ISRO: 73ನೇ ದಿನದ ರೈತರ ಹೋರಾಟಕ್ಕೆ ಇಸ್ರೋ ನೌಕರರ ಸಾಥ್ : ಅನ್ನದಾತರನ್ನು ಒಕ್ಕಲೆಬ್ಬಿಸದಂತೆ ಭೂಸ್ವಾಧೀನ ಪ್ರಕ್ರಿಯೆ ಕೈಬಿಡಲು ಆಗ್ರಹ
ಸರಕಾರ ಕೆಐಎಡಿಬಿ ಮುಖಾಂತರ ಭೂಸ್ವಾಧೀನ ಮಾಡಲು ಹೊರಟಿರುವುದು ದುರಾಡಳಿತದ ಪರಮಾ ವಧಿ. ಅತ್ಯಂತ ಫಲವತ್ತಾದ ಭೂಮಿ ಇದಾಗಿದೆ. ರಾಜಕೀಯ ದುರುದ್ದೇಶ ಹೊಂದಿರುವ ಈ ಬೃಹತ್ ಭೂಕಬಳಿಕೆ ವಿರೋಧಿಸಿ ರೈತರು ನಡೆಸುತ್ತಿರುವ ಹೋರಾಟದ ಸ್ಥಳಕ್ಕೆ ಸೌಜನ್ಯಕ್ಕಾದರೂ ಸರಕಾರದ ಪ್ರತಿನಿಧಿಗಳು ಬಾರದಿರುವುದು ನೋವಿನ ಸಂಗತಿ
-
ಚಿಕ್ಕಬಳ್ಳಾಪುರ: ಜಂಗಮಕೋಟೆ ಹೋಬಳಿಯ 13 ಹಳ್ಳಿಗಳ ಕೃಷಿಗೆ ಯೋಗ್ಯವಾದ ಸುಮಾರು 2823 ಎಕರೆಯಷ್ಟು ಭೂಮಿಯನ್ನು ಕೆಐಡಿಬಿ ಅಧಿಕಾರಿಗಳು ಸ್ವಾಧೀನಪಡಿಸಿಕೊಳ್ಳಲು ಮುಂದಾ ಗಿರುವುದು ಸರಿಯಲ್ಲ. ಅನ್ನದಾತರನ್ನು ಒಕ್ಕಲೆಬ್ಬಿಸದೆ ಬಂಜರು ಭೂಮಿ ದೊರೆಯುವೆಡೆ ಕೈಗಾರಿಕೆ ಮಾಡಲು ಸರಕಾರ ಮುಂದಾಗಬೇಕು ಎಂದು ಇಸ್ರೋ (ISRO)ನಿವೃತ್ತ ನೌಕರರ ಸಂಘದ ಪದಾಧಿಕಾರಿಗಳು ಒತ್ತಾಯಿಸಿದರು.
ನಗರ ಹೊರವಲಯ ಜಿಲ್ಲಾಡಳಿತ ಭವನದ ಎದುರು ನಮ್ಮ ಭೂಮಿ ನಮ್ಮ ಹಕ್ಕು ಪ್ರಾಣವನ್ನಾ ದರೂ ಕೊಡುತ್ತೇವೆ. ಫಲವತ್ತಾದ ಭೂಮಿ ಕೊಡುವುದಿಲ್ಲ ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತಸಂಘ ಹಾಗೂ ಹಸಿರುಸೇನೆ ನೇತೃತ್ವದಲ್ಲಿ ನಡೆಸುತ್ತಿರುವ 73ನೇ ದಿನದ ಪ್ರತಿಭಟನೆಯಲ್ಲಿ ಭಾಗವಹಿಸಿ ರೈತರ ಹೋರಾಟಕ್ಕೆ ಬೆಂಬಲ ಸೂಚಿಸಿ ಮಾತನಾಡಿದರು.
ಇದನ್ನೂ ಓದಿ:Chikkaballapur News: ರಸಗೊಬ್ಬರ, ಪೆಟ್ರೋಲ್ ಡೀಸೆಲ್ ಬೆಲೆ ಇಳಿಕೆಗೆ ಆಗ್ರಹಿಸಿ ಪುಟ್ಟಣ್ಣಯ್ಯ ಬಣದ ರೈತ ಸಂಘ ಪ್ರತಿಭಟನೆ
ಇಸ್ರೋ ನಿವೃತ್ತ ನೌಕರ ರೇವಣ್ಣ ಮಾತನಾಡಿ, ಸರಕಾರ ಕೆಐಎಡಿಬಿ ಮುಖಾಂತರ ಭೂಸ್ವಾಧೀನ ಮಾಡಲು ಹೊರಟಿರುವುದು ದುರಾಡಳಿತದ ಪರಮಾವಧಿ. ಅತ್ಯಂತ ಫಲವತ್ತಾದ ಭೂಮಿ ಇದಾಗಿದೆ. ರಾಜಕೀಯ ದುರುದ್ದೇಶ ಹೊಂದಿರುವ ಈ ಬೃಹತ್ ಭೂಕಬಳಿಕೆ ವಿರೋಧಿಸಿ ರೈತರು ನಡೆಸುತ್ತಿರುವ ಹೋರಾಟದ ಸ್ಥಳಕ್ಕೆ ಸೌಜನ್ಯಕ್ಕಾದರೂ ಸರಕಾರದ ಪ್ರತಿನಿಧಿಗಳು ಬಾರದಿರುವುದು ನೋವಿನ ಸಂಗತಿ ಎಂದರು.
ರೈತರ ಬಾಳನ್ನು ಹಾಳು ಮಾಡುವ ಯಾವುದೇ ಸರಕಾರಗಳು ಈ ಭೂಮಿಯ ಮೇಲೆ ಹುಟ್ಟಿಲ್ಲ. ಬಲವಂತವಾಗಿ ಭೂಮಿ ಕಸಿಯಲು ಹೊರಟಿರುವುದು ಸರ್ವಥಾ ಸರಿಯಲ್ಲ. ಇದನ್ನು ಧಿಕ್ಕರಿಸಿ ನಡೆಸುತ್ತಿರುವ ರೈತರ ಪ್ರತಿಭಟನೆಗೆ ರೈತರು ಮಾತ್ರವಲ್ಲದೇ ದಲಿತ, ಪ್ರಗತಿಪರ ಸಂಘಟನೆಗಳು ಸೇರಿದಂತೆ ಹತ್ತಾರು ಸಂಘಟನೆಗಳು ಬೆಂಬಲ ನೀಡಿದೆ. ಇದರಂತೆ ಇಸ್ರೋ ನಿವೃತ್ತ ನೌಕರರ ಸಂಘಟನೆಯೂ ಬೆಂಬಲ ಸೂಚಿಸಿದೆ ಎಂದರು.
ಇಸ್ರೋ ನಿವೃತ್ತ ನೌಕರ ನಾರಾಯಣಸ್ವಾಮಿ ಮಾತನಾಡಿ, ಕೆಲವು ದಿನಗಳ ಹಿಂದೆಯಷ್ಟೆ ಚಿಕ್ಕಬಳ್ಳಾಪುರದಲ್ಲಿ ನಡೆಯುತ್ತಿದ್ದ ಕೆಡಿಪಿ ಸಭೆಯಲ್ಲಿ ಸಚಿವರನ್ನು ಭೇಟಿ ಮಾಡಲು ಹೋದಾಗ ಅಲ್ಲಿದ್ದ ಪೊಲೀಸರು ರೈತರ ಮೇಲೆ ದರ್ಪ ತೋರಿಸಿ ಹಲ್ಲೆ ನಡೆಸಿರುವುದು ಸರಿಯಲ್ಲ. ಕೃಷಿಗೆ ಯೋಗ್ಯವಲ್ಲದ ಭೂಮಿಯನ್ನು ಸ್ವಾಧೀನ ಪಡಿಸಿಕೊಂಡು ಅಲ್ಲಿ ಬೇಕಾದರೆ ಕೈಗಾರಿಕೆ ಮಾಡಲಿ ಅದನ್ನು ಬಿಟ್ಟು ರೇಷ್ಮೆ, ತೆಂಗು, ಮಾವು ಸೀಬೆ ಶುಂಠಿ ಇತ್ಯಾದಿ ಬೆಳೆ ಬೆಲೆಯುವ ಫಲವತ್ತಾದ ಕೃಷಿ ಯೋಗ್ಯ ಭೂಮಿಯನ್ನು ವಶಪಡಿಸಿಕೊಳ್ಳಲು ಮುಂದಾಗಿರುವುದು ಜವಾಬ್ದಾರಿಯುತ ಸರಕಾರದ ನಡೆಯಾಗಲಾರದು.ನೀವು ಕೊಡುವ ಒಂದೋ ಎರಡೋ ಕೋಟಿ ಎಷ್ಟುದಿನ ನಮ್ಮಬಳಿ ಇರಲು ಸಾಧ್ಯ. ಹೀಗಾಗಿ ಭೂಮಿ ಸ್ವಾಧೀನ ಕೈ ಬಿಡಿ ಎಂದರು.
ಮತ್ತೊಬ್ಬ ಇಸ್ರೋ ನೌಕರ ಮುನಿರಾಜು ಮಾತನಾಡಿ, ಜಂಗಮಕೋಟೆ 13 ಹಳ್ಳಿಗಳ ರೈತರ ಜತೆ ನಾವಿರಲಿದ್ದೇವೆ.ರೈತರಿದ್ದರೆ ದೇಶ ಎಂದು ನಂಬಿದವರು ನಾವು. ಹೀಗಾಗಿ ಜೂ.5ರಂದು ಬೈಕ್ ಜಾಥಾ ಮೂಲಕ ವಿಧಾನಸೌಧಕ್ಕೆ ಮುತ್ತಿಗೆ ಹಾಕುವ ಪ್ರತಿಭಟನೆ ಹಮ್ಮಿಕೊಂಡಿರುವ ರೈತಸಂಘಕ್ಕೆ ನಾವೂ ಕೂಡ ಬೆಂಬಲಿಸಲಿದ್ದೇವೆ. ಈ ಹೋರಾಟಕ್ಕೆ ರೈತರು ಹಾಗೂ ರೈತರ ಮಕ್ಕಳು ಮಾತ್ರ ವಲ್ಲದೇ ಎಲ್ಲರೂ ಸ್ವಯಂ ಪ್ರೇರಿತರಾಗಿ ಭಾಗವಹಿಸಬೇಕೆಂದು ಮನವಿ ಮಾಡಿದರು.
ಈ ಸಮಯದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಭರತ್ ಸೇರಿ, ನಾರಾಯಣದಾಸರಹಳ್ಳಿ ಶಂಕರ್ ಸೇರಿ ನಾನಾ ಮುಖಂಡರು ಹಾಜರಿದ್ದರು.