ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Praja Seva: ಮೂರು ತಿಂಗಳಲ್ಲಿ 80 ಸಾವಿರ ಪೌತಿ ಖಾತೆ ಅರ್ಜಿ ವಿಲೇವಾರಿ: ಜಿಲ್ಲಾಧಿಕಾರಿ ಜಿ.ಪ್ರಭು

ಪ್ರಜಾ ಸೇವಾ ಆಂದೋಲನ ಆರಂಭಕ್ಕೂ ಮುನ್ನ ಸರ್ಕಾರಿ ಕಚೇರಿಗಳಲ್ಲಿ ಸಲ್ಲಿಕೆಯಾಗುತ್ತಿದ್ದ ಅರ್ಜಿಗಳ ವಿಲೇವಾರಿ ಸ್ಥಿತಿಗತಿಯನ್ನು ತಿಳಿದುಕೊಳ್ಳುವುದು ಸಾರ್ವಜನಿಕರಿಗೆ ಕಷ್ಟವಾಗುತ್ತಿತ್ತು. ಆದರೆ, ಈಗ ಆಂದೋಲನದಡಿ ಅರ್ಜಿ ಸಲ್ಲಿಸಿ ಸ್ವೀಕೃತಿ ಪಡೆದರೆ, ಅದರ ವಿಲೇವಾರಿ ಪ್ರಗತಿ ಹಾಗೂ ಸ್ಥಿತಿಯನ್ನು ಆನ್‌ಲೈನ್ ಮೂಲಕವೇ ತಿಳಿದುಕೊಳ್ಳಬಹುದು.

ಮೂರು ತಿಂಗಳಲ್ಲಿ 80 ಸಾವಿರ ಪೌತಿ ಖಾತೆ ಅರ್ಜಿ ವಿಲೇವಾರಿ

-

Profile
Ashok Nayak Nov 28, 2026 11:26 PM

ಪ್ರಜಾ ಸೇವಾ ಆಂದೋಲನದಡಿ ಒಂದೇ ದಿನ 912 ಅರ್ಜಿಗಳ ಸ್ವೀಕಾರ; ಶಿಡ್ಲಘಟ್ಟದಲ್ಲಿ ಅತಿ ಹೆಚ್ಚು 389 ಅರ್ಜಿ ಸಲ್ಲಿಕೆ

ಚಿಕ್ಕಬಳ್ಳಾಪುರ: ಸಾರ್ವಜನಿಕರ ಕುಂದುಕೊರತೆಗಳಿಗೆ ಕಾಲಮಿತಿಯಲ್ಲಿ ಪರಿಹಾರ ಕಲ್ಪಿಸಿ, ಸರ್ಕಾರಿ ಸೇವೆಗಳನ್ನು ಜನರ ಮನೆಬಾಗಿಲಿಗೆ ತಲುಪಿಸುವ ಉದ್ದೇಶದಿಂದ ಜಿಲ್ಲೆಯಲ್ಲಿ ನಡೆಯು ತ್ತಿರುವ ಪ್ರಜಾ ಸೇವಾ(Praja Seva) ಆಂದೋಲನಕ್ಕೆ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಶನಿವಾರ ನಡೆದ ತಾಲೂಕು ಹಾಗೂ ಹೋಬಳಿ ಮಟ್ಟದ ಸಭೆಗಳಲ್ಲಿ ಒಟ್ಟು 912 ಅರ್ಜಿಗಳನ್ನು ಸ್ವೀಕರಿಸಲಾಗಿದ್ದು, ಬಾಕಿ ಇರುವ ಸುಮಾರು 80 ಸಾವಿರ ಪೌತಿ ಖಾತೆ ಅರ್ಜಿಗಳನ್ನು ಮುಂದಿನ ಮೂರು ತಿಂಗಳೊಳಗೆ ವಿಲೇವಾರಿ ಮಾಡಲಾಗು ವುದು ಎಂದು ಜಿಲ್ಲಾಧಿಕಾರಿ ಜಿ. ಪ್ರಭು ತಿಳಿಸಿದರು.

ಶಿಡ್ಲಘಟ್ಟ ತಾಲೂಕಿನ ಚಿಮಂಗಲ ಗ್ರಾಮದ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಶಾಸಕ ಬಿ.ಎನ್. ರವಿಕುಮಾರ್(MLA B.N. Ravikumar) ಅವರ ಸಮ್ಮುಖದಲ್ಲಿ ನಡೆದ ಪ್ರಜಾ ಸೇವಾ ಆಂದೋಲನದ ಸಭೆಗೆ ಚಾಲನೆ ನೀಡಿ ಮಾತನಾಡಿದರು.

ಇದನ್ನೂ ಓದಿ: Praja Seve: ಕಳೆದ ವರ್ಷ 5 ಸಾವಿರಕ್ಕೂ ಅಧಿಕ ಪ್ರಕರಣಗಳ ಇತ್ಯರ್ಥ; ನಿವೇಶನ ರಹಿತರಿಗೆ 1,800 ಎಕರೆ ಪ್ರದೇಶದಲ್ಲಿ ನಿವೇಶನ ಸಿದ್ಧತೆ; ಜಿಲ್ಲೆಯ ಏಳು ಕಡೆ ಆಂದೋಲನ

ಪ್ರಜಾ ಸೇವಾ ಆಂದೋಲನ ಆರಂಭಕ್ಕೂ ಮುನ್ನ ಸರ್ಕಾರಿ ಕಚೇರಿಗಳಲ್ಲಿ ಸಲ್ಲಿಕೆಯಾಗುತ್ತಿದ್ದ ಅರ್ಜಿಗಳ ವಿಲೇವಾರಿ ಸ್ಥಿತಿಗತಿಯನ್ನು ತಿಳಿದುಕೊಳ್ಳುವುದು ಸಾರ್ವಜನಿಕರಿಗೆ ಕಷ್ಟವಾಗುತ್ತಿತ್ತು. ಆದರೆ, ಈಗ ಆಂದೋಲನದಡಿ ಅರ್ಜಿ ಸಲ್ಲಿಸಿ ಸ್ವೀಕೃತಿ ಪಡೆದರೆ, ಅದರ ವಿಲೇವಾರಿ ಪ್ರಗತಿ ಹಾಗೂ ಸ್ಥಿತಿಯನ್ನು ಆನ್‌ಲೈನ್ ಮೂಲಕವೇ ತಿಳಿದುಕೊಳ್ಳಬಹುದು. ಅರ್ಜಿಗಳು ಕೇವಲ ಸ್ವೀಕಾರಕ್ಕೆ ಸೀಮಿತವಾಗದೆ, ವಿಲೇವಾರಿಯಾಗಿ ತಾರ್ಕಿಕ ಅಂತ್ಯ ಕಾಣುವಂತೆ ಅಧಿಕಾರಿಗಳು ಕ್ರಮ ವಹಿಸ ಲಿದ್ದಾರೆ. ಆದ್ದರಿಂದ ಸಾರ್ವಜನಿಕರು ತಮ್ಮ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಅರ್ಜಿ ಸಲ್ಲಿಸಿ ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.

ಜಿಲ್ಲೆಯಲ್ಲಿ ಆರು ತಿಂಗಳ ಹಿಂದೆ ಸುಮಾರು 2.80 ಲಕ್ಷ ಪೌತಿ ಖಾತೆ ಅರ್ಜಿಗಳು ಬಾಕಿ ಇದ್ದವು. ಕಂದಾಯ ಇಲಾಖೆ ಅಧಿಕಾರಿಗಳು ಕೈಗೊಂಡ ವಿಶೇಷ ಅಭಿಯಾನದ ಮೂಲಕ ಈಗಾಗಲೇ ಎರಡು ಲಕ್ಷಕ್ಕೂ ಹೆಚ್ಚು ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ. ಉಳಿದಿರುವ ಸುಮಾರು 80 ಸಾವಿರ ಅರ್ಜಿಗಳನ್ನು ಮುಂದಿನ ಮೂರು ತಿಂಗಳೊಳಗೆ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ ಎಂದರು.

cbpm4l

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ನವೀನ್ ಭಟ್ ಮಾತನಾಡಿ, ಪ್ರಜಾ ಸೇವಾ ಆಂದೋಲನದಲ್ಲಿ ಸಲ್ಲಿಕೆಯಾಗುವ ಅರ್ಜಿಗಳ ವಿಲೇವಾರಿ ಸ್ಥಿತಿಯನ್ನು ಸಾರ್ವಜನಿಕರು ಸುಲಭವಾಗಿ ತಿಳಿದುಕೊಳ್ಳಲು ಸರ್ಕಾರ ‘ನಮ್ಮ ಸೇವೆ’ ಮೊಬೈಲ್ ಆ್ಯಪ್ ಬಿಡುಗಡೆ ಮಾಡುತ್ತಿದೆ. ಇದರ ಸೌಲಭ್ಯವನ್ನು ಸಾರ್ವಜನಿಕರು ಬಳಸಿಕೊಳ್ಳಬೇಕು ಎಂದರು.

ಜಿಲ್ಲೆಯಲ್ಲಿ ಬರದ ಪರಿಸ್ಥಿತಿ ಇರುವ ಹಿನ್ನೆಲೆಯಲ್ಲಿ ಗ್ರಾಮೀಣ ಭಾಗದ ಜನರು ವಿ.ಬಿ.ಜಿ. ರಾಮ್‌ಜಿ ಯೋಜನೆಯಡಿ ದೊರೆಯುವ ಉದ್ಯೋಗಾವಕಾಶ ಹಾಗೂ ಇತರ ಸೌಲಭ್ಯಗಳನ್ನು ಬಳಸಿಕೊಳ್ಳ ಬೇಕು. ಗ್ರಾಮೀಣ ಪ್ರದೇಶಗಳಲ್ಲಿ ಇ-ಸ್ವತ್ತು ನೀಡುವ ಕಾರ್ಯವೂ ಪ್ರಗತಿಯಲ್ಲಿದ್ದು, ಸಾರ್ವಜನಿ ಕರು ಇದರ ಪ್ರಯೋಜನ ಪಡೆಯಬೇಕು ಎಂದು ತಿಳಿಸಿದರು.

ಶಿಡ್ಲಘಟ್ಟದಲ್ಲಿ ಅತಿ ಹೆಚ್ಚು ಅರ್ಜಿ

ಶನಿವಾರ ಸಂಜೆ 5.30ರವರೆಗೆ ಸ್ವೀಕರಿಸಲಾದ 912 ಅರ್ಜಿಗಳಲ್ಲಿ ಬಾಗೇಪಲ್ಲಿಯಲ್ಲಿ 96, ಚಿಕ್ಕಬಳ್ಳಾ ಪುರದಲ್ಲಿ 251, ಚಿಂತಾಮಣಿಯಲ್ಲಿ 105, ಗೌರಿಬಿದನೂರಿನಲ್ಲಿ 21 ಹಾಗೂ ಶಿಡ್ಲಘಟ್ಟದಲ್ಲಿ 389 ಅರ್ಜಿಗಳು ಸಲ್ಲಿಕೆಯಾಗಿವೆ. ಸಭೆಗಳಲ್ಲಿ ಪಿಂಚಣಿ ಅರ್ಜಿಗಳನ್ನು ಸ್ಥಳದಲ್ಲಿಯೇ ವಿಲೇವಾರಿ ಮಾಡಿ ಅರ್ಹ ಫಲಾನುಭವಿಗಳಿಗೆ ಮಂಜೂರಾತಿ ಪತ್ರಗಳನ್ನು ವಿತರಿಸಲಾಯಿತು. ವಿ.ಬಿ.ಜಿ. ರಾಮ್‌ಜಿ ಯೋಜನೆಯಡಿ ಜಾಬ್ ಕಾರ್ಡ್‌ಗಳನ್ನು ವಿತರಿಸುವುದರ ಜೊತೆಗೆ ವೈಯಕ್ತಿಕ ಫಲಾನುಭವಿಗಳ ಕಾಮಗಾರಿಗಳಿಗೆ ಕಾರ್ಯಾದೇಶ ನೀಡಲಾಯಿತು.

ಸರ್ಕಾರದ ವಿವಿಧ ಯೋಜನೆಗಳು ಹಾಗೂ ಇಲಾಖೆಗಳ ಸೇವೆಗಳ ಕುರಿತು ಮಾಹಿತಿ ನೀಡಲು ಸಭಾ ಸ್ಥಳಗಳಲ್ಲಿ ಮಳಿಗೆಗಳನ್ನು ತೆರೆಯಲಾಗಿತ್ತು. ಸಾರ್ವಜನಿಕರಿಗೆ ಯೋಜನೆಗಳ ಅರ್ಹತೆ, ಸೌಲಭ್ಯ ಪಡೆಯುವ ವಿಧಾನಗಳ ಕುರಿತು ಮಾಹಿತಿ ನೀಡಿ ಕರಪತ್ರಗಳನ್ನು ವಿತರಿಸಲಾಯಿತು.

ಸಭೆಯಲ್ಲಿ ಶಾಸಕ ಬಿ.ಎನ್. ರವಿಕುಮಾರ್, ಜಿಲ್ಲಾ ಪಂಚಾಯಿತಿ ಸಿಇಒ ಡಾ.ನವೀನ್ ಭಟ್ ಸೇರಿದಂತೆ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು, ಸಿಬ್ಬಂದಿ, ಸ್ಥಳೀಯ ಜನಪ್ರತಿನಿಧಿ ಗಳು ಮತ್ತು ಸಾರ್ವಜನಿಕರು ಭಾಗವಹಿಸಿದ್ದರು.