ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Union Budget 2026: ವಿಕಸಿತ ಭಾರತದ ಬ್ಲೂಪ್ರಿಂಟ್ ನಮ್ಮ ಬಜೆಟ್‌: ಪ್ರಲ್ಹಾದ್‌ ಜೋಶಿ ಬಣ್ಣನೆ

ಇದು ಭಾರತದ ಬೆಳವಣಿಗೆ ಕೇಂದ್ರಿತ ಬಜೆಟ್ ಆಗಿದೆ. ಕಾರ್ಮಿಕರ ಆಧಾರಿತ ವಸ್ತ್ರೋದ್ಯಮಕ್ಕೆ ವಿಶೇಷ ಒತ್ತು ನೀಡಿದ್ದು, ಖಾದಿ ಗ್ರಾಮೋದ್ಯೋಗ ಮತ್ತು ಕೈಗಾರಿಕೆಗಳಿಗೆ ಹೊಸ ಚೈತನ್ಯ ತುಂಬಲು ʼಮಹಾತ್ಮ ಗಾಂಧಿ ಗ್ರಾಮ ಸ್ವರಾಜ್ʼ ಕಾರ್ಯಕ್ರಮಗಳನ್ನು ಘೋಷಿಸಲಾಗಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ತಿಳಿಸಿದ್ದಾರೆ.

ವಿಕಸಿತ ಭಾರತದ ಬ್ಲೂಪ್ರಿಂಟ್ ನಮ್ಮ ಬಜೆಟ್‌: ಪ್ರಲ್ಹಾದ್‌ ಜೋಶಿ ಬಣ್ಣನೆ

ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ -

Prabhakara R
Prabhakara R Feb 1, 2026 10:17 PM

ನವದೆಹಲಿ: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ 2026-27ರ ಆರ್ಥಿಕ ಮುನ್ನೋಟವು (Union Budget 2026) ಪ್ರಧಾನಿ ನರೇಂದ್ರ ಮೋದಿ ಅವರ ʼವಿಕಸಿತ ಭಾರತʼ ಕನಸಿಗೆ ಪೂರಕವಾದ ಮತ್ತು ಭವ್ಯ ಭಾರತದ ಭವಿಷ್ಯ ನಿರ್ಮಾಣಕ್ಕೆ ದಾರಿದೀಪವಾಗಿ ಹೊರಹೊಮ್ಮಿದೆ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ್‌ ಜೋಶಿ (Pralhad Joshi) ಬಣ್ಣಿಸಿದ್ದಾರೆ.

ಇದು ಭಾರತದ ಬೆಳವಣಿಗೆ ಕೇಂದ್ರಿತ ಬಜೆಟ್ ಆಗಿದ್ದು, ಏಳು ಪ್ರಮುಖ ಕ್ಷೇತ್ರಗಳಲ್ಲಿ ಉತ್ಪಾದನಾ ಸಾಮರ್ಥ್ಯ ಬಲಪಡಿಸುವಿಕೆ ಮೇಲೆ ಕೇಂದ್ರೀಕೃತವಾಗಿದೆ. ವಿಶೇಷವಾಗಿ ಬಯೋಫಾರ್ಮಾ ಕ್ಷೇತ್ರಕ್ಕೆ ₹10,000 ಕೋಟಿ ಮೀಸಲಿಟ್ಟು, ನವೀನತೆ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಉತ್ಪಾದನೆಗೆ ಬಲವಾದ ಉತ್ತೇಜನ ನೀಡಲಾಗಿದೆ. ಇಂಡಿಯನ್ ಸೆಮಿಕಂಡಕ್ಟರ್ ಮಿಷನ್ 2.0 ಆರಂಭವು ಭಾರತವನ್ನು ಜಾಗತಿಕ ತಂತ್ರಜ್ಞಾನ ಶಕ್ತಿ ಕೇಂದ್ರವನ್ನಾಗಿ ರೂಪಿಸುವಲ್ಲಿ ದಿಟ್ಟ ಹೆಜ್ಜೆಯಾಗಿದೆ ಎಂದಿದ್ದಾರೆ.

ಕೈಗಾರಿಕಾ ಅಡಿಪಾಯಕ್ಕೆ ಸುಭದ್ರತೆ

ದೇಶೀಯ ಉತ್ಪಾದನೆಗೆ ಮತ್ತಷ್ಟು ವೇಗ ನೀಡುವ ಉದ್ದೇಶದಿಂದ ಎಲೆಕ್ಟ್ರಾನಿಕ್ಸ್ ಘಟಕಗಳ ಉತ್ಪಾದನಾ ಯೋಜನೆಗೆ ನೀಡುವ ಹೂಡಿಕೆಯನ್ನು ಸುಮಾರು ₹40,000 ಕೋಟಿಗೆ ಹೆಚ್ಚಿಸಲಾಗಿದೆ. ಇದರ ಜೊತೆಗೆ ಅಪರೂಪದ ಖನಿಜಗಳ ಬಳಕೆ (Rare Earth Mining), ಕೆಮಿಕಲ್ ಪಾರ್ಕ್ (chemical park) ಸ್ಥಾಪನೆ ಹಾಗೂ ಜಾಗತಿಕ ಮಟ್ಟದ ಕಂಟೈನರ್ ಉತ್ಪಾದನೆಗೆ ₹10,000 ಕೋಟಿ ನೆರವು ಘೋಷಿಸಿದ್ದು, ಭಾರತದ ಕೈಗಾರಿಕಾ ಅಡಿಪಾಯವನ್ನು ಬಲಪಡಿಸುತ್ತದೆ ಎಂದು ಹೇಳಿದ್ದಾರೆ.

ಗ್ರಾಮಗಳ ಬೆಳವಣಿಗೆಗೆ ಪ್ರತೀಕ

ಕಾರ್ಮಿಕರ ಆಧಾರಿತ ವಸ್ತ್ರೋದ್ಯಮಕ್ಕೆ ವಿಶೇಷ ಒತ್ತು ನೀಡಿದ್ದು, ಖಾದಿ ಗ್ರಾಮೋದ್ಯೋಗ ಮತ್ತು ಕೈಗಾರಿಕೆಗಳಿಗೆ ಹೊಸ ಚೈತನ್ಯ ತುಂಬಲು ʼಮಹಾತ್ಮ ಗಾಂಧಿ ಗ್ರಾಮ ಸ್ವರಾಜ್ʼ ಕಾರ್ಯಕ್ರಮಗಳನ್ನು ಘೋಷಿಸಲಾಗಿದೆ. ಸಣ್ಣ ಮತ್ತು ಮಧ್ಯಮ ಉದ್ಯಮಗಳನ್ನು (MSME) ರಾಷ್ಟ್ರೀಯ ಚಾಂಪಿಯನ್‌ಗಳಾಗಿ ರೂಪಿಸುವ ಉದ್ದೇಶದಿಂದ ₹10,000 ಕೋಟಿ ಇಕ್ವಿಟಿ ಬೆಂಬಲ ಒದಗಿಸಲಾಗಿದೆ. ಸಾರ್ವಜನಿಕ ಮೂಲಸೌಕರ್ಯಕ್ಕೆ ಇತಿಹಾಸದಲ್ಲೇ ಅತಿ ಹೆಚ್ಚು ₹12.2 ಲಕ್ಷ ಕೋಟಿ ಮೀಸಲಿಡಲಾಗಿದೆ. ಇದು ದೀರ್ಘಕಾಲೀನ ಬೆಳವಣಿಗೆಯತ್ತ ಸರ್ಕಾರದ ಬದ್ಧತೆಯನ್ನು ಪ್ರದರ್ಶಿಸುತ್ತದೆ ಎಂದು ಜೋಶಿ ಪ್ರತಿಪಾದಿಸಿದ್ದಾರೆ.

ಜನಕೇಂದ್ರಿತ ಯೋಜನೆಗಳಾಗಿ ಏಳು ಹೈ ಸ್ಪೀಡ್ ರೈಲು ಕಾರಿಡಾರ್‌ಗಳು, ಆರೋಗ್ಯ ಕ್ಷೇತ್ರದ ಯೋಜನೆಗಳು, ಖೇಲೋ ಇಂಡಿಯಾ ಮಿಷನ್, ಕರಾವಳಿ ಪ್ರದೇಶಗಳಲ್ಲಿ ಮೀನುಗಾರಿಕೆ ಉತ್ತೇಜನ, ತೆಂಗು ಪ್ರೋತ್ಸಾಹ ಯೋಜನೆ, ಗೋಡಂಬಿ ಉತ್ತೇಜನ ಹಾಗೂ ಗ್ರಾಮೀಣ ಮಹಿಳಾ ಉದ್ಯಮಿಗಳಿಗೆ SHE-ಮಾರ್ಟ್‌ಗಳು ಘೋಷಿಸಲಾಗಿದೆ. ಅಂಗವಿಕಲರಿಗೆ ಹೆಚ್ಚಿನ ಅವಕಾಶಗಳನ್ನು ಕಲ್ಪಿಸಲು ವಿಶೇಷ ಯೋಜನೆಗಳನ್ನೂ ಪರಿಚಯಿಸಲಾಗಿದೆ ಎಂದು ಹೇಳಿದ್ದಾರೆ.

Union Budget 2026: ಗ್ರಾಮೀಣ ಆರ್ಥಿಕತೆಗೆ ಬಲ, 2026ರ ಬಜೆಟ್‌ನಲ್ಲಿ ರೈತರು ಮತ್ತು ಮಹಿಳಾ ನೇತೃತ್ವದ ಉದ್ಯಮಗಳಿಗೆ ಆದ್ಯತೆ!

17 ಕ್ಯಾನ್ಸರ್ ಔಷಧಿಗಳ ಮೇಲೆ ಕಸ್ಟಮ್ಸ್ ಸುಂಕವನ್ನು ಸಂಪೂರ್ಣವಾಗಿ ರದ್ದುಗೊಳಿಸಿರುವುದು, ರೋಗಿಗಳ ನಿರಾಳತೆಗೆ ಕಾರಣವಾಗಿದೆ. ವ್ಯವಹಾರ ಪ್ರಕ್ರಿಯೆಗಳ ಸರಳೀಕರಣ, ಸಹಕಾರಿ ಕ್ಷೇತ್ರಕ್ಕೆ ಹಲವು ಹೊಸ ಕಾರ್ಯಕ್ರಮಗಳು ಮತ್ತು ಐಟಿ ಕ್ಷೇತ್ರಕ್ಕೆ ಬಲವಾದ ನೀತಿ ಬೆಂಬಲವೂ ಈ ಬಜೆಟ್‌ನ ಪ್ರಮುಖ ಅಂಶಗಳಾಗಿವೆ. ಒಟ್ಟಿನಲ್ಲಿ ಸಾಮಾನ್ಯ ನಾಗರಿಕರ ಮೇಲೆ ಯಾವುದೇ ಹೆಚ್ಚುವರಿ ತೆರಿಗೆ ಭಾರ ಹಾಕದೇ, ಸಮತೋಲನ ಮತ್ತು ನವೀನತೆಯಿಂದ ಕೂಡಿದ ಈ ಬಜೆಟ್ ಭಾರತವನ್ನು ಅಭಿವೃದ್ಧಿಶೀಲ ಮತ್ತು ಆತ್ಮನಿರ್ಭರ ಭವಿಷ್ಯದತ್ತ ದೃಢ ಸಂಕಲ್ಪದೊಂದಿಗೆ ಕೊಂಡೊಯ್ಯುತ್ತದೆ ಎಂದು ತಿಳಿಸಿದ್ದಾರೆ.