Chikkaballapur News: ಎಲ್ಲಾ ಹಿರಿಯ ನಾಗರಿಕರಿಗೆ ಪ್ರೀತಿ, ಗೌರವ, ಕಾಳಜಿ ತೋರಿ ಸೇವೆ ಸಲ್ಲಿಸುವುದು ನಮ್ಮೆಲ್ಲರ ಕರ್ತವ್ಯ
ಪ್ರತಿಯೊಬ್ಬರ ಜೀವನದಲ್ಲಿಯೂ ಬಾಲ್ಯ, ಯೌವ್ವನ ಹಾಗೂ ಮುಪ್ಪು ಸಹಜವಾದುದು. ಹಿರಿಯ ನಾಗರಿಕರನ್ನು ಪ್ರತಿಯೊಬ್ಬರು ಗೌರವದಿಂದ ಕಾಣಬೇಕು ಹಾಗೂ ವಿವಿಧ ಇಲಾಖೆಗಳಿಂದ ಹಿರಿಯ ನಾಗರಿಕರಿಗೆ ಮತ್ತು ವಿಕಲಚೇತನರಿಗೆ ದೊರೆಯಬೇಕಾದ ಸೌಲಭ್ಯಗಳು ಅವರಿಗೆ ತಲುಪುವ ನಿಟ್ಟಿನಲ್ಲಿ ಎಲ್ಲಾ ರೀತಿಯ ಸಹಕಾರ ನೀಡಬೇಕು

-

ಚಿಕ್ಕಬಳ್ಳಾಪುರ : ಮಕ್ಕಳಿಗಾಗಿ ತಮ್ಮಿಡೀ ಜೀವನ ಮೀಸಲಿಟ್ಟು ವೃದ್ಧ ವಯಸ್ಸಿಗೆ ಬಂದಿರುವ ತಂದೆ ತಾಯಿಯರು ಸೇರಿದಂತೆ ಎಲ್ಲಾ ಹಿರಿಯ ನಾಗರಿಕರಿಗೆ ಪ್ರೀತಿ, ಗೌರವ, ಕಾಳಜಿ ತೋರಿ ಸೇವೆ ಸಲ್ಲಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಯಲುವಳ್ಳಿ ಎನ್ ರಮೇಶ್ ಅವರು ತಿಳಿಸಿದರು.
ಅವರು ಶುಕ್ರವಾರ ಸರ್.ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಕ್ರೀಡಾ ಮತ್ತು ಯುವ ಸಬಲೀಕರಣ ಇಲಾಖೆ, ಹಿರಿಯ ನಾಗರಿಕರ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಸ್ವಯಂ ಸೇವೆ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ “ವಿಶ್ವ ಹಿರಿಯ ನಾಗರೀಕರ ದಿನಾಚರಣೆ”ಗೆ ಚಾಲನೆ ನೀಡಿ ಅವರು ಮಾತನಾಡಿದರು.
ಪ್ರತಿಯೊಬ್ಬರ ಜೀವನದಲ್ಲಿಯೂ ಬಾಲ್ಯ, ಯೌವ್ವನ ಹಾಗೂ ಮುಪ್ಪು ಸಹಜವಾದುದು. ಹಿರಿಯ ನಾಗರಿಕರನ್ನು ಪ್ರತಿಯೊಬ್ಬರು ಗೌರವದಿಂದ ಕಾಣಬೇಕು ಹಾಗೂ ವಿವಿಧ ಇಲಾಖೆಗಳಿಂದ ಹಿರಿಯ ನಾಗರಿಕರಿಗೆ ಮತ್ತು ವಿಕಲಚೇತನರಿಗೆ ದೊರೆಯಬೇಕಾದ ಸೌಲಭ್ಯಗಳು ಅವರಿಗೆ ತಲುಪುವ ನಿಟ್ಟಿನಲ್ಲಿ ಎಲ್ಲಾ ರೀತಿಯ ಸಹಕಾರ ನೀಡಬೇಕು ಎಂದು ಸಂಬಂಧ ಪಟ್ಟ ಅಧಿಕಾರಿಗಳಿಗೆ ತಿಳಿಸಿದರು.
ಇದನ್ನೂ ಓದಿ: Chikkaballapur News: ಸತ್ಯ ಸಾಯಿ ಗ್ರಾಮದಲ್ಲಿ ವೈಭವದಿಂದ ನಡೆದ ಉಮಾ-ಮಹೇಶ್ವರ ಕಲ್ಯಾಣ ಮಹೋತ್ಸವ
ಕಣ್ಣಿಗೆ ಕಾಣುವ ದೇವರೆಂದರೆ ಜನ್ಮ ನೀಡಿದ ತಂದೆ ತಾಯಿಯರು. ಜನ್ಮ ದಾತರಿಗೆ ಸೇವೆ ಸಲ್ಲಿಸಿದರೆ ದೇವರ ಸೇವೆ ಮಾಡಿದಷ್ಟು ಪುಣ್ಯ ಲಭಿಸಲಿದೆ. ವರ್ಷಗಳು ಉರುಳಿದಂತೆ ದೇಹಕ್ಕೆ ವಯಸ್ಸು ಆಗುವುದು ಸಹಜ ಪ್ರಕ್ರಿಯೆ. ಈ ಪ್ರಕ್ರಿಯೆಯಲ್ಲಿ ಎಲ್ಲರೂ ಒಳಗೊಳ್ಳುವುದು ನಿಸರ್ಗ ನಿಯಮ. ನಿಸರ್ಗ ನಿಯಮದಂತೆ ಹಿರಿಯ ನಾಗರಿಕರಾದ ನಮ್ಮ ತಂದೆ-ತಾಯಿ, ಅಜ್ಜ-ಅಜ್ಜಿ ಮಾತ್ರವಲ್ಲದೆ, ಪ್ರತಿ ಮನೆಯ ಹಿರಿಯರು ಜೀವಂತ ಮಾರ್ಗದರ್ಶಕರಾಗಿರುತ್ತಾರೆ. ಅವರು ಹೇಳುವ ಸಲಹೆಗಳು, ನಮ್ಮನ್ನು ಸರಿಯಾದ ದಾರಿಯಲ್ಲಿ ನಡೆಯಲು ನೆರವಾಗುತ್ತವೆ. ಒಟ್ಟಾರೆ ಹಿರಿಯರನ್ನು ಗೌರವ ದಿಂದ ನೋಡಿಕೊಳ್ಳುವುದು ನಮ್ಮ ಹೊಣೆಗಾರಿಕೆ ಎಂದು ತಿಳಿಸಿದರು.
ರಾಜ್ಯ ಸರ್ಕಾರದ ಅನ್ನಭಾಗ್ಯ ಯೋಜನೆಯಡಿ ಇನ್ನು ಮುಂದೆ 10 ಕೆಜಿ ಅಕ್ಕಿಯ ಬದಲಾಗಿದೆ 5 ಕೆಜಿ ಅಕ್ಕಿ ಜೊತೆಗೆ ತೊಗರಿ ಬೆಳೆ, ಅಡುಗೆ ಎಣ್ಣೆ, ಸಕ್ಕರೆ, ಉಪ್ಪು ಒಳಗೊಂಡಂತೆ ಇಂದಿರಾ ಕಿಟ್ ಅನ್ನು ಪಡಿತರ ಫಲಾನುಭವಿಗಳಿಗೆ ವಿತರಿಸಲು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಿರುವುದು ಸಂತಸದ ವಿಷಯವಾಗಿದೆ ಎಂದು ತಿಳಿಸಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ವೆಂಕಟೇಶ್ ರೆಡ್ಡಿ ಅವರು ಮಾತನಾಡುತ್ತಾ, ದಿನಗಳು ಉರುಳಿದಂತೆ ದೇಹಕ್ಕೆ ವಯಸ್ಸು ಆಗುತ್ತದೆ. ಬಾಲ್ಯಾವಸ್ಥೆ, ಯೌವ್ವನಾ ವಸ್ಥೆ, ಮುಪ್ಪು ಹಾಗೂ ಕೊನೆಗೆ ಸಾವು. ಇವೆಲ್ಲವು ಜೀವಿತದಲ್ಲಿ ಸಂಭವಿಸುವ ಸಹಜ ಪ್ರಕ್ರಿಯೆಗಳು ಎಂದರು .
ಯುವಜನರು ಸಂಪಾದನೆಯ ಹುಚ್ಚಿಗೆ ಬಿದ್ದು ಊರು ತೊರೆದು ನಗರಗಳಿಗೆ ವಲಸೆ ಹೋಗಿ ವೃದ್ಧರನ್ನು ಅನಾಥಾಶ್ರಮಗಳಿಗೆ ಸೇರಿಸುವುದು ಹೆಚ್ಚುತ್ತಿದೆ. ಇದರಿಂದ ಬಾಧಿತವಾಗಿರುವ ವೃದ್ಧರ ಗೋಳು ಹೇಳತೀರದು. ನಮ್ಮ ಬದುಕಿಗೆ ದಾರಿ ಮಾಡಿಕೊಟ್ಟ ಹಿರಿಯ ನಾಗರಿಕರ ಕೊನೆಗಾಲದ ಬದುಕನ್ನು ಹಸನುಗೊಳಿಸುವುದು ಪ್ರತಿಯೊಬ್ಬ ಯುವಜನರ ಆದ್ಯ ಕರ್ತವ್ಯ ಎಂದು ಹೇಳಿದರು.
ಹಿರಿಯ ನಾಗರಿಕರಿಗೆ ಅವರ ಕುಟುಂಬದ ಸದಸ್ಯರು ಅಥವಾ ಇತರರು ಅಗೌರವ, ದೌರ್ಜನ್ಯ ಅಥವಾ ಅನ್ಯಾಯ ಮಾಡಿದರೆ ಉಚಿತ ಸಹಾಯವಾಣಿಗೆ 1090 ಮೂಲಕ ಸಕ್ಷಮ ಪ್ರಾಧಿಕಾರಗಳ ನೆರವನ್ನು ಪಡೆಯಬೇಕು ಎಂದು ತಿಳಿಸಿದರು
ಹಿರಿಯ ನಾಗರಿಕ ದಿನಾಚರಣೆಯ ಪ್ರಯುಕ್ತ ಆಯೋಜಿಸಿದ್ದ ಕ್ರೀಡೆ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳ ವಿಜೇತ ಹಿರಿಯರಿಗೆ ಮತ್ತು ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಗಣ್ಯರಿಗೆ ಈ ವೇಳೆ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಕಲ್ಯಾಣಾಧಿಕಾರಿ ಜ್ಯೋತಿ ಲಕ್ಷ್ಮಿ, ಜಿಲ್ಲಾ ಪಂಚಾಯತ್ ಸಹಾಯಕ ಕಾರ್ಯದರ್ಶಿ ಮುನಿರಾಜು, ಜಿಲ್ಲಾ ಹಿರಿಯ ನಾಗರೀಕರ ವೇದಿಕೆಯ ಅಧ್ಯಕ್ಷ ತಿರುಮಲಪ್ಪ, ಕಾರ್ಯದರ್ಶಿ ಜಯರಾಮ್ ರೆಡ್ಡಿ,ಶಿಡ್ಲಘಟ್ಟ ಆಶಾಕಿರಣ ಅಂಗವಿಕಲ ಶಾಲೆಯ ಅಧ್ಯಕ್ಷ ಗೋಪಾಲ್ ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಹಿರಿಯ ನಾಗರಿಕರು ಉಪಸ್ಥಿತರಿದ್ದರು.