ಫೆ.1ರ ಮಾಘ ಹುಣ್ಣಿಮೆಯಂದು ನಂದಿಗಿರಿ ಪ್ರದಕ್ಷಿಣೆ: ಎಲ್ಲರೂ ಭಾಗವಹಿಸಲು ಸಂಸದ ಡಾ.ಕೆ.ಸುಧಾಕರ್ ಆಹ್ವಾನ
Dr K Sudhakar: ಚಿಕ್ಕಬಳ್ಳಾಪುರದ ನಂದಿ ಗಿರಿಧಾಮದ ಬಳಿ ಫೆಬ್ರವರಿ 1ರಂದು ನಂದಿಗಿರಿ ಪ್ರದಕ್ಷಿಣೆ ಹಮ್ಮಿಕೊಳ್ಳಲಾಗಿದೆ. ಅಂದು ಸಂಜೆ 4 ಗಂಟೆಗೆ ನಂದಿಗಿರಿಧಾಮದ ಸಮೀಪದ ಶ್ರೀ ಭೋಗನಂದೀಶ್ವರ ದೇವಾಲಯದಿಂದ ನಂದಿ ಗಿರಿ ಪ್ರದಕ್ಷಿಣೆ ಆರಂಭವಾಗಲಿದೆ ಎಂದು ಸಂಸದ ಡಾ.ಕೆ. ಸುಧಾಕರ್ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಸಂಸದ ಡಾ.ಕೆ. ಸುಧಾಕರ್ ಮಾತನಾಡಿದರು. -
ಚಿಕ್ಕಬಳ್ಳಾಪುರ, ಜ.30: ಆರೋಗ್ಯ ಹಾಗೂ ಅಧ್ಯಾತ್ಮದ ಸಮ್ಮಿಲನದ ಗುರುತಾಗಿ ಚಿಕ್ಕಬಳ್ಳಾಪುರದ (Chikkaballapur News) ನಂದಿ ಗಿರಿಧಾಮದ ಬಳಿ ಫೆಬ್ರವರಿ 1ರಂದು ನಂದಿಗಿರಿ ಪ್ರದಕ್ಷಿಣೆ ಹಮ್ಮಿಕೊಳ್ಳಲಾಗಿದೆ ಎಂದು ಸಂಸದ ಡಾ.ಕೆ. ಸುಧಾಕರ್ (Dr K Sudhakar) ತಿಳಿಸಿದರು. ಫೆಬ್ರವರಿ 1ರಂದು ಭಾನುವಾರ ಮಾಘಮಾಸದ ಹುಣ್ಣಿಮೆಯ ಅಂಗವಾಗಿ ಸಂಜೆ 4 ಗಂಟೆಗೆ ನಂದಿಗಿರಿಧಾಮದ ಸಮೀಪದ ಶ್ರೀ ಭೋಗನಂದೀಶ್ವರ ದೇವಾಲಯದಿಂದ ನಂದಿ ಗಿರಿ ಪ್ರದಕ್ಷಿಣೆ ಆರಂಭವಾಗಲಿದೆ.
ಈ ಕುರಿತು ಸಂಸದ ಡಾ.ಕೆ. ಸುಧಾಕರ್ ಶುಕ್ರವಾರ ವಿವಿಧ ಭಜನಾ ಮಂಡಳಿಗಳ ಪ್ರತಿನಿಧಿಗಳು ಹಾಗೂ ಸಾಂಸ್ಕೃತಿಕ ಸಂಘಗಳ ಮುಖಂಡರೊಂದಿಗೆ ಪೂರ್ವಭಾವಿ ಸಭೆ ನಡೆಸಿದರು.
ಈ ವೇಳೆ ಮಾತನಾಡಿದ ಅವರು, 1936ರಲ್ಲಿ ಮಹಾತ್ಮ ಗಾಂಧೀಜಿಯವರು ನಂದಿಗಿರಿ ಧಾಮಕ್ಕೆ ನಡೆದುಕೊಂಡು ಹೋಗಿ 45 ದಿನಗಳ ಕಾಲ ವಿಶ್ರಾಂತಿ ಪಡೆದಿದ್ದರು. ಆ ಸಮಯದಲ್ಲಿ ಅವರು ನಂದಿ ಬೆಟ್ಟವನ್ನು ʼಆರೋಗ್ಯಧಾಮʼ ಎಂದು ಬಣ್ಣಿಸಿದ್ದರು. ನಂದಿ ಬೆಟ್ಟವನ್ನು ದಕ್ಷಿಣದ ಕಾಶಿ ಎಂದೂ ಕರೆಯಲಾಗುತ್ತದೆ. ಮಾಘಮಾಸದ ಹುಣ್ಣಿಮೆಯ ದಿನದಂದು ಸಂಜೆ 4 ಗಂಟೆಗೆ ನಂದಿಗಿರಿಧಾಮದ ಪ್ರದಕ್ಷಿಣೆ ಕಾರ್ಯಕ್ರಮ ಏರ್ಪಡಿಸಲಾಗಿದೆ. ತಮಿಳುನಾಡಿನ ಅರುಣಾಚಲೇಶ್ವರದಲ್ಲಿ ಪ್ರದಕ್ಷಿಣೆ ಕಾರ್ಯಕ್ರಮ ನಡೆಯುತ್ತದೆ. ಅದೇ ರೀತಿಯಲ್ಲಿ ಇಲ್ಲಿಯೂ ಶ್ರೇಷ್ಠವಾದ ಪ್ರದಕ್ಷಿಣೆ ಕಾರ್ಯಕ್ರಮವನ್ನು ನಡೆಸಲಾಗುತ್ತಿದೆ. ಯಾವುದೇ ಜಾತಿ, ಧರ್ಮದ ಭೇದವಿಲ್ಲದೆ ಎಲ್ಲರೂ ಇದರಲ್ಲಿ ಭಾಗವಹಿಸಬಹುದು ಎಂದು ಹೇಳಿದರು.
87 ವರ್ಷಗಳ ಹಿಂದೆ ದೊಡ್ಡಬಳ್ಳಾಪುರದ ಭಕ್ತವೃಂದದಿಂದ ಪ್ರತಿ ಆಷಾಢಮಾಸದ ಕೊನೆಯ ಸೋಮವಾರ ಇಲ್ಲಿ ಗಿರಿ ಪ್ರದಕ್ಷಿಣೆ ನಡೆಯುತ್ತಿತ್ತು. ಹುಣ್ಣಿಮೆ ಎಂದರೆ ಚಂದ್ರನು ಪೂರ್ಣರೂಪದಲ್ಲಿ ಬೆಳಗುವ ದಿನವಾಗಿದೆ. ಮಾಘಮಾಸದ ಹುಣ್ಣಿಮೆಯ ದಿನ ಶ್ರೇಷ್ಠವಾಗಿದ್ದು, ಇದೇ ದಿನದಂದು ಪ್ರದಕ್ಷಿಣೆ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಜ.31ರಂದು ತಡಸ ಗಾಯತ್ರಿ ಮಾತಾ ದೇಗುಲದ 26ನೇ ವಾರ್ಷಿಕೋತ್ಸವ
ಗಿರಿಪ್ರದಕ್ಷಿಣೆಯ ಕಾರ್ಯಕ್ರಮದಿಂದ ಎಲ್ಲರಲ್ಲೂ ಭಕ್ತಿಭಾವ, ಆಧ್ಯಾತ್ಮಿಕ ಚಿಂತನೆ, ಮಾನಸಿಕ ನೆಮ್ಮದಿ ಹಾಗೂ ದೈಹಿಕ ಆರೋಗ್ಯ ದೊರೆಯಲಿದೆ. ಇದು ಆರೋಗ್ಯ ಹಾಗೂ ಅಧ್ಯಾತ್ಮದ ಸಮ್ಮಿಲನದ ಕಾರ್ಯಕ್ರಮವಾಗಿದೆ ಎಂದು ಸಂಸದ ಡಾ.ಕೆ. ಸುಧಾಕರ್ ಹೇಳಿದರು.