Chikkaballapur News: ದಲಿತರ ಮೇಲಿನ ದೌರ್ಜನ್ಯ ಪ್ರಕರಣಗಳಿಗೆ ತ್ವರಿತ ನ್ಯಾಯ: ಜಿಲ್ಲಾ ಕುಂದುಕೊರತೆ ಸಭೆಯಲ್ಲಿ ಒತ್ತಾಯ
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಾಲ್ ಚೌಕ್ಸೆ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ್ದ ಸುಮಾರು 300ಕ್ಕೂ ಹೆಚ್ಚು ದಲಿತ ಮುಖಂಡರು ಹಾಗೂ ಸಾರ್ವಜನಿಕರು ಬೆಳಿಗ್ಗೆ 11 ಗಂಟೆಯಿಂದ ಮಧ್ಯಾಹ್ನ 2.30ರವರೆಗೆ ನಡೆದ ಚರ್ಚೆಯಲ್ಲಿ ತಮ್ಮ ಸಮಸ್ಯೆಗಳು ಹಾಗೂ ಅಹವಾಲುಗಳನ್ನು ಅಧಿಕಾರಿಗಳ ಮುಂದಿಟ್ಟರು.
-
ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ದಲಿತರ ಮೇಲಿನ ದೌರ್ಜನ್ಯ ಪ್ರಕರಣಗಳಲ್ಲಿ ತ್ವರಿತವಾಗಿ ಎಫ್‌ಐಆರ್ ದಾಖಲಿಸಿ ನ್ಯಾಯ ಒದಗಿಸಬೇಕು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ಅತ್ಯಾಚಾರ ತಡೆ) ಕಾಯ್ದೆಯಡಿ ದಾಖಲಾಗುವ ಪ್ರಕರಣಗಳಲ್ಲಿ ಅನಗತ್ಯವಾಗಿ 'ಬಿ' ರಿಪೋರ್ಟ್ ಸಲ್ಲಿಸುವ ಪ್ರವೃತ್ತಿಗೆ ಕಡಿವಾಣ ಹಾಕಬೇಕು ಹಾಗೂ ವಿವಿಧ ಇಲಾಖೆಗಳು ದಲಿತರ ಸಮಸ್ಯೆಗಳಿಗೆ ಮಾನವೀಯ ದೃಷ್ಟಿಕೋನದಿಂದ ಸ್ಪಂದಿಸಬೇಕು ಎಂಬ ಒತ್ತಾಯ ಜಿಲ್ಲಾ ಮಟ್ಟದ ದಲಿತರ ಕುಂದುಕೊರತೆ ಸಭೆಯಲ್ಲಿ ಬಲವಾಗಿ ವ್ಯಕ್ತವಾಯಿತು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಾಲ್ ಚೌಕ್ಸೆ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ್ದ ಸುಮಾರು 300ಕ್ಕೂ ಹೆಚ್ಚು ದಲಿತ ಮುಖಂಡರು ಹಾಗೂ ಸಾರ್ವಜನಿಕರು ಬೆಳಿಗ್ಗೆ 11 ಗಂಟೆಯಿಂದ ಮಧ್ಯಾಹ್ನ 2.30ರವರೆಗೆ ನಡೆದ ಚರ್ಚೆಯಲ್ಲಿ ತಮ್ಮ ಸಮಸ್ಯೆಗಳು ಹಾಗೂ ಅಹವಾಲುಗಳನ್ನು ಅಧಿಕಾರಿಗಳ ಮುಂದಿಟ್ಟರು.
ಸಭೆಯಲ್ಲಿ ಅಕ್ರಮ ಮದ್ಯ ಮಾರಾಟ, ಜಾತಿ ನಿಂದನೆ ಪ್ರಕರಣಗಳಲ್ಲಿ ವಿಳಂಬ, ದಲಿತರಿಗೆ ದೇವಾ ಲಯ ಪ್ರವೇಶ ನಿರಾಕರಣೆ, ಅಟ್ರಾಸಿಟಿ ಪ್ರಕರಣಗಳಲ್ಲಿ 'ಬಿ' ರಿಪೋರ್ಟ್ ಸಲ್ಲಿಕೆ, ದಲಿತರ ವಿರುದ್ಧ ಪ್ರತಿದೂರು ದಾಖಲಿಸುವ ಪ್ರವೃತ್ತಿ, ಭೂಮಿ ಅತಿಕ್ರಮಣ, ಸಿವಿಲ್ ವಿವಾದಗಳಲ್ಲಿ ಕ್ರಿಮಿನಲ್ ಪ್ರಕರಣ ದಾಖಲಿಸುವುದು, ದಲಿತ ಮುಖಂಡರ ವಿರುದ್ಧ ರೌಡಿಶೀಟರ್ ತೆರೆಯುವುದು, ಪೊಕ್ಸೊ ಪ್ರಕರಣಗಳಲ್ಲಿ ದಲಿತ ಮಕ್ಕಳೇ ಹೆಚ್ಚಾಗಿ ಸಿಲುಕುತ್ತಿರುವುದು ಸೇರಿದಂತೆ ಹಲವು ವಿಚಾರಗಳು ಪ್ರಸ್ತಾಪವಾದವು.
ಮುಖಂಡರು ಮಾತನಾಡಿ, ಗ್ರಾಮಾಂತರ ಪೊಲೀಸ್ ಠಾಣೆಗಳಲ್ಲಿ ದಲಿತರ ಕುಂದುಕೊರತೆ ಸಭೆಗಳನ್ನು ನಿಯಮಿತವಾಗಿ ನಡೆಸುತ್ತಿಲ್ಲ ಎಂದು ದೂರಿದರು. ದಲಿತರು ನೀಡುವ ದೂರುಗಳ ದಾಖಲಾತಿಯಲ್ಲಿ ವಿಳಂಬವಾಗುತ್ತಿರುವುದರ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿದರು. ಡೀಮ್ಡ್ ಫಾರೆಸ್ಟ್ ಸಮಸ್ಯೆ, ದಲಿತರ ಸಾಗುವಳಿ ಭೂಮಿಗಳ ಮೇಲಿನ ಅತಿಕ್ರಮಣ, ವಿದ್ಯಾರ್ಥಿ ನಿಲಯಗಳಲ್ಲಿ ನಡೆಯುತ್ತಿರುವ ಅಕ್ರಮ ಚಟುವಟಿಕೆಗಳು ಹಾಗೂ ಮಹಿಳೆಯರ ಮೇಲಿನ ಕಿರುಕುಳ ಪ್ರಕರಣಗಳ ಕುರಿತು ಕೂಡ ಅಧಿಕಾರಿಗಳ ಗಮನ ಸೆಳೆದರು.
ಜಿಲ್ಲೆಯಲ್ಲಿ ದಲಿತ ಮುಖಂಡರ ವಿರುದ್ಧ ಹೆಚ್ಚಿನ ಸಂಖ್ಯೆಯಲ್ಲಿ ರೌಡಿಶೀಟರ್ ತೆರೆಯಲಾಗಿದೆ ಎಂದು ಕೆಲ ಮುಖಂಡರು ಆರೋಪಿಸಿದರು. ಗಡಿ ಭಾಗಗಳಲ್ಲಿ ದಲಿತರ ಮೇಲಿನ ಹಲ್ಲೆ ಹಾಗೂ ಹತ್ಯೆ ಪ್ರಕರಣಗಳ ಬಗ್ಗೆ ಕಳವಳ ವ್ಯಕ್ತಪಡಿಸಿ, ಇಂತಹ ಪ್ರಕರಣಗಳಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು. ಶಾಲಾ-ಕಾಲೇಜುಗಳ ಸಮೀಪ ಅಪಘಾತಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಭಾರಿ ವಾಹನಗಳ ಸಂಚಾರಕ್ಕೆ ನಿಯಂತ್ರಣ ಹೇರಬೇಕು ಹಾಗೂ ದೇವಾಲಯ ಪ್ರವೇಶ ನಿರಾಕರಿಸುವವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂಬ ಬೇಡಿಕೆಯೂ ಕೇಳಿ ಬಂತು.
ಗ್ರಾಮೀಣ ಪ್ರದೇಶಗಳಲ್ಲಿ ಅಕ್ರಮ ಮದ್ಯ ಮಾರಾಟ ಹೆಚ್ಚುತ್ತಿದ್ದು, ಬಾರ್‌ಗಳಿಂದಲೇ ಗ್ರಾಮಗಳಿಗೆ ಮದ್ಯ ಸಾಗಿಸಲಾಗುತ್ತಿದೆ ಎಂಬ ಆರೋಪವೂ ಸಭೆಯಲ್ಲಿ ಕೇಳಿ ಬಂದಿತು. ಮಹಿಳೆಯರು ಹಾಗೂ ವಿದ್ಯಾರ್ಥಿನಿಯರ ಸುರಕ್ಷತೆಯ ಪ್ರಶ್ನೆಯನ್ನೂ ಪ್ರಸ್ತಾಪಿಸಿ, ವಿಶೇಷವಾಗಿ ಸರ್ಕಾರಿ ಬಸ್‌ಗಳಲ್ಲಿ ಮಹಿಳೆಯರ ಮೇಲಿನ ಲೈಂಗಿಕ ಕಿರುಕುಳ ತಡೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಲಾಯಿತು. ಕೆಲವು ಗ್ರಾಮಗಳಲ್ಲಿ ಭೂ ವಿವಾದಗಳಿಂದ ದಲಿತ ಕುಟುಂಬಗಳು ಬೆದರಿಕೆ ಎದುರಿಸುತ್ತಿರುವುದನ್ನೂ ಮುಖಂಡರು ಅಧಿಕಾರಿಗಳ ಗಮನಕ್ಕೆ ತಂದರು.
ದಲಿತರ ಸಮಸ್ಯೆಗಳಿಗೆ ಆಸರೆಯಾಗಬೇಕಿದ್ದ ಸಭೆಯು ದಲಿತ ಮುಖಂಡರ ಒಗ್ಗಟ್ಟಿನ ಕೊರತೆ ಕಾರಣವಾಗಿ ಯಾವೊಂದು ನಿರ್ಧಿಷ್ಟ ತೀರ್ಮಾನವಿಲ್ಲದೆ ಪರ್ಯಾವಸಾನಗೊಂಡಿದ್ದು ವಿಶೇಷ ವಾಗಿತ್ತು. 11 ಗಂಟೆಗೆ 300ರಷ್ಟಿದ್ದ ಮಂದಿ 2.30ರ ವೇಳೆಗೆ ಬೆರಳೆಣಿಕೆಯಷ್ಟೇ ಉಳಿದಿದ್ದು ದಲಿತರ ಸಮುದಾಯದ ಬಗ್ಗೆ ನಾಯಕರ ಬದ್ಧತೆಯನ್ನೇ ಅಣಕಿಸುವಂತಿತ್ತು.
ಸಭೆಯಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಜಗನ್ನಾಥ ರೈ, ಡಿಸಿಆರ್‌ಬಿ ಡಿವೈಎಸ್ಪಿ ಶಿವಕುಮಾರ್, ಡಿವೈಎಸ್ಪಿ ಪ್ರಕಾಶ್, ಜಿಲ್ಲೆಯ ವಿವಿಧ ವಲಯಗಳ ಸರ್ಕಲ್ ಇನ್ಸ್ಪೆಕ್ಟರ್‌ಗಳು, ಪೊಲೀಸ್ ಠಾಣೆಗಳ ಸಬ್‌ಇನ್ಸ್ಪೆಕ್ಟರ್‌ಗಳು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು, ಜಿಲ್ಲೆಯ ಎಲ್ಲಾ ದಲಿತಪರ ಸಂಘಟನೆಗಳ ಮುಖಂಡರು ಉಪಸ್ಥಿತರಿದ್ದರು.
![]()
"ಜಾತಿ ನಿಂದನೆ ಹಾಗೂ ದೌರ್ಜನ್ಯ ಪ್ರಕರಣಗಳಲ್ಲಿ ಕಾನೂನು ಪ್ರಕಾರ ತ್ವರಿತ ಕ್ರಮ ಕೈಗೊಳ್ಳ ಲಾಗುವುದು. ಅಕ್ರಮ ಮದ್ಯ ಮಾರಾಟ ಕುರಿತು ಬಂದಿರುವ ದೂರುಗಳ ಪರಿಶೀಲನೆ ನಡೆಸಿ ಸಂಬಂಧಪಟ್ಟವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಜರುಗಿಸಲಾಗುವುದು. ಭೂ ವಿವಾದ ಹಾಗೂ ಸಾಮಾಜಿಕ ಉದ್ವಿಗ್ನತೆ ಇರುವ ಗ್ರಾಮಗಳಲ್ಲಿ ಜನಸಂಪರ್ಕ ಸಭೆಗಳನ್ನು ನಡೆಸಿ ಸಮಸ್ಯೆಗಳನ್ನು ಸ್ಥಳದಲ್ಲೇ ಪರಿಹರಿಸಲು ಕ್ರಮ ಕೈಗೊಳ್ಳುತ್ತೇವೆ. ಮಹಿಳೆಯರ ಸುರಕ್ಷತೆ, ದೇವಾಲಯ ಪ್ರವೇಶ ಸೇರಿದಂತೆ ಸಭೆಯಲ್ಲಿ ಪ್ರಸ್ತಾಪವಾದ ಪ್ರತಿಯೊಂದು ವಿಷಯವನ್ನೂ ಗಂಭೀರವಾಗಿ ಪರಿಗಣಿಸಿ ಸಂಬAಧಪಟ್ಟ ಅಧಿಕಾರಿಗಳಿಗೆ ಅಗತ್ಯ ನಿರ್ದೇಶನ ನೀಡಲಾಗುವುದು," ಎಂದು ಭರವಸೆ ನೀಡಿದರು.
-ಕುಶಾಲ್ ಚೌಕ್ಸೆ-ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ