Mallikarjun: ʻಪ್ರೇಮ ಬರಹʼ ಚಿತ್ರದ ವಿವಾದದ ಬಗ್ಗೆ ಕೊನೆಗೂ ಬಾಯಿಬಿಟ್ಟ ದರ್ಶನ್ ಮ್ಯಾನೇಜರ್; ಅಂದು ಅರ್ಜುನ್ ಸರ್ಜಾರನ್ನು ಭೇಟಿಯಾದಾಗ ಆಗಿದ್ದೇನು?
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಸೂಚನೆಯಂತೆ ಅರ್ಜುನ್ ಸರ್ಜಾ ನಿರ್ಮಾಣದ 'ಪ್ರೇಮ ಬರಹ' ಚಿತ್ರವನ್ನು ವಿತರಿಸಿದ್ದ ಮಲ್ಲಿಕಾರ್ಜುನ್, ಆ ಸಂದರ್ಭದಲ್ಲಿ ಉಂಟಾದ ಲೆಕ್ಕದ ವ್ಯತ್ಯಾಸಗಳ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಚಿತ್ರದ ಲೆಕ್ಕಾಚಾರದಲ್ಲಿ ಸುಮಾರು 1 ಲಕ್ಷ ರೂ. ವ್ಯತ್ಯಾಸವಾಗಿದ್ದರಿಂದ ಅರ್ಜುನ್ ಸರ್ಜಾ ಅಸಮಾಧಾನಗೊಂಡಿದ್ದರು ಎಂದು ಮಲ್ಲಿಕಾರ್ಜುನ್ ತಿಳಿಸಿದ್ದಾರೆ.
-
ʻಚಾಲೆಂಜಿಂಗ್ ಸ್ಟಾರ್ʼ ದರ್ಶನ್ ಅವರು ತಮ್ಮ ತೂಗುದೀಪ ನಿರ್ಮಾಣ ಸಂಸ್ಥೆ ಜೊತೆಗೆ ವಿತರಣಾ ಸಂಸ್ಥೆಯನ್ನು ಕೂಡ ಆರಂಭಿಸಿದ್ದರು. ಅದನ್ನು ತಮ್ಮ ಮ್ಯಾನೇಜರ್ ಮಲ್ಲಿಕಾರ್ಜುನ್ ಅವರಿಗೆ ವಹಿಸಿದ್ದರು. ಸಿನಿಮಾ ವಿತರಣೆಯನ್ನು ಮಲ್ಲಿಕಾರ್ಜುನ್ ಅವರೇ ಮಾಡುತ್ತಿದ್ದರು. ಈ ವೇಳೆ ಅರ್ಜುನ್ ಸರ್ಜಾ ನಿರ್ಮಾಣದ ʻಪ್ರೇಮ ಬರಹʼ ವಿತರಣೆ ಮಾಡಿದ್ಮೇಲೆ ಮಲ್ಲಿಕಾರ್ಜುನ್ ಮೇಲೆ ಸಾಕಷ್ಟು ಅಪವಾದಗಳು ಕೇಳಿಬಂದವು.
ಆ ಬಗ್ಗೆ ಈಗ ಮಲ್ಲಿಕಾರ್ಜುನ್ ಸಾಕಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಅಸಲಿಗೆ, ಆ ಸಿನಿಮಾದ ವಿತರಣೆ ಸಂಬಂಧ ಅರ್ಜುನ್ ಸರ್ಜಾ ಅವರಿಗೆ ಮಲ್ಲಿಕಾರ್ಜುನ್ ಎರಡು ಚೆಕ್‌ಗಳನ್ನು ನೀಡಿದ್ದರು. ಇದೀಗ ಆ ಚೆಕ್‌ಗಳು ಬೌನ್ಸ್ ಆಗಿದ್ದರಿಂದ ಮಲ್ಲಿಕಾರ್ಜುನ್ ಮೇಲೀಗ ಚೆಕ್ ಬೌನ್ಸ್ ಕೇಸ್ ಕೂಡ ದಾಖಲಾಗಿದೆ. ಸದ್ಯ ಕೋರ್ಟ್‌ನಿಂದ ಮಲ್ಲಿಕಾರ್ಜುನ್‌ಗೆ ಬೇಲ್ ಕೂಡ ಸಿಕ್ಕಿದೆ.
ಪ್ರೇಮ ಬರಹ ವಿತರಣೆ ಮಾಡಲು ದರ್ಶನ್ ಸರ್ ಹೇಳಿದ್ದರು
"ದರ್ಶನ್ ಸರ್ ಒಮ್ಮೆ ರಾತ್ರಿ ಕಾಲ್ ಮಾಡಿ, ನಮ್ ಸೀನಿಯರ್ (ಅರ್ಜುನ್ ಸರ್ಜಾ) ಅವರದ್ದು ಪ್ರೇಮ ಬರಹ ಸಿನಿಮಾವನ್ನು ವಿತರಣೆ ಮಾಡು ಎಂದು ಹೇಳಿದರು. ತೂಗುದೀಪ ಡಿಸ್ಟ್ರಿಬ್ಯೂಷನ್ ಅವರದ್ದೇ ಬ್ಯಾನರ್. ಮಾಡೋಕಾಗಲ್ಲ ಅಂತ ಹೇಳೋಕೆ ಆಗತ್ತಾ? ಆ ಟೈಮ್‌ನಲ್ಲಿ ನಾನು ದಿನಕರ್ ಜೊತೆಗೆ ಲೈಫ್ ಜೊತೆ ಒಂದ್ ಸೆಲ್ಫಿ ಎಂಬ ಸಿನಿಮಾಕ್ಕೆ ಕೋ ಡೈರೆಕ್ಟರ್ ಕೂಡ ಆಗಿದ್ದೆ. ಆ ಸಿನಿಮಾ ಸೆಟ್‌ನಲ್ಲೇ ನಾನು ಮತ್ತು ಅರ್ಜುನ್ ಸರ್ಜಾ ಅವರ ಜೊತೆ ಮಾತುಕತೆ ಮಾಡಿದೆ. ನೀವೇ ಈ ಸಿನಿಮಾವನ್ನು ವಿತರಣೆ ಮಾಡಬೇಕು ಎಂದು ಹೇಳಿ, ನಮ್ಮ ಮೇಲೆ ನಂಬಿಕೆ ಇಟ್ಟುಹೋದರು" ಎಂದು ಮಲ್ಲಿಕಾರ್ಜುನ್ ಹೇಳಿದ್ದಾರೆ.
ಅರ್ಜುನ್ ಸರ್ಜಾ ಅವರಿಂದ ನಾನು ಪಡೆದಿರಲಿಲ್ಲ
"ನಾನು ಆ ಸಿನಿಮಾದ ವಿತರಣೆಯನ್ನು ದುಡ್ಡು ಕೊಟ್ಟು ಮಾಡಿದ್ದಲ್ಲ. ಕಮೀಷನ್ ಆಧಾರದ ಮೇಲೆ ಮಾಡಿದ್ದು. ನಾನು ಒಂದು ರೂಪಾಯಿ ಕೂಡ ಅರ್ಜುನ್ ಸರ್ಜಾ ಅವರಿಂದ ಪಡೆದಿರಲಿಲ್ಲ. ನಾನೇ ಎಲ್ಲಾ ಖರ್ಚು ಮಾಡಿ, ಸಿನಿಮಾವನ್ನು ರಿಲೀಸ್ ಮಾಡಿದೆ. ಒಂದು ಮಾತು ಸ್ಟಷ್ಟವಾಗಿ ಹೇಳುತ್ತೇನೆ, ನಾನು ಊರು ಬಿಟ್ಟು ಹೋಗಲು ಪ್ರೇಮ ಬರಹ ಸಿನಿಮಾ ಕಾರಣವಲ್ಲ. ನನ್ನ ವೈಯಕ್ತಿಕ ವಿಚಾರಗಳಿಂದಾಗಿ ನಾನು ಊರು ಬಿಡಬೇಕಾಯಿತು" ಎಂದು ಮಲ್ಲಿಕಾರ್ಜುನ್ ಸ್ಪಷ್ಟನೆ ನೀಡಿದ್ದಾರೆ.
ಅರ್ಜುನ್ ಸರ್ಜಾ ಅವರಿಗೆ ಅಂದಾಜು 50 ಲಕ್ಷ ರೂ. ಕೊಡಬೇಕಿತ್ತು
"ಪ್ರೇಮ ಬರಹಕ್ಕೆ ಸಂಬಂಧಿಸಿದ ವಿಚಾರ ಕೋರ್ಟ್‌ನಲ್ಲಿದೆ. ಆದರೂ ನಾನು ದೇವರ ಮೇಲೆ ಭಾರ ಹಾಕಿ ಏನು ನಡೆಯಿತು ಎಂಬುದನ್ನು ಹೇಳುತ್ತೇನೆ. ಆ ಸಿನಿಮಾದ ಕಲೆಕ್ಷನ್ 1.15 ರಿಂದ 1.20 ಕೋಟಿ ರೂ. ಆಗಿದೆ. ಎಲ್ಲಾ ನಾನೇ ಖರ್ಚು ಮಾಡಿದ್ದರಿಂದ, ಅದರ ಖರ್ಚುಗಳನ್ನೆಲ್ಲಾ ಕಳೆದು, ಅರ್ಜುನ್ ಸರ್ಜಾ ಅವರಿಗೆ ನಾನು ಕೊಡಬೇಕಾಗಿದ್ದು ಅಂದಾಜು 50 ಲಕ್ಷ ರೂ. ನಾನಿನ್ನೂ ಅವರಿಗೆ ಫುಲ್ ಸೆಟ್ಲ್‌ಮೆಂಟ್ ಮಾಡಿರಲಿಲ್ಲ. ಯಾಕೆಂದರೆ, ಸಿನಿಮಾ ಆಗ ಇನ್ನೂ ಚಿತ್ರಮಂದಿರಲ್ಲೇ ಇತ್ತು. ರಿಲೀಸ್ ಆಗಿ 5-6 ವಾರ ಏನೋ ಆಗಿತ್ತು. ಅದರ ಅಕೌಂಟ್ ಅನ್ನು ನಾನು ಅರ್ಜುನ್ ಸರ್ಜಾ ಅವರಿಗೆ ನೀಡಿದ್ದೆ. ಅದರಲ್ಲಿ ನನ್ನ ಖರ್ಚುಗಳನ್ನೆಲ್ಲಾ ಕಳೆದು, ಅವರಿಗೆ ಲೆಕ್ಕ ಕೊಟ್ಟಿದ್ದೆ.
ವಿತರಣೆ ಲೆಕ್ಕದಲ್ಲಿ ಹೆಚ್ಚುಕಮ್ಮಿ ಆಗಿತ್ತು
"ನನ್ನ ಡಿಸ್ಟ್ರಿಬ್ಯೂಷನ್‌ನ ಅಕೌಂಟ್ಸ್‌ನ ಒಬ್ಬರು ನೋಡಿಕೊಳ್ಳುತ್ತಿದ್ದರು. ಅವರೇ ಎಲ್ಲಾ ಲೆಕ್ಕವನ್ನು ರೆಡಿ ಮಾಡಿಕೊಟ್ಟಿದ್ದರು. ನನಗೆ ಕ್ರಾಸ್ ಚೆಕ್ ಮಾಡುವುದಕ್ಕೆ ಹೇಳಿದರೂ, ನಾನು ನನ್ನ ಟೆನ್ಷನ್ ಅಲ್ಲಿ ನೋಡುವುದಕ್ಕೆ ಆಗಲಿಲ್ಲ. ಆ ಆಕೌಂಟ್ ಶೀಟ್ ಅನ್ನೇ ತೆಗೆದುಕೊಂಡು ಹೋಗಿ ಅರ್ಜುನ್ ಸರ್ಜಾ ಅವರಿಗೆ ನೀಡಿದೆ. ಅವರು ಎರಡು ದಿನ ಆದಮೇಲೆ ನನ್ನನ್ನು ಕರೆದರು. ಅಲ್ಲಿ ಧ್ರುವ ಸರ್ಜಾ ಕೂಡ ಇದ್ದರು. ನಾನು ಕೊಟ್ಟಿದ್ದ ಶೀಟ್ ಮೇಲೆ ಪೆನ್ಸಿಲ್ ಅಲ್ಲಿ ಕೆಲವು ಕಡೆ ಮಾರ್ಕ್ ಮಾಡಿದ್ದರು. ಕೆಲವೊಂದು ಕಡೆ ಲೆಕ್ಕದಲ್ಲಿ ಹೆಚ್ಚುಕಮ್ಮಿ ಆಗಿತ್ತು. ಎಲ್ಲಾ ಸೇರಿದರೆ ಅಂದಾಜು 1 ಲಕ್ಷ ರೂ. ವ್ಯತ್ಯಾಸ ಆಗಿದೆ. ಅದನ್ನು ನಾನು ಗಮನಿಸಬೇಕಿತ್ತು. ಅದು ನನ್ನ ಕಡೆಯಿಂದ ಆದ ಮಿಸ್ಟೇಕ್ ಆಗಿತ್ತು. ನಾನು ಕ್ರಾಸ್‌ಚೆಕ್ ಮಾಡಿದ್ದರೆ ಈ ಥರ ಆಗುತ್ತಿರಲಿಲ್ಲ. ಈ ವಿಚಾರವನ್ನು ನಾನು ದರ್ಶನ್ ಅವರಿಗೆ ಹೇಳುತ್ತೇನೆ, ನನಗೆ ಇದರಲ್ಲಿ ಬೇರೆ ಏನೋ ಕಾಣುತ್ತಿದೆ ಅಂತ ಅರ್ಜುನ್ ಸರ್ಜಾ ಅವರು ನನಗೆ ಹೇಳಿದರು.
ಆ ಕ್ಷಣಕ್ಕೆ ನನ್ನ ಬಳಿ ದುಡ್ಡು ಇರಲಿಲ್ಲ
"ಅರ್ಜುನ್ ಸರ್ಜಾ ಅವರಿಗೆ ನಾನು ಕನ್ಸಿನ್ಸ್ ಮಾಡಲು ಪ್ರಯತ್ನಿಸಿದೆ. ನಾನು ಸಾಕಷ್ಟು ಸಿನಿಮಾ ವಿತರಣೆ ಮಾಡಿದ್ದೇನೆ, ಎಷ್ಟೋ ಸಿನಿಮಾಗಳಿಗೆ ನಾನೇ ಕೈಯಿಂದ ಕಳೆದುಕೊಂಡಿದ್ದೇನೆ ಎಂದು ಹೇಳಿ, ಒಂದು ವಾರ ಟೈಮ್ ತೆಗೆದುಕೊಂಡೆ. ಅದೇನು ಮಿಸ್ಟೇಕ್ ಆಗಿದೆಯೋ, ಅದನ್ನು ಸರಿ ಮಾಡಿಕೊಡುವೆ ಎಂದು ಹೇಳಿದೆ. ಎಲ್ಲಾ ಸರಿ ಮಾಡಿದ ಮೇಲೆ ಹಣವನ್ನು ಕೇಳಿದರು. ಆ ಕ್ಷಣಕ್ಕೆ ನನ್ನ ಬಳಿ ದುಡ್ಡು ಇರಲಿಲ್ಲ. ಯಾಕೆಂದರೆ, ಆ ದುಡ್ಡು ನಿರ್ಮಾಪಕ ಎನ್ ಕುಮಾರ್ ಬಳಿ ಇತ್ತು. ಯಾಕೆಂದರೆ, ಅಂದು ಥಿಯೇಟರ್ ಸೆಟಪ್ ಅವರೇ ಮಾಡಿಕೊಟ್ಟಿದ್ದರು" ಎಂದು ಮಲ್ಲಿಕಾರ್ಜುನ್ ಹೇಳಿದ್ದಾರೆ. ಸದ್ಯ ಈ ಕೇಸ್ ಇನ್ನೂ ಕೋರ್ಟ್‌ನಲ್ಲಿದೆ.