ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ರಾಷ್ಟ್ರಮಟ್ಟದ ನೃತ್ಯವೈಭವದಲ್ಲಿ 400ಕ್ಕೂ ಹೆಚ್ಚು ಕಲಾವಿದರ ಕಲಾಪ್ರದರ್ಶನ ಕಲೆ ಭಾಷೆ, ಧರ್ಮ, ಪ್ರಾದೇಶಿಕ ಗಡಿಗಳನ್ನು ಮೀರಿ ಜನರನ್ನು ಬೆಸೆಯುವ ಶಕ್ತಿ ಹೊಂದಿದೆ: ಕಾಗತಿ ನಾಗರಾಜಪ್ಪ

ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಕಾಗತಿ ನಾಗರಾಜಪ್ಪ ಮಾತನಾಡಿ, ರಾಷ್ಟ್ರಮಟ್ಟದ ನೃತ್ಯವೈಭವ ಕೇವಲ ನೃತ್ಯ ಪ್ರದರ್ಶನಕ್ಕೆ ಸೀಮಿತವಾಗದೆ, ದೇಶದ ವಿವಿಧ ಭಾಗಗಳ ಜನರು ತಮ್ಮ ಭಾಷೆ, ಸಂಸ್ಕೃತಿ, ಸಂಪ್ರದಾಯ ಮತ್ತು ಕಲಾ ಪರಂಪರೆಯೊಂದಿಗೆ ಒಂದೇ ವೇದಿಕೆಯಲ್ಲಿ ಸೇರುವ ಸಾಂಸ್ಕೃತಿಕ ಸಂಗಮವಾಗಬೇಕು ಎಂದರು.

ಕಲಾವಿದರಿಗೆ ಗೌರವ ದೊರೆತಾಗ ಮಾತ್ರ ಕಲೆಗಳು ಮತ್ತಷ್ಟು ಬೆಳೆಯಲು ಸಾಧ್ಯ

-

Profile
Ashok Nayak Nov 29, 2026 9:29 PM

ಚಿಕ್ಕಬಳ್ಳಾಪುರ: ಕಲೆ ಮಕ್ಕಳಲ್ಲಿ ಶಿಸ್ತು, ಏಕಾಗ್ರತೆ, ಆತ್ಮವಿಶ್ವಾಸ ಹಾಗೂ ಸೃಜನಶೀಲತೆಯನ್ನು ಬೆಳೆಸುವ ಜೊತೆಗೆ ನಮ್ಮ ಸಂಸ್ಕೃತಿ ಮತ್ತು ಪರಂಪರೆಯನ್ನು ಮುಂದಿನ ಪೀಳಿಗೆಗೆ ತಲುಪಿಸುವ ಪ್ರಬಲ ಮಾಧ್ಯಮವಾಗಿದೆ. ಕಲಾವಿದರಿಗೆ ಸೂಕ್ತ ಪ್ರೋತ್ಸಾಹ ಮತ್ತು ಗೌರವ ದೊರೆತಾಗ ಮಾತ್ರ ಕಲೆಗಳು ಮತ್ತಷ್ಟು ಬೆಳೆಯಲು ಸಾಧ್ಯ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಿ.ಎಂ. ರವಿಕುಮಾರ್ ತಿಳಿಸಿದರು.

ನಗರದ ಕನ್ನಡ ಭವನದಲ್ಲಿ ಶ್ರೀ ಸ್ವಾಮಿ ವಿವೇಕಾನಂದ ಕಲಾ ಬಳಗ ಹಾಗೂ ಕಲಾ ಕೇಂದ್ರದ ವತಿಯಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಆಯೋಜಿಸಿದ್ದ ರಾಷ್ಟ್ರ ಮಟ್ಟದ ನೃತ್ಯವೈಭವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ರಾಷ್ಟ್ರಮಟ್ಟದ ಸಾಂಸ್ಕೃತಿಕ ವೇದಿಕೆಗಳು ಹೆಚ್ಚಾದಾಗ ಮಾತ್ರ ನಮ್ಮ ಕಲೆ, ಸಂಸ್ಕೃತಿ ಹಾಗೂ ಪರಂಪರೆಯನ್ನು ಉಳಿಸಿ ಬೆಳೆಸಲು ಸಾಧ್ಯ. ಇಂತಹ ಕಾರ್ಯಕ್ರಮಗಳು ವಿವಿಧ ಪ್ರದೇಶಗಳ ಕಲಾವಿದರಿಗೆ ತಮ್ಮ ಪ್ರತಿಭೆ ಪ್ರದರ್ಶಿಸಲು ಉತ್ತಮ ಅವಕಾಶ ಕಲ್ಪಿಸುತ್ತವೆ ಎಂದರು.

ಇದನ್ನೂ ಓದಿ: Chikkaballapur News: ಜಾನಪದ ಕಲೆ, ಸಂಸ್ಕೃತಿ ಮುಂದಿನ ಪೀಳಿಗೆಗೆ ಪರಿಚಯಿಸುವುದು ಅಗತ್ಯ: ಜಿಲ್ಲಾಧಿಕಾರಿ ಜಿ. ಪ್ರಭು

ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಕಾಗತಿ ನಾಗರಾಜಪ್ಪ ಮಾತನಾಡಿ, ರಾಷ್ಟ್ರಮಟ್ಟದ ನೃತ್ಯವೈಭವ ಕೇವಲ ನೃತ್ಯ ಪ್ರದರ್ಶನಕ್ಕೆ ಸೀಮಿತವಾಗದೆ, ದೇಶದ ವಿವಿಧ ಭಾಗಗಳ ಜನರು ತಮ್ಮ ಭಾಷೆ, ಸಂಸ್ಕೃತಿ, ಸಂಪ್ರದಾಯ ಮತ್ತು ಕಲಾ ಪರಂಪರೆಯೊಂದಿಗೆ ಒಂದೇ ವೇದಿಕೆಯಲ್ಲಿ ಸೇರುವ ಸಾಂಸ್ಕೃತಿಕ ಸಂಗಮವಾಗಬೇಕು ಎಂದರು.

ಜಾತಿ, ಧರ್ಮ, ಭಾಷೆ ಹಾಗೂ ಪ್ರಾದೇಶಿಕ ಭಿನ್ನತೆಗಳಿಂದ ಸಮಾಜದಲ್ಲಿ ಅಂತರಗಳು ಸೃಷ್ಟಿಯಾಗು ತ್ತಿದ್ದರೂ ಕಲೆ ಇವೆಲ್ಲ ಗಡಿಗಳನ್ನು ಮೀರಿ ಜನರನ್ನು ಬೆಸೆಯುತ್ತದೆ. ವಿವಿಧ ರಾಜ್ಯಗಳ ಕಲಾವಿದರು ಚಿಕ್ಕಬಳ್ಳಾಪುರದಲ್ಲಿ ಒಂದಾಗಿ ಪ್ರತಿಭೆ ಪ್ರದರ್ಶಿಸಿರುವುದು ಸಾಂಸ್ಕೃತಿಕ ಏಕತೆಗೆ ಸಾಕ್ಷಿಯಾಗಿದೆ. ಕಲಾವಿದರು ಕೇವಲ ಮನರಂಜನೆ ನೀಡುವವರಲ್ಲ; ತಮ್ಮ ಕಲಾ ಅಭಿವ್ಯಕ್ತಿಯ ಮೂಲಕ ಸಮಾಜಕ್ಕೆ ಸಂದೇಶ ನೀಡುವವರು. ಕಲೆ ಸಮಾಜವನ್ನು ಬದಲಿಸುವ ಶಕ್ತಿಯನ್ನೂ ಹೊಂದಿದೆ. ಆದ್ದರಿಂದ ಕಲೆಯನ್ನು ಪೋಷಿಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಬೇಕು ಎಂದು ಹೇಳಿದರು.

cbpm6t 2

ಸಮಾಜ ಸೇವಕ ಎಡುಕೊಂಡ್ಲ ಶ್ರೀನಿವಾಸಪ್ಪ ಮಾತನಾಡಿ, ದೇಶೀಯ ಕಲೆಗಳನ್ನು ಉಳಿಸಿ ಬೆಳೆಸುವುದರ ಜೊತೆಗೆ ನಿಜವಾದ ಅರ್ಹ ಕಲಾವಿದರನ್ನು ಗುರುತಿಸಿ ಗೌರವಿಸುವುದು ಮುಖ್ಯ. ಕಲಾವಿದರನ್ನು ಒಂದೇ ವೇದಿಕೆಯಲ್ಲಿ ಸೇರಿಸಿ ಪ್ರೋತ್ಸಾಹಿಸುವ ಇಂತಹ ಕಾರ್ಯಕ್ರಮಗಳು ಶ್ಲಾಘನೀಯ ಎಂದರು.

ಆಂಧ್ರಪ್ರದೇಶದ ಡಾ. ದೇವರಾಜಸ್ವಾಮಿ ಮಾತನಾಡಿ, ಕಾರ್ಯಕ್ರಮದ ವ್ಯವಸ್ಥೆ ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಕಲಾವಿದರು ಭಾಗವಹಿಸಿರುವುದು ಸಂತಸ ತಂದಿದೆ. ಇಂತಹ ಕಾರ್ಯಕ್ರಮಗಳನ್ನು ತಮ್ಮ ಪ್ರದೇಶದಲ್ಲಿಯೂ ಆಯೋಜಿಸಬೇಕೆಂಬ ಆಸಕ್ತಿ ಮೂಡಿದೆ ಎಂದರು.

400ಕ್ಕೂ ಹೆಚ್ಚು ಕಲಾವಿದರ ಕಲರವ

ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು ಸೇರಿದಂತೆ ಕರ್ನಾಟಕದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ 400ಕ್ಕೂ ಹೆಚ್ಚು ಕಲಾವಿದರು ಭರತನಾಟ್ಯ, ಕಥಕ್, ಕೂಚಿಪುಡಿ ಸೇರಿದಂತೆ ಶಾಸ್ತ್ರೀಯ ಹಾಗೂ ಜಾನಪದ ನೃತ್ಯಪ್ರಕಾರಗಳನ್ನು ಪ್ರದರ್ಶಿಸಿ ಪ್ರೇಕ್ಷಕರ ಗಮನ ಸೆಳೆದರು. ಆಂಧ್ರಪ್ರದೇಶದ ಹಿಂದೂಪುರ, ಪುಟ್ಟಪರ್ತಿ, ಗೋರಂಟ್ಲ, ಅನಂತಪುರ, ತಮಿಳುನಾಡಿನ ನಾಗರಕೋಯಿಲ್ ಹಾಗೂ ದೇವನಹಳ್ಳಿ, ಬೆಂಗಳೂರು ಮತ್ತು ಚಿಕ್ಕಬಳ್ಳಾಪುರದ ನೃತ್ಯ ತಂಡಗಳು ಭಾಗವಹಿಸಿದ್ದವು. ರಾಷ್ಟ್ರ ಪ್ರಶಸ್ತಿ ಪುರಸ್ಕೃತರಾದ ಹರಿಪ್ರಿಯ ಹೊಸಮನಿ ಹಾಗೂ ವಿಶೃಜ ತಮ್ಮ ಕಲಾಪ್ರತಿಭೆಯನ್ನು ಪ್ರದರ್ಶಿಸಿದರು.

ಈ ಸಂದರ್ಭದಲ್ಲಿ ಹತ್ತು ಮಂದಿ ನೃತ್ಯ ಶಿಕ್ಷಕರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಮಕ್ಕಳ ನೃತ್ಯ ಪ್ರದರ್ಶನವನ್ನು ಪೋಷಕರು ಹಾಗೂ ಕಲಾಭಿಮಾನಿಗಳು ಕಣ್ತುಂಬಿಕೊಂಡರು.

ಕಾರ್ಯಕ್ರಮದಲ್ಲಿ ಶ್ರೀ ಸ್ವಾಮಿ ವಿವೇಕಾನಂದ ಕಲಾ ಬಳಗದ ಅಧ್ಯಕ್ಷ ಸೋ.ಸು. ನಾಗೇಂದ್ರನಾಥ್, ರಾಜ್ಯ ಪ್ರಶಸ್ತಿ ಪುರಸ್ಕೃತ ಕಲಾವಿದ ಮುನಿರಾಜು, ರಾಜ್ಯ ಪ್ರಶಸ್ತಿ ಪುರಸ್ಕೃತೆ ಶ್ರೀಲಕ್ಷ್ಮಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ನಿರೀಕ್ಷೆಗೂ ಮೀರಿ ಪೋಷಕರು ಹಾಗೂ ಕಲಾಭಿಮಾನಿಗಳು ಭಾಗವಹಿಸಿದ್ದಕ್ಕೆ ಆಯೋಜಕರು ಕೃತಜ್ಞತೆ ಸಲ್ಲಿಸಿದರು.