Dr. K. Sudhakar: ಸಾಮಾಜಿಕ ಜಾಲತಾಣಗಳ ಬಳಕೆಯಲ್ಲಿ ಕಳೆದುಹೋಗಬೇಡಿ, ಮೌಲ್ಯ ಅರಿತುಕೊಂಡು ಸಾಧನೆ ಮಾಡಿ: ಸಂಸದ ಡಾ.ಕೆ.ಸುಧಾಕರ್
ಯುವಜನರು ಹೆಚ್ಚಿನ ಸಮಯ ವನ್ನು ಫೋನ್‌ನಲ್ಲೇ ಕಳೆಯುತ್ತಾರೆ. ಫೋನ್, ಲ್ಯಾಪ್‌ಟಾಪ್ ಮೊದಲಾದ ಉಪಕರಣ ಹಾಗೂ ತಂತ್ರಜ್ಞಾನಗಳು ಯುವಜನರ ಸಾಧನವಾಗಬೇಕೆ ಹೊರತು ಯುವಜನರೇ ತಂತ್ರಜ್ಞಾನದ ಸಾಧನ ವಾಗಬಾರದು. ನಾನು ವಿದ್ಯಾರ್ಥಿಯಾಗಿದ್ದಾಗ ಊರಿನ ಸ್ಟುಡಿಯೋಗೆ ಹೋಗಿ ಫೋಟೋ ತೆಗೆಸಿ ಕೊಳ್ಳುತ್ತಿದ್ದೆ. ವರ್ಷಕ್ಕೆ ಒಮ್ಮೆ ಬಾರಿ ಮಾತ್ರ ಗ್ರೂಪ್ ಫೋಟೋ ತೆಗೆಸಿಕೊಳ್ಳುತ್ತಿದ್ದೆವು. ಈಗ ತಂತ್ರಜ್ಞಾನ ಎಷ್ಟು ಬದಲಾಗಿದೆ ಎಂದರೆ, ಈಗಿನ ವಿದ್ಯಾರ್ಥಿಗಳು ದಿನಕ್ಕೆ ಕನಿಷ್ಠ ನೂರು ಸೆಲ್ಫಿ ತೆಗೆದುಕೊಳ್ಳುತ್ತಾರೆ.
-
ಚಿಕ್ಕಬಳ್ಳಾಪುರ: ವಿದ್ಯಾರ್ಥಿಗಳು ಫೋನ್ ಹಾಗೂ ಸಾಮಾಜಿಕ ಜಾಲತಾಣಗಳ ಬಳಕೆಯಲ್ಲಿ ಕಳೆದುಹೋಗದೆ ಸಾಧನೆ ಮಾಡುವ ಕಡೆಗೆ ಗಮನಹರಿಸಬೇಕು. ತಮ್ಮ ಮೌಲ್ಯ ಅರಿತುಕೊಂಡು ಬೆಳೆದು ಉದ್ಯೋಗದ ಜೊತೆಗೆ ಸಮಾಜಕ್ಕೆ ಅನುಕೂಲವಾಗುವ ಸಾಮಾಜಿಕ ಕಾರ್ಯಗಳನ್ನು ಮಾಡಬೇಕು ಎಂದು ಸಂಸದ ಡಾ.ಕೆ.ಸುಧಾಕರ್(Member of Parliament Dr. K. Sudhakar) ಕರೆ ನೀಡಿದರು.
ಡಾ.ಕೆ.ಸುಧಾಕರ್ ಫೌಂಡೇಶನ್ ಮತ್ತು ಸಾಯಿಕೃಷ್ಣ ಚಾರಿಟೆಬಲ್ ಟ್ರಸ್ಟ್ ವತಿಯಿಂದ ಪೆರೇಸಂದ್ರದ ಶಾಂತ ಶಿಕ್ಷಣ ಸಂಸ್ಥೆಯಲ್ಲಿ ನಡೆದ, ʼಜ್ಞಾನಸುಧಾʼ ವಿದ್ಯಾರ್ಥಿವೇತನ ವಿತರಣೆ ಕಾರ್ಯಕ್ರಮದಲ್ಲಿ, ಮಂಡಿಕಲ್ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ವಿದ್ಯಾರ್ಥಿಗಳಿಗೆ ಸ್ಕಾಲರ್‌ಶಿಪ್ ವಿತರಿಸಲಾಯಿತು.
ಪೆರೇಸಂದ್ರ, ಮಂಡಿಕಲ್, ಕಮ್ಮಗುಟ್ಟಹಳ್ಳಿ, ಅರೂರು, ದೊಡ್ಡಪೈಯಲಗುರ್ಕಿ, ಅಡ್ಡಗಲ್ಲು ಗ್ರಾಮ ಪಂಚಾಯಿತಿ ಸೇರಿದಂತೆ ಮಂಡಿಕಲ್ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿ ಒಟ್ಟಾರೆಯಾಗಿ 941 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಿಸಲಾಯಿತು.
ಇದನ್ನೂ ಓದಿ: Chikkaballapur News: ದೇಶದ ಮೊದಲ ಅಂತಾರಾಷ್ಟ್ರೀಯ ಎಂಡೋಸ್ಕೋಪಿಕ್–ರೋಬೋಟಿಕ್ ಶಸ್ತ್ರಚಿಕಿತ್ಸಾ ಸಮ್ಮೇಳನಕ್ಕೆ ಚಾಲನೆ
ಕಾರ್ಯಕ್ರಮದಲ್ಲಿ ಮಾತನಾಡಿದ ಸಂಸದ ಡಾ.ಕೆ.ಸುಧಾಕರ್, ಯುವಜನರು ಹೆಚ್ಚಿನ ಸಮಯ ವನ್ನು ಫೋನ್‌ನಲ್ಲೇ ಕಳೆಯುತ್ತಾರೆ. ಫೋನ್, ಲ್ಯಾಪ್‌ಟಾಪ್ ಮೊದಲಾದ ಉಪಕರಣ ಹಾಗೂ ತಂತ್ರಜ್ಞಾನಗಳು ಯುವಜನರ ಸಾಧನವಾಗಬೇಕೆ ಹೊರತು ಯುವಜನರೇ ತಂತ್ರಜ್ಞಾನದ ಸಾಧನ ವಾಗಬಾರದು. ನಾನು ವಿದ್ಯಾರ್ಥಿಯಾಗಿದ್ದಾಗ ಊರಿನ ಸ್ಟುಡಿಯೋಗೆ ಹೋಗಿ ಫೋಟೋ ತೆಗೆಸಿ ಕೊಳ್ಳುತ್ತಿದ್ದೆ. ವರ್ಷಕ್ಕೆ ಒಮ್ಮೆ ಬಾರಿ ಮಾತ್ರ ಗ್ರೂಪ್ ಫೋಟೋ ತೆಗೆಸಿಕೊಳ್ಳುತ್ತಿದ್ದೆವು. ಈಗ ತಂತ್ರಜ್ಞಾನ ಎಷ್ಟು ಬದಲಾಗಿದೆ ಎಂದರೆ, ಈಗಿನ ವಿದ್ಯಾರ್ಥಿಗಳು ದಿನಕ್ಕೆ ಕನಿಷ್ಠ ನೂರು ಸೆಲ್ಫಿ ತೆಗೆದುಕೊಳ್ಳುತ್ತಾರೆ. ತಂತ್ರಜ್ಞಾನ ಹರಿತವಾದ ಚಾಕು ಇದ್ದಂತೆ. ಇದನ್ನು ಬಳಸಲೂಬಹುದು, ದುರ್ಬಳಕೆ ಕೂಡ ಮಾಡಬಹುದು. ಫೋನ್‌ನಲ್ಲಿ ಹೆಚ್ಚು ಸಮಯ ಕಳೆದರೆ ಮಾಡಬೇಕಾದ ಕೆಲಸಗಳೇ ಮರೆತು ಹೋಗುತ್ತದೆ ಎಂದರು.
ದಿನದ ಎಷ್ಟು ಸಮಯವನ್ನು ತಂತ್ರಜ್ಞಾನಕ್ಕೆ ಮೀಸಲಿಡಬೇಕು ಎಂದು ಯೋಚಿಸಬೇಕು. ಒಂದು ಪುಸ್ತಕ ಓದಿದರೆ ಹಲವು ದೇಶಗಳನ್ನು ಸುತ್ತಾಡಿದಷ್ಟು ಅನುಭವವನ್ನು ಸಂಪಾದಿಸಬಹುದು. ಈ ವಯಸ್ಸಿನಲ್ಲಿ ತಂದೆ ತಾಯಿಯ ತ್ಯಾಗ ಅರಿವಾಗುವುದಿಲ್ಲ. ಫೋನ್ ಬದಲು ತಂದೆ ತಾಯಿಗೆ ಹೆಚ್ಚು ಸಮಯ ನೀಡಬೇಕು ಎಂದು ಕಿವಿಮಾತು ಹೇಳಿದರು.
ಸಾಧಕರ ಯಶಸ್ಸಿನ ಕಥೆಯನ್ನು ಎಲ್ಲರೂ ನೋಡುತ್ತಾರೆಯೇ ಹೊರತು ಅದರ ಹಿಂದಿನ ಶ್ರಮ ಕಣ್ಣಿಗೆ ಕಾಣುವುದಿಲ್ಲ. ಬಿದಿರು ಮೊದಲ ನಾಲ್ಕು ವರ್ಷ ನೆಲದಿಂದ ಮೇಲಕ್ಕೆ ಬರುವುದೇ ಇಲ್ಲ. ಅಷ್ಟು ವರ್ಷಗಳ ಕಾಲ ಬೇರು ಗಟ್ಟಿಯಾಗಿ ಬೆಳೆಯುತ್ತಿರುತ್ತದೆ. ಬಳಿಕ ಒಂದೇ ಬಾರಿಗೆ ಆಕಾಶ ದೆತ್ತರಕ್ಕೆ ಬೆಳೆದುಬಿಡುತ್ತದೆ.
ಇದೇ ರೀತಿ, ವಿದ್ಯಾರ್ಥಿಗಳು ಶ್ರಮ ಪಟ್ಟರೆ ನಿರ್ದಿಷ್ಟ ಕ್ಷೇತ್ರದಲ್ಲಿ ಎತ್ತರಕ್ಕೆ ಬೆಳೆಯಬಹುದು. ತಮಿಳುನಾಡಲ್ಲಿ ಒಬ್ಬ ಬಾಲಕ ಶಾಲೆಯ ಓದಿನ ಜೊತೆಗೆ ದಿನಪತ್ರಿಕೆ ವಿತರಿಸಿ ಹಣ ಸಂಪಾದಿಸು ತ್ತಿದ್ದ. ಇಷ್ಟು ಕಷ್ಟವಿದ್ದರೂ ಆತ ತನ್ನ ಕನಸನ್ನು ಮರೆಯಲಿಲ್ಲ. ಮುಂದೆ ಅದೇ ಬಾಲಕ ಮಿಸೈಲ್ ಮ್ಯಾನ್ ಆಗಿ, ರಾಷ್ಟ್ರಪತಿಯಾಗುವವರೆಗೆ ಬೆಳೆದ. ಅವರೇ ಮಾಜಿ ರಾಷ್ಟ್ರಪತಿ ಡಾ.ಎಪಿಜೆ ಅಬ್ದುಲ್ ಕಲಾಂ. ಮೊಬೈಲ್ ಬ್ಯಾಟರಿಯ ಶಕ್ತಿ ಕಡಿಮೆಯಾಗಬಹುದು. ಆದರೆ ಕನಸಿನ ಬ್ಯಾಟರಿಯ ಶಕ್ತಿ ಕಡಿಮೆಯಾಗಬಾರದು ಎಂದು ಹೇಳಿದರು.
ಮೌಲ್ಯವನ್ನು ಅರಿತುಕೊಳ್ಳಿ: ಈ ಬಾರಿ ವಿದ್ಯಾರ್ಥಿವೇತನ ಪಡೆಯುತ್ತಿರುವ ವಿದ್ಯಾರ್ಥಿಗಳು ಮುಂದೆ ಬೆಳೆದು ಇನ್ನಷ್ಟು ವಿದ್ಯಾರ್ಥಿಗಳಿಗೆ ಸಹಾಯ ಮಾಡಬೇಕು. ವಿಶ್ವದ ಅತಿ ದೊಡ್ಡ ಆರ್ಥಿಕತೆ ಗಳಲ್ಲಿ ಭಾರತ ನಾಲ್ಕನೇ ಸ್ಥಾನದಲ್ಲಿದೆ. ಇಂತಹ ದೇಶದ ಜವಾಬ್ದಾರಿಯನ್ನು ವಿದ್ಯಾರ್ಥಿಗಳು ಹೊತ್ತುಕೊಂಡು ಬೆಳೆಯಬೇಕು. 500 ರೂಪಾಯಿ ನೋಟಿನ ಬೆಲೆ ಯಾವಾಗಲೂ 500 ರೂಪಾಯಿ ಯೇ ಆಗಿರುತ್ತದೆ. ಅದನ್ನು ಕೆಳಕ್ಕೆ ಎಸೆದರೂ, ನೀರಿನಲ್ಲಿ ಹಾಕಿದರೂ ಅದರ ಬೆಲೆ ಕಡಿಮೆ ಯಾಗುವುದಿಲ್ಲ. ಅದೇ ರೀತಿ ಪ್ರತಿಯೊಬ್ಬರಿಗೂ ಅವರದ್ದೇ ಆದ ಮೌಲ್ಯವಿರುತ್ತದೆ. ಆ ಮೌಲ್ಯ ಎಂದಿಗೂ ಕಡಿಮೆಯಾಗುವುದಿಲ್ಲ. ಆದ್ದರಿಂದ ವಿದ್ಯಾರ್ಥಿಗಳು ತಮ್ಮ ಮೌಲ್ಯವನ್ನು ಅರಿತುಕೊಳ್ಳ ಬೇಕು ಎಂದರು.
ಚಿತ್ರನಟ ಯಶ್ ಆಶ್ರಯವಿಲ್ಲದೆ ಬೆಂಗಳೂರಿನ ಬಸ್ ನಿಲ್ದಾಣದಲ್ಲಿ ನಿದ್ರಿಸುವ ಸ್ಥಿತಿಯಲ್ಲಿದ್ದರು. ನಟ ಶಾರೂಕ್ ಖಾನ್ ಆಶ್ರಯವಿಲ್ಲದೆ ಮುಂಬೈ ರೈಲು ನಿಲ್ದಾಣದಲ್ಲಿ ನಿದ್ರಿಸುವ ಸ್ಥಿತಿಯಲ್ಲಿದ್ದರು. ಆದರೂ ಅವರು ತಮ್ಮ ಕನಸುಗಳನ್ನು ಬಿಟ್ಟುಕೊಡಲಿಲ್ಲ. ಅದೇ ರೀತಿ ವಿದ್ಯಾರ್ಥಿಗಳು ತಮ್ಮ ಕನಸನ್ನು ಬಿಟ್ಟು ಕೊಡದೆ ನನಸು ಮಾಡಲು ಪ್ರಯತ್ನ ಮಾಡಬೇಕು. ಪ್ರಯತ್ನವಿದ್ದರೆ ಜಗತ್ತಿನ ಯಾವುದೇ ದೈತ್ಯ ಶಕ್ತಿಗಳು ಕನಸು ನನಸಾಗುವುದನ್ನು ತಡೆಯಲು ಸಾಧ್ಯವಿಲ್ಲ ಎಂದರು.
ಎಲ್ಲರಿಗೂ ಬ್ಯಾಂಕ್ ಅಕೌಂಟ್ ಮುಖ್ಯವಾಗುತ್ತದೆ. ಅದೇ ರೀತಿ ಆಶೀರ್ವಾದದ ಅಕೌಂಟ್ ಕೂಡ ಎಲ್ಲರಿಗೂ ಮುಖ್ಯವಾಗಬೇಕು. ಮಾನವರಾಗಿ ಹುಟ್ಟಿದ ಮೇಲೆ ಒಂದು ಉದ್ದೇಶ ಇದ್ದೇ ಇರುತ್ತದೆ. ಆ ಉದ್ದೇಶವನ್ನು ನಾವು ಕಂಡುಕೊಳ್ಳಬೇಕು. ಗ್ರಾಮೀಣ ಭಾಗದ ಬಡ ತಂದೆ ತಾಯಿ ತಮ್ಮ ಮಕ್ಕಳಿಗೆ ಬೇಕಾದುದನ್ನು ಕೊಡಿಸುತ್ತಾರೆ. ಆದರೆ ತಂದೆ ತಾಯಿ ಮಾತ್ರ ತಮಗಾಗಿ ಬಟ್ಟೆಗಳನ್ನೂ ಖರೀದಿಸು ವುದಿಲ್ಲ. ಇದನ್ನು ಅರ್ಥ ಮಾಡಿಕೊಳ್ಳದ ಮಕ್ಕಳು ತಂದೆ ತಾಯಿಯನ್ನು ಪ್ರೀತಿಸುವುದನ್ನು ಮರೆಯುತ್ತಾರೆ. ಸ್ನೇಹಿತರ ಜೊತೆ ಮಾತ್ರ ಬೈಕ್‌ಗಳಲ್ಲಿ ಸುತ್ತಾಡುತ್ತಾರೆ. ಆ ಬೈಕ್‌ನ್ನು ತಂದೆ ತಾಯಂದಿರು ಶ್ರಮ ಪಟ್ಟು ಖರೀದಿಸಿ ಕೊಟ್ಟಿರುತ್ತಾರೆ ಎಂದರು.
ಆವಿಷ್ಕಾರದ ಯುಗ
ಈಗ ನಾವು ಆವಿಷ್ಕಾರದ ಯುಗದಲ್ಲಿದ್ದೇವೆ. ಜಗತ್ತು ವೇಗವಾಗಿ ಮುನ್ನಡೆಯುತ್ತಿದ್ದು, ಹೊಸ ಆವಿಷ್ಕಾರಗಳು ನಡೆಯುತ್ತಿವೆ. ನಮ್ಮದೇ ಜಿಲ್ಲೆಯವರಾದ ಸರ್ ಎಂ.ವಿಶ್ವೇಶ್ವರಯ್ಯನವರು ಬೀದಿ ದೀಪದ ಕೆಳಗೆ ಓದಿದರೂ ವಿಶ್ವವಿಖ್ಯಾತ ಎಂಜಿನಿಯರ್ ಆದರು. ಶಿಕ್ಷಣ ತಜ್ಞ ಎಚ್.ನರಸಿಂಹಯ್ಯ ಬಡವಾಗಿದ್ದರೂ ದೊಡ್ಡ ಹೆಸರು ಮಾಡಿದ್ದರು. ಈ ರೀತಿ ವಿದ್ಯಾರ್ಥಿಗಳು ಬೆಳೆಯಬೇಕು ಎಂದರು.
ಟೀನೇಜ್‌ಗೆ ಲಂಗು ಲಗಾಮು ಇರುವುದಿಲ್ಲ. ತರಗತಿಗೆ ಚಕ್ಕರ್ ಹೊಡೆದು ಸಿನಿಮಾ ನೋಡುವುದು, ಮಾದಕ ವಸ್ತುಗಳ ಬಳಕೆ ಇಂತಹ ಚಟುವಟಿಕೆಗಳು ಹೆಚ್ಚಾಗುತ್ತಿದೆ. ಯಾವುದು ಸರಿ, ಯಾವುದು ತಪ್ಪು ಎಂಬುದನ್ನು ವಿದ್ಯಾರ್ಥಿಗಳು ತಿಳಿದುಕೊಳ್ಳಬೇಕು. ಮುಂದಿನ ಹತ್ತು ವರ್ಷದಲ್ಲಿ ನಾನು ಏನಾಗಬೇಕು ಎಂದು ತೀರ್ಮಾನ ಕೈಗೊಳ್ಳಬೇಕು. ಹತ್ತು ವರ್ಷದ ಬಳಿಕ ಇದೇ ವಿದ್ಯಾರ್ಥಿಗಳು ನನ್ನನ್ನು ಭೇಟಿಯಾಗಿ ನಾನು ಉತ್ತಮ ಉದ್ಯೋಗದಲ್ಲಿದ್ದೇನೆ, ಉತ್ತಮ ಸಾಧಕನಾಗಿದ್ದೇನೆ ಎಂದು ಹೇಳುವಂತಾಗಬೇಕು. ವಿದ್ಯಾರ್ಥಿಗಳ ಮೇಲೆ ತಂದೆ ತಾಯಿಗೆ ಇರುವ ನಂಬಿಕೆಯೇ ನನ್ನಲ್ಲೂ ಇದ್ದು, ಒಬ್ಬ ಅಣ್ಣನಾಗಿ ಸ್ಕಾಲರ್‌ಶಿಪ್ ಆರಂಭಿಸಿದ್ದೇನೆ ಎಂದರು.
ಸರ್ಕಾರ ಜಾರಿ ಮಾಡುವ ಮುನ್ನವೇ ನಾನು ಚಿಕ್ಕಬಳ್ಳಾಪುರದಲ್ಲಿ ಉಚಿತ ಬಸ್ ಪಾಸ್ ಯೋಜನೆ ಆರಂಭಿಸಿದೆ. ಬಳಿಕ ಸರ್ಕಾರಕ್ಕೆ ಮನವಿ ಮಾಡಿ ಇಡೀ ರಾಜ್ಯದಲ್ಲಿ ಈ ಯೋಜನೆ ಜಾರಿ ಮಾಡು ವಂತೆ ಮನವಿ ಮಾಡಿದ್ದೆ. ಆಗ ಕೆಲ ವರ್ಗಗಳಿಗೆ ಉಚಿತ ಬಸ್ ಪಾಸ್ ನೀಡಲಾಗಿತ್ತು. ಈಗಿನ ಸರ್ಕಾರ ಆ ಯೋಜನೆಯನ್ನು ವಿಸ್ತರಿಸಿದೆ ಎಂದರು.
ವಿಶ್ವವಿದ್ಯಾಲಯ ಆರಂಭಿಸುವ ಗುರಿ
ನಾನು ಸಾಧನೆ ಮಾಡುವ ಮುನ್ನವೇ 60 ನೇ ವರ್ಷದಲ್ಲಿ ನನ್ನ ತಾಯಿ ಕಣ್ಣು ಮುಚ್ಚಿಕೊಂಡರು. ತಂದೆ ತಾಯಿ ಬದುಕಿದ್ದಾಗಲೇ ಅವರ ಕಣ್ಣ ಮುಂದೆ ಮಕ್ಕಳು ಸಾಧನೆ ಮಾಡಬೇಕು. ತಾಯಿ ತೀರಿಕೊಂಡ ಬಳಿಕ ಒಂದು ಶೆಡ್‌ನಲ್ಲಿ ಶಾಲೆ ಆರಂಭಿಸಿದೆ. ಇಂದು ಎರಡು-ಮೂರು ಸಾವಿರ ವಿದ್ಯಾರ್ಥಿಗಳು ಈ ಶಿಕ್ಷಣ ಸಂಸ್ಥೆಯಲ್ಲಿ ಓದುತ್ತಿದ್ದಾರೆ. ನರ್ಸಿಂಗ್, ಪ್ಯಾರಾಮೆಡಿಕಲ್ ಮೊದಲಾದ ಕೋರ್ಸ್‌ಗಳು ನಮ್ಮ ಶಿಕ್ಷಣ ಸಂಸ್ಥೆಯಲ್ಲಿ ಲಭ್ಯವಿದೆ. ಮುಂದೆ ನನ್ನ ಅಮ್ಮನ ಹೆಸರಲ್ಲಿ ಚಿಕ್ಕಬಳ್ಳಾ ಪುರ ಕ್ಷೇತ್ರದಲ್ಲಿ ಬಡವರಿಗೆ ನೆರವಾಗುವಂತಹ ವಿಶ್ವವಿದ್ಯಾಲಯ ಆರಂಭಿಸಬೇಕೆಂಬ ಕನಸಿದೆ. ಇದೇ ಸಂಸ್ಥೆಯನ್ನು ಬೆಂಗಳೂರಲ್ಲಿ ಆರಂಭಿಸಿದರೆ ಕೋಟ್ಯಂತರ ರೂಪಾಯಿ ಗಳಿಸಬಹುದು. ಆದರೆ ಹಣ ಗಳಿಕೆಯ ಉದ್ದೇಶವಿಲ್ಲದೆ ಜಿಲ್ಲೆಯ ರೈತರು, ಬಡವರಿಗೆ ನೆರವಾಗಲು ಸಂಸ್ಥೆ ಆರಂಭಿಸಿದೆ. ಇದೇ ರೀತಿ ಎಲ್ಲರೂ ಸಾಧನೆ ಮಾಡಿ ಸಮಾಜಕ್ಕೆ ನೆರವಾಗುವಂತೆ ಶ್ರಮಿಸಬೇಕು ಎಂದರು.
ದಾಖಲಾತಿ ಕೊರತೆಯಿಂದಾಗಿ ಕೆಲವು ವಿದ್ಯಾರ್ಥಿಗಳಿಗೆ ಸ್ಕಾಲರ್‌ಶಿಪ್ ಸಿಕ್ಕಿಲ್ಲ. ಪ್ರತಿ ಭಾನುವಾರ ನಾನು ಪ್ರತಿ ಪಂಚಾಯಿತಿಗೆ ಭೇಟಿ ನೀಡಿ ಅಲ್ಲಿ ವಿದ್ಯಾರ್ಥಿಗಳಿಗೆ ಸ್ಕಾಲರ್‌ಶಿಪ್ ನೀಡಲು ತೀರ್ಮಾ ನಿಸಿದ್ದೇನೆ. ಇದಕ್ಕೆ ಪೂರಕವಾದ ದಾಖಲೆಗಳನ್ನು ವಿದ್ಯಾರ್ಥಿಗಳು ಸಿದ್ಧಪಡಿಸಿಟ್ಟುಕೊಳ್ಳಬೇಕು ಎಂದು ಕೋರಿದರು.