ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಪತ್ರಕರ್ತರಿಗೆ ಬಸ್ ಪಾಸ್, ಹೆಲ್ತ್ ಸ್ಕೀಂ ಜಾರಿಗೊಳಿಸಲು ಕ್ರಮ: ಕೆ.ವಿ.ಪ್ರಭಾಕರ್ ಭರವಸೆ

KUWJ Media Dialogue: ಪತ್ರಕರ್ತ ಸಮುದಾಯಕ್ಕೆ, ಪತ್ರಿಕಾ ವಿತರಕ ಸಮುದಾಯಕ್ಕೆ ನೆರವಾಗುವ ಜತೆಗೆ ನೂರಾರು ರೀತಿಯ ನೆರವು ಸರ್ಕಾರದಿಂದ ಒದಗಿಸಲಾಗಿದೆ. ಪತ್ರಕರ್ತರ ಸಂಘ ಮತ್ತು ಪತ್ರಕರ್ತ ಸಮುದಾಯ ಅವರ ಒತ್ತಡದಿಂದಲೇ ರಾಜ್ಯದಲ್ಲಿ 'ಜಾಹೀರಾತು ನೀತಿ' ತರಲಾಗಿದೆ ಎಂದು ಸಿಎಂ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ತಿಳಿಸಿದ್ದಾರೆ.

ಪತ್ರಕರ್ತರಿಗೆ ಬಸ್ ಪಾಸ್, ಹೆಲ್ತ್ ಸ್ಕೀಂ ಜಾರಿಗೆ ಕ್ರಮ: ಕೆ.ವಿ.ಪ್ರಭಾಕರ್

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ಸಿಎಂ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್‌ ಅವರಿಗೆ ಸನ್ಮಾನ. -

Prabhakara R
Prabhakara R May 22, 2026 5:59 PM

ಬೆಂಗಳೂರು: ಪತ್ರಕರ್ತರಿಗೆ ಉಚಿತ ಬಸ್ ಪಾಸ್, ಹೆಲ್ತ್ ಸ್ಕೀಂ ಜಾರಿಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ (K.V. Prabhakar) ಭರವಸೆ ನೀಡಿದರು. ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾಗಿ ಮೂರು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (ಕೆಯುಡಬ್ಲ್ಯೂಜೆ )ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಬಳಿಕ 'ಮಾಧ್ಯಮ-ಸಂವಾದ'ದಲ್ಲಿ ಮಾತನಾಡಿದರು.

ಕಠಿಣ ಷರತ್ತುಗಳು ವಾಪಸ್‌

ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್ ಪಾಸ್ ನೀಡಲು ವಿಧಿಸಿರುವ ಕಠಿಣವಾದ ಎರಡು ಷರತ್ತುಗಳನ್ನು ಸಡಿಲಗೊಳಿಸಲು ಸಭೆ ಮಾಡಿ ತೀರ್ಮಾನಿಸಲಾಗಿದೆ. ಈ ಬಗ್ಗೆ ವಾರದಲ್ಲಿ ಆದೇಶ ಹೊರಡಿಸಲಾಗುವುದು. ಇದರಿಂದ ಆರು ಸಾವಿರಕ್ಕೂ ಹೆಚ್ಚಿನ ಪತ್ರಕರ್ತರಿಗೆ ಸವಲತ್ತು ಸಿಗುವ ಸಾಧ್ಯತೆಗಳಿವೆ ಎಂದರು.

ಪತ್ರಕರ್ತರ ಸಂಘ ಮತ್ತು ಪತ್ರಕರ್ತ ಸಮುದಾಯ ಅವರ ಒತ್ತಡದಿಂದಲೇ ರಾಜ್ಯದಲ್ಲಿ 'ಜಾಹೀರಾತು ನೀತಿ' ತರಲಾಗಿದೆ. ವೃತ್ತಿಪರವಾಗಿ ಕಷ್ಟಪಟ್ಟು ಪತ್ರಿಕೆ ಮಾಡುವವರಿಗೆ ನೆರವಾಗಬೇಕು ಎನ್ನುವ ಕಾಳಜಿ ಜಾಹೀರಾತು ನೀತಿಯ ಹಿಂದಿದೆ. ಜಾಹೀರಾತು ದರ ಪರಿಷ್ಕರಣೆ ಕೂಡ ಚರ್ಚೆಯಲ್ಲಿದೆ ಎಂದರು.

ಜಾಹೀರಾತು ನೀಡಿಕೆಯಲ್ಲಿನ ತಾರತಮ್ಯ ನಿವಾರಣೆಗೆ ಕ್ರಮ

ಪತ್ರಿಕೆಗಳಿಗೆ ಜಾಹೀರಾತು ನೀಡುವ ವಿಚಾರದಲ್ಲಿ ಕೆಲವು ಸಮುದಾಯಗಳಿಗೆ ಮಾತ್ರ ಕೆನೆ ಪದರದ ಮಿತಿ ಹಾಕಿದ್ದು, ಒಂದು ಸಮುದಾಯಕ್ಕೆ ಮಾತ್ರ ಕೆನೆಪದರ ಇಲ್ಲದಿರುವುದರಿಂದ ಬಹುತೇಕ ಸಮುದಾಯಗಳ ಮಾಲೀಕರು, ಸಂಪಾದಕರುಗಳು ವಿಪರೀತ ನಷ್ಟ ಅನುಭವಿಸಿದ್ದಾರೆ ಎನ್ನುವ ಪ್ರಶ್ನೆಗೆ ಉತ್ತರಿಸಿ, ಲೋಪಗಳ ಬಗ್ಗೆ ಸಭೆ ನಡೆಸಿ ಚರ್ಚಿಸಲಾಗಿದೆ. ಜಾಹೀರಾತು ನೀತಿಯಲ್ಲಿ ಬಹುತೇಕ ಸಮಸ್ಯೆಗಳು ಬಗೆಹರಿದಿವೆ ಎಂದರು.

ವೃತ್ತಿಪರವಾಗಿ, ನಿಯಮಿತವಾಗಿ ಪ್ರಕಟವಾಗುವ ಸ್ಥಳೀಯ ಪತ್ರಿಕೆಗಳು ಮುಖ್ಯಮಂತ್ರಿಗಳ ಮೊದಲ ಆದ್ಯತೆಯಾಗಿದೆ. ಸ್ಥಳೀಯ ಮತ್ತು ಸಣ್ಣ ಪತ್ರಿಕೆಗಳಿಗೆ ಜಾಹೀರಾತಿನಲ್ಲಿ ತೊಂದರೆ ಆಗಬಾರದು ಎನ್ನುವ ನಿಲುವು ಮುಖ್ಯಮಂತ್ರಿಗಳದ್ದೂ ಆಗಿದೆ, ನನ್ನದೂ ಆಗಿದೆ ಎಂದರು.

ಮಾಧ್ಯಮ ಸ್ವಾತಂತ್ರ್ಯಕ್ಕೆ ಸಿಎಂ ಧಕ್ಕೆ ತಂದಿಲ್ಲ

ಮಾಧ್ಯಮ‌ ಸಲಹೆಗಾರ ಹೊಣೆಗಾರಿಕೆ ಹೂವಿನ‌ ಹಾದಿ ಅಲ್ಲ, ಮುಳ್ಳಿನ ಹಾಸಿಗೆ ಇದ್ದ ಹಾಗೆ. ಮಾಧ್ಯಮ ಸಲಹೆಗಾರ ಹುದ್ದೆ ಪ್ರತೀ ದಿನ ಸವಾಲಿನದ್ದು. ಬೆಳಗ್ಗೆ ಎದ್ದು ಪತ್ರಿಕೆಗಳನ್ನು ತಿರುವಿ ಹಾಕುವವರೆಗೂ ನನಗೆ ದುಗುಡ ಇದ್ದೇ ಇರುತ್ತದೆ. ಈ ಸವಾಲುಗಳನ್ನು ಪ್ರತೀ ದಿನ ನಿರ್ವಹಿಸುತ್ತಿದ್ದೇನೆ ಎನ್ನುವ ಸಮಾಧಾನ ಕೂಡ ಇದೆ. ಆದರೆ, ನನಗೆ ಒದಗಿಬಂದಿರುವ ಹೊಣೆಗಾರಿಕೆ ಬಗ್ಗೆ ನನಗೆ ಯಾವತ್ತೂ ಭ್ರಮ ನಿರಸನ ಆಗಿಲ್ಲ ಎಂದರು.

ಇವತ್ತಿನವರೆಗೂ ಮುಖ್ಯಮಂತ್ರಿಗಳು ಒಂದು ದಿನ ಕೂಡ, "ತಮ್ಮ ವಿರುದ್ಧ ಇಂಥ ಚಾನೆಲ್‌ನಲ್ಲಿ ಸುದ್ದಿ ಬಂದಿದೆ. ನೋಡು" ಎನ್ನುವ ಒಂದು ಮಾತನ್ನೂ ಹೇಳಿಲ್ಲ. ಮಾಧ್ಯಮ ಸ್ವಾತಂತ್ರ್ಯಕ್ಕೆ ಮುಖ್ಯಮಂತ್ರಿಗಳು ಯಾವತ್ತೂ ಧಕ್ಕೆ ಆಗದಂತೆ ನೋಡಿಕೊಂಡಿದ್ದಾರೆ ಎಂದರು.

ಮೂವರಿಗೆ ಗೌರವ ಅರ್ಪಿಸಿದ ಕೆವಿಪಿ

ತಮಗೆ ಸಿಗುವ ಸಾರ್ವಜನಿಕ ಸನ್ಮಾನಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ, ಕೋಲಾರದ ಪತ್ರಕರ್ತರು ಮತ್ತು ರಾಜ್ಯದ ಪತ್ರಕರ್ತ ಸಮುದಾಯಕ್ಕೆ ಕೆ.ವಿ.ಪ್ರಭಾಕರ್ ಅವರು ಅರ್ಪಿಸಿ, ಸನ್ಮಾನಕ್ಕಾಗಿ ಕೃತಜ್ಞತೆ ಸಲ್ಲಿಸಿದರು.

ಓದಿದ ಶಾಲೆಗೆ ನೆರವಾಗಿದ್ದು ಸಮಾಧಾನ ತಂದಿದೆ

ಪತ್ರಕರ್ತ ಸಮುದಾಯಕ್ಕೆ, ಪತ್ರಿಕಾ ವಿತರಕ ಸಮುದಾಯಕ್ಕೆ ನೆರವಾಗುವ ಜತೆಗೆ ನೂರಾರು ರೀತಿಯ ನೆರವು ಸರ್ಕಾರದಿಂದ ಒದಗಿಸಲಾಗಿದೆ. ಇವುಗಳ ಆಚೆಗೆ ನಾನು ಓದಿದ ಶಾಲೆಗೆ ಸರ್ಕಾರದ ನೆರವು ಒದಗಿಸಲು ಸಾಧ್ಯವಾಗಿದ್ದು, ಈ ಸರ್ಕಾರಿ ಶಾಲೆಗೆ ಮರುಜೀವ ಬಂದು ವಿದ್ಯಾರ್ಥಿಗಳ ಸಂಖ್ಯೆ 100ರ ಗಡಿ ದಾಟಿರುವುದು ಸಮಾಧಾನ ತಂದಿದೆ ಎಂದರು.

ಪರಿಣಾಮಕಾರಿ ಕೆಲಸ

ಕೆಯೂಡಬ್ಲ್ಯೂಜೆ ಅಧ್ಯಕ್ಷರಾದ ಶಿವಾನಂದ ತಗಡೂರು ಮಾತನಾಡಿ, ಪ್ರಭಾಕರ್ ಅವರು ಸರ್ಕಾರ ಮತ್ತು ಸಂಘಟನೆ ನಡುವೆ ಸೇತುವೆ ರೀತಿಯಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡಿದ್ದಾರೆ ಎಂದು ಶ್ಲಾಘಿಸಿದರು.

ಕರ್ನಾಟಕ ಅಭಿವೃದ್ಧಿ ಮುಂದೆ ಗುಜರಾತ್ ಮಾದರಿ ಟೊಳ್ಳು: ಸಿಎಂ ಸಿದ್ದರಾಮಯ್ಯ

ಮಾಧ್ಯಮ‌ ಅಕಾಡೆಮಿ‌ ಅಧ್ಯಕ್ಷೆ ಆಯೇಷಾ ಖಾನಂ ಮಾತನಾಡಿ, ಪ್ರಭಾಕರ್ ಅಧಿಕಾರ ಸ್ವೀಕಾರ ಮಾಡಿ ಮೂರು ವರ್ಷ ತುಂಬಿದ ಸಂದರ್ಭದ ಕಾರ್ಯಕ್ರಮವನ್ನು ಕೆಯುಡಬ್ಲ್ಯೂಜೆ ಅಚ್ಚುಕಟ್ಟಾಗಿ ಸಂಘಟಿಸಿರುವುದಕ್ಕೆ ಅಭಿನಂದನೆ ಸಲ್ಲಿಸಿದರು. ಪ್ರಭಾಕರ್ ಇನ್ನೂ ಉನ್ನತ ಹುದ್ದೆ ಅಲಂಕರಿಸಲಿ ಎಂದು ಶುಭ ಹಾರೈಸಿದರು.

ರಾಜ್ಯ ಪದಾಧಿಕಾರಿಗಳಾದ ಜಿ.ಸಿ.ಲೋಕೇಶ, ಸೋಮಶೇಖರ್ ಕೆರಗೋಡು, ವಾಸುದೇವ ಹೊಳ್ಳ, ಎನ್.ರವಿಕುಮಾರ್ ಸೇರಿದಂತೆ ಹಲವು ಪ್ರಮುಖರು ಉಪಸ್ಥಿತರಿದ್ದರು.