ಬೆಂಗಳೂರಿನಲ್ಲಿ ಪ್ರತಿಷ್ಠಿತ ಕಂಪನಿಯ ಮಹಿಳಾ ಉದ್ಯೋಗಿ ನಿಗೂಢ ಸಾವು; ಕೊಳೆತ ಸ್ಥಿತಿಯಲ್ಲಿ ಬೆತ್ತಲೆ ಮೃತದೇಹ ಪತ್ತೆ!
Bengaluru Woman Death Case: ಬೆಂಗಳೂರು ನಗರದ ಆಡುಗೋಡಿ ಪೊಲೀಸ್ ಠಾಣೆ ವ್ಯಾಪ್ತಿಯ ಬಾಡಿಗೆ ಮನೆಯಲ್ಲಿ ಮಹಿಳೆ ಮೃತದೇಹ ಪತ್ತೆಯಾಗಿದೆ. ಮೃತ ಮಹಿಳೆ ಮೂಲತಃ ಜಾರ್ಖಂಡ್‌ನ ಧನಬಾದ್ ಸಮೀಪದ ಹಿರಾಪುರ ನಿವಾಸಿ ಎಂದು ತಿಳಿದುಬಂದಿದೆ. ಮನೆಯಿಂದ ಭಾರಿ ದುರ್ನಾತ ಬರುತ್ತಿದ್ದ ಹಿನ್ನೆಲೆಯಲ್ಲಿ ಪರಿಶೀಲನೆ ನಡೆಸಿದಾಗ ಮಹಿಳೆ ಸಾವು ಪ್ರಕರಣ ಬೆಳಕಿಗೆ ಬಂದಿದೆ.
ಮೃತ ಯುವತಿ ಪೂಜಾ ದತ್ತ. -
ಬೆಂಗಳೂರು: ಪ್ರತಿಷ್ಠಿತ ಖಾಸಗಿ ಕಂಪನಿಯೊಂದರ ಮಹಿಳಾ ಉದ್ಯೋಗಿ ನಿಗೂಢವಾಗಿ ಮೃತಪಟ್ಟಿರುವ ಘಟನೆ (Bengaluru Woman Death) ನಗರದ ಆಡುಗೋಡಿಯಲ್ಲಿ ನಡೆದಿದೆ. ಬಾಡಿಗೆ ಮನೆಯಲ್ಲಿ ಅರೆಕೊಳೆತ ರೀತಿಯಲ್ಲಿ ಬೆತ್ತಲೆ ದೇಹ ಪತ್ತೆಯಾಗಿದ್ದು, ಮೃತ ಯುವತಿಯನ್ನು 34 ವರ್ಷದ ಪೂಜಾ ದತ್ತ ಎಂದು ಗುರುತಿಸಲಾಗಿದೆ.
ಪೂಜಾ ದತ್ತ ಅವರು ಮೂಲತಃ ಜಾರ್ಖಂಡ್‌ನ ಧನಬಾದ್ ಸಮೀಪದ ಹಿರಾಪುರ ನಿವಾಸಿಯಾಗಿದ್ದು, ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು ಎನ್ನಲಾಗಿದೆ. ಮನೆಯಿಂದ ಭಾರಿ ದುರ್ನಾತ ಬರುತ್ತಿದ್ದ ಹಿನ್ನೆಲೆಯಲ್ಲಿ ಅನುಮಾನಗೊಂಡ ನೆರೆಹೊರೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಬಂದು ಬಾಗಿಲು ಮುರಿದು ನೋಡಿದಾಗ ಭೀಕರ ದೃಶ್ಯ ಕಣ್ಣಿಗೆ ಬಿದ್ದಿದೆ.
ಪೂಜಾ ದತ್ತ ಅವರ ಮೃತದೇಹ ಸಂಪೂರ್ಣವಾಗಿ ಬೆತ್ತಲೆ ಸ್ಥಿತಿಯಲ್ಲಿ ಮತ್ತು ಅರೆಕೊಳೆತ ಸ್ಥಿತಿಯಲ್ಲಿ ಕಂಡುಬಂದಿದೆ. ಸಾವು ಸಂಭವಿಸಿ ಕನಿಷ್ಠ 2-3 ದಿನಗಳು ಕಳೆದಿರಬಹುದು ಎಂದು ಶಂಕಿಸಲಾಗಿದೆ. ಇದು ಆತ್ಮಹತ್ಯೆಯೋ ಅಥವಾ ಕೊಲೆಯೋ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
ಸ್ಥಳಕ್ಕೆ ಆಡುಗೋಡಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ವರದಿ ಬಂದ ನಂತರ ಸಾವಿಗೆ ನಿಖರ ಕಾರಣ ತಿಳಿಯಲಿದೆ. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.
ಮನೆ ಮಾಲೀಕರು ಹೇಳಿದ್ದೇನು?
ಪೂಜಾ ದತ್ತ ಕಳೆದ ಮೂರು ವರ್ಷಗಳಿಂದ ನಮ್ಮ ಮನೆಯಲ್ಲಿ ಬಾಡಿಗೆಗೆ ಇದ್ದಳು. ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಈಕೆ ಅವಿವಾಹಿತೆಯಾಗಿದ್ದಳು. ಹೆಚ್ಚಾಗಿ ಹಿಂದಿ ಭಾಷೆಯಲ್ಲೇ ಮಾತನಾಡುತ್ತಿದ್ದಳು ಎಂದು ಮಾಲಕಿ ಜಾನಕಮ್ಮ ಹೇಳಿದ್ದಾರೆ. ಪೂಜಾಳನ್ನು ನೋಡಲು ಓರ್ವ ಯುವಕ ಆಗಾಗ ಮನೆಗೆ ಬಂದು ಹೋಗುತ್ತಿದ್ದ. ಆತನೊಂದಿಗೆ ಪೂಜಾ ಸದಾ ಜಗಳವಾಡುತ್ತಿದ್ದಳು. ಆದರೆ ಆ ಜಗಳಕ್ಕೆ ಕಾರಣವೇನು ಎಂಬುದು ಮಾತ್ರ ತಿಳಿಯುತ್ತಿರಲಿಲ್ಲ.
Hassan News: ಅಮ್ಮನ ಜತೆ ನಗುತ್ತಾ ಮಾತನಾಡುತ್ತಿದ್ದಾಗಲೇ ಬ್ರೈನ್ ಸ್ಟ್ರೋಕ್; ಹಾಸನದಲ್ಲಿ ಟೆಕ್ಕಿ ಯುವತಿ ಸಾವು
ಕೊನೆಯ ಬಾರಿಗೆ ನಾನು ಪೂಜಾಳನ್ನು ಕಳೆದ ಗುರುವಾರ ನೋಡಿದ್ದೆ. ಆಕೆ ದಿನಸಿ ಸಾಮಗ್ರಿಗಳನ್ನು ತರಲು ಮೂರನೇ ಮಹಡಿಯಿಂದ ಕೆಳಗಿಳಿದು ಬರುತ್ತಿದ್ದಳು. ಆನಂತರ ಆಕೆ ಕಾಣಿಸಿಕೊಂಡಿರಲಿಲ್ಲ. ಇಂದು ಪಕ್ಕದ ಮನೆಯ ಯುವಕರು ಮನೆಯಿಂದ ಭಾರಿ ದುರ್ನಾತ ಬರುತ್ತಿದೆ ಎಂದು ತಿಳಿಸಿದರು. ತಕ್ಷಣ ಬಾಗಿಲು ಒಡೆದು ನೋಡಿದಾಗ ಪೂಜಾ ಶವ ಕಂಡುಬಂದಿದೆ ಎಂದು ಹೇಳಿದ್ದಾರೆ.