Census: ಇಂದಿನಿಂದ ಮನೆ ಮನೆ ಜನಗಣತಿ, ಈ 33 ಪ್ರಶ್ನೆಗಳಿಗೆ ಉತ್ತರಿಸಿ
ಏ. 16ರಿಂದ ಮೇ 15ರವರೆಗಿನ ಮೊದಲ ಹಂತದಲ್ಲಿ ಮನೆ ಪಟ್ಟಿ ಮತ್ತು ಮನೆ ಗಣತಿ ನಡೆಯಲಿದೆ. ಈ ವೇಳೆ ಗಣತಿದಾರರು ಮನೆ-ಮನೆಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಲಿದ್ದಾರೆ. ಈ ಕಾರ್ಯ ಮುಗಿದ ನಂತರ 2027ರ ಏಪ್ರಿಲ್‌ನಲ್ಲಿ ಎರಡನೇ ಹಂತದ ಜನಗಣತಿ ಕಾರ್ಯ ಆರಂಭವಾಗಲಿದೆ.
ಮನೆ ಜನಗಣತಿ ಆರಂಭ -
ಬೆಂಗಳೂರು, ಏ.17: ಗ್ರೇಟರ್ ಬೆಂಗಳೂರು ಪ್ರಾಧಿಕಾರದ (GBA) ಐದು ನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ರಾಷ್ಟ್ರೀಯ ಜನಗಣತಿ-2027ರ (Census) ಕಾರ್ಯಕ್ಕೆ 23 ಸಾವಿರಕ್ಕೂ ಹೆಚ್ಚು ಗಣತಿದಾರರು, 2900 ಮೇಲ್ವಿಚಾರಕರನ್ನು ನೇಮಕ ಮಾಡಲಾಗಿದೆ ಎಂದು ಕಂದಾಯ ವಿಭಾಗದ ವಿಶೇಷ ಆಯುಕ್ತ ಮುನೀಶ್ ಮೌದ್ಗಿಲ್ (Munish Moudgil) ತಿಳಿಸಿದರು.
ಏ. 16ರಿಂದ ಮೇ 15ರವರೆಗಿನ ಮೊದಲ ಹಂತದಲ್ಲಿ ಮನೆ ಪಟ್ಟಿ ಮತ್ತು ಮನೆ ಗಣತಿ ನಡೆಯಲಿದೆ. ಈ ವೇಳೆ ಗಣತಿದಾರರು ಮನೆ-ಮನೆಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಲಿದ್ದಾರೆ. ಈ ಕಾರ್ಯ ಮುಗಿದ ನಂತರ 2027ರ ಏಪ್ರಿಲ್‌ನಲ್ಲಿ ಎರಡನೇ ಹಂತದ ಜನಗಣತಿ ಕಾರ್ಯ ಆರಂಭವಾಗಲಿದೆ. ಆದ್ದರಿಂದ ಎಲ್ಲ ನಾಗರಿಕರು ಅವರು ಕೇಳುವ ಪ್ರಶ್ನೆಗಳಿಗೆ ಉತ್ತರ ನೀಡುವ ಮೂಲಕ ಮನೆ ಗಣತಿ ಕಾರ್ಯಕ್ಕೆ ಸಹಕಾರ ನೀಡಬೇಕು ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಅವರು ಮನವಿ ಮಾಡಿದರು.
ಶೇ. 2ರಷ್ಟು ಸ್ವಯಂ ಗಣತಿ
ಸ್ವಯಂ ಗಣತಿಗೆ ಏ. 15ರವರೆಗೆ ಅವಕಾಶ ಕಲ್ಪಿಸಲಾಗಿತ್ತು. ಅಲ್ಲದೆ, ಇದರಲ್ಲಿ ಭಾಗವಹಿಸುವಂತೆ ಪಂಚ ಪಾಲಿಕೆಗಳು ಮತ್ತು ಜಿಬಿಎಯಿಂದ ನಾಗರಿಕರಲ್ಲಿ ಸಾಕಷ್ಟು ಅರಿವು ಮೂಡಿಸಲಾಗಿತ್ತು. ಆದರೂ, ಹೆಚ್ಚಿನ ಜನ ಸ್ವಯಂ ಗಣತಿಯಲ್ಲಿ ಪಾಲ್ಗೊಂಡಿಲ್ಲ. ಕೇವಲ ಶೇ. 2ಕ್ಕಿಂತ ಕಡಿಮೆ ಜನ ಪಾಲ್ಗೊಂಡಿದ್ದಾರೆ. ಗುರುವಾರದಿಂದಲೇ (ಏ.15) ಗಣತಿದಾರರು ಮನೆ-ಮನೆಗಳಿಗೆ ಭೇಟಿ ನೀಡಲಾರಂಭಿಸಿದ್ದಾರೆ. ಪ್ರತಿಯೊಬ್ಬ ನಾಗರಿಕರು ಜನಗಣತಿ ಕಾರ್ಯದಲ್ಲಿ ಪಾಲ್ಗೊಳ್ಳುವುದು ಕಡ್ಡಾಯವಾಗಿದೆ. ಮಾಹಿತಿ ನೀಡದವರ ವಿರುದ್ಧ 1948ರ ಜನಗಣತಿ ಕಾಯಿದೆಯಡಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಜಿಬಿಎ ವ್ಯಾಪ್ತಿಯ ಎಲ್ಲ ಐದು ನಗರ ಪಾಲಿಕೆಗಳಲ್ಲಿ ಮನೆ ಗಣತಿ ಕಾರ್ಯ ಪ್ರಾರಂಭವಾಗಿದೆ. ಗಣತಿದಾರರು ಮನೆ-ಮನೆಗೆ ಭೇಟಿ ನೀಡಿದಾಗ ಯಾರೂ ಇಲ್ಲದಿದ್ದಾಗ ಮನೆಗೆ ಮೊಬೈಲ್ ಸಂಖ್ಯೆ ನಮೂದಿಸಿರುವ ಸ್ಟಿಕ್ಕರ್ ಅಂಟಿಸುತ್ತಾರೆ. ನಾಗರಿಕರು ಈ ಸಂಖ್ಯೆಗೆ ಕರೆ ಮಾಡಿದರೆ ಗಣತಿದಾರರು ಅಥವಾ ಸಂಬಂಧಪಟ್ಟ ಅಧಿಕಾರಿಗಳು ಪುನಃ ಮನೆಗೆ ಬಂದು ಗಣತಿ ಕಾರ್ಯ ಪೂರ್ಣಗೊಳಿಸಲಿದ್ದಾರೆ. ಹೀಗೆ, ಸಾವಿರಾರು ಸಿಬ್ಬಂದಿ ಮತ್ತು ಅಧಿಕಾರಿಗಳ ಸಹಕಾರದೊಂದಿಗೆ ಎಲ್ಲಾ ಮನೆಗಳ ಸಮಗ್ರ ಮತ್ತು ನಿಖರ ಮಾಹಿತಿ ಸಂಗ್ರಹಿಸಲಾಗುತ್ತದೆ ಎಂದು ಮಾಹಿತಿ ನೀಡಿದರು.
ಹೆಚ್ಚುವರಿ ಅವಧಿಯಲ್ಲಿ ಗಣತಿ ಕಾರ್ಯ
ಗಣತಿದಾರರು ಬೆಳಗ್ಗೆ 9ರಿಂದ ಸಂಜೆ 5 ರವರೆಗೆ ಮನೆ-ಮನೆಗೆ ಭೇಟಿ ನೀಡಿ ಮನೆ ಗಣತಿ ಮಾಡಲಿದ್ದಾರೆ. ಒಂದು ವಾರ ಕಳೆದ ನಂತರ ನಾಗರಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸಂಜೆ 6ರಿಂದ ರಾತ್ರಿ 9ರವರೆಗೆ ಹಾಗೂ ಬೆಳಗ್ಗೆ 6 ರಿಂದ ಬೆಳಗ್ಗೆ 10ರವರೆಗೆ ಗಣತಿ ನಡೆಸಲು ವ್ಯವಸ್ಥೆ ಮಾಡಲಾಗುವುದು. ಮನೆ ಗಣತಿ ಕಾರ್ಯದಲ್ಲಿ 26,000 ಸಿಬ್ಬಂದಿಗಳ ಪೈಕಿ 10,000 ಶಿಕ್ಷಕರನ್ನು ನಿಯೋಜಿಸಲಾಗಿದೆ. ಗಂಭೀರ ಆರೋಗ್ಯ ಸಮಸ್ಯೆಯಿರುವವರು, ಗರ್ಭಿಣಿಯರು, ವಿಶೇಷ ಚೇತನರು, ಒಂದು ವರ್ಷದೊಳಗಿನ ಮಕ್ಕಳಿರುವ ತಾಯಂದಿರು ಹಾಗೂ ಇತರ ಕಾರಣಗಳಿಂದ ಸುಮಾರು 7-8 ಸಾವಿರ ಸಿಬ್ಬಂದಿಗೆ ವಿನಾಯಿತಿ ನೀಡಲಾಗಿದೆ ಎಂದು ವಿವರಿಸಿದರು.
ಗಣತಿದಾರರಿಗೆ 200 ಮನೆಗಳ ಜವಾಬ್ದಾರಿ
ಮನೆ ಗಣತಿ ಕಾರ್ಯಕ್ಕಾಗಿ ನಗರದಲ್ಲಿ 23,000 ಗಣತಿದಾರರನ್ನು ನಿಯೋಜಿಸಲಾಗಿದ್ದು, ಪ್ರತಿಯೊಬ್ಬ ಗಣತಿದಾರರಿಗೆ ಸುಮಾರು 200 ಮನೆಗಳ ಜವಾಬ್ದಾರಿ ನೀಡಲಾಗಿದೆ. ಇದರಿಂದ ಸಿಬ್ಬಂದಿಗೆ ಒತ್ತಡವೂ ಇರುವುದಿಲ್ಲ. ನಾಗರಿಕರ ಸಹಕಾರದಿಂದ ಈ ಕಾರ್ಯವನ್ನು ತ್ವರಿತವಾಗಿ ಪೂರ್ಣಗೊಳಿಸಲಾಗುವುದು ಎಂದರು.
ಜಿಬಿಎ ವ್ಯಾಪ್ತಿಯಲ್ಲಿ ಗಣತಿದಾರರು, ಮೇಲ್ವಿಚಾರಕರು ಹಾಗೂ ಜನಗಣತಿ ಅಧಿಕಾರಿಗಳು ಅಪಾರ್ಟ್‌ಮೆಂಟ್ ಸಮುಚ್ಚಯಗಳಿಗೆ ಭೇಟಿ ನೀಡಿ ಮನೆ ಪಟ್ಟಿ ಹಾಗೂ ಜನಸಾಂಖ್ಯಿಕ ಮಾಹಿತಿ ಸಂಗ್ರಹಿಸಲಿದ್ದಾರೆ. ಆದ್ದರಿಂದ ಎಲ್ಲ ಅಪಾರ್ಟ್‌ಮೆಂಟ್ ಸಮುಚ್ಚಯಗಳು ಜನಗಣತಿ ಅಧಿಕಾರಿಗಳು, ಗಣತಿದಾರರು, ಮೇಲ್ವಿಚಾರಕರಿಗೆ ತಮ್ಮ ಆವರಣಕ್ಕೆ ಪ್ರವೇಶಿಸಲು ಅವಕಾಶ ಕಲ್ಪಿಸಬೇಕು. ಅಲ್ಲದೆ, ಕೇಳುವ ಪ್ರಶ್ನೆಗಳಿಗೆ ಸರಿಯಾದ ಹಾಗೂ ಸಂಪೂರ್ಣ ಮಾಹಿತಿ ಒದಗಿಸಬೇಕು ಎಂದು ಮನವಿ ಮಾಡಿದರು.
ಗಣತಿದಾರರು ಕೇಳುವ ಪ್ರಶ್ನೆಗಳು
*ಕಟ್ಟಡದ ಸಂಖ್ಯೆ
*ನೆಲ, ಗೋಡೆ ಮತ್ತು ಮೇಲ್ಚಾವಣಿ ನಿರ್ಮಾಣಕ್ಕೆ ಬಳಸಿದ ವಸ್ತುಗಳು
*ಮನೆಯ ಬಳಕೆ (ವಾಸಸ್ಥಳ/ವಾಸೇತರ)
*ಮನೆಯ ಸ್ಥಿತಿ
ಕುಟುಂಬದ ಬಗ್ಗೆ ಮೂಲಭೂತ ಮಾಹಿತಿ:
*ಕುಟುಂಬ ಸದಸ್ಯರ ಸಂಖ್ಯೆ
*ಕುಟುಂಬದ ಮುಖ್ಯಸ್ಥರ ಹೆಸರು, ಲಿಂಗ ಮತ್ತು ಜಾತಿ
*ಮನೆಯ ಮಾಲೀಕತ್ವದ ಸ್ಥಿತಿ
*ಕೊಠಡಿಗಳ ಸಂಖ್ಯೆ
*ಮನೆಯಲ್ಲಿ ವಾಸಿಸುವ ವಿವಾಹಿತ ದಂಪತಿಗಳ ಸಂಖ್ಯೆ
ಸೌಲಭ್ಯಗಳು:
*ಕುಡಿಯುವ ನೀರಿನ ಮೂಲ ಮತ್ತು ಕುಡಿಯುವ ನೀರಿನ ಲಭ್ಯತೆ
*ಬೆಳಕಿನ ಮುಖ್ಯ ಮೂಲ
*ಶೌಚಾಲಯದ ಸೌಲಭ್ಯ ಹಾಗೂ ಶೌಚಾಲಯದ ಪ್ರಕಾರ
*ಮಲಿನ ನೀರಿನ ಹರಿವು ವ್ಯವಸ್ಥೆ
*ಸ್ನಾನಗೃಹ ಸೌಲಭ್ಯ
*ಅಡುಗೆಮನೆ ಮತ್ತು ಸಂಪರ್ಕ, ಜೊತೆಗೆ ಅಡುಗೆಗೆ ಬಳಸುವ ಮುಖ್ಯ ಇಂಧನ
ಆಸ್ತಿಗಳು:
*ರೇಡಿಯೋ/ಟ್ರಾನ್ಸಿಸ್ಟರ್‌ಗಳು
*ಟೆಲಿವಿಷನ್ (ಟಿವಿ)
*ಇಂಟರ್ನೆಟ್ ಸೌಲಭ್ಯ
*ಕಂಪ್ಯೂಟರ್/ಲ್ಯಾಪ್‌ಟಾಪ್ ಹಾಗೂ ಮೊಬೈಲ್ ಫೋನ್/ಟೆಲಿಫೋನ್
*ದ್ವಿಚಕ್ರ/ನಾಲ್ಕು ಚಕ್ರ ವಾಹನಗಳು
ಇತರೆ:
*ಬಳಸುವ ಮುಖ್ಯ ಧಾನ್ಯ
*ಮೊಬೈಲ್ ಸಂಖ್ಯೆ (ಜನಗಣತಿ ಸಂವಹನಕ್ಕಾಗಿ ಮಾತ್ರ)