ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Chinthamani News: ಆರೋಗ್ಯ ಇಲಾಖೆ ಕಾರ್ಯಾಚರಣೆ ಯಶಸ್ವಿ; ಏಜೆಂಟ್ ವಶಕ್ಕೆ, ಗರ್ಭಪಾತದ ಮಾತ್ರೆಗಳು ಪತ್ತೆ

ಕಾರ್ಯಾಚರಣೆಯ ಭಾಗವಾಗಿ ಆರೋಗ್ಯ ಇಲಾಖೆಯ ತಂಡ ನಕಲಿ ಗರ್ಭಿಣಿಯೊಬ್ಬರನ್ನು ಸಿದ್ಧ ಗೊಳಿಸಿ ಜಯಲಕ್ಷ್ಮಿ ಎಂಬ ಏಜೆಂಟ್ ಸಂಪರ್ಕಿಸಿತ್ತು. ಭ್ರೂಣ ಲಿಂಗ ಪತ್ತೆ ಹಾಗೂ ಗರ್ಭಪಾತಕ್ಕಾಗಿ ₹35,000 ಹಣ ನೀಡುವಂತೆ ಏಜೆಂಟ್ ಬೇಡಿಕೆ ಇಟ್ಟಿದ್ದು, ಬಳಿಕ ಗರ್ಭಿಣಿಯನ್ನು ಕಾರಿನಲ್ಲಿ ಚಿಂತಾಮಣಿ ಯ ಕೇಂದ್ರವೊಂದಕ್ಕೆ ಕರೆತಂದಿದ್ದಳು ಎನ್ನಲಾಗಿದೆ.

ಭ್ರೂಣ ಲಿಂಗ ಪತ್ತೆ–ಗರ್ಭಪಾತ ಜಾಲಕ್ಕೆ 'ಡಿಕಾಯ್' ಬಲೆ

-

Profile
Ashok Nayak Jul 30, 2026 8:58 AM

ಚಿಂತಾಮಣಿ: ಅಕ್ರಮವಾಗಿ ಭ್ರೂಣ ಲಿಂಗ ಪತ್ತೆ ಮಾಡಿ, ಹೆಣ್ಣು ಮಗು ಎಂದು ತಿಳಿದರೆ ಗರ್ಭಪಾತ ನಡೆಸಲಾಗುತ್ತಿದೆ ಎಂಬ ಆರೋಪದ ಜಾಲವನ್ನು ಪತ್ತೆ ಹಚ್ಚಲು ಆರೋಗ್ಯ ಇಲಾಖೆ ಅಧಿಕಾರಿಗಳು ನಡೆಸಿದ 'ಡಿಕಾಯ್' ಕಾರ್ಯಾಚರಣೆ ಯಶಸ್ವಿಯಾಗಿದ್ದು, ಓರ್ವ ಮಹಿಳಾ ಏಜೆಂಟ್‌ನ್ನು ವಶಕ್ಕೆ ಪಡೆದು ಮಹತ್ವದ ಸಾಕ್ಷ್ಯಗಳನ್ನು ಸಂಗ್ರಹಿಸಿದ್ದಾರೆ.

ಬೆಂಗಳೂರು ಹಾಗೂ ಮಂಡ್ಯ ಭಾಗಗಳಿಂದ ಗರ್ಭಿಣಿಯರನ್ನು ಚಿಂತಾಮಣಿಗೆ ಕರೆತಂದು ಭ್ರೂಣ ಲಿಂಗ ಪತ್ತೆ ಹಾಗೂ ಅಕ್ರಮ ಗರ್ಭಪಾತ ನಡೆಸಲಾಗುತ್ತಿದೆ ಎಂಬ ಗೌಪ್ಯ ಮಾಹಿತಿ ಹಿನ್ನೆಲೆಯಲ್ಲಿ ರಾಜ್ಯ ಪಿಸಿ-ಪಿಎನ್‌ಡಿಟಿ ವಿಭಾಗದ ಅಧಿಕಾರಿಗಳು ಮತ್ತು ಆರೋಗ್ಯ ಇಲಾಖೆ ಕಳೆದ ಒಂದು ವಾರದಿಂದ ರಹಸ್ಯ ಕಾರ್ಯಾಚರಣೆ ರೂಪಿಸಿದ್ದರು.

ಇದನ್ನೂ ಓದಿ: Chinthamani News: ಗೆದ್ದವರೇ ಮಹಾತ್ಮರು ಶ್ರೀಕ್ಷೇತ್ರ ಕೈವಾರದ ಧರ್ಮಾಧಿಕಾರಿ ಡಾ.ಎಂ.ಆರ್.ಜಯರಾಮ್

ಕಾರ್ಯಾಚರಣೆಯ ಭಾಗವಾಗಿ ಆರೋಗ್ಯ ಇಲಾಖೆಯ ತಂಡ ನಕಲಿ ಗರ್ಭಿಣಿಯೊಬ್ಬರನ್ನು ಸಿದ್ಧ ಗೊಳಿಸಿ ಜಯಲಕ್ಷ್ಮಿ ಎಂಬ ಏಜೆಂಟ್ ಸಂಪರ್ಕಿಸಿತ್ತು. ಭ್ರೂಣ ಲಿಂಗ ಪತ್ತೆ ಹಾಗೂ ಗರ್ಭಪಾತಕ್ಕಾಗಿ ₹35,000 ಹಣ ನೀಡುವಂತೆ ಏಜೆಂಟ್ ಬೇಡಿಕೆ ಇಟ್ಟಿದ್ದು, ಬಳಿಕ ಗರ್ಭಿಣಿಯನ್ನು ಕಾರಿನಲ್ಲಿ ಚಿಂತಾಮಣಿಯ ಕೇಂದ್ರವೊಂದಕ್ಕೆ ಕರೆತಂದಿದ್ದಳು ಎನ್ನಲಾಗಿದೆ.

ಆದರೆ ಅಧಿಕಾರಿಗಳ ಚಲನವಲನದ ಸುಳಿವು ಸಿಕ್ಕ ಹಿನ್ನೆಲೆಯಲ್ಲಿ ಕೇಂದ್ರದಲ್ಲಿದ್ದವರು ಸ್ಕ್ಯಾನಿಂಗ್ ಮಾಡಲು ನಿರಾಕರಿಸಿ ವಾಪಸ್ ಕಳುಹಿಸಲು ಯತ್ನಿಸಿದ್ದಾರೆ. ಈ ವೇಳೆ ಕಾರ್ಯಾಚರಣೆಯಲ್ಲಿದ್ದ ಅಧಿಕಾರಿಗಳು ಹಾಗೂ ಪೊಲೀಸರು ಏಜೆಂಟ್ ಮತ್ತು ಆಕೆಯೊಂದಿಗೆ ಇದ್ದವರನ್ನು ತಡೆದು ವಿಚಾರಣೆಗೆ ಒಳಪಡಿಸಿದರು.

IMG-20260729-WA0730 ok

ಕಾರ್ಯಾಚರಣೆ ವೇಳೆ ಏಜೆಂಟ್ ಜೊತೆಗಿನ ದೂರವಾಣಿ ಸಂಭಾಷಣೆಯ ಆಡಿಯೋ ದಾಖಲೆಗಳು, ಗರ್ಭಿಣಿಯರ ಹೇಳಿಕೆಗಳು ಹಾಗೂ ಏಜೆಂಟ್ ಬ್ಯಾಗ್‌ನಲ್ಲಿದ್ದ ಗರ್ಭಪಾತದ ಮಾತ್ರೆಗಳನ್ನು ವಶಪಡಿಸಿಕೊಂಡಿದ್ದು, ಇವುಗಳನ್ನು ಸಾಕ್ಷ್ಯವಾಗಿ ಪರಿಗಣಿಸಿ ಪೊಲೀಸ್ ಠಾಣೆಗೆ ದೂರು ಸಲ್ಲಿಸಲು ಕ್ರಮ ಕೈಗೊಳ್ಳಲಾಗಿದೆ.

ಮಂಡ್ಯ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಬೆಟ್ಟಸ್ವಾಮಿ ಮಾತನಾಡಿ, ಈ ಅಕ್ರಮದ ಹಿಂದೆ ಯಾವುದೇ ಆಸ್ಪತ್ರೆ, ನರ್ಸಿಂಗ್ ಹೋಮ್ ಅಥವಾ ವೈದ್ಯರ ಕೈವಾಡವಿದೆಯೇ ಎಂಬ ಬಗ್ಗೆ ಹಿಮ್ಮುಖ ತನಿಖೆ ನಡೆಸಲಾಗುವುದು. ತನಿಖೆಯಲ್ಲಿ ಭಾಗಿಯಾಗಿರುವ ಎಲ್ಲರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದರು.

ಇಂದಿನ ಸಮಾಜದಲ್ಲಿ ಗಂಡು-ಹೆಣ್ಣು ಎಂಬ ಭೇದಭಾವಕ್ಕೆ ಅವಕಾಶವಿಲ್ಲ. ಹೆಣ್ಣು ಮಕ್ಕಳು ಎಲ್ಲ ಕ್ಷೇತ್ರಗಳಲ್ಲೂ ಸಾಧನೆ ಮಾಡುತ್ತಿದ್ದಾರೆ. ಭ್ರೂಣ ಹತ್ಯೆ ಗಂಭೀರ ಅಪರಾಧವಾಗಿದ್ದು, ಇಂತಹ ಅಕ್ರಮಗಳ ಬಗ್ಗೆ ಸಾರ್ವಜನಿಕರು ಮಾಹಿತಿ ನೀಡಿ ಆರೋಗ್ಯ ಇಲಾಖೆಯೊಂದಿಗೆ ಸಹಕರಿಸಬೇಕು ಎಂದು ಅವರು ಮನವಿ ಮಾಡಿದರು.