SSLC ಪ್ರಶ್ನೆ ಪತ್ರಿಕೆ ಸೋರಿಕೆ, ಎಚ್ಚೆತ್ತ ಶಿಕ್ಷಣ ಇಲಾಖೆ; ಪರೀಕ್ಷೆಗೆ ಹೊಸ ಗೈಡ್ಲೈನ್ಸ್ ಪ್ರಕಟ
ಮೊದಲ ಎಸ್‌ಎಸ್‌ಎಲ್‌ಸಿ ಪೂರ್ವಭಾವಿ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆಯಾದ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು, ಎರಡನೇ ಪೂರ್ವಭಾವಿ ಪರೀಕ್ಷೆಯ ವೇಳಾಪಟ್ಟಿಯಲ್ಲಿ ಬದಲಾವಣೆ ತಂದಿದೆ. ಪರೀಕ್ಷೆ ನಡೆಯುವ ದಿನದಂದು ಬೆಳಿಗ್ಗೆ 9:30 ಕ್ಕೆ ಮುಖ್ಯೋಪಾಧ್ಯಾಯರು ಶಾಲಾ ಲಾಗಿನ್ ಮೂಲಕ ಪ್ರಶ್ನೆ ಪತ್ರಿಕೆಯನ್ನು ಡೌನ್‌ಲೋಡ್ ಮಾಡಿಕೊಳ್ಳಬೇಕು.
ಸಂಗ್ರಹ ಚಿತ್ರ -
ಬೆಂಗಳೂರು: ಮೊದಲ ಎಸ್‌ಎಸ್‌ಎಲ್‌ಸಿ ಪೂರ್ವಭಾವಿ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆಯಾದ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು, ಎರಡನೇ ಪೂರ್ವಭಾವಿ ಪರೀಕ್ಷೆಯ (SSLC Preparatory Exam) ವೇಳಾಪಟ್ಟಿಯಲ್ಲಿ ಬದಲಾವಣೆ ತಂದಿದೆ. ಜನವರಿ 27 ರಿಂದ ಫೆಬ್ರವರಿ 2 ರವರೆಗೆ ನಡೆಯಲಿರುವ ಎರಡನೇ ಪೂರ್ವಭಾವಿ ಪರೀಕ್ಷೆಯು ಈಗ ಬೆಳಿಗ್ಗೆ 10 ಗಂಟೆಯ ಬದಲಿಗೆ 11 ಗಂಟೆಗೆ ಪ್ರಾರಂಭವಾಗಲಿದೆ. ಇದೀಗ ಕೆಲ ನಿಯಮಗಳನ್ನು ತರಲಾಗಿದ್ದು, ವಿದ್ಯಾರ್ಥಿಗಳು ಬೆಳಿಗ್ಗೆ 9 ಗಂಟೆಗೇ ತಮ್ಮ ತರಗತಿಗಳಲ್ಲಿ ಹಾಜರಿರಬೇಕು.
ಪರೀಕ್ಷೆ ನಡೆಯುವ ದಿನದಂದು ಬೆಳಿಗ್ಗೆ 9:30 ಕ್ಕೆ ಮುಖ್ಯೋಪಾಧ್ಯಾಯರು ಶಾಲಾ ಲಾಗಿನ್ ಮೂಲಕ ಪ್ರಶ್ನೆ ಪತ್ರಿಕೆಯನ್ನು ಡೌನ್‌ಲೋಡ್ ಮಾಡಿಕೊಳ್ಳಬೇಕು. ಬೆಳಿಗ್ಗೆ 10 ಗಂಟೆಯೊಳಗೆ ಪ್ರಶ್ನೆ ಪತ್ರಿಕೆಗಳ ಮುದ್ರಣ ಕಾರ್ಯ ಪೂರ್ಣಗೊಳ್ಳಬೇಕು. 10:30 ರ ವೇಳೆಗೆ ಪ್ರಶ್ನೆ ಪತ್ರಿಕೆಗಳು ವಿತರಣೆಗೆ ಸಿದ್ಧವಿರಬೇಕು ಮತ್ತು 10:50 ಕ್ಕೆ ಪರೀಕ್ಷಾ ಕೊಠಡಿಗಳನ್ನು ತಲುಪಬೇಕು. ಪರೀಕ್ಷೆ ಆರಂಭಕ್ಕೂ ಮುನ್ನ ಅಂದರೆ ಬೆಳಿಗ್ಗೆ 9 ರಿಂದ 10:30 ರವರೆಗೆ ಶಾಲೆಯಲ್ಲಿ ಸಾಮಾನ್ಯ ತರಗತಿಗಳು ನಡೆಸಬೇಕು ಎಂದು ಎಂದು ಇಲಾಖೆ ತಿಳಿಸಿದೆ.
ಪ್ರಶ್ನೆ ಪತ್ರಿಕೆ ಸೋರಿಕೆಯಾದಲ್ಲಿ ಅದರ ಸಂಪೂರ್ಣ ಹೊಣೆಯನ್ನು ಶಾಲೆಯ ಮುಖ್ಯೋಪಾಧ್ಯಾಯರು, ನೋಡಲ್ ಶಿಕ್ಷಕರು, ಕ್ಷೇತ್ರ ಶಿಕ್ಷಣಾಧಿಕಾರಿಗಳು (BEO) ಮತ್ತು ಜಿಲ್ಲಾ ಉಪನಿರ್ದೇಶಕರು (DDPI) ಹೊರಬೇಕಾಗುತ್ತದೆ. ಈ ಕುರಿತು ಈಗಾಗಲೇ ಇಲಾಖೆ ಸುತ್ತೋಲೆಯನ್ನು ಹೊರಡಿಸಿದೆ. ಪರೀಕ್ಷೆ ವೇಳೆ ವಿದ್ಯಾರ್ಥಿಗಳು ಮೊಬೈಲ್ ತರುವಂತಿಲ್ಲ. ಜೊತೆಗೆ ಶಿಕ್ಷಕರು ಸಹ ಪರೀಕ್ಷೆ ವೇಳೆ ಮೊಬೈಲ್ ಬಳಸುವಂತಿಲ್ಲ. ಇನ್ನು ಪ್ರಶ್ನೆಪತ್ರಿಕೆ ಸೋರಿಕೆ, ಅವ್ಯಹಾರ ನಡೆಸದಂತೆ ಖಡಕ್ ಸೂಚನೆ ನೀಡಲಾಗಿದೆ.
ಬಡ ಕುಟುಂಬಗಳಿಂದ ಬಂದ ಹಾಸ್ಟೆಲ್ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ತಮ್ಮ ಭವಿಷ್ಯ ರೂಪಿಸಿಕೊಳ್ಳುವ ಅವಕಾಶ
ಪ್ರಶ್ನೆ ಪತ್ರಿಕೆ ಲೀಕ್ ಪ್ರಕರಣ
ಕಳೆದ ವಾರ ನಡೆದ ರಾಜ್ಯಮಟ್ಟದ ಪೂರ್ವಭಾವಿ ಪರೀಕ್ಷೆಯಲ್ಲಿ ಜನವರಿ 6ರಂದು ನಡೆದ ಗಣಿತ ಪರೀಕ್ಷೆ ಪ್ರಶ್ನೆಪತ್ರಿಕೆ ಲೀಕ್ ಮಾಡಲಾಗಿತ್ತು. ಶಿವಮೊಗ್ಗ ಹಾಗೂ ಕಲಬುರಗಿಯಲ್ಲಿ ಪ್ರಶ್ನೆಪತ್ರಿಕೆ ವೈರಲ್ ಮಾಡಲಾಗಿತ್ತು. ಪ್ರಶ್ನೆ ಪತ್ರಿಕೆ ಸೋರಿಕೆ ಕೃತ್ಯವನ್ನು ಹಲವು ಶಾಲೆಗಳು ಎಸಗಿವೆ. ಆದರೆ ಇದುವರೆಗೆ ಆರು ಶಿಕ್ಷಕರು ಮಾತ್ರ ಪತ್ತೆಯಾಗಿದ್ದಾರೆ. ಪರೀಕ್ಷೆಗೂ ಮೂರು ಗಂಟೆಗಳಿಗೂ ಮುನ್ನ ಪ್ರಶ್ನೆ ಪತ್ರಿಕೆಗಳ ಫೋಟೋ ಪ್ರತಿಯನ್ನು ವಿದ್ಯಾರ್ಥಿಗಳಿಗೆ ಹಂಚಿಕೆ ಮಾಡಿದ್ದರು. ಇನ್‌ಸ್ಟಾಗ್ರಾಂ ಹಾಗೂ ಟೆಲಿಗ್ರಾಂ ಖಾತೆಗಳ ಮಾಹಿತಿ ಆಧರಿಸಿ ರಾಮನಗರ, ಉಡುಪಿ, ಶಿವಮೊಗ್ಗ ಹಾಗೂ ತುಮಕೂರು ಸೇರಿದಂತೆ 10 ವಿದ್ಯಾರ್ಥಿಗಳು ಸಿಕ್ಕಿಬಿದ್ದಿದ್ದರು.