Prakash Raj: ಸೆ.30ರಂದು ಎಸ್‌ಐಆರ್ ವಿರೋಧಿ ಸಮಾವೇಶ: ನಟ ಪ್ರಕಾಶ್ ರಾಜ್
ರಾಜ್ಯದ 100 ಮತಗಟ್ಟೆಗಳಲ್ಲಿ ಎಸ್‌ಐಆರ್ ಪ್ರಕ್ರಿಯೆ ಕುರಿತು ಪರಿಶೋಧನೆ ನಡೆಸಿ, ಲೋಪಗಳು ಕಂಡುಬಂದಿರುವುದನ್ನು ದಾಖಲೆಗಳ ಸಹಿತ ಜನರ ಮುಂದಿಡಲಾಗುವುದು. ಸೆ.30ರಂದು ಬೆಂಗಳೂರಿ ನಲ್ಲಿ ನಡೆಯುವ ಸಮಾವೇಶದಲ್ಲಿ ಸಾವಿರಾರು ಮಂದಿ ಭಾಗವಹಿಸಲಿದ್ದು, ಅ.15ರಂದು ದೆಹಲಿಯ ಜಂತರ್ ಮಂತರ್‌ನಲ್ಲಿ ದೇಶದ ವಿವಿಧ ರಾಜ್ಯಗಳ ಜನರನ್ನು ಒಳಗೊಂಡ ಬೃಹತ್ ಪ್ರತಿಭಟನೆ ನಡೆಸಲು ಉದ್ದೇಶಿಸಲಾಗಿದೆ
-
ಚಿಕ್ಕಬಳ್ಳಾಪುರ: ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯಲ್ಲಿ ನಡೆದಿದೆ ಎನ್ನಲಾದ ಲೋಪಗಳನ್ನು ದಾಖಲಿಸಿ, ಅರ್ಹ ಮತದಾರರ ಹಕ್ಕು ರಕ್ಷಣೆಗೆ ಆಗ್ರಹಿಸಿ ಸೆ.30ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಬೃಹತ್ ಪ್ರತಿಭಟನಾ ಸಮಾವೇಶ ಹಮ್ಮಿಕೊಳ್ಳ ಲಾಗಿದೆ ಎಂದು ನಟ ಹಾಗೂ ಸಾಮಾಜಿಕ ಹೋರಾಟಗಾರ ಪ್ರಕಾಶ್ ರಾಜ್(PrakashRaj) ತಿಳಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ಶನಿವಾರ ಎದ್ದೇಳು ಕರ್ನಾಟಕ, ಜಿಲ್ಲಾ ಸಮಿತಿ ಹಾಗೂ ಜಿಲ್ಲಾ ಮತಕಾವಲು ಸಮಿತಿ ವತಿಯಿಂದ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ರಾಜ್ಯದ 100 ಮತಗಟ್ಟೆಗಳಲ್ಲಿ ಎಸ್‌ಐಆರ್ ಪ್ರಕ್ರಿಯೆ ಕುರಿತು ಪರಿಶೋಧನೆ ನಡೆಸಿ, ಲೋಪಗಳು ಕಂಡುಬಂದಿರುವುದನ್ನು ದಾಖಲೆಗಳ ಸಹಿತ ಜನರ ಮುಂದಿಡಲಾಗುವುದು. ಸೆ.30ರಂದು ಬೆಂಗಳೂರಿನಲ್ಲಿ ನಡೆಯುವ ಸಮಾವೇಶದಲ್ಲಿ ಸಾವಿರಾರು ಮಂದಿ ಭಾಗವಹಿಸಲಿದ್ದು, ಅ.15ರಂದು ದೆಹಲಿಯ ಜಂತರ್ ಮಂತರ್‌ನಲ್ಲಿ ದೇಶದ ವಿವಿಧ ರಾಜ್ಯಗಳ ಜನರನ್ನು ಒಳಗೊಂಡ ಬೃಹತ್ ಪ್ರತಿಭಟನೆ ನಡೆಸಲು ಉದ್ದೇಶಿಸಲಾಗಿದೆ ಎಂದು ಹೇಳಿದರು.
ಇದನ್ನೂ ಓದಿ: Chikkaballapur News: ರೈತರಿಗೆ ಸಕಾಲದಲ್ಲಿ ಸಾಲ ಸೌಲಭ್ಯ ಕಲ್ಪಿಸಿ ಕೃಷಿ ಅಭಿವೃದ್ಧಿಗೆ ಸಹಕಾರ: ವಿ.ಮಧುಚಂದ್ರ
ಮತದಾರರ ಪಟ್ಟಿಯ ಪರಿಷ್ಕರಣೆಯಲ್ಲಿ ಅರ್ಹ ಮತದಾರರ ಹೆಸರುಗಳು ಯಾವುದೇ ಕಾರಣಕ್ಕೂ ಹೊರಗುಳಿಯಬಾರದು. ಮನೆ ಬದಲಾವಣೆ, ಉದ್ಯೋಗದ ನಿಮಿತ್ತ ಸ್ಥಳಾಂತರ ಸೇರಿದಂತೆ ವಿವಿಧ ಕಾರಣಗಳಿಂದ ಜನರು ಬೇರೆಡೆ ವಾಸಿಸುತ್ತಿರುವುದನ್ನು ಆಧರಿಸಿ ಅವರ ಮತದಾನದ ಹಕ್ಕಿಗೆ ಧಕ್ಕೆಯಾಗಬಾರದು ಎಂದು ಆಗ್ರಹಿಸಿದರು.
ಮತದಾನದ ಹಕ್ಕು ಪ್ರತಿಯೊಬ್ಬ ನಾಗರಿಕನ ಮೂಲಭೂತ ಪ್ರಜಾಸತ್ತಾತ್ಮಕ ಹಕ್ಕಾಗಿದೆ. ಎಸ್‌ಐಆರ್ ಪ್ರಕ್ರಿಯೆಯಲ್ಲಿನ ಲೋಪಗಳ ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡುವ ಉದ್ದೇಶ ದಿಂದ ರಾಜ್ಯಾದ್ಯಂತ ಜಾಗೃತಿ ಹಾಗೂ ಪರಿಶೋಧನಾ ಪ್ರವಾಸ ನಡೆಸಲಾಗುತ್ತಿದೆ ಎಂದರು.
ಮತದಾರರ ಪಟ್ಟಿಯಿಂದ ಹೆಸರುಗಳನ್ನು ಕೈಬಿಡುವ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಇರಬೇಕು. ಅರ್ಹ ಮತದಾರರಿಗೆ ಆಕ್ಷೇಪಣೆ ಸಲ್ಲಿಸಲು ಹಾಗೂ ವಿಚಾರಣೆಯಲ್ಲಿ ತಮ್ಮ ಅಹವಾಲು ಮಂಡಿಸಲು ಸಮರ್ಪಕ ಅವಕಾಶ ನೀಡಬೇಕು. ಪ್ರಕ್ರಿಯೆಗೆ ನಿಗದಿಪಡಿಸಿರುವ ಕಾಲಾವಕಾಶವನ್ನೂ ವಿಸ್ತರಿಸಬೇಕು ಎಂದು ಒತ್ತಾಯಿಸಿದರು.
ಬೆಂಗಳೂರಿನ ಶಾಂತಿನಗರ ನಿವಾಸಿಯಾಗಿರುವ ತಮ್ಮ ಹೆಸರೂ ಮತದಾರರ ಪಟ್ಟಿಯಲ್ಲಿ ಇಲ್ಲದಿರುವ ಕುರಿತು ಪ್ರಶ್ನಿಸಿದ ಅವರು, ಸ್ಥಳಾಂತರಗೊಂಡ ಕಾರಣಕ್ಕೆ ಅರ್ಹ ನಾಗರಿಕರ ಹೆಸರುಗಳನ್ನು ಪಟ್ಟಿಯಿಂದ ಕೈಬಿಡುವುದು ಸರಿಯೇ ಎಂದು ಪ್ರಶ್ನಿಸಿದರು.
ಎಸ್‌ಐಆರ್ ಪ್ರಕ್ರಿಯೆಯ ಕುರಿತು ಚುನಾವಣಾ ಆಯೋಗ ತನ್ನ ನಿರ್ಧಾರಗಳನ್ನು ಸರ್ವಾನು ಮತದಿಂದ ಕೈಗೊಳ್ಳಲಾಗಿದೆ ಎಂದು ಇತ್ತೀಚೆಗೆ ಸ್ಪಷ್ಟಪಡಿಸಿದೆ. ಮತ್ತೊಂದೆಡೆ, ಪ್ರಕ್ರಿಯೆಯಲ್ಲಿ ಲೋಪಗಳಾಗಿವೆ ಎಂದು ಆರೋಪಿಸುತ್ತಿರುವ ಸಂಘಟನೆಗಳು ಅವುಗಳ ಕುರಿತು ದಾಖಲೆಗಳನ್ನು ಬಿಡುಗಡೆ ಮಾಡುತ್ತಿವೆ. ಈ ಹಿನ್ನೆಲೆಯಲ್ಲಿ ಆರೋಪಗಳು ಮತ್ತು ಚುನಾವಣಾ ಆಯೋಗದ ಸ್ಪಷ್ಟನೆಗಳನ್ನು ಸಮಗ್ರವಾಗಿ ಪರಿಶೀಲಿಸುವ ಅಗತ್ಯವಿದೆ.
ಸುದ್ದಿಗೋಷ್ಟಿಯಲ್ಲಿ ಬಹುಭಾಷಾ ನಟರು, ಸಾಮಾಜಿಕ ಹೋರಾಟಗಾರರಾದ ಪ್ರಕಾಶ್ ರಾಜ್, ಎನ್ ವೆಂಕಟೇಶ್, ದಸಂಸ, ರಾಜ್ಯ ಸಮಿತಿ, ಕುಮಾರ್ ಸಮತಲ, ಎದ್ದೇಳು ಕರ್ನಾಟಕ, ಕಿರಣ್ ಕಮಲ್ ಪ್ರಸಾದ್, ಜೀವಿಕ, ರಾಜ್ಯಾಧ್ಯಕ್ಷರು, ಅಮ್ಜದ್ ಪಾಷಾ, ಎದ್ದೇಳು ಕರ್ನಾಟಕ, ರಮೇಶ್ ಬೆಲ್ಲಂಕೊಂಡ, ಕನ್ನಡ ಭಾರತೀಯರು, ಶ್ರೀರಂಗಾಚಾರಿ ಆರ್, ಎದ್ದೇಳು ಕರ್ನಾಟಕ,ಶಮೀರ್ ಜಿ, ಜಿಲ್ಲಾ ಕೋ-ಆರ್ಡಿನೇಟರ್, ಎದ್ದೇಳು ಕರ್ನಾಟಕ, ಮಹಮದ್ ನೂರುಲ್ಲಾ, ಜಿಲ್ಲಾ ಅಧ್ಯಕ್ಷರು, ಜಿಲ್ಲಾ ಮತಕಾವಲು ಸಮಿತಿ, ಶಶಿರಾಜ್ ಹರತಲೆ, ಕವಿಗಳು, ಸಾಮಾಜಿಕ ಕಾರ್ಯಕರ್ತರು, ಪರಮೇಶ್ ಎನ್, ಅಧ್ಯಕ್ಷರು, ಮತಕಾವಲು ಸಮಿತಿ, ಚಿಕ್ಕಬಳ್ಳಾಪುರ, ವೆಂಕಟೇಶ್ ಬಾಗೇಪಲ್ಲಿ, ಎದ್ದೇಳು ಕರ್ನಾಟಕ. ಖಲೀದುಲ್ಲಾ ಷರೀಫ್, ಎಸ್.ಡಿ.ಪಿ.ಐ. ಚಿಕ್ಕಬಳ್ಳಾಪುರ ಮತ್ತಿತರರು ಇದ್ದರು.