ. ಅರ್ಧ ಗಂಟೆ ನಂತರ ಅದನ್ನು ವಾಪಾಸ್ ಪಡೆದು, ಸ್ನಾತಕೋತ್ತರ ಪದವಿಯ ಉತ್ತರ ಪತ್ರಿಕೆ ಕೊಟ್ಟಿದ್ದಾರೆ. ಕೆಲ ವಿಷಯದ ವಿದ್ಯಾರ್ಥಿಗಳಿಗೆ ಪ್ರಶ್ನೆ ಪತ್ರಿಕೆ ಕಡಿಮೆ ಇದ್ದಿದ್ದರಿಂದ ಸುಮಾರು 20 ನಿಮಿಷದ ನಂತರ ಝರಾಕ್ಸ್ ಮಾಡಿದ ಪ್ರಶ್ನೆ ಪತ್ರಿಕೆ ವಿತರಿಸಿದ್ದಾರೆ. ಇನ್ನೂ ಹಲವು ವಿದ್ಯಾರ್ಥಿಗಳಿಗೆ ವೈಟ್ ನರ್‌ನಿಂದ ತಿದ್ದುಪಡಿ ಮಾಡಿದ್ದ ಹಳೇ ಉತ್ತರ ಪತ್ರಿಕೆ ನೀಡಿದ್ದಾರೆ.
ಮತ್ತೊಂದೆಡೆ ಪರೀಕ್ಷಾರ್ಥಿಗಳ ಹಾಜರಾತಿ ಪುಸ್ತಕ ಒಂದು ದಿನ ಮೊದಲೇ ಸಿದ್ಧ ಇರಬೇಕು. ಆದರೆ, ಪರೀಕ್ಷೆ ಶುರುವಾದ ನಂತರ ತಯಾರಿ ಮಾಡಿಕೊಂಡು ಸಹಿ ಪಡೆದಿದ್ದು, ವಿಶ್ವವಿದ್ಯಾಲಯದ ಆಡಳಿತ ಮಂಡಳಿ ಮತ್ತು ಸಿಬ್ಬಂದಿ ನಿರ್ಲಕ್ಷ ಮತ್ತು ಬೇಜವಾಬ್ದಾರಿಗೆ ಕೈಗನ್ನಡಿ ಹಿಡಿದಂತಿದೆ.
ಸಿಬ್ಬಂದಿ ವಿರುದ್ಧ ಕ್ರಮಕ್ಕೆ ಆಗ್ರಹ!
ನಿಗದಿತ ಸಮಯಕ್ಕೆ ಪರೀಕ್ಷೆಗೆ ಹಾಜರಾಗಿದ್ದ ವಿದ್ಯಾರ್ಥಿಗಳಿಗೆ ನೋಂದಣಿ ಸಂಖ್ಯೆ ಹಾಕಿರಲಿಲ್ಲ. ಕೊಠಡಿ ಅಲರ್ಟ್ ಮಾಡಿರಲಿಲ್ಲ. ಒಎಂಆರ್‌ಉತ್ತರ ಪತ್ರಿಕೆ ಕೊಡಬೇಕಿದ್ದ ವಿದ್ಯಾರ್ಥಿಗಳಿಗೆ ಸಾಮಾನ್ಯ ಉತ್ತರ ಪತ್ರಿಕೆ ಕೊಟ್ಟಿದ್ದಾರೆ. ಇದರಿಂದ ಗೊಂದಲಕ್ಕೆ ಒಳಗಾದ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಪರದಾಡಿದ್ದಾರೆ. ಇದಕ್ಕೆಲ್ಲ ವಿಶ್ವವಿದ್ಯಾಲಯ ಆಡಳಿತ ಮಂಡಳಿ ಮತ್ತು ಸಿಬ್ಬಂದಿ ಕಾರಣ ಎಂಬ ಆರೋಪಗಳು ಕೇಳಿ ಬಂದಿವೆ. ಇಂಥ ಸ್ಥಿತಿಯಲ್ಲಿರುವ ವಿಶ್ವವಿದ್ಯಾಲಯ ಮೌಲ್ಯ ಮಾಪನ ಡಿಜಿಟಲೀಕರಣದಂತಹ ತಾಂತ್ರಿಕತೆಗೆ ಹೇಗೆ ಹೊಗ್ಗಿಕೊಳ್ಳುತ್ತದೆ ಎಂಬ ಪ್ರಶ್ನೆ ಹುಟ್ಟಿ ಕೊಂಡಿದೆ. ತಪ್ಪಿತಸ್ಥರ ವಿರುದ್ಧ ವಿವಿ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕಿದೆ.
![]()
ಹೇಳಿಕೊಳ್ಳುವಂತಹ ಗೊಂದಲ, ಸಮಸ್ಯೆ ಯಾವುದೂ ಆಗಿಲ್ಲ. ಪ್ರಿಂಟರ್ ಇಲ್ಲದಿರುವುದು ಸೇರಿ ಒಂದಷ್ಟು ತಾಂತ್ರಿಕ ಸಮಸ್ಯೆಯಿಂದ ಸ್ವಲ್ಪ ಸಮಸ್ಯೆ ಆಗಿದೆ. ಕೇವಲ 10 ನಿಮಿಷದಲ್ಲಿ ಎಲ್ಲ ಪರಿಹರಿಸಿದ್ದೇವೆ.
- ಪ್ರೊ.ರಮೇಶ, ಕುಲಸಚಿವರು, ಕೊಪ್ಪಳ ವಿವಿ
![]()
ಕೊಪ್ಪಳ ವಿಶ್ವವಿದ್ಯಾಲಯದ ಸಿಬ್ಬಂದಿ ನಿರ್ಲಕ್ಷದಿಂದ ಗುರುವಾರ ಪರೀಕ್ಷೆಗೆ ಹಾಜರಾಗಿದ್ದ ವಿದ್ಯಾರ್ಥಿಗಳು ಗೊಂದಲಕ್ಕೆ ಒಳಗಾಗಿದ್ದರು. ಪರೀಕ್ಷೆ ಬರೆಯಲು ಕೇವಲ 1 ಗಂಟೆ ಇದ್ದರೂ ಸುಮಾರು ಅರ್ಧ ಗಂಟೆ ಗೊಂದಲದಲ್ಲೇ ಕಳೆದು ಹೋಗಿದೆ. ನಮ-- ವಿಷಯದ ವಿದ್ಯಾರ್ಥಿಗಳಿಗೆ ನೋಂದಣಿ ಸಂಖ್ಯೆಯನ್ನೇ ಹಾಕಿರಲಿಲ್ಲ. ಇಂಥ ಬೇಜವಾಬ್ದಾರಿ ತೋರಿದ ಸಿಬ್ಬಂದಿ ವಿರುದ್ಧ ಕ್ರಮ ಆಗಬೇಕು.
- ಪರೀಕ್ಷೆಗೆ ಹಾಜರಾಗಿದ್ದ ವಿದ್ಯಾರ್ಥಿ