Nagabandham Movie: ʼನಾಗಬಂಧಂʼ ಚಿತ್ರದ ರುದ್ರ ಪಾತ್ರದ ಮೊದಲ ಝಲಕ್ ರಿಲೀಸ್
ಅಭಿಷೇಕ್ ನಾಮ ನಿರ್ದೇಶನದ ಚಿತ್ರ 'ನಾಗಬಂಧಂ' ಚಿತ್ರದ (Nagabandham Movie) ಫಸ್ಟ್ ಲುಕ್ ಪೋಸ್ಟರ್ ಅನ್ನು ಇಂದು ರಾಣಾ ದಗ್ಗುಬಾಟಿ ಬಿಡುಗಡೆ ಮಾಡಿ, ಇಡೀ ತಂಡಕ್ಕೆ ಶುಭಕೋರಿದ್ದಾರೆ. ಅಭಿಷೇಕ್ ನಾಮಾ ನಿರ್ದೇಶನ ಮಾತ್ರವಲ್ಲದೆ, ಈ ಚಿತ್ರಕ್ಕೆ ಕಥೆ ಮತ್ತು ಚಿತ್ರಕಥೆಯನ್ನೂ ಬರೆದಿದ್ದಾರೆ.
Vishwavani News
January 13, 2025
ಬೆಂಗಳೂರು: ಬಹುನಿರೀಕ್ಷಿತ ಪ್ಯಾನ್-ಇಂಡಿಯಾ ಚಿತ್ರ 'ನಾಗಬಂಧಂ' ನ (Nagabandham Movie) ರುದ್ರ ಪಾತ್ರದಲ್ಲಿ ಯುವ ನಾಯಕ ವಿರಾಟ್ ಕರ್ಣ (Virat Karna) ನಟಿಸುತ್ತಿದ್ದು, ಅದರ ಬಹುನಿರೀಕ್ಷಿತ ಪ್ರಿ- ಲುಕ್ ಕುತೂಹಲ ಕೆರಳಿಸಿದೆ. ವಿಶೇಷ ಏನೆಂದರೆ, ಅಭಿಷೇಕ್ ನಾಮ ನಿರ್ದೇಶನದ ಫಸ್ಟ್ ಲುಕ್ ಪೋಸ್ಟರ್ (First Look Poster) ಅನ್ನು ಇಂದು ರಾಣಾ ದಗ್ಗುಬಾಟಿ (Rana Daggubati) ಬಿಡುಗಡೆ ಮಾಡಿ, ಇಡೀ ತಂಡಕ್ಕೆ ಶುಭಕೋರಿದ್ದಾರೆ. ಅಭಿಷೇಕ್ ನಾಮಾ ನಿರ್ದೇಶನ ಮಾತ್ರವಲ್ಲದೆ, ಈ ಚಿತ್ರಕ್ಕೆ ಕಥೆ ಮತ್ತು ಚಿತ್ರಕಥೆಯನ್ನೂ ಬರೆದಿದ್ದಾರೆ.
ಅಭಿಷೇಕ್ ಪಿಕ್ಚರ್ಸ್ ಸಹಯೋಗದಲ್ಲಿ ಎನ್‌ಐಕೆ ಸ್ಟುಡಿಯೋಸ್ ಬ್ಯಾನರ್‌ನಲ್ಲಿ ಕಿಶೋರ್ ಅನ್ನಪುರೆಡ್ಡಿ ಮತ್ತು ತಾರಕ್ ಸಿನಿಮಾಸ್ ಜಂಟಿಯಾಗಿ ಈ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಲಕ್ಷ್ಮಿ ಇರಾ ಮತ್ತು ದೇವಾಂಶ್ ನಾಮಾ ಈ ಚಿತ್ರವನ್ನು ಪ್ರಸ್ತುತ ಪಡಿಸುತ್ತಿದ್ದಾರೆ. ಈ ಚಿತ್ರದಲ್ಲಿ ತೆಲುಗಿನ ಪೆದ್ದ ಕಾಪು ಚಿತ್ರದ ಮೂಲಕ ಗುರುತಿಸಿಕೊಂಡ ವಿರಾಟ್ ಕರ್ಣ ನಾಯಕನಾಗಿದ್ದು, ಅವರ ರುದ್ರನ ಲುಕ್ ಸದ್ಯ ಸೆನ್ಸೆಷನ್ ಸೃಷ್ಟಿಸುತ್ತಿದೆ.
ಹೇಗಿದೆ ರುದ್ರನ ಫಸ್ಟ್ ಲುಕ್
ಸದ್ಯ ಬಿಡುಗಡೆ ಆಗಿರುವ ನಾಗಬಂಧಂ ಸಿನಿಮಾದ ಫಸ್ಟ್ ಲುಕ್ ಅಕ್ಷರಶಃ ಕುತೂಹಲಭರಿತವಾಗಿದೆ. ಚಿತ್ರದ ನಾಯಕ ವಿರಾಟ್ ಕರ್ಣ, ರುದ್ರ ಪಾತ್ರದ ಉಗ್ರರೂಪ ತೋರಿದ್ದಾರೆ. ಮೊಸಳೆಯ ಬಾಯಿಯನ್ನು ಸೀಳಿ, ರುದ್ರನ ಪೌರುಷ ಅನಾವರಣವಾಗಿದೆ. ಗುಂಗುರು ಕೂದಲು, ಕುರುಚಲು ಗಡ್ಡ, ಹುರಿಗಟ್ಟಿದ ಮೈಕಟ್ಟಿನಲ್ಲಿ ರುದ್ರ ಪಾತ್ರಧಾರಿ ವಿರಾಟ್ ಕರ್ಣ ಖಡಕ್ ಆಗಿ ಕಂಡಿದ್ದಾರೆ. ಶರ್ಟ್‌ಲೆಸ್ ನಿಲುವಿನಲ್ಲಿ ಸಿಕ್ಸ್-ಪ್ಯಾಕ್‌ನಲ್ಲಿಯೂ ಗಮನ ಸೆಳೆದಿದ್ದಾರೆ. ಒಟ್ಟಾರೆ ಈ ಪಾತ್ರಕ್ಕಾಗಿ ಹೆಚ್ಚು ಶ್ರಮವಹಿಸಿರುವುದು ಪೋಸ್ಟರ್‌ನಲ್ಲಿ ಕಂಡು ಬಂದಿದೆ.
ನಾಗಬಂಧಂ ಚಿತ್ರವು ಭಾರತದ ಪ್ರಾಚೀನ ವಿಷ್ಣು ದೇವಾಲಯಗಳ ಗುಪ್ತ ರಹಸ್ಯಗಳ ಸುತ್ತ ಸುತ್ತಲಿದೆ. ಪದ್ಮನಾಭಸ್ವಾಮಿ ಮತ್ತು ಪುರಿ ಜಗನ್ನಾಥ ದೇವಾಲಯಗಳಲ್ಲಿ ಪತ್ತೆಯಾದ ನಿಧಿಯ ಕಾಲ್ಪನಿಕ ಕಥೆ ಇದಾಗಿದ್ದು, ಅಭಿಷೇಕ್ ನಾಮ ಈ ಸಿನಿಮಾದ ಕಥೆ ಬರೆದಿದ್ದಾರೆ. ನಾಗಬಂಧಂ ಭಾರತದಲ್ಲಿನ 108 ವಿಷ್ಣು ದೇವಾಲಯಗಳ ಸುತ್ತಲಿನ ರಹಸ್ಯವನ್ನು ಸಿನಿಮಾ ಮೂಲಕ ತೆರೆದಿಡಲಿದೆಯಂತೆ. ಆ ನಿಧಿಯನ್ನು ಸರ್ಪಗಳು ರಕ್ಷಿಸುತ್ತಿವೆ ಎಂಬ ನಂಬಿಕೆಯ ಹಿನ್ನೆಲೆಯ ಕಥೆಯೂ ಈ ಚಿತ್ರದ್ದಾಗಿರಲಿದೆ.
ಈ ಸುದ್ದಿಯನ್ನೂ ಓದಿ | Sankranti Jewel Fashion 2025: ಸಂಕ್ರಾಂತಿ ಹಬ್ಬಕ್ಕೆ ಬೇಡಿಕೆ ಹೆಚ್ಚಿಸಿಕೊಂಡ ಇಮಿಟೇಷನ್ ಆಭರಣಗಳು!
ನಾಗಬಂಧಂ ಚಿತ್ರದಲ್ಲಿ ನಭಾ ನಟೇಶ್ ಮತ್ತು ಈಶ್ವರ್ಯ ಮೆನನ್ ನಾಯಕಿಯರಾಗಿ ನಟಿಸಿದ್ದಾರೆ ಮತ್ತು ಜಗಪತಿ ಬಾಬು, ಜಯಪ್ರಕಾಶ್, ಮುರಳಿ ಶರ್ಮಾ ಮತ್ತು ಕೆಜಿಎಫ್ ಚಿತ್ರದ ಮೂಲಕ ಖ್ಯಾತಿ ಪಡೆದಿರುವ ಕನ್ನಡದ ನಟ ಅವಿನಾಶ್ ಅಘೋರಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸೌಂದರ್ ರಾಜನ್ ಎಸ್ ಕ್ಯಾಮರಾಮನ್ ಆಗಿದ್ದು, ಅಭೆ ಸಂಗೀತ ನೀಡಿದ್ದಾರೆ. ಕಲ್ಯಾಣ್ ಚಕ್ರವರ್ತಿ ಸಂಭಾಷಣೆ ಬರೆದಿದ್ದು, ಸಂತೋಷ್ ಕಾಮಿರೆಡ್ಡಿ ಸಂಕಲನ ಮಾಡಿದ್ದಾರೆ. ಅಶೋಕ್ ಕುಮಾರ್ ಪ್ರೊಡಕ್ಷನ್ ಡಿಸೈನರ್ ಆಗಿದ್ದಾರೆ. ನಾಗಬಂಧಂ ಒಂದು ಪ್ಯಾನ್ ಇಂಡಿಯಾ ಚಿತ್ರವಾಗಿದ್ದು, 2025ರಲ್ಲಿ ತೆಲುಗು, ಹಿಂದಿ, ತಮಿಳು, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ಏಕಕಾಲದಲ್ಲಿ ಬಿಡುಗಡೆ ಆಗಲಿದೆ.