Gudibande News: ದೇಶ ಮತ್ತು ರಾಜ್ಯದ ಅಭಿವೃದ್ಧಿಗೆ ಬಿಜೆಪಿ ಮಹತ್ವದ ಕೊಡುಗೆ ನೀಡಿದೆ: ಸಿ.ಮುನಿರಾಜು
ಕೇಂದ್ರ ಸರ್ಕಾರ ಕಳೆದ ಹಲವು ವರ್ಷಗಳಲ್ಲಿ ಮೂಲಸೌಕರ್ಯ ಅಭಿವೃದ್ಧಿ, ರೈತರ ಕಲ್ಯಾಣ, ಮಹಿಳಾ ಸಬಲೀಕರಣ, ಯುವಜನರಿಗೆ ಉದ್ಯೋಗಾವಕಾಶ, ಡಿಜಿಟಲ್ ಭಾರತ, ಆತ್ಮನಿರ್ಭರ ಭಾರತ ಸೇರಿದಂತೆ ಅನೇಕ ಮಹತ್ವಾಕಾಂಕ್ಷಿ ಯೋಜನೆಗಳನ್ನು ಜಾರಿಗೆ ತಂದಿದ್ದು, ದೇಶವನ್ನು ಅಭಿವೃದ್ಧಿಯತ್ತ ಕೊಂಡೊ ಯ್ಯುವಲ್ಲಿ ಮಹತ್ವದ ಪಾತ್ರ ವಹಿಸಿದೆ.
-
ಗುಡಿಬಂಡೆ: ಕೇಂದ್ರದಲ್ಲಿ ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬಂದ ನಂತರ ದೇಶದಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಹೊಸ ವೇಗ ಸಿಕ್ಕಿದ್ದು, ರಾಜ್ಯದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಆಡಳಿತಾವಧಿಯಲ್ಲಿ ಹಲವು ಜನಪರ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೆ ತಂದು ರಾಜ್ಯದ ಅಭಿವೃದ್ದಿಗೆ ಶ್ರಮಿಸಿದ್ದಾರೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿ.ಮುನಿರಾಜು ಹೇಳಿದರು.
ತಾಲೂಕಿನ ವರ್ಲಕೊಂಡ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ನರೇಂದ್ರ ಮೋದಿ(Narendra Modi) ಅವರು ಪ್ರಧಾನಿ ಯಾಗಿ ದೀರ್ಘಾವಧಿ ಸೇವೆ ಸಲ್ಲಿಸಿರುವುದು ಹಾಗೂ ಬಿ.ಎಸ್.ಯಡಿಯೂರಪ್ಪ(B S Yediyurappa) ಅವರ 50 ವರ್ಷಗಳ ರಾಜಕೀಯ ಪಯಣದ ಅಂಗವಾಗಿ ಆಯೋಜಿಸಲಾಗಿದ್ದ ನಮೋ-ಬಿಎಸ್‌ವೈ ಕ್ರಿಕೆಟ್ ಟೂರ್ನಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ಕೇಂದ್ರ ಸರ್ಕಾರ ಕಳೆದ ಹಲವು ವರ್ಷಗಳಲ್ಲಿ ಮೂಲಸೌಕರ್ಯ ಅಭಿವೃದ್ಧಿ, ರೈತರ ಕಲ್ಯಾಣ, ಮಹಿಳಾ ಸಬಲೀಕರಣ, ಯುವಜನರಿಗೆ ಉದ್ಯೋಗಾವಕಾಶ, ಡಿಜಿಟಲ್ ಭಾರತ, ಆತ್ಮನಿರ್ಭರ ಭಾರತ ಸೇರಿದಂತೆ ಅನೇಕ ಮಹತ್ವಾಕಾಂಕ್ಷಿ ಯೋಜನೆಗಳನ್ನು ಜಾರಿಗೆ ತಂದಿದ್ದು, ದೇಶವನ್ನು ಅಭಿವೃದ್ಧಿಯತ್ತ ಕೊಂಡೊಯ್ಯುವಲ್ಲಿ ಮಹತ್ವದ ಪಾತ್ರ ವಹಿಸಿದೆ.
ಇದನ್ನೂ ಓದಿ: Gudibande News: ನೈಜ ಚುನಾವಣೆಯ ಅನುಭವ ಪಡೆದ ವಿದ್ಯಾರ್ಥಿಗಳು; ಪ್ರಜಾಪ್ರಭುತ್ವ ಮೌಲ್ಯಗಳ ಅರಿವು
ರಾಜ್ಯದಲ್ಲೂ ಬಿ.ಎಸ್. ಯಡಿಯೂರಪ್ಪ ಅವರ ನೇತೃತ್ವದ ಸರ್ಕಾರ ರೈತರು, ಕಾರ್ಮಿಕರು, ಮಹಿಳೆಯರು, ವಿದ್ಯಾರ್ಥಿಗಳು ಸೇರಿದಂತೆ ಸಮಾಜದ ಎಲ್ಲಾ ವರ್ಗದ ಜನರಿಗೆ ಅನುಕೂಲವಾಗುವ ಅನೇಕ ಜನಪರ ಕಾರ್ಯಕ್ರಮಗಳನ್ನು ಜಾರಿಗೊಳಿಸಿತ್ತು. ಅವರ ಆಡಳಿತದ ಅವಧಿಯಲ್ಲಿ ಕೈಗೊಂಡ ಅಭಿವೃದ್ಧಿ ಕಾರ್ಯಗಳು ಇಂದಿಗೂ ಜನರ ಮೆಚ್ಚುಗೆಗೆ ಪಾತ್ರವಾಗಿವೆ ಎಂದರು.
ಇನ್ನೂ ಅವರ ಹೆಸರಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ರವರ ಸೂಚನೆಯಂತೆ ಈ ಟೂರ್ನಿಯನ್ನು ಆಯೋಜಿಸಲಾಗಿದೆ. ಮೊದಲಿಗೆ ಗ್ರಾಪಂ ಮಟ್ಟದಲ್ಲಿ ಆಯೋಜಿಸಲಾಗುತ್ತಿದ್ದು, ಒಟ್ಟು 36 ಪಂಚಾಯತಿಗಳಲ್ಲಿ ಹಂತ ಹಂತವಾಗಿ ಟೂರ್ನಿಯನ್ನು ಆಯೋಜಿಸಲಾಗುತ್ತಿದೆ. ಗ್ರಾಪಂ ಮಟ್ಟದಲ್ಲಿ ವಿಜೇತರಾದವರಿಗೆ ಪ್ರಥಮ 15. ದ್ವಿತೀಯ 10, ತೃತೀಯ 5 ಸಾವಿರ ನಗದು ಬಹುಮಾನ ನೀಡಲಾಗುತ್ತದೆ.
ಎಲ್ಲಾ ಗ್ರಾ.ಪಂ ಪಂದ್ಯಾವಳಿಗಳು ಮುಗಿದ ಬಳಿಕ ವಿಧಾನಸಭಾ ಕ್ಷೇತ್ರ ಮಟ್ಟದಲ್ಲಿ ಬೃಹತ್ ಟೂರ್ನಿಯನ್ನು ಆಯೋಜಿಸಲಾಗುತ್ತದೆ. ಈ ಟೂರ್ನಿಯಲ್ಲಿ ವಿಜೇತರಾದವರಿಗೆ ಪ್ರಥಮ 2 ಲಕ್ಷ, ದ್ವಿತೀಯ 1.5 ಲಕ್ಷ, ತೃತೀಯ 1 ಲಕ್ಷ ಹಾಗೂ ತೃತೀಯ 50 ಸಾವಿರ ನಗದು ಬಹುಮಾನ ನೀಡಲಾ ಗುತ್ತದೆ. ಈ ಟೂರ್ನಿ ಇಡೀ ರಾಜ್ಯವನ್ನೆ ಬಾಗೇಪಲ್ಲಿಯತ್ತ ಸೆಳೆಯುವಂತೆ ಮಾಡುವುದು ನಮ್ಮ ಉದ್ದೇಶವಾಗಿದೆ ಎಂದರು.
ಬಳಿಕ ಬಿಜೆಪಿ ಜಿಲ್ಲಾಧ್ಯಕ್ಷ ಸೀಕಲ್ ರಾಮಚಂದ್ರೇಗೌಡ ಮಾತನಾಡಿ, ಯುವಕರಲ್ಲಿ ಕ್ರೀಡಾ ಮನೋಭಾವ ಬೆಳೆಸುವ ಉದ್ದೇಶದಿಂದ ಇಂತಹ ಕ್ರಿಕೆಟ್ ಪಂದ್ಯಾವಳಿಗಳನ್ನು ಆಯೋಜಿಸ ಲಾಗುತ್ತಿದ್ದು, ಕ್ರೀಡೆ ದೈಹಿಕ ಮತ್ತು ಮಾನಸಿಕ ಆರೋಗ್ಯ ವೃದ್ಧಿಸುವುದರ ಜೊತೆಗೆ ಶಿಸ್ತು, ನಾಯಕತ್ವ ಹಾಗೂ ತಂಡದ ಮನೋಭಾವವನ್ನು ಬೆಳೆಸುತ್ತದೆ. ಯುವಕರು ಕ್ರೀಡೆಯ ಜೊತೆಗೆ ಸಮಾಜಮುಖಿ ಚಟುವಟಿಕೆಗಳಲ್ಲಿಯೂ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು. ಮೊಬೈಲ್ ಬಳಕೆ ಬಿಟ್ಟು ಕ್ರೀಡೆಗಳತ್ತ ಮುಖ ಮಾಡಬೇಕು ಎಂದರು.
ಈ ಸಮಯದಲ್ಲಿ ಬಿಜೆಪಿ ಪಕ್ಷದ ಗುಡಿಬಂಡೆ ಅಧ್ಯಕ್ಷ ಗಂಗಿರೆಡ್ಡಿ, ಬಾಗೇಪಲ್ಲಿ ಅಧ್ಯಕ್ಷ ಪ್ರತಾಪ್, ಮುಖಂಡರಾದ ಬೈರಾರೆಡ್ಡಿ, ಅಂಬರೀಶ್, ಬಾಬು, ಮಧುಸೂಧನರೆಡ್ಡಿ, ಮಣಿ, ಪ್ರೆಸ್ ಶಿವಪ್ಪ, ರಾಮಪ್ಪ ಸೇರಿದಂತೆ ಬಿಜೆಪಿ ಮುಖಂಡರು, ವಿವಿಧ ಘಟಕಗಳ ಪದಾಧಿಕಾರಿಗಳು, ಕ್ರೀಡಾಪಟುಗಳು ಹಾಗೂ ಗ್ರಾಮಸ್ಥರು ಹಾಜರಿದ್ದರು.