Prajaseve: ಸಾರ್ವಜನಿಕರಿಂದ ಅಹವಾಲು, ಅರ್ಜಿ ಸ್ವೀಕಾರ; ಸ್ಥಳದಲ್ಲೇ ಹಲವು ಸಮಸ್ಯೆಗಳಿಗೆ ಪರಿಹಾರ
ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್(Chief Minister DK Shivakumar) ಅವರು ವಿಜಯನಗರ ಜಿಲ್ಲೆಯ ಕೂಡ್ಲಿಗಿಯಲ್ಲಿ ಪ್ರಜಾಸೇವಾ ಆಂದೋಲನಕ್ಕೆ ಚಾಲನೆ ನೀಡಿದ ಬೆನ್ನಲ್ಲೇ ಜಿಲ್ಲೆಯ ಬಾಗೇಪಲ್ಲಿ, ಚಿಕ್ಕಬಳ್ಳಾಪುರ, ಗೌರಿಬಿದನೂರು, ಶಿಡ್ಲಘಟ್ಟ ಹಾಗೂ ಚಿಂತಾಮಣಿ ವಿಧಾನಸಭಾ ಕ್ಷೇತ್ರಗಳಲ್ಲಿ ಏಕಕಾಲಕ್ಕೆ ಸಭೆಗಳನ್ನು ಆಯೋಜಿಸಲಾಗಿತ್ತು.
-
ಚಿಕ್ಕಬಳ್ಳಾಪುರ: ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಶನಿವಾರ ಏಕಕಾಲಕ್ಕೆ ಪ್ರಜಾಸೇವಾ ಆಂದೋಲನ ಸಭೆಗಳನ್ನು ನಡೆಸುವ ಮೂಲಕ ಸಾರ್ವಜನಿಕರಿಂದ ಅಹವಾಲು, ಅರ್ಜಿಗಳು ಹಾಗೂ ಕುಂದುಕೊರತೆಗಳನ್ನು ಸ್ವೀಕರಿಸಿ, ಅರ್ಹ ಪ್ರಕರಣಗಳಿಗೆ ಸ್ಥಳದಲ್ಲೇ ಪರಿಹಾರ ಒದಗಿಸುವ ಕಾರ್ಯಕ್ಕೆ ಚಾಲನೆ ನೀಡಲಾಯಿತು.
ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್(Chief Minister DK Shivakumar) ಅವರು ವಿಜಯನಗರ ಜಿಲ್ಲೆಯ ಕೂಡ್ಲಿಗಿಯಲ್ಲಿ ಪ್ರಜಾಸೇವಾ ಆಂದೋಲನಕ್ಕೆ ಚಾಲನೆ ನೀಡಿದ ಬೆನ್ನಲ್ಲೇ ಜಿಲ್ಲೆಯ ಬಾಗೇ ಪಲ್ಲಿ, ಚಿಕ್ಕಬಳ್ಳಾಪುರ, ಗೌರಿಬಿದನೂರು, ಶಿಡ್ಲಘಟ್ಟ ಹಾಗೂ ಚಿಂತಾಮಣಿ ವಿಧಾನಸಭಾ ಕ್ಷೇತ್ರ ಗಳಲ್ಲಿ ಏಕಕಾಲಕ್ಕೆ ಸಭೆಗಳನ್ನು ಆಯೋಜಿಸಲಾಗಿತ್ತು.
ಬಾಗೇಪಲ್ಲಿ ನಗರದ ಸರ್ಕಾರಿ ಬಾಲಕಿಯರ ಶಾಲಾ ಆವರಣದಲ್ಲಿ ಜಿಲ್ಲಾಧಿಕಾರಿ ಜಿ.ಪ್ರಭು ಅವರು ಸ್ಥಳೀಯ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಅವರ ಸಮ್ಮುಖದಲ್ಲಿ ಸಾರ್ವಜನಿಕರ ಅಹವಾಲು ಗಳನ್ನು ಸ್ವೀಕರಿಸಿ, ವಿವಿಧ ಅರ್ಜಿಗಳ ವಿಲೇವಾರಿಗೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಚಿಕ್ಕಬಳ್ಳಾಪುರ ಕ್ಷೇತ್ರದ ನಂದಿ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಉಪವಿಭಾಗಾಧಿಕಾರಿ ಡಿ.ಎಚ್. ಅಶ್ವಿನ್ ಅವರ ನೇತೃತ್ವದಲ್ಲಿ, ಗೌರಿಬಿದನೂರು ಕ್ಷೇತ್ರದ ತೊಂಡೇಬಾವಿ ಗ್ರಾಮದ ಶಿವಾನಂದ ಶಾಲಾ ಆವರಣದಲ್ಲಿ ಶಾಸಕ ಕೆ.ಎಚ್.ಪುಟ್ಟಸ್ವಾಮಿಗೌಡ, ಶಿಡ್ಲಘಟ್ಟ ಕ್ಷೇತ್ರದ ಸಾದಲಿ ಗ್ರಾಮದ ಕೆಪಿಎಸ್ ಶಾಲಾ ಆವರಣದಲ್ಲಿ ಶಾಸಕ ರವಿಕುಮಾರ್ ಹಾಗೂ ಚಿಂತಾಮಣಿ ಕ್ಷೇತ್ರದ ಮುಂಗಾನ ಹಳ್ಳಿ ಗ್ರಾಮದ ನಾಡಕಚೇರಿ ಆವರಣದಲ್ಲಿ ತಹಶೀಲ್ದಾರ್ ಸುದರ್ಶನ್ ಯಾದವ್ ಅವರ ನೇತೃತ್ವದಲ್ಲಿ ಪ್ರಜಾಸೇವಾ ಆಂದೋಲನ ಸಭೆಗಳು ನಡೆದವು.
ಸಭೆಗಳಲ್ಲಿ ಸ್ವೀಕರಿಸಲಾದ ಅರ್ಜಿಗಳು, ದೂರುಗಳು ಹಾಗೂ ಕುಂದುಕೊರತೆಗಳನ್ನು ಗಣಕೀಕರಿಸಿ ಸಾರ್ವಜನಿಕ ಕುಂದುಕೊರತೆ ಪರಿಹಾರ ವ್ಯವಸ್ಥೆಯ ಅಂತರ್ಜಾಲ ತಾಣದಲ್ಲಿ ನೋಂದಾಯಿಸ ಲಾಯಿತು. ಅರ್ಜಿದಾರರಿಗೆ ನಿಗದಿತ ಸ್ವೀಕೃತಿ ಪತ್ರಗಳನ್ನು ವಿತರಿಸಲಾಯಿತು. ಅರ್ಹವಾಗಿದ್ದ ಕೆಲವು ಅರ್ಜಿಗಳನ್ನು ಸ್ಥಳದಲ್ಲೇ ವಿಲೇವಾರಿ ಮಾಡಿ, ಫಲಾನುಭವಿಗಳಿಗೆ ಮಂಜೂರಾತಿ ಹಾಗೂ ಅನುಮೋದನಾ ಪತ್ರಗಳನ್ನು ವಿತರಿಸಲಾಯಿತು. ತಕ್ಷಣ ವಿಲೇವಾರಿ ಸಾಧ್ಯವಾಗದ ಅರ್ಜಿಗಳನ್ನು ನಿಗದಿತ ಕಾಲಮಿತಿಯಲ್ಲಿ ಪರಿಹರಿಸುವ ಕುರಿತು ಅರ್ಜಿದಾರರಿಗೆ ಮಾಹಿತಿ ನೀಡಲಾಯಿತು.
“ಅಹವಾಲು ನಿಮ್ಮದು, ಪರಿಹಾರ ನಮ್ಮದು” ಎಂಬ ಆಶಯದಂತೆ ಸರ್ಕಾರವೇ ಜನರ ಮನೆ ಬಾಗಿಲಿಗೆ ಬಂದು ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸುವ ಉದ್ದೇಶದಿಂದ ಪ್ರಜಾಸೇವಾ ಆಂದೋಲನ ಹಮ್ಮಿಕೊಳ್ಳಲಾಗಿದೆ. ಜಿಲ್ಲೆಯಲ್ಲಿ ಈ ಆಂದೋಲನವನ್ನು ರಾಜ್ಯಕ್ಕೆ ಮಾದರಿ ಯಾಗುವ ರೀತಿಯಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲಾಗುವುದು ಎಂದು ಜಿಲ್ಲಾಧಿಕಾರಿ ಜಿ.ಪ್ರಭು ವಿಶ್ವಾಸ ವ್ಯಕ್ತಪಡಿಸಿದರು.
ಅರ್ಜಿಯನ್ನು ಸಲ್ಲಿಸುವುದಷ್ಟೇ ಅಲ್ಲದೆ, ಸಾರ್ವಜನಿಕರು ಕಡ್ಡಾಯವಾಗಿ ಸ್ವೀಕೃತಿ ಪತ್ರ ಪಡೆಯ ಬೇಕು. ಸ್ವೀಕೃತ ಅರ್ಜಿಗಳು ಆನ್‌ಲೈನ್ ವ್ಯವಸ್ಥೆಯಲ್ಲಿ ದಾಖಲಾಗುವುದರಿಂದ ಅವುಗಳ ವಿಲೇವಾರಿ ಸ್ಥಿತಿಯನ್ನು ಸುಲಭವಾಗಿ ತಿಳಿದುಕೊಳ್ಳಬಹುದು. ಬಾಕಿ ಇರುವ ಅರ್ಜಿಗಳನ್ನು ಅಧಿಕಾರಿಗಳು ಕಾಲಮಿತಿಯಲ್ಲಿ ವಿಲೇವಾರಿ ಮಾಡುವಂತೆ ನಿಗಾ ವಹಿಸಲಾಗುವುದು ಎಂದು ಅವರು ತಿಳಿಸಿದರು.
ಜಿಲ್ಲೆಯಲ್ಲಿ ಈಗಾಗಲೇ 35 ಇಲಾಖೆಗಳ ಇ-ಕಚೇರಿಗಳು ಕಾರ್ಯಾರಂಭ ಮಾಡಿದ್ದು, ಇದರಿಂದ ಆಡಳಿತದಲ್ಲಿ ಮತ್ತಷ್ಟು ಪಾರದರ್ಶಕತೆ ಹಾಗೂ ವೇಗ ದೊರೆತಿದೆ. ಭೂ ಸುರಕ್ಷಾ ಯೋಜನೆಯಡಿ ಕಂದಾಯ ದಾಖಲೆಗಳನ್ನು ವಿತರಿಸಲಾಗುತ್ತಿದ್ದು, ಮುಂದಿನ ಒಂದೆರಡು ತಿಂಗಳಲ್ಲಿ ಎಲ್ಲ ಕಂದಾಯ ದಾಖಲೆಗಳನ್ನು ಒದಗಿಸುವ ವ್ಯವಸ್ಥೆ ಕಲ್ಪಿಸಲಾಗುವುದು ಎಂದರು.
ಪ್ರಜಾಸೇವಾ ಆಂದೋಲನದ ಅಂಗವಾಗಿ ವಿವಿಧ ಇಲಾಖೆಗಳು ಜಾಗೃತಿ ಮಳಿಗೆಗಳನ್ನು ತೆರೆದು ತಮ್ಮ ಇಲಾಖೆಗಳ ಯೋಜನೆಗಳು ಹಾಗೂ ಸೇವೆಗಳ ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡಿದವು. ವಿವಿಧ ಯೋಜನೆಗಳ ಸೌಲಭ್ಯಗಳನ್ನು ಅರ್ಹ ಫಲಾನುಭವಿಗಳಿಗೆ ವಿತರಿಸಲಾಯಿತು.
ಜಿಲ್ಲೆ, ತಾಲ್ಲೂಕು ಹಾಗೂ ಸ್ಥಳೀಯ ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ಸಭೆಗಳಲ್ಲಿ ಭಾಗವಹಿಸಿ, ಸಾರ್ವಜನಿಕರಿಂದ ಸ್ವೀಕರಿಸಲಾದ ಅರ್ಜಿಗಳನ್ನು ಇಲಾಖಾವಾರು ವಿಲೇವಾರಿ ಮಾಡಲು ಕ್ರಮ ಕೈಗೊಂಡರು. ಸರ್ಕಾರದ ಸೇವೆಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸುವ ಉದ್ದೇಶದ ಪ್ರಜಾಸೇವಾ ಆಂದೋಲನಕ್ಕೆ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಯಿತು.