ಬೆಂಗಳೂರಿನಲ್ಲಿ ರಸ್ತೆ ದಾಟುವ ವೇಳೆ ಬೈಕ್ ಡಿಕ್ಕಿಯಾಗಿ ಯುವತಿ ದುರ್ಮರಣ
Bengaluru Accident: ಬೆಂಗಳೂರಿನ ರಾಜ್‌ಕುಮಾರ್ ರಸ್ತೆಯ ಎಚ್‌ಡಿಎಫ್‌ಸಿ ಬ್ಯಾಂಕ್ ಬಳಿ ಅಪಘಾತ ನಡೆದಿದೆ. ಲಗ್ಗೆರೆ ಬಳಿಯ ಕೆಂಪೇಗೌಡ ಲೇಔಟ್ ನಿವಾಸಿಯಾದ ಯುವತಿ, ಕೆಲಸದ ಸ್ಥಳದ ಸಮೀಪ ಊಟಕ್ಕೆಂದು ರಸ್ತೆ ದಾಟುತ್ತಿದ್ದರು. ಈ ಬೈಕ್ ಡಿಕ್ಕಿಯಾಗಿ ಮೃತಪಟ್ಟಿದ್ದಾರೆ.
ಬೆಂಗಳೂರಿನ ಅಪಘಾತದಲ್ಲಿ ಮೃತಪಟ್ಟ ಯುವತಿ ಯೋಗೇಶ್ವರಿ. -
ಬೆಂಗಳೂರು: ರಸ್ತೆ ದಾಟುವ ವೇಳೆ ಬುಲೆಟ್ ಬೈಕ್ ಡಿಕ್ಕಿಯಾದ ಪರಿಣಾಮ ಯುವತಿ ಮೃತಪಟ್ಟಿರುವ ಘಟನೆ (Bengaluru Accident) ನಗರದ ರಾಜ್‌ಕುಮಾರ್ ರಸ್ತೆಯ ಎಚ್‌ಡಿಎಫ್‌ಸಿ ಬ್ಯಾಂಕ್ ಬಳಿ ನಡೆದಿದೆ. ಯೋಗೇಶ್ವರಿ (27) ಮೃತ ಯುವತಿ. ವೇಗವಾಗಿ ಬಂದ ಬೈಕ್ ಡಿಕ್ಕಿ ಹೊಡೆದಿದ್ದರಿಂದ ಯುವತಿ ಗಂಭೀರವಾಗಿ ಗಾಯಗೊಂಡಿದ್ದು, ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಲಗ್ಗೆರೆ ಬಳಿಯ ಕೆಂಪೇಗೌಡ ಲೇಔಟ್ ನಿವಾಸಿಯಾಗಿದ್ದ ಯೋಗೇಶ್ವರಿ, ಮಂಗಳವಾರ ಮಧ್ಯಾಹ್ನ ಕೆಲಸದ ಸ್ಥಳದ ಸಮೀಪ ಊಟಕ್ಕೆಂದು ರಸ್ತೆ ದಾಟುತ್ತಿದ್ದರು. ಈ ಸಂದರ್ಭದಲ್ಲಿ ವೇಗವಾಗಿ ಬಂದ ಬೈಕ್ ಸವಾರ ಯೋಗೇಶ್ವರಿಗೆ ಡಿಕ್ಕಿ ಹೊಡೆದಿದ್ದಾನೆ. ಇದರಿಂದ ರಸ್ತೆಗೆ ಬಿದ್ದ ಯೋಗೇಶ್ವರಿ ತೀವ್ರವಾಗಿ ಗಾಯಗೊಂಡಿದ್ದರು. ಕೂಡಲೇ ಅವರನ್ನು ಸುಗುಣ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಅವರು ಸಾವನ್ನಪ್ಪಿದ್ದಾರೆ.
ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ. ಘಟನಾ ಸ್ಥಳಕ್ಕೆ ರಾಜಾಜಿನಗರ ಸಂಚಾರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಬೈಕ್ ಸವಾರನ ಪತ್ತೆಗಾಗಿ ತನಿಖೆ ಮುಂದುವರಿಸಿದ್ದಾರೆ.
ಬೆಂಗಳೂರಿನಲ್ಲಿ 14ನೇ ಮಹಡಿಯಿಂದ ಹಾರಿ ವಿದ್ಯಾರ್ಥಿನಿ ಆತ್ಮಹತ್ಯೆ
ದೊಡ್ಡಬಳ್ಳಾಪುರ: ನಗರದ ಪ್ರತಿಷ್ಠಿತ ವಿಶ್ವವಿದ್ಯಾಲಯದ ವಿದ್ಯಾರ್ಥಿನಿಯೊಬ್ಬಳು ಕಾಲೇಜು ಹಾಸ್ಟೆಲ್‌ನ 14ನೇ ಮಹಡಿಯಿಂದ ಬಿದ್ದು ಸಾವನ್ನಪ್ಪಿರುವ ಘಟನೆ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಬೆಂಗಳೂರು ಸರ್ಜಾಪುರ ಮೂಲದ ನಯನಾ (20) ಮೃತಪಟ್ಟಿರುವ ದುರ್ದೈವಿ.
ಕಾಲೇಜು ಹಾಸ್ಟೆಲ್‌ನ 14ನೇ ಮಹಡಿಯಿಂದ ಬಿದ್ದು ವಿದ್ಯಾರ್ಥಿನಿ ಸಾವನ್ನಪ್ಪಿದ್ದಾರೆ. ಮೃತ ನಯನಾ ದೊಡ್ಡಬಳ್ಳಾಪುರ ಹೊರವಲಯದ ನಾಗದೇವನಹಳ್ಳಿ ಬಳಿ ಇರುವ ಗೀತಂ ವಿಶ್ವವಿದ್ಯಾಲಯ (Gitam University) ಕಾಲೇಜಿನಲ್ಲಿ ಕಂಪ್ಯೂಟರ್ ಸೈನ್ಸ್ ಪದವಿ ವ್ಯಾಸಂಗ ಮಾಡುತ್ತಿದ್ದಳು. 14ನೇ ಮಹಡಿಯಿಂದ ಕೆಳಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಈ ಸಂಬಂಧ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ. ಆತ್ಮಹತ್ಯೆಗೆ ಕಾರಣ ಶೋಧಿಸಲಾಗುತ್ತಿದೆ.