ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

MP Basavaraj Bommai: ಷಡಕ್ಷರಿ ಬದುಕಿನ ಬ್ಯಾಲೆನ್ಸ್ ಶೀಟ್ ಅತ್ಯಂತ ಸುಂದರ

ಪಾಶ್ಚಿಮಾತ್ಯ ತತ್ವಜ್ಞಾನಿಗಳಿಗೆ ಇಂದಿಗೂ ಭಾರತ ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಾಗಿಲ್ಲ. ಅವರು ವಿಜ್ಞಾನ ಆಳವಾಗಿ ಅಧ್ಯಯನ ಮಾಡಿದ್ದರೆ, ಭಾರತೀಯರು ಆಧ್ಯಾತ್ಮಕ್ಕೆ ಹೆಚ್ಚಿನ ಮಹತ್ವ ನೀಡಿದ್ದಾರೆ. ತ್ಯಾಗ ಮಾಡುವುದು ನಮ್ಮ ಸಂಸ್ಕೃತಿ ಯಾದರೆ, ಸಂಗ್ರಹಿಸುವುದು ಪಾಶ್ಚಿಮಾತ್ಯರ ಸಂಸ್ಕೃತಿಯಾಗಿದೆ. ಹಲವು ಚಿಂತನೆ ಮತ್ತು ವೈವಿಧ್ಯತೆಗಳನ್ನು ಒಳಗೊಂಡಿರುವ ಭಾರತದಲ್ಲಿ ಜನಿಸಿರುವುದೇ ನಮ್ಮ ಪುಣ್ಯ

ಷಡಕ್ಷರಿ ಬದುಕಿನ ಬ್ಯಾಲೆನ್ಸ್ ಶೀಟ್ ಅತ್ಯಂತ ಸುಂದರ

-

Profile
Ashok Nayak Nov 18, 2026 9:14 AM

ಬೆಂಗಳೂರು: ಎಸ್.ಷಡಕ್ಷರಿ ಅವರ ಬದುಕಿನ ಬ್ಯಾಲೆನ್ಸ್ ಶೀಟ್ ಅತ್ಯಂತ ಸುಂದರವಾಗಿದೆ. ಹಣದ ಹಿಂದೆ ಓಡುವವರು ಅಂಕಿಗಳೊಂದಿಗೆ ಸಂಬಂಧ ಇಟ್ಟುಕೊಂಡರೆ, ಷಡಕ್ಷರಿ ಅವರು ಅಕ್ಷರ ಗಳೊಂದಿಗೆ ಶಾಶ್ವತ ಸಂಬಂಧ ಬೆಳೆಸಿಕೊಂಡಿದ್ದಾರೆ ಎಂದು ಸಂಸದ ಬಸವರಾಜ ಬೊಮ್ಮಾಯಿ(MP Basavaraj Bommai) ಹೇಳಿದರು.

ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು, ಮೈಸೂರು ಹಾಗೂ ರಮಣಶ್ರೀ ಪ್ರತಿಷ್ಠಾನ, ಬೆಂಗಳೂರು ವತಿಯಿಂದ ಬೆಂಗಳೂರಿನಲ್ಲಿ ಆಯೋಜಿಸಿದ್ದ ರಮಣಶ್ರೀ ಶರಣ ಪ್ರಶಸ್ತಿ ಪ್ರದಾನ ಹಾಗೂ ಎಸ್. ಷಡಕ್ಷರಿ ಅವರ ಕ್ಷಣ ಹೊತ್ತು ಅಣಿಮುತ್ತು ಭಾಗ-16 ಪುಸ್ತಕ ಬಿಡುಗಡೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪಾಶ್ಚಿಮಾತ್ಯ ತತ್ವಜ್ಞಾನಿಗಳಿಗೆ ಇಂದಿಗೂ ಭಾರತ ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಾಗಿಲ್ಲ. ಅವರು ವಿಜ್ಞಾನ ಆಳವಾಗಿ ಅಧ್ಯಯನ ಮಾಡಿದ್ದರೆ, ಭಾರತೀಯರು ಆಧ್ಯಾತ್ಮಕ್ಕೆ ಹೆಚ್ಚಿನ ಮಹತ್ವ ನೀಡಿದ್ದಾರೆ. ತ್ಯಾಗ ಮಾಡುವುದು ನಮ್ಮ ಸಂಸ್ಕೃತಿ ಯಾದರೆ, ಸಂಗ್ರಹಿಸುವುದು ಪಾಶ್ಚಿಮಾತ್ಯರ ಸಂಸ್ಕೃತಿಯಾಗಿದೆ. ಹಲವು ಚಿಂತನೆ ಮತ್ತು ವೈವಿಧ್ಯತೆಗಳನ್ನು ಒಳಗೊಂಡಿರುವ ಭಾರತದಲ್ಲಿ ಜನಿಸಿರುವುದೇ ನಮ್ಮ ಪುಣ್ಯ ಎಂದರು.

ಅಲೆಕ್ಸಾಂಡರ್‌ನ ಗುರು ಅರಿಸ್ಟಾಟಲ್ ಭಾರತವನ್ನು ಗೆದ್ದರೆ ಜಗತ್ತನ್ನೇ ಗೆದ್ದಂತೆ ಎಂದು ಹೇಳಿದ್ದ. ಭಾರತಕ್ಕೆ ಬಂದ ತತ್ವಜ್ಞಾನಿಯೊಬ್ಬ ಇಲ್ಲಿನ ಸಂತರು ಮತ್ತು ಪಾಶ್ಚಿಮಾತ್ಯರ ಜೀವನದ ನಡುವಿನ ವ್ಯತ್ಯಾಸ ಪ್ರಶ್ನಿಸಿದಾಗ, ಜಗತ್ತನ್ನೇ ಗೆಲ್ಲುವ ಹಂಬಲ ಪಾಶ್ಚಿಮಾತ್ಯರದ್ದಾದರೆ, ತಾವು ಇರುವುದರ ತೃಪ್ತರಾಗಿರುವುದು ಭಾರತೀಯರ ತತ್ವಜ್ಞಾನ ಎಂದು ಸಂತರು ಉತ್ತರಿಸಿದ್ದರು. ಇದು ನಮ್ಮ ಸಂಸ್ಕೃತಿಯ ಹಿರಿಮೆ ತೋರಿಸುತ್ತದೆ ಎಂದರು.

ಇದನ್ನೂ ಓದಿ: Basavaraj Bommai: ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಸುಧಾಕರ್ ಕೊಡುಗೆ ಅಪಾರ: ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಕರ್ತವ್ಯವನ್ನು ಕಾಯಕವನ್ನಾಗಿಸಿಕೊಂಡ ಷಡಕ್ಷರಿ: ನಮ್ಮ ಬಳಿ ಏನಿದೆ ಎಂಬುದು ನಾಗರಿಕತೆ ಯಾದರೆ, ನಾವೇನಾಗಿದ್ದೇವೆ ಎಂಬುದು ಸಂಸ್ಕೃತಿ. ಕುತೂಹಲ ಮತ್ತು ಮುಗ್ಧತೆ ಮಕ್ಕಳಲ್ಲಿ ಮಾತ್ರ ಕಾಣುವ ವಿಶೇಷ ಗುಣಗಳು. ಹುಟ್ಟಿನಿಂದ ಬಂದ ಮುಗ್ಧತೆ ಜೀವನದುದ್ದಕ್ಕೂ ಉಳಿಸಿಕೊಳ್ಳುವುದೇ ನಿಜವಾದ ಸಾಧನೆ. ಈ ಗುಣ ಷಡಕ್ಷರಿ ಅವರಲ್ಲಿ ಕಾಣಬಹುದು. ನಿರಂತರವಾಗಿ ಅಣಿಮುತ್ತು ಕೃತಿಗಳನ್ನು ರಚಿಸುತ್ತಿರುವ ಅವರನ್ನು ‘ಸದಾಕ್ಷರಿ’ ಎಂದು ಕರೆಯಬಹುದು. ಕರ್ತವ್ಯದ ಫಲ ಇತರರಿಗೆ ಹಂಚಿದಾಗ ಅದು ಕಾಯಕವಾಗುತ್ತದೆ. ಷಡಕ್ಷರಿ ಅವರು ತಮ್ಮ ಕರ್ತವ್ಯ ಕಾಯಕವನ್ನಾಗಿ ಪರಿವರ್ತಿಸಿಕೊಂಡಿದ್ದಾರೆ. ಅವರ ಹಾಸ್ಯಪ್ರಜ್ಞೆ ಮತ್ತು ಬರವಣಿಗೆಯ ಕ್ರಿಯಾಶೀಲತೆ ವಯಸ್ಸಿನ ಅರಿವನ್ನೇ ಮೂಡಿಸುವುದಿಲ್ಲ ಎಂದರು.

ವಿಕಸಿತ ಭಾರತಕ್ಕೆ ಕೈಜೋಡಿಸಬೇಕು: ವಿ.ಸೋಮಣ್ಣ

ಕೇಂದ್ರ ಜಲಶಕ್ತಿ ಹಾಗೂ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ(V Somanna) ಮಾತನಾಡಿ, 2047ರ ವೇಳೆಗೆ ಭಾರತ ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ರೂಪಿಸುವ ಪ್ರಧಾನಿ ನರೇಂದ್ರ ಮೋದಿ(Prime Minister Narendra Modi) ಅವರ ದೂರದೃಷ್ಟಿಯ ಕನಸನ್ನು ನನಸಾಗಿಸಲು ಪ್ರತಿಯೊಬ್ಬರೂ ಕೈಜೋಡಿಸಬೇಕು. ದೇಶದ ಇತಿಹಾಸ, ಸಂಸ್ಕೃತಿ, ಸಾಧನೆ ಹಾಗೂ ಅಭಿವೃದ್ಧಿಯ ಹಾದಿಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವಲ್ಲಿ ಲೇಖಕರು ಮತ್ತು ಪತ್ರಕರ್ತರ ಪಾತ್ರ ಮಹತ್ವzಗಿದೆ. ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಪುಸ್ತಕಗಳು ಜನರಿಗೆ ಸ್ಪೂರ್ತಿಯಾಗುವುದರ ಜತೆಗೆ ದೇಶದ ಪ್ರಗತಿಗೂ ಪೂರಕವಾಗುತ್ತವೆ ಎಂದರು.

ಪುಸ್ತಕದ ಇಂಗ್ಲಿಷ್ ಮತ್ತು ಹಿಂದಿ ಆವೃತ್ತಿ ಒಂದು ಸಾವಿರ ಪ್ರತಿ ಪ್ರಕಟಿಸಿ

ದೇಶದ ಭವಿಷ್ಯ ರೂಪಿಸುವಲ್ಲಿ ಯುವಜನರು, ಬುದ್ಧಿಜೀವಿಗಳು, ಸಾಹಿತಿಗಳು ಹಾಗೂ ಮಾಧ್ಯಮ ಗಳ ಜವಾಬ್ದಾರಿ ದೊಡ್ಡದಿದೆ. ದೇಶದ ಇತಿಹಾಸ ಮತ್ತು ವ್ಯವಸ್ಥೆಯ ಬಗ್ಗೆ ಅರಿವು ಮೂಡಿಸುವ ಮೂಲಕ ಮುಂದಿನ ಪೀಳಿಗೆ ಸರಿಯಾದ ದಾರಿಯಲ್ಲಿ ಮುನ್ನಡೆಸಬೇಕು. ಎಸ್. ಷಡಕ್ಷರಿ ಅವರ ಕ್ಷಣ ಹೊತ್ತು ಅಣಿಮುತ್ತು ಭಾಗ-16 ಪುಸ್ತಕದಲ್ಲಿರುವ ಮಹತ್ವದ ವಿಚಾರಗಳು ಹೆಚ್ಚಿನ ಜನರನ್ನು ತಲುಪಬೇಕು.

ಈ ಹಿನ್ನೆಲೆಯಲ್ಲಿ ಪುಸ್ತಕದ ಇಂಗ್ಲಿಷ್ ಮತ್ತು ಹಿಂದಿ ಆವೃತ್ತಿಗಳನ್ನು ತಲಾ ಒಂದು ಸಾವಿರ ಪ್ರತಿಗಳಂತೆ ಪ್ರಕಟಿಸುವಂತೆ ಕೇಂದ್ರ ರಾಜ್ಯ ಸಚಿವ ವಿ.ಸೋಮಣ್ಣ ವಿಶ್ವವಾಣಿ ಸಮೂಹ ಸಂಸ್ಥೆ ಸಂಪಾದಕ ವಿಶ್ವೇಶ್ವರ ಭಟ್(Vishweshwar Bhat) ಅವರಿಗೆ ಮನವಿ ಮಾಡಿದರು.

ಶರಣ ಸಾಹಿತ್ಯಕ್ಕೆ ಲೋಕಕಲ್ಯಾಣದ ಆಶಯ ಶರಣ ಸಾಹಿತ್ಯ ಕೇವಲ ಆತ್ಮದ ವಿಕಾಸ ಅಥವಾ ಆತ್ಮಕಲ್ಯಾಣಕ್ಕೆ ಸೀಮಿತವಾಗಿರದೆ, ಲೋಕದ ವಿಕಾಸ ಮತ್ತು ಲೋಕಕಲ್ಯಾಣದ ಆಶಯ ಹೊಂದಿದೆ. 12ನೇ ಶತಮಾನದಲ್ಲಿ ಶರಣರು ಸಾಹಿತ್ಯಿಕ ಕ್ರಾಂತಿಯ ಮೂಲಕ ಸಮಗ್ರ ಸಾಮಾಜಿಕ ಪರಿವರ್ತನೆಗೆ ನಾಂದಿ ಹಾಡಿದರು. ಶರಣರು ಸಮಾಜಕ್ಕೆ ಕಾಯಕ ಮತ್ತು ದಾಸೋಹದ ಪರಿಕಲ್ಪನೆ ನೀಡಿದ್ದಾರೆ. ಕಾಯಕ ಸತ್ಯಶುದ್ಧವಾಗಿರಬೇಕು, ಬೆವರಿನ ಮತ್ತು ಶ್ರಮದ ಸಂಸ್ಕೃತಿಯಾಗಿರಬೇಕು. ಶರಣ ಸಾಹಿತ್ಯ ಪರಿಷತ್ತು ಈವರೆಗೆ 14 ಅಖಿಲ ಭಾರತ ಶರಣ ಸಾಹಿತ್ಯ ಸಮ್ಮೇಳನ ನಡೆಸಿದ್ದು, ನೂರಾರು ಮೌಲಿಕ ಕೃತಿ ಪ್ರಕಟಿಸಿದೆ. ಹೆಚ್ಚಿನ ಸಂಖ್ಯೆಯಲ್ಲಿ ಜನರು ಪರಿಷತ್ತಿನ ಸದಸ್ಯರಾಗುವ ಮೂಲಕ ಶರಣ ಸಾಹಿತ್ಯದ ಪ್ರಸಾರಕ್ಕೆ ಕೈಜೋಡಿಸಬೇಕು ಎಂದು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಸಿ. ಸೋಮಶೇಖರ್ ಹೇಳಿದರು.

ಯಾರ್ಯಾರಿಗೆ ರಮಣಶ್ರೀ ಪ್ರಶಸ್ತಿ?

ರಮಣಶ್ರೀ ಶರಣ ಜೀವಮಾನ ಸಾಧನೆ ಬೀದರ್ ಡಾ.ಅಕ್ಕ ಗಂಗಾಂಬಿಕಾಗೆ ಪ್ರದಾನ, ರಮಣಶ್ರೀ ಶರಣ ಹಿರಿಯ ಶ್ರೇಣಿಯಲ್ಲಿ ಹೊಸಪೇಟೆಯ ಡಾ.ಕೆ.ರವೀಂದ್ರನಾಥ, ಗದಗದ ಡಾ. ರಾಜೇಂದ್ರ ಎಸ್. ಗಡಾದ, ಪಂ. ಕೈವಲ್ಯ ಕುಮಾರ್ ಗುರವ, ಶ್ರೀ ಸಿದ್ಧಲಿಂಗೇಶ್ವರ ಪ್ರಕಾಶನ ಹಾಗೂ ಬಸವರಾಜ್ ಗುರಪ್ಪ ಕೊನೇಕ ಪ್ರಶಸ್ತಿ ಪ್ರದಾನ, ರಮಣಶ್ರೀ ಶರಣ ಉತ್ತೇಜನ ಪ್ರಶಸ್ತಿಗೆ ಮಂಡ್ಯದ ಡಾ. ಕೆ.ಎಂ. ವಸುಂಧರಾ, ಮೈಸೂರಿನ ನಗರ್ಲೆ ಶಿವಕುಮಾರ, ಬೆಂಗಳೂರಿನ ರಾಜೇಶ್ವರಿ ಸಾದರ, ಕವಿತಾ ಸಾದರ, ಧಾರವಾಡದ ವಿಜಯಲಕ್ಷ್ಮಿ ಪೂಜೇರ, ಶರಣು ವಿಶ್ವವಚನ ಫೌಂಡೇಷನ್ ಹಾಗೂ ಮೈಸೂರಿನ ಸಿ.ಎಸ್. ಕುಮಾರಸ್ವಾಮಿ ಪ್ರಶಸ್ತಿ ಪ್ರದಾನ ಮಾಡಲಾಯಿತು.

image

ಯಶಸ್ಸು ಕಂಡವರಿಗೂ ಸಾಧಕರಿಗೂ ವ್ಯತ್ಯಾಸವಿದೆ. ಷಡಕ್ಷರಿ ಸಾಧಕರ ಸಾಲಿನಲ್ಲಿ ಇದ್ದಾರೆ. ಸಾಧಕರು ಇಡೀ ಮನುಕುಲದ ಒಳಿತಿಗಾಗಿ ಬದುಕುತ್ತಾರೆ. ನಿಜವಾದ ಸಾಧಕ ಸಾವಿನ ನಂತರವೂ ತನ್ನ ಕಾರ್ಯ ಮತ್ತು ಚಿಂತನೆಗಳ ಮೂಲಕ ಜೀವಂತವಾಗಿರುತ್ತಾನೆ.

- ಬಸವರಾಜ ಬೊಮ್ಮಾಯಿ, ಸಂಸದ
image

ಕುಟುಂಬ ವ್ಯವಸ್ಥೆ, ಜೀವನ ಮೌಲ್ಯಗಳು ಹಾಗೂ ವೈಯಕ್ತಿಕ ಜವಾಬ್ದಾರಿ ಹೇಗೆ ನಿಭಾಯಿಸಬೇಕು ಎಂಬುದಕ್ಕೆ ಷಡಕ್ಷರಿ ಅವರ ಜೀವನ ಮತ್ತು ಸಾಧನೆ ಮಾದರಿ.

- ವಿ. ಸೋಮಣ್ಣ, ರೈಲ್ವೆ ಖಾತೆ ರಾಜ್ಯ ಸಚಿವ
image

ಕನ್ನಡ ಪುಸ್ತಕಗಳು ಹೆಚ್ಚು ಮಾರಾಟವಾಗುವುದಿಲ್ಲ, ಓದುಗರ ಸಂಖ್ಯೆ ಕಡಿಮೆಯಾಗಿದೆ ಎಂಬ ಮಾತುಗಳ ನಡುವೆಯೇ ಎಸ್.ಷಡಕ್ಷರಿ ಅವರ ‘ಕ್ಷಣ ಹೊತ್ತು ಆಣಿಮುತ್ತು’ ಪುಸ್ತಕ ಸರಣಿ ನಾಲ್ಕು ಲಕ್ಷ ಪ್ರತಿಗಳ ಮಾರಾಟದ ಮೂಲಕ ಕನ್ನಡ ಸಾಹಿತ್ಯ ಲೋಕದಲ್ಲಿ ಹೊಸ ದಾಖಲೆ ನಿರ್ಮಿಸಿದೆ.

- ರವಿ ಹೆಗಡೆ, ಕನ್ನಡಪ್ರಭ ಸಂಪಾದಕ
image

ಅರ್ಹತೆ, ಯೋಗ್ಯತೆ ಮತ್ತು ಸಾಧನೆಯನ್ನೇ ಮಾನದಂಡವಾಗಿಟ್ಟುಕೊಂಡು ರಮಣಶ್ರೀ ಶರಣ ಪ್ರಶಸ್ತಿಗಳಿಗೆ ಪುರಸ್ಕೃತರನ್ನು ಆಯ್ಕೆ ಮಾಡಲಾ ಗುತ್ತಿದೆ. ಯಾವುದೇ ಜಾತಿ, ಧರ್ಮ ಅಥವಾ ಪ್ರಾದೇಶಿಕ ಒಲವುಗಳಿಗೆ ಅವಕಾಶ ನೀಡದೆ ಜಾತ್ಯತೀತವಾಗಿ, ಪಾರದರ್ಶಕವಾಗಿ ಮತ್ತು ಪ್ರಾಮಾಣಿಕವಾಗಿ ಆಯ್ಕೆ ಪ್ರಕ್ರಿಯೆ ನಡೆಸಲಾಗಿದೆ.

- ಡಾ.ಮನು ಬಳಿಗಾರ್, ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ
image

ಇಂದಿನ ದಿನಗಳಲ್ಲಿ ಮನುಷ್ಯನ ಗಮನ ಕೇಂದ್ರೀಕರಿಸುವ ಅವಧಿ ಕಡಿಮೆಯಾಗುತ್ತಿದೆ. ಹೊಸ ವಿಚಾರ ಗಳತ್ತ ಆಸಕ್ತಿ ಹೆಚ್ಚಾಗಿದೆ. ಆದ್ದರಿಂದ ಸಾಹಿತ್ಯವನ್ನು ಓದುವಾಗ ಅದರಲ್ಲಿನ ವಿಚಾರ ಗಳನ್ನು ಗ್ರಹಿಸಿ, ನಮ್ಮ ಬದುಕಿಗೆ ಯಾವುದು ಸೂಕ್ತವೋ ಅದನ್ನು ಅಳವಡಿಸಿಕೊಳ್ಳಬೇಕು. ಎಲ್ಲಕ್ಕಿಂತ ಮುಖ್ಯವಾಗಿ ಮನಸ್ಸಿನ ನೆಮ್ಮದಿ ಕಾಪಾಡಿಕೊಳ್ಳಬೇಕು. ಮನಸ್ಸು ಕೆಡದಂತೆ ನೋಡಿಕೊಳ್ಳುವುದು ಪ್ರತಿಯೊಬ್ಬರ ಕರ್ತವ್ಯವಾಗಬೇಕು.

- ಸ್ವಾಮಿ ಆದಿತ್ಯಾನಂದಜೀ, ಪ್ರಮುಖ ಆಚಾರ್ಯ ಚಿನ್ಮಯ ಮಿಷನ್ ಮಂಡ್ಯ