ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Job Mela: ಗುಡಿಬಂಡೆ ತಾಲ್ಲೂಕಿನಲ್ಲಿ ಜಾಬ್ ಕಾರ್ಡ್ ಮೇಳ: ಗ್ರಾಮೀಣ ಕುಟುಂಬಗಳಿಗೆ ಸ್ವಗ್ರಾಮದಲ್ಲೇ ಉದ್ಯೋಗದ ಅವಕಾಶ

ಐಇಸಿ ಚಟುವಟಿಕೆಗಳಡಿ ಗ್ರಾಮೀಣ ಪ್ರದೇಶದಲ್ಲಿ ಮನೆ ಮನೆಗೆ ಭೇಟಿ ನೀಡಿ, ಯೋಜನೆಯಡಿ ಅರ್ಹರಿಗೆ ಹೊಸ ಜಾಬ್ ಕಾರ್ಡ್ ಮಾಡಿಸಿಕೊಡುವುದು, ಹಳೆಯ ಜಾಬ್ ಕಾರ್ಡ್‌ಗಳನ್ನು ನವೀಕರಿಸುವುದು ಹಾಗೂ e-KYC ಪ್ರಕ್ರಿಯೆ ಪೂರ್ಣಗೊಳಿಸುವುದರ ಜೊತೆಗೆ ಉದ್ಯೋಗದ ಬೇಡಿಕೆ ಸ್ವೀಕರಿಸುವ ಕಾರ್ಯಕ್ಕೆ ಆದ್ಯತೆ ನೀಡಲಾಗುತ್ತಿದೆ

ಗ್ರಾಮೀಣ ಕುಟುಂಬಗಳಿಗೆ ಸ್ವಗ್ರಾಮದಲ್ಲೇ ಉದ್ಯೋಗದ ಅವಕಾಶ

ವಿಕಸಿತ ಭಾರತ–ಗ್ಯಾರಂಟಿ ಫಾರ್ ರೋಜಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ) ಯೋಜನೆಯಡಿ ತಾಲ್ಲೂಕಿನಾದ್ಯಂತ ಆಗಸ್ಟ್ 15ರಿಂದ ಸೆಪ್ಟೆಂಬರ್ 15ರವರೆಗೆ ಜಾಬ್ ಕಾರ್ಡ್ ಮೇಳ ಹಾಗೂ ವಿಶೇಷ ಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗಿದೆ. -

Profile
Ashok Nayak Aug 22, 2026 12:16 PM

ಗುಡಿಬಂಡೆ: ಗ್ರಾಮೀಣ ಪ್ರದೇಶದ ಕುಟುಂಬಗಳಿಗೆ ಸ್ವಗ್ರಾಮದಲ್ಲೇ ಉದ್ಯೋಗಾವಕಾಶ ಕಲ್ಪಿಸುವ ಉದ್ದೇಶದಿಂದ ವಿಕಸಿತ ಭಾರತ–ಗ್ಯಾರಂಟಿ ಫಾರ್ ರೋಜಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ) ಯೋಜನೆಯಡಿ ತಾಲ್ಲೂಕಿನಾದ್ಯಂತ ಆ.15ರಿಂದ ಸೆಪ್ಟೆಂಬರ್ 15ರವರೆಗೆ ಜಾಬ್ ಕಾರ್ಡ್ ಮೇಳ ಹಾಗೂ ವಿಶೇಷ ಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗಿದ್ದು, ಅಭಿಯಾನದ ಅಂಗವಾಗಿ ವರ್ಲಕೊಂಡ ಹಾಗೂ ಸೋಮನಹಳ್ಳಿ ಗ್ರಾಮಗಳಲ್ಲಿ ಜಾಬ್ ಕಾರ್ಡ್ ಮೇಳ(Job Card Mela) ನಡೆಸಲಾಯಿತು.

ಈ ವೇಳೆ ತಾಲ್ಲೂಕು ಮಾಹಿತಿ, ಶಿಕ್ಷಣ ಮತ್ತು ಸಂವಹನ ಸಂಯೋಜಕ ರಾಮಂಜಿ ಮಾತನಾಡಿ, ತಾಲ್ಲೂಕಿನ ಎಲ್ಲಾ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಜಾಬ್ ಕಾರ್ಡ್ ಮೇಳಗಳನ್ನು ಆಯೋಜಿಸುವ ಮೂಲಕ ಗ್ರಾಮೀಣ ಕುಟುಂಬಗಳಿಗೆ ಉದ್ಯೋಗಾವಕಾಶ ಕಲ್ಪಿಸುವುದು ಹಾಗೂ ಹೆಚ್ಚಿನ ಪ್ರಮಾಣದಲ್ಲಿ ಮಾನವ ದಿನಗಳ ಸೃಷ್ಟಿಗೆ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಉದ್ದೇಶ ಹೊಂದಲಾಗಿದೆ ಎಂದರು.

ಐಇಸಿ ಚಟುವಟಿಕೆಗಳಡಿ ಗ್ರಾಮೀಣ ಪ್ರದೇಶದಲ್ಲಿ ಮನೆ ಮನೆಗೆ ಭೇಟಿ ನೀಡಿ, ಯೋಜನೆಯಡಿ ಅರ್ಹರಿಗೆ ಹೊಸ ಜಾಬ್ ಕಾರ್ಡ್ ಮಾಡಿಸಿಕೊಡುವುದು, ಹಳೆಯ ಜಾಬ್ ಕಾರ್ಡ್‌ಗಳನ್ನು ನವೀಕರಿಸುವುದು ಹಾಗೂ e-KYC ಪ್ರಕ್ರಿಯೆ ಪೂರ್ಣಗೊಳಿಸುವುದರ ಜೊತೆಗೆ ಉದ್ಯೋಗದ ಬೇಡಿಕೆ ಸ್ವೀಕರಿಸುವ ಕಾರ್ಯಕ್ಕೆ ಆದ್ಯತೆ ನೀಡಲಾಗುತ್ತಿದೆ ಎಂದರು.

ಇದನ್ನೂ ಓದಿ: JOB ALERT: ಬಳ್ಳಾರಿ ಡಿಸಿಸಿ ಬ್ಯಾಂಕ್‌ನಲ್ಲಿ 82 ಹುದ್ದೆಗಳ ಭರ್ತಿ: ಪದವೀಧರರು, ಪಿಯುಸಿ ಹಾಗೂ ಎಸ್‌ಎಸ್‌ಎಲ್‌ಸಿ ಅಭ್ಯರ್ಥಿಗಳಿಗೆ ಉದ್ಯೋಗಾವಕಾಶ

ಕಾರ್ಮಿಕರ ಹಾಜರಾತಿ, ಕಾಮಗಾರಿಗಳ ಪ್ರಗತಿ ಹಾಗೂ ಸಂಬಂಧಿತ ದಾಖಲೆಗಳನ್ನು ಡಿಜಿಟಲ್ ವ್ಯವಸ್ಥೆಯ ಮೂಲಕ ನಿರ್ವಹಿಸುವುದಕ್ಕೂ ಒತ್ತು ನೀಡಲಾಗುತ್ತಿದ್ದು, ಅರ್ಹ ಕುಟುಂಬಗಳಿಗೆ ಉದ್ಯೋಗಾವಕಾಶವನ್ನು ಅವರ ಮನೆಬಾಗಿಲಿಗೆ ತಲುಪಿಸುವುದು ಅಭಿಯಾನದ ಪ್ರಮುಖ ಉದ್ದೇಶವಾಗಿದೆ. ಜಾಬ್ ಕಾರ್ಡ್, e-KYC, ಉದ್ಯೋಗದ ಬೇಡಿಕೆ ಸಲ್ಲಿಕೆ ಸೇರಿದಂತೆ ಯೋಜನೆಗೆ ಸಂಬಂಧಿಸಿದ ಯಾವುದೇ ಮಾಹಿತಿ ಅಗತ್ಯವಿದ್ದಲ್ಲಿ ಸಾರ್ವಜನಿಕರು ತಮ್ಮ ವ್ಯಾಪ್ತಿಯ ಗ್ರಾಮ ಪಂಚಾಯಿತಿಯನ್ನು ಸಂಪರ್ಕಿಸುವಂತೆ ಮನವಿ ಮಾಡಿದರು.

ಸ್ವಗ್ರಾಮದಲ್ಲೇ ಉದ್ಯೋಗಾವಕಾಶ ಕಲ್ಪಿಸುವ ಮೂಲಕ ಉದ್ಯೋಗ ಅರಸಿ ಗ್ರಾಮೀಣ ಪ್ರದೇಶಗಳಿಂದ ನಗರಗಳಿಗೆ ವಲಸೆ ಹೋಗುವ ಪರಿಸ್ಥಿತಿಯನ್ನು ತಡೆಯುವುದು ಯೋಜನೆಯ ಪ್ರಮುಖ ಆಶಯವಾಗಿದೆ. ಗ್ರಾಮೀಣ ಭಾಗದ ಅಕುಶಲ ಕೂಲಿಕಾರರ ಶ್ರೇಯೋಭಿವೃದ್ಧಿಗಾಗಿ ಜಾರಿಗೊಳಿಸಿರುವ ಈ ಜನಪರ ಯೋಜನೆಯ ಸದುಪಯೋಗವನ್ನು ತಾಲ್ಲೂಕಿನ ಎಲ್ಲಾ ಅರ್ಹ ಫಲಾನುಭವಿಗಳು ಪಡೆದುಕೊಳ್ಳಬೇಕು. 

ಆಗಸ್ಟ್ 15ರಿಂದ ಸೆಪ್ಟೆಂಬರ್ 15ರವರೆಗೆ ನಡೆಯುವ ವಿಶೇಷ ಅಭಿಯಾನದ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ವ್ಯಾಪಕ ಪ್ರಚಾರ ಕೈಗೊಂಡು ಜಾಬ್ ಕಾರ್ಡ್ ಮಾಡಿಕೊಡುವುದು, ಕೂಲಿ ಕೆಲಸದ ಬೇಡಿಕೆ ಸ್ವೀಕರಿಸಿ ಉದ್ಯೋಗ ಒದಗಿಸುವುದು ಹಾಗೂ ಯೋಜನೆಯಡಿ ಲಭ್ಯವಿರುವ ವಿವಿಧ ಸೌಲಭ್ಯಗಳ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ ಎಂದು ತಿಳಿಸಿದರು.

ಅಲ್ಲದೆ, ನಿಷ್ಕ್ರಿಯ ಜಾಬ್ ಕಾರ್ಡ್ ಹೊಂದಿರುವ ಕುಟುಂಬಗಳನ್ನು ಗುರುತಿಸಿ ಮನೆ ಮನೆಗೆ ಭೇಟಿ ನೀಡಲಾಗುತ್ತಿದ್ದು, ಯೋಜನೆಯಡಿ ಲಭ್ಯವಿರುವ ಅಕುಶಲ ಉದ್ಯೋಗ ಹಾಗೂ ವೈಯಕ್ತಿಕ ಸವಲತ್ತುಗಳ ಬಗ್ಗೆ ಜನರಿಗೆ ಮಾಹಿತಿ ನೀಡಲಾಗುತ್ತಿದೆ. ಗ್ರಾಮೀಣ ಭಾಗದ ದುರ್ಬಲ ವರ್ಗದ ಜನರ ಯೋಜನಾ ಭಾಗವಹಿಸುವಿಕೆಯನ್ನು ಹೆಚ್ಚಿಸುವುದು, ಉದ್ಯೋಗ ಸೃಷ್ಟಿಸುವ ಮೂಲಕ ಆರ್ಥಿಕ ಹಾಗೂ ಜೀವನೋಪಾಯ ಭದ್ರತೆ ಕಲ್ಪಿಸುವುದು ಅಭಿಯಾನದ ಪ್ರಮುಖ ಉದ್ದೇಶವಾಗಿದೆ. ಬರ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸುವ ನಿಟ್ಟಿನಲ್ಲಿ ಜಲ ಸಂರಕ್ಷಣೆ, ಅಂತರ್ಜಲ ಮರುಪೂರಣ ಹಾಗೂ ದೀರ್ಘಕಾಲೀನ ಜೀವನೋಪಾಯಕ್ಕೆ ನೆರವಾಗುವ ಕಾಮಗಾರಿಗಳಿಗೆ ಆದ್ಯತೆ ನೀಡಲಾಗುವುದು ಎಂದರು.

ಈ ಸಂದರ್ಭದಲ್ಲಿ ಮೇಟ್ ನವೀನ್, ಬಿಎಫ್‌ಟಿ ನರಸಿಂಹಪ್ಪ ಸೇರಿದಂತೆ ಗ್ರಾಮ ಪಂಚಾಯಿತಿ ಸಿಬ್ಬಂದಿ ಉಪಸ್ಥಿತರಿದ್ದರು.