ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಬಂಧನ; ಆಟೋದಲ್ಲಿ ಕರೆದೊಯ್ದ ಪೊಲೀಸರು!
Vatal Nagaraj: ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಅವರನ್ನು ಬಸವೇಶ್ವರನಗರ ಪೊಲೀಸರು ಬಂಧಿಸಿದ್ದಾರೆ. ವಾಟಾಳ್ ನಾಗರಾಜ್ ವಿರುದ್ಧ 42ನೇ ಎಸಿಎಂಎಂ ನ್ಯಾಯಾಲಯ ಅರೆಸ್ಟ್ ವಾರಂಟ್ ಹೊರಡಿಸಿದ ಹಿನ್ನೆಲೆಯಲ್ಲಿ ಅವರ ಬಂಧನ ನಡೆದಿದೆ. ಯಾವುದೇ ಅನುಮತಿ ಪಡೆಯದೆ ಪ್ರತಿಭಟನೆ ಮಾಡಿದ್ದ ಹಿನ್ನಲೆಯಲ್ಲಿ ವಾಟಾಳ್ ನಾಗರಾಜ್ ಮೇಲೆ ಪ್ರಕರಣ ದಾಖಲಿಸಲಾಗಿತ್ತು.
ಸಂಗ್ರಹ ಚಿತ್ರ -
ಬೆಂಗಳೂರು: ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಅವರನ್ನು ಬಸವೇಶ್ವರನಗರ ಪೊಲೀಸರು ಬಂಧಿಸಿದ್ದಾರೆ. ವಾಟಾಳ್ ನಾಗರಾಜ್ (Vatal Nagaraj) ವಿರುದ್ಧ 42ನೇ ಎಸಿಎಂಎಂ ನ್ಯಾಯಾಲಯ ಅರೆಸ್ಟ್ ವಾರಂಟ್ ಹೊರಡಿಸಿದ ಹಿನ್ನೆಲೆಯಲ್ಲಿ ಅವರ ಬಂಧನ ನಡೆದಿದೆ. ಕೊರೊನಾ ಸಂದರ್ಭದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳನ್ನು ರದ್ದುಪಡಿಸಿ ವಿದ್ಯಾರ್ಥಿಗಳನ್ನು ಪಾಸ್ ಮಾಡಬೇಕೆಂದು ಆಗಿನ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರ ನಿವಾಸದ ಮುಂದೆ 2021ರಲ್ಲಿ ನಡೆಸಿದ ಪ್ರತಿಭಟನೆಗೆ ಸಂಬಂಧಿಸಿದ ಪ್ರಕರಣದಲ್ಲಿ ಅವರು ನ್ಯಾಯಾಲಯದ ವಿಚಾರಣೆಗೆ ಹಾಜರಾಗದೇ ಇರುವುದರಿಂದ ಈ ಕ್ರಮ ಕೈಗೊಳ್ಳಲಾಗಿದೆ.
ಯಾವುದೇ ಅನುಮತಿ ಪಡೆಯದೆ ಪ್ರತಿಭಟನೆ ಮಾಡಿದ್ದ ಹಿನ್ನಲೆಯಲ್ಲಿ ವಾಟಾಳ್ ನಾಗರಾಜ್ ಮೇಲೆ ಪ್ರಕರಣ ದಾಖಲಿಸಲಾಗಿತ್ತು. ಕೋರ್ಟ್ ಹಿಯರಿಂಗ್‌ಗಳಿಗೆ ಹಾಜರಾಗದೆ ಇದ್ದ ಕಾರಣ, ನ್ಯಾಯಾಲಯವು ಅವರ ವಿರುದ್ಧ ಅರೆಸ್ಟ್ ವಾರಂಟ್ ಜಾರಿಗೊಳಿಸಿದೆ. ಇದನ್ನು ಜಾರಿಗೊಳಿಸಲು ಬಸವೇಶ್ವರನಗರ ಪೊಲೀಸರು ಅವರ ಮನೆಗೆ ತೆರಳಿದ್ದಾರೆ. ಈ ವೇಳೆಯಲ್ಲಿ ಕೆಲ ಕಾಲ ವಾಗ್ವಾದವೂ ನಡೆದಿದೆ.
ವಾರಂಟ್‌ನ ಸಾಫ್ಟ್ ಕಾಪಿಯನ್ನು ತೋರಿಸಿದಾಗ, ಹಾರ್ಡ್ ಕಾಪಿ ಇಲ್ಲದೆ ನಾನು ನಿಮ್ಮ ಜೊತೆ ಬರುವುದಿಲ್ಲ ಎಂದು ವಾಟಾಳ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ನನ್ನನ್ನು ಬಂಧಿಸಲು ನಿಮ್ಮ ಬಳಿ ಸರಿಯಾದ ವಾರಂಟ್ ಇದೆಯೇ? ಯಾವ ಪ್ರಕರಣದಲ್ಲಿ ಬಂಧಿಸುತ್ತಿದ್ದೀರಿ ಹೇಳಿ ಎಂದು ಪ್ರಶ್ನಿಸಿದರು. ನಾನು ಓಡಿ ಹೋಗಬೇಕೆಂದಿದ್ದರೆ ನಿನ್ನೆನೇ ಹೋಗುತ್ತಿದ್ದೆ. ಆರು ವರ್ಷಗಳ ಹಿಂದೆ ನಾನು ಒಬ್ಬನೇ ಪ್ರತಿಭಟನೆ ನಡೆಸಿದ್ದೆ. ಯಾವುದೇ ಗಲಾಟೆ, ದರೋಡೆ ಮಾಡಿಲ್ಲ. ಕೊರೊನಾ ಸಮಯದಲ್ಲಿ ರಾಜ್ಯದ ಮಕ್ಕಳಿಗೆ ಅನ್ಯಾಯ ಆಗಬಾರದು ಎಂಬ ಕಾರಣಕ್ಕೆ ಹೋರಾಟ ನಡೆಸಿದ್ದೆ ಎಂದು ಪೊಲೀಸರ ವಿರುದ್ಧ ವಾಗ್ದಾಳಿ ನಡೆಸಿದರು.
ಬಿಜೆಪಿ, ಆರ್‌ಎಸ್‌ಎಸ್ ಕುರಿತು ಪ್ರಚೋದನಕಾರಿ ಭಾಷಣ; ಖರ್ಗೆ ಬಂಧನಕ್ಕೆ ಆಗ್ರಹಿಸಿ ಡಿಜಿ-ಐಜಿಪಿಗೆ ದೂರು
ಪೊಲೀಸ್ ವಾಹನದಲ್ಲಿ ಹೋಗುವುದಕ್ಕೆ ನಿರಾಕರಿಸಿದ ಕಾರಣ, ಪೊಲೀಸರು ಆಟೋ ವ್ಯವಸ್ಥೆ ಮಾಡಿ ಅವರನ್ನು ಕೋರ್ಟ್‌ಗೆ ಕರೆದೊಯ್ದರು ಎಂಬ ಮಾಹಿತಿ ಲಭ್ಯವಾಗಿದೆ. ಬಂಧನದ ನಂತರ, ವಾಟಾಳ್ ನಾಗರಾಜ್ ಅವರನ್ನು ಕೆ.ಸಿ. ಜನರಲ್ ಆಸ್ಪತ್ರೆಗೆ ಕರೆದೊಯ್ದು ಆರೋಗ್ಯ ತಪಾಸಣೆ ನಡೆಸಲಾಯಿತು. ಬಳಿಕ ಅವರನ್ನು 42ನೇ ಎಸಿಎಂಎಂ ನ್ಯಾಯಾಲಯದ ಮುಂದೆ ಹಾಜರುಪಡಿಸಲು ಪೊಲೀಸರು ಕ್ರಮ ಕೈಗೊಂಡಿದ್ದಾರೆ.