Self Harming: ಪತ್ನಿಯ ಮನೆಯಲ್ಲಿ ಪತಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ
ಪತ್ನಿ ಮನೆಯಲ್ಲಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿಕೊಂಡು ಪತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಾಗರಭಾವಿಯ ಎನ್ಜಿಎಫ್ ಲೇಔಟ್ನ ಅಪಾರ್ಟ್ಮೆಂಟ್ನಲ್ಲಿ ನಡೆದಿದೆ.
ಬೆಂಗಳೂರು: ಪತ್ನಿಯರ ಕಿರುಕುಳ (harassment) ತಡೆಯಲಾಗದೆ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಪತಿಯರ (Husband) ಸಾಲಿಗೆ ಇನ್ನೊಬ್ಬಾತ ಸೇರಿದ್ದಾನೆ. ಬೆಂಗಳೂರಿನಲ್ಲಿ ಮತ್ತೊಂದು ಇಂಥದೇ ಆತ್ಮಹತ್ಯೆ ಪ್ರಕರಣ ವರದಿಯಾಗಿದ್ದು, ಪತ್ನಿಯ (Wife) ಮನೆಯಲ್ಲಿಯೇ ಪ್ರತಿಯೊಬ್ಬ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು (setting fire) ಆತ್ಮಹತ್ಯೆ (Self Harming) ಮಾಡಿಕೊಂಡಿರುವ ಘಟನೆ ನಡೆದಿದೆ.
ಪತ್ನಿ ಮನೆಯಲ್ಲಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿಕೊಂಡು ಪತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಾಗರಭಾವಿಯ ಎನ್ಜಿಎಫ್ ಲೇಔಟ್ನ ಅಪಾರ್ಟ್ಮೆಂಟ್ನಲ್ಲಿ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯನ್ನು ಮಂಜುನಾಥ್ (39) ಎಂದು ಗುರುತಿಸಲಾಗಿದೆ. ಕ್ಯಾಬ್ ಡ್ರೈವರ್ ಆಗಿದ್ದ ಮಂಜುನಾಥ್ 2013ರಲ್ಲಿ ನಯನಳೊಂದಿಗೆ ಮದುವೆಯಾಗಿದ್ದ. ಇದೀಗ ದಂಪತಿಗಳಿಗೆ 9 ವರ್ಷದ ಮಗ ಕೂಡ ಇದ್ದಾನೆ.
ಆದರೆ ಕಳೆದ ಎರಡು ವರ್ಷಗಳಿಂದ ಇವರಿಬ್ಬರ ಮಧ್ಯ ವೈಮನಸ್ಸು ಉಂಟಾಗಿದೆ. ಹಾಗಾಗಿ 2022ರಲ್ಲಿ ಇಬ್ಬರು ಡೈವೋರ್ಸ್‌ಗಾಗಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಈ ಮಧ್ಯೆ ಹೆಂಡತಿಯ ಬಳಿ ಡೈವೋರ್ಸ್ ಬೇಡ ಎಂದಿದ್ದ ಮಂಜುನಾಥ್, ಮತ್ತೆ ಒಂದಾಗಿ ಬಾಳೋಣ ಎಂದು ಕೇಳಲು ಎನ್ಜಿಎಫ್ ಲೇಔಟ್ನಲ್ಲಿರುವ ಹೆಂಡತಿ ಮನೆಗೆ ಬಂದಿದ್ದ. ಆದರೆ ಇದಕ್ಕೆ ಪತ್ನಿ ನಯನ ನಿರಾಕರಿಸಿದ್ದಾಳೆ.
ನೀನು ನನಗೆ ಸಾಕಷ್ಟು ಹಿಂಸೆ ಕೊಟ್ಟಿದ್ದೀಯ, ನಾನು ನಿನ್ನ ಜೊತೆ ಬರೋದಿಲ್ಲ ಎಂದು ಪತ್ನಿ ನಯನ ಹೇಳಿದ್ದಳು. ಇದರಿಂದ ಮನನೊಂದ ಮಂಜುನಾಥ್ 10:30ರ ಸುಮಾರಿಗೆ ಪೆಟ್ರೋಲ್ ತಂದು ಆಕೆಯ ಮನೆಯಲ್ಲಿಯೆ ಮೈಮೇಲೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಘಟನಾ ಸ್ಥಳಕ್ಕೆ ಜ್ಞಾನಭಾರತಿನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇತ್ತೀಚೆಗೆ ಅತುಲ್ ಸುಭಾಷ್ ಎಂಬ ಸಾಫ್ಟ್‌ವೇರ್ ಇಂಜಿನಿಯರ್, ಪತ್ನಿಯ ಕಿರುಕುಳದ ಬಗ್ಗೆ ಡೆತ್‌ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡದ್ದನ್ನು ಇಲ್ಲಿ ನೆನೆಯಬಹುದು. ತನ್ನ ಸಾವಿಗೆ ಪತ್ನಿ ಹಾಗೂ ಆಕೆಯ ಮನೆಯವರೇ ಕಾರಣ ಎಂದು ಆತ ಬರೆದಿದ್ದ. ಆತನ ಪತ್ನಿಯನ್ನು ಬಂಧಿಸಲಾಗಿದ್ದು, ಜಾಮೀನು ಪಡೆದು ಬಿಡುಗಡೆಯಾಗಿದ್ದಾಳೆ.