MSP for Mangoes: ಮಾವಿಗೆ ಬೆಂಬಲ ಬೆಲೆ ನೀಡುವ ಕುರಿತು ಸಚಿವ ಸಂಪುಟ ಸಭೆಯಲ್ಲಿ ಚರ್ಚೆ: ಸಿಎಂ ಭರವಸೆ
MSP for Mangoes: ಬೆಲೆ ಕುಸಿತದಿಂದ ನೆರೆಯ ಆಂಧ್ರದಲ್ಲಿ ಅಲ್ಲಿನ ಸರ್ಕಾರ ಕೆಜಿ ತೋತಾಪುರಿ ಮಾವಿಗೆ 4 ರೂ. ಬೆಂಬಲ ಬೆಲೆ ಘೋಷಿಸಿದೆ. ಹೀಗಾಗಿ ಕರ್ನಾಟಕದಲ್ಲೂ ಬೆಂಬಲ ಬೆಲೆ ನೀಡಬೇಕು ಎಂದು ಸಿಎಂ ಸಿದ್ದರಾಮಯ್ಯ ಅವರಿಗೆ ಸಚಿವ ಎಂ.ಸಿ.ಸುಧಾಕರ್ ಮನವಿ ಮಾಡಿದ್ದಾರೆ. ಹೀಗಾಗಿ ಸಿಎಂ ಸಿದ್ದರಾಮಯ್ಯ ಅವರು ಪ್ರತಿಕ್ರಿಯಿಸಿದ್ದಾರೆ.


ಗೌರಿಬಿದನೂರು, ಜೂನ್ 11: ಆಂಧ್ರದಲ್ಲಿ ತೋತಾಪುರಿ ಮಾವಿಗೆ ಒಂದು ಕೆಜಿಗೆ 4 ರೂ. ನೀಡಲಾಗುತ್ತಿದ್ದು, ಇಲ್ಲಿಯೂ ಕೊಡಬೇಕು ಎನ್ನುವ ಬೇಡಿಕೆಯನ್ನು ಸಚಿವ ಎಂ.ಸಿ.ಸುಧಾಕರ್ ಅವರು ಮಾಡಿದ್ದಾರೆ. ಈ ಬಗ್ಗೆ ಸಚಿವ ಸಂಪುಟದಲ್ಲಿ ತೀರ್ಮಾನ ಮಾಡಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಅವರು ತಿಳಿಸಿದ್ದಾರೆ. ಬೆಲೆ ಕುಸಿತ ಹಿನ್ನೆಲೆಯಲ್ಲಿ ಮಾವಿಗೆ ಬೆಂಬಲ ಬೆಲೆ ನೀಡಲು ಸಚಿವ ಎಂ.ಸಿ.ಸುಧಾಕರ್ ಮನವಿ ಮಾಡಿದ್ದಾರೆ. ಹೀಗಾಗಿ ಗೌರಿಬಿದನೂರಿನಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಬೆಂಬಲ ಬೆಲೆ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರು ಪ್ರತಿಕ್ರಿಯಿಸಿದ್ದಾರೆ.
ಸಚಿವ ಸುಧಾಕರ್ ಅವರು ಬೆಂಬಲ ಬೆಲೆ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ. ತೋತಾಪುರಿ ಮಾವಿಗೆ ಆಂಧ್ರದಲ್ಲಿ ಕೆಜಿಗೆ 4 ರೂ. ಕೊಡ್ತಾರೆ ಎಂದು ಹೇಳಿದ್ದಾರೆ. ಈ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಲಾಗುತ್ತದೆ ಎಂದು ಹೇಳಿದ್ದಾರೆ.
ಬೆಂಬಲ ಬೆಲೆ ನೀಡಲು ಸಚಿವ ಎಂ.ಸಿ.ಸುಧಾಕರ್ ಮನವಿ
ಅವಳಿ ಜಿಲ್ಲೆಯಲ್ಲಿ (ಕೋಲಾರ-ಚಿಕ್ಕಬಳ್ಳಾಪುರ) ಹೆಚ್ಚಾಗಿ ಮಾವು ಬೆಳೆಯಲಾಗುತ್ತದೆ. ಆದರೆ, ನೆರೆಯ ಆಂಧ್ರದ ಚಿತ್ತೂರಿನಲ್ಲಿ ಕರ್ನಾಟಕದಿಂದ ರಫ್ತು ಮಾಡುವ ತೋತಾಪುರಿ ಮಾವಿಗೆ ನಿಷೇಧ ಹೇರಲಾಗಿದೆ. ಬೆಲೆ ಕುಸಿತದಿಂದ ಮಾರುಕಟ್ಟೆಯಲ್ಲಿ ಕೆಜಿಗೆ 4 ರೂ. ನೀಡುತ್ತಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 3600 ಹೆಕ್ಟೇರ್ (ಸುಮಾರು 30 ಸಾವಿರ ಟನ್) ಹಾಗೂ ಕೋಲಾರ ಜಿಲ್ಲೆಯಲ್ಲಿ ವಿಶೇಷವಾಗಿ ಶ್ರೀನಿವಾಸಪುರ ತಾಲೂಕಿನಲ್ಲಿ 31,300 ಹೆಕ್ಟೇರ್ (ಸುಮಾರು 2,70,850 ಟನ್) ಪ್ರದೇಶದಲ್ಲಿ ತೋತಾಪುರಿ ಮಾವು ಬೆಳೆಯಲಾಗಿದೆ. ನೆರೆಯ ಆಂಧ್ರದಲ್ಲಿ ಅಲ್ಲಿನ ಸರ್ಕಾರ ಕೆಜಿಗೆ 4 ರೂಪಾಯಿ ಬೆಂಬಲ ಬೆಲೆ ಘೋಷಿಸಿದೆ. ಹೀಗಾಗಿ ಕರ್ನಾಟಕದಲ್ಲೂ ತೋತಾಪುರಿ ಮಾವಿಗೆ 4 ರೂ. ಬೆಂಬಲ ಬೆಲೆ ನೀಡಬೇಕು ಎಂದು ಸಿಎಂ ಸಿದ್ದರಾಮಯ್ಯ ಅವರಿಗೆ ಸಚಿವ ಎಂ.ಸಿ.ಸುಧಾಕರ್ ಮನವಿ ಮಾಡಿದ್ದಾರೆ.
ಬೆಳಗಾವಿಯಲ್ಲಿ ಹೊಸ ಜಿಲ್ಲೆ ರಚನೆಗೆ ಬೇಡಿಕೆ: ಸಿಎಂ ಹೇಳಿದ್ದೇನು?
ಬೆಳಗಾವಿಯಲ್ಲಿ ಮಾತ್ರ ಹೊಸ ಜಿಲ್ಲೆ ರಚಿಸುವ ಬಗ್ಗೆ ಬೇಡಿಕೆ ಇದ್ದು, ಇದಕ್ಕೆ ಸಂಬಂಧಿಸಿದಂತೆ ಶಾಸಕರು, ಸಚಿವರು ಮಾತು ಸಂಸದರ ಸಭೆಯನ್ನು ನಡೆಸಿ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಅವರು ತಿಳಿಸಿದ್ದಾರೆ.
ನಂದಿ ಬೆಟ್ಟದಲ್ಲಿ ಸಚಿವ ಸಂಪುಟ ಸಭೆ
ನಂದಿ ಬೆಟ್ಟದಲ್ಲಿ ಸಚಿವ ಸಂಪುಟ ಸಭೆ ನಡೆಯಲಿರುವುದು ಈ ಭಾಗದ ಜನರಲ್ಲಿ ನಿರೀಕ್ಷೆ ಹುಟ್ಟುಹಾಕಿದೆ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿಗಳು ಬೆಂಗಳೂರು ವಿಭಾಗಕ್ಕೆ ಸಂಬಂಧಿಸಿದಂತೆ 19 ರಂದು ಸಚಿವ ಸಂಪುಟ ನಡೆಯುತ್ತಿದೆ. ಅಲ್ಲಿ ಪ್ರಸ್ತಾಪವಾಗುವ ವಿಷಯಗಳ ಬಗ್ಗೆ ಚರ್ಚೆ ನಡೆಯಲಿದೆ ಎಂದರು.
ಈ ಸುದ್ದಿಯನ್ನೂ ಓದಿ | Yettinahole Project: ಎತ್ತಿನಹೊಳೆ ಯೋಜನೆ ಇನ್ನೆರಡು ವರ್ಷದಲ್ಲಿ ಮುಗಿಯುತ್ತೆ: ಸಿಎಂ ಸಿದ್ದರಾಮಯ್ಯ
ವಿಧಾನಸೌಧದ ಮೆಟ್ಟಿಲುಗಳ ಮೇಲೆ ಹಮ್ಮಿಕೊಂಡ ಆರ್ಸಿಬಿ ತಂಡದ ಸನ್ಮಾನ (RCB celebrations) ಕಾರ್ಯಕ್ರಮಕ್ಕೆ ರಾಜ್ಯಪಾಲರು ಅವರಾಗೇ ಬರಲಿಲ್ಲ, ನಾನೇ ಆಹ್ವಾನಿಸಿದ್ದೆ. ರಾಜ್ಯಪಾಲರು ಅವರಾಗಿಯೇ ಬರಲಿಲ್ಲ, ಆಹ್ವಾನ ನೀಡಲಾಗಿತ್ತು ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.
ಜೂನ್ 4 ರಂದು ಕರ್ನಾಟಕ ಕ್ರಿಕೆಟ್ ಸಂಸ್ಥೆ ಹಾಗೂ ಆರ್ಸಿಬಿಯ ವತಿಯಿಂದ ಆರ್.ಸಿ. ಬಿ ಆಟಗಾರರಿಗೆ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ನನಗೆ ಅಂದು ಬೆಳಗ್ಗೆ 11.29 ನಿಮಿಷಕ್ಕೆ ಕೆ.ಎಸ್.ಸಿ.ಎ ವತಿಯಿಂದ ಶಂಕರ್ ಮತ್ತು ಜಯರಾಮ್ ಅವರು ಆಹ್ವಾನ ನೀಡಿ ಮನವಿ ಮಾಡಿಕೊಂಡರು. ಇದಕ್ಕೆ ನಾನು ಒಪ್ಪಿಗೆ ನೀಡಿದೆ. ಬಳಿಕ ಅವರು ರಾಜ್ಯಪಾಲರನ್ನು ಆಹ್ವಾನ ಮಾಡಿರುವುದಾಗಿ ತಿಳಿಸಿದರು. ಪತ್ರಿಕೆಗಳಲ್ಲಿ ಹಾಗೂ ಮಾಧ್ಯಮಗಳಲ್ಲಿ ರಾಜ್ಯಪಾಲರು ಅವರಾಗಿಯೇ ಬಂದಿದ್ದರು ಎಂದು ಪ್ರಾಚಾರವಾಗಿದ್ದು ಅದು ತಪ್ಪು ಎಂದರು.
ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಆಗಿದ್ದ ಗೋವಿಂದರಾಜು ಅವರು ರಾಜ್ಯಪಾಲರಿಗೆ ಕರೆ ಮಾಡಿ ಫೋನ್ ನನಗೆ ಕೊಟ್ಟರು. ಆಗ ನಾನು ಕೂಡ ಕಾರ್ಯಕ್ರಮಕ್ಕೆ ತೆರಳುತ್ತಿದ್ದು ನೀವೂ ಬನ್ನಿ ಎಂದು ಆಹ್ವಾನಿಸಿದೆ. ರಾಜ್ಯಪಾಲರು ಕೂಡ ಕಾರ್ಯಕ್ರಮಕ್ಕೆ ಆಗಮಿಸಿದರು. ಸನ್ಮಾನ ಕಾರ್ಯಕ್ರಮ 20 ನಿಮಿಷಗಳಲ್ಲಿ ಮುಗಿದುಹೋಯಿತು ಎಂದರು.
ಮಾಧ್ಯಮಗಳು ಹಾಗೂ ಸುದ್ದಿ ವಾಹಿನಿಗಳಲ್ಲಿ ರಾಜ್ಯಪಾಲರು ತಾವಾಗಿಯೇ ಬಂದಿದ್ದಾರೆ ಎಂದು ವರದಿಯಾದ್ದರಿಂದ ಸ್ಪಷ್ಟೀಕರಣ ನೀಡುತ್ತಿದ್ದೇನೆ. ಇನ್ನು ಕಾಲ್ತುಳಿತದಲ್ಲಿ ಮೃತಪಟ್ಟಿವರ ಕುಟುಂಬಕ್ಕೆ ತಲಾ 25 ಲಕ್ಷ ರೂ.ಗಳನ್ನೂ ಈಗಾಗಲೇ ಪಾವತಿಸಲಾಗಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.
ಕನ್ನಡದ ಅಭಿವೃದ್ಧಿಗೆ ಅನುದಾನ ಲಭ್ಯವಿದೆ
ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಅನುದಾನದ ಅಗತ್ಯವಿದ್ದರೆ ಅನುದಾನ ಒದಗಿಸಲಾಗುವುದು. ಕನ್ನಡದ ಅಭಿವೃದ್ಧಿಗೆ ಯಾವುದೇ ಕಾರಣಕ್ಕೂ ಅನುದಾನವಿಲ್ಲ ಎಂದು ಹೇಳುವುದಿಲ್ಲ. ವಿಧಾನ ಪರಿಷತ್ ಸದಸ್ಯರ ನಾಮ ನಿರ್ದೇಶನದ ವಿಚಾರದಲ್ಲಿ ಯಾವುದೇ ಗೊಂದಲಗಳಿಲ್ಲ. ಈ ವಿಚಾರದ ಬಗ್ಗೆ ಚರ್ಚೆ ಮಾಡಬೇಕಿದ್ದು ಅದನ್ನು ಮುಂದಕ್ಕೆ ಹಾಕಿದ್ದೇವೆ ಎಂದರು.