Veteran actor Ramakrishna: ಕನ್ನಡ ಚಿತ್ರರಂಗದಲ್ಲಿ ಇತ್ತೀಚೆಗೆ ಸಾಹಿತಿ ಮತ್ತು ಸಾಹಿತ್ಯವನ್ನು ಕಡೆಗಣಿಸುತ್ತಿರುವುದು ಸರಿಯಲ್ಲ: ಹಿರಿಯ ನಟ ರಾಮಕೃಷ್ಣ ಬೇಸರ
ನಾನು ಸಾಹಿತ್ಯವನ್ನಾಗಲಿ ಪುಸ್ತಕಗಳನ್ನಾಗಲಿ ಅರೆದು ಕುಡಿದವನಲ್ಲ. 40 ವರ್ಷಗಳ ವೃತ್ತಿ ಜೀವನದಲ್ಲಿ ಸಿಕ್ಕಿರುವ ಅತ್ಯುತ್ತಮ ಬರಹಗಾರರಾದ ಕೆಲವರಿಂದ ಅದು ತರಾಸು ಅವರಿಂದ ತ್ರಿವೇಣಿ ಆಗಿರಬಹುದು ಅನಕೃ ಅವರಿಂದ ಬೀಚಿಯವರಾಗಿರಬಹುದು. ಇವರೆಲ್ಲರಿಂದ ಎರಕ ಹೊಯ್ದಂತಿದ್ದ ಪುಟ್ಟಣ್ಣ ಕಣಗಾಲ್ ಇರಬಹುದು.ಇವರ ಬಳಿ ಸಂಭಾಷಣೆಯನ್ನು ಒಪ್ಪಿಸಿ, ಒಪ್ಪಿಸಿ ಕೆನ್ನೆಗೆ ಏಟು ತಿಂದು ಇಷ್ಟರ ಮಟ್ಟಿಗಿನ ಭಾಷಾ ಶುದ್ಧತೆ ನಮಗೆ ಬಂದಿದೆ
ಕನ್ನಡ ಚಲನಚಿತ್ರ ರಂಗದ ಹಿರಿಯ ನಟ ರಾಮಕೃಷ್ಣ ಮಾತನಾಡಿ ಸಾಹಿತ್ಯ ಮತ್ತು ಸಾಹಿತಿಗಳನ್ನು ಇತ್ತೀಚಿನ ಚಿತ್ರರಂಗ ಕಡೆಗಣಿಸುತ್ತಿರುವುದು ಬೇಸರದ ಸಂಗತಿಯಾಗಿದೆ ಎಂದು ಬೇಸರಿಸಿದರು. -
ಚಿಕ್ಕಬಳ್ಳಾಪುರ : ಕನ್ನಡ ಚಲನಚಿತ್ರ ರಂಗದ ಹಿರಿಯ ನಟ ರಾಮಕೃಷ್ಣ(Veteran actor Ramakrishna) ಮಾತನಾಡಿ, ಸಾಹಿತ್ಯ ಮತ್ತು ಸಾಹಿತಿಗಳನ್ನು ಇತ್ತೀಚಿನ ಚಿತ್ರರಂಗ ಕಡೆಗಣಿಸು ತ್ತಿರುವುದು ಬೇಸರದ ಸಂಗತಿಯಾಗಿದೆ ಎಂದು ಬೇಸರಿಸಿದರು.
ಕನ್ನಡ ಸಾಹಿತ್ಯ ಪರಿಷತ್ತು ಚಿಕ್ಕಬಳ್ಳಾಪುರ ಜಿಲ್ಲೆ ಮತ್ತು ತಾಲ್ಲೂಕು ಹಾಗೂ ಸಿರಿಮಲ್ಲಿಗೆ ಕನ್ನಡ ಸಾಹಿತ್ಯ ವೇದಿಕೆ ಬೆಂಗಳೂರು ಇವರ ಸಹಯೋಗದಲ್ಲಿ ಭಾನುವಾರ ಒಕ್ಕಲಿಗರ ಕಲ್ಯಾಣ ಮಂಟಪ ದಲ್ಲಿ ನಡೆದ ಬಿ.ಎಂ.ಪ್ರಮೀಳ ಮಹದೇವ್ ಅವರ ಸಾಲುದೀಪಗಳು ಕವನ ಸಂಕಲನ ಲೋಕಾ ರ್ಪಣೆ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದರು.
ನಾನು ಸಾಹಿತ್ಯವನ್ನಾಗಲಿ ಪುಸ್ತಕಗಳನ್ನಾಗಲಿ ಅರೆದು ಕುಡಿದವನಲ್ಲ. 40 ವರ್ಷಗಳ ವೃತ್ತಿ ಜೀವನ ದಲ್ಲಿ ಸಿಕ್ಕಿರುವ ಅತ್ಯುತ್ತಮ ಬರಹಗಾರರಾದ ಕೆಲವರಿಂದ ಅದು ತರಾಸು ಅವರಿಂದ ತ್ರಿವೇಣಿ ಆಗಿರಬಹುದು ಅನಕೃ ಅವರಿಂದ ಬೀಚಿಯವರಾಗಿರಬಹುದು. ಇವರೆಲ್ಲರಿಂದ ಎರಕ ಹೊಯ್ದಂ ತಿದ್ದ ಪುಟ್ಟಣ್ಣ ಕಣಗಾಲ್ ಇರಬಹುದು.ಇವರ ಬಳಿ ಸಂಭಾಷಣೆಯನ್ನು ಒಪ್ಪಿಸಿ, ಒಪ್ಪಿಸಿ ಕೆನ್ನೆಗೆ ಏಟು ತಿಂದು ಇಷ್ಟರ ಮಟ್ಟಿಗಿನ ಭಾಷಾ ಶುದ್ಧತೆ ನಮಗೆ ಬಂದಿದೆ ಎಂದರು.
ಇದನ್ನೂ ಓದಿ: Chimul Election: ಬಿಳಿ ತಲೆಯ ಖಾಲಿ ಡಬ್ಬಗಳು ಸೋತಿದ್ದು, ಕೂಲಿ ಪಡೆದ ತೃಪ್ತಿಯಿದೆ: ಭರಣಿ ವೆಂಕಟೇಶ್
ಗುಬ್ಬಿ ವೀರಣ್ಣ ನಾಟಕ ಕಂಪನಿಯಲ್ಲಿ ಸಣ್ಣ ಪುಟ್ಟ ಪಾತ್ರಗಳನ್ನು ಮಾಡುತ್ತಿದ್ದೆ. ಇಲ್ಲಿದ್ದೇನೆ ಎಂದೇ ಡಾ.ರಾಜ್‌ಕುಮಾರ್ ಬಬ್ರುವಾಹನ ಸಿನಿಮಾದಲ್ಲಿ ನನಗೆ ಶ್ರೀಕೃಷ್ಣನ ಪಾತ್ರಕೊಡಿಸಿದರು. ಕನ್ನಡ ಚಿತ್ರರಂಗ ಅಂದರೆ ಕನ್ನಡ ಸಾಹಿತ್ಯದ ಇನ್ನೊಂದು ಕಣ್ಣು. ಕನ್ನಡ ಸಾಹಿತ್ಯದ ದೃಶ್ಯ ಕಾವ್ಯವೇ ಕನ್ನಡ ಚಿತ್ರರಂಗ ಎಂಬ ಮಾತುಗಳನ್ನು ನಾನು ಕೇಳಿದ್ದೇನೆ.ಕನ್ನಡ ಸಾಹಿತಿಗಳಿಲ್ಲದೆ ಚಿತ್ರರಂಗ ಇಲ್ಲ. ಆದರೆ ಇತ್ತೀಚಿನ ದಿನಗಳಲ್ಲಿ ನಾವು ಸಾಹಿತಿಗಳನ್ನು ಮರೆತು ಅವರನ್ನು ಗೌರವಿಸದೆ ಸರಿಯಾಗಿ ಪೋಷಿಸದೆ ನಮ್ಮನ್ನು ನಾವು ಬೈಸಿಕೊಂಡು ಕೀಳುಮಟ್ಟಕ್ಕೆ ಇಳಿಸಿಕೊಂಡಿ ದ್ದೇವೆ. ಹೊಸ ಕೃತಿ ಬಂದರೆ ಸಾಕು ಪುಟ್ಟಣ್ಣ ಕಣಗಾಲ್ ಹೇಳುತ್ತಿದ್ದರು ಹೊಸ ಮುತ್ತು ಕನ್ನಡಿಗರಿಗೆ ಹೊಸದಾಗಿ ಅರ್ಪಣೆ ಎಂದು.ಲೇಖಕ ಹಾಕಿದ ಗೆರೆಯನ್ನು ದಾಟಬಾರದು ಆ ಹಕ್ಕು ನಮಗಿಲ್ಲ, ನಾವು ದಾಟುತ್ತಿರಲಿಲ್ಲ ಕೂಡ ಎಂದರು.
ಸಾಹಿತ್ಯ ಮತ್ತು ಸಾಹಿತಿಗಳಿಗೆ ಗೌರವ ನೀಡಿದಾಗಲೇ ಸಮಾಜ ಉನ್ನತಿ ಕಾಣಲಿದೆ. ನಮ್ಮನ್ನು ಪೋಷಿಸಿದ ಗುಬ್ಬಿ ನಾಟಕ ಕಂಪನಿ ಮತ್ತು ನಿರ್ದೇಶಕ ಪುಟ್ಟಣ್ಣ ಕಣಗಾಲ್ ಅವರು ಸದಭಿರುಚಿಯ ಚಿತ್ರಗಳ ಮೂಲಕ ಆರೋಗ್ಯಪೂರ್ಣ ಸಮಾಜ ನಿರ್ಮಾಣಕ್ಕೆ ಶ್ರಮಿಸಿದ್ದರು. ಚಲನ ಚಿತ್ರದಲ್ಲಿ ಅಪ್ಪಿ ತಪ್ಪಿಯೂ ರೇಪ್ ಪದ ಬಳಸುತ್ತಿರಲಿಲ್ಲ ಎಂದರು.
ಇತ್ತೀಚಿನ ದಿನಗಳಲ್ಲಿ ಸಾಹಿತಿಗಳನ್ನು ನಾವು ಅಂದರೆ ಎಲ್ಲರೂ ಅಲ್ಲ ಕೆಲ ನಿರ್ಮಾಪಕ ನಿರ್ದೇಶಕರು ನಿಕೃಷ್ಟತೆಯಿಂದ ಕಾಣುತ್ತಾ ಸಾಹಿತ್ಯ ಸಂಗೀತಕ್ಕೆ ಮಹತ್ವ ನೀಡದೆ ಕೋಟಿಗಟ್ಟಲೆ ಹಣ ಸುರಿದು ಚಿತ್ರ ಮಾಡುತ್ತಿದ್ದಾರೆ.ಇವುಗಳನ್ನು ನೋಡಕ್ಕಾಗಲ್ಲ ಅಲ್ಲಯ್ಯಾ ಎಂದು ಹೇಳುವವ ರನ್ನು ನೋಡಿದ್ದೇವೆ. ಹೌದು ಎದೆಯ ಮೇಲೆ ತಲೆಯ ಮೇಲೆ ಇರಬೇಕಾದ ಸಾಹಿತ್ಯವನ್ನು ಸೊಂಟದ ಕೆಳಗೆ ಇಳಿಸಿಬಿಟ್ಟಿದ್ದೀವಲ್ಲ ಎಂಬ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕು. ಚಲನ ಚಿತ್ರಗಳಲ್ಲಿ ಬಳಕೆಯಾಗುವ ಭಾಷೆಯಲ್ಲಿ ಇರಬೇಕಾಗಿದ್ದ ಎಚ್ಚರಿಕೆ ಕಣ್ಮರೆಯಾಗಿದೆ ಎಂದು ನೊಂದು ನುಡಿದರು.
ನಿವೃತ್ತ ವಾರ್ತಾ ವಾಚಕ ಕೃಷ್ಣ ಕಾಂತ್ ಮಾತನಾಡಿ. ಸಾಹಿತಿಗಳಿಗೆ ಮಾತ್ರ ಜ್ಞಾನ ಪೀಠ ಪ್ರಶಸ್ತಿ ಕೊಡುತ್ತಾರೆ. ಯಾಕೆ ಎಂದರೆ ಅವರು ನಿಜವಾದ ಸರಸ್ವತಿ ಪುತ್ರರು ಎನ್ನುವ ಕಾರಣಕ್ಕೆ.ಇಂಹತ ಉನ್ನತ ಪರಂಪರೆಯುಳ್ಳ ಸಾಹಿತ್ಯ ಲೋಕಕ್ಕೆ ವಿಜ್ಞಾನ ಶಿಕ್ಷಕಿ ಪ್ರಮೀಳ ಹೆಸರು ಹೊಸ ಸೇರ್ಪಡೆ ಆಗುತ್ತಿರುವುದು ಶುಭ ಸೂಚಕ ಎಂದರು.
ಬಾಗೇಪಲ್ಲಿ ಆದರ್ಶ ಪ್ರೌಢಶಾಲೆ ವಿಜ್ಞಾನ ಶಿಕ್ಷಕಿ ಕವಿಯತ್ರಿ ಪ್ರಮೀಳಾ ಮಹಾದೇವ ಮಾತನಾಡಿ, ಸಜ್ಜನರ ಸಂಘ, ಮನೆಯ ಮರಿಸರ ಗುರುಗಳ ಪ್ರೋತ್ಸಾಹ ಮತ್ತು ಆಶೀರ್ವಾದ ಇದ್ದರೆ ಕಲ್ಲು ಮೂರ್ತಿಯಾಗುವಂತೆ ಉತ್ತಮ ನಾಗರೀಕರಾಗಿ ರೂಪುಗೊಳ್ಳಲು ಸಹಕಾರಿ ಆಗಲಿದೆ. ನನ್ನ ಜೀವನ ದಲ್ಲಿ ನಮ್ಮ ತಾಯಿ ಮತ್ತು ಅಜ್ಜಿಯ ಪಾತ್ರ ದೊಡ್ಡದಿದೆ ಎಂದು ಸ್ಮರಿಸಿದರು. ಬಾಲುದಿಂದ ನಾನು ಶಿಕ್ಷಣ ಕ್ಷೇತ್ರದಲ್ಲಿ ಕಂಡು ಉಂಡ ಅನುಭವವೇ ಸಾಲು ದೀಪಗಳ ಕೃತಿಯಲ್ಲಿ ಮೈದಳೆದಿದೆ ಎಂದರು.
ಪ್ರಕೃತಿಯು ನೀಡಿದ ವರ ಮತ್ತು ಪುಸ್ತಕ ಓದುವ ಹವ್ಯಾಸ ಬಾಲ್ಯದಿಂದಲೇ ನನಗೆ ಇತ್ತು. ಇದೇ ಸಾಹಿತ್ಯ ಲೋಕಕ್ಕೆ ಪ್ರವೇಶ ಪಡೆಯಲು ನನಗೆ ಸಾಧ್ಯವಾಯಿತು. ಹೀಗಾಗಿ ಓದುವವರಿಗೆ ಉಳ್ಳವರು ಸಹಾಯ ಮಾಡಿದರೆ ಅವರು ಬೆಳೆದು ದೊಡ್ಡವರಾದ ಮೇಲೆ ಸಮಾಜದ ಆಸ್ತಿಯಾಗುತ್ತಾರೆ ಎಂದು ಮನವಿ ಮಾಡಿದರು.
ಆಶೀರ್ವಚನ ನೀಡಿ ಮಾತನಾಡಿದ ಆದಿಚುಂಚನಗಿರಿ ಶಾಖಾ ಮಠದ ಮಂಗಳನಾಥ ಸ್ವಾಮೀಜಿ ಸಾಹಿತಿಯಾಗುವುದು ಸುಲಭ ಸಾಧ್ಯವಲ್ಲ. ಸತತ ಪರಿಶ್ರಮ, ಅಪಾರ ಓದು, ಪೂರ್ವಸೂರಿಗಳ ಸ್ಮರಣೆ ಸಾಧಿಸುವ ಛಲ ಇದ್ದರೆ ಸಾಹಿತಿ ಆಗಬಹುದು ಎಂಬುದಕ್ಕೆ ಪ್ರಮೀಳ ಸಾಕ್ಷಿಯಂತಿದ್ದಾರೆ. ಸಾಲು ದೀಪಗಳು ಕವನ ಸಂಕಲನ ನಿಜಕ್ಕೂ ಸಾಲು ದೀಪಗಳೇ ಆಗಿವೆ. ಸಾಹಿತ್ಯ ಮತ್ತು ಸಾಹಿತಿಗಳು ಸಮಾಜದ ಎರಡು ಕಣ್ಣುಗಳಿದ್ದಂತೆ. ಆದ್ದರಿಂದ ಎಚ್ಚರಿಕೆಯಿಂದ ಈ ಮಾರ್ಗದಲ್ಲಿ ನಡೆಯಬೇಕಿದೆ ಎಂದರು.
ಕಾರ್ಯಕ್ರಮದಲ್ಲಿ ಕವಿಗೋಷ್ಠಿ, ಗೀತಗಾಯನ, ಕೃಷಿ ಕ್ಷೇತ್ರದ ಇಬ್ಬರು ಸಾಧಕರಿಗೆ ಗೌರವ ಸಮರ್ಪಣೆ ನಡೆಯಿತು. ಶಿಕ್ಷಕಿ ಕೀರ್ತಿ ಬಸಪ್ಪ ಲಗಳಿ ಅವರು ನಡೆಸಿಕೊಟ್ಟ ಭರತನಾಟ್ಯ ಕಾರ್ಯ ಕ್ರಮ ಪ್ರೇಕ್ಷಕರ ಮನಸೂರೆಗೊಂಡಿತು.
ಕಾರ್ಯಕ್ರಮದಲ್ಲಿ ಆದಿಚುಂಚನಗಿರಿ ಶಾಖಾ ಮಠದ ಶ್ರೀ ಮಂಗಳನಾಥ ಸ್ವಾಮೀಜಿ, ಕನ್ನಡ ಸಿನಿಮಾ ಹಿರಿಯ ನಟ ರಾಮಕೃಷ್ಣ, ಹಿರಿಯ ಸಾಹಿತಿ ಕಲ್ವಮಂಜಲಿ, ಮಹಿಳಾ ಕಾಲೇಜಿನ ಪ್ರಾಂಶು ಪಾಲ ಜಿ.ಡಿ.ಚಂದ್ರಯ್ಯ,ಬಾನುಲಿ ಮತ್ತು ದೂರದರ್ಶನ ನಿವೃತ್ತ ವಾರ್ತಾ ವಾಚಕ ಕೆ.ಟಿ.ಕೃಷ್ಣ ಕಾಂತ್, ಗೋಪಾಲಗೌಡ,ಕಸಾಪ ಜಿಲ್ಲಾಧ್ಯಕ್ಷ ಕೋಡಿ ರಂಗಪ್ಪ, ಎಸ್.ಎನ್ ಅಮೃತ ಕುಮಾರ್, ತಾಲೂಕು ಅಧ್ಯಕ್ಷ ಯಲುವಳ್ಳಿ ಸೊಣ್ಣೇಗೌಡ,ಪ್ರೊ.ಶಂಕರ್,ಬಿ.ಎನ್.ಮುನಿಕೃಷ್ಣಪ್ಪ, ಕನ್ನಡ ಸೇನೆ ರವಿಕುಮಾರ್, ಕವಿಯತ್ರಿ ಸವಿತಾ ಹೊಸಪೇಟೆ ,ವೈ.ಬಿ.ಹೆಚ್.ಲಲತಾ ರಾಮಮೂರ್ತಿ ಜಯದೇವ್ ಮತ್ತಿತರರು ಇದ್ದರು.