Dr Shalini Rajaneesh: ತಂತ್ರಜ್ಞಾನಕ್ಕೆ ಕರುಣೆ, ನೈತಿಕತೆಯ ಸ್ಪರ್ಶವಿರಲಿ: ಡಾ.ಶಾಲಿನಿ ರಜನೀಶ್
ಗ್ರಾಮೀಣ ಯುವಕರಿಗೆ ಎಐ ಕೌಶಲಗಳನ್ನು ಕಲಿಸುವುದಷ್ಟೇ ಅಲ್ಲ, ಸಮಾಜದ ಒಳಿತಿಗಾಗಿ ತಂತ್ರಜ್ಞಾನ ವನ್ನು ಹೇಗೆ ಬಳಸಬೇಕು ಎಂಬ ಮೌಲ್ಯಗಳನ್ನೂ ಬೆಳೆಸುವುದು ಅಗತ್ಯ. ಶಿಕ್ಷಣ, ಕೌಶಲಾಭಿವೃದ್ಧಿ ಹಾಗೂ ಉದ್ಯೋಗಾವಕಾಶಗಳನ್ನು ಗ್ರಾಮಗಳ ಬಾಗಿಲಿಗೆ ತಲುಪಿಸುವ ಇಂತಹ ಪ್ರಯತ್ನಗಳು ಗ್ರಾಮೀಣ ಆರ್ಥಿಕತೆಯನ್ನು ಮತ್ತಷ್ಟು ಸದೃಢಗೊಳಿಸಲಿವೆ
-
ಚಿಕ್ಕಬಳ್ಳಾಪುರ: ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನದ ಕ್ರಾಂತಿ ನಗರಗಳಿಗೆ ಮಾತ್ರ ಸೀಮಿತ ವಾಗದೆ ಗ್ರಾಮೀಣ ಭಾರತದ ಯುವಜನರಿಗೂ ತಲುಪಬೇಕು. ತಂತ್ರಜ್ಞಾನವು ಸಮಾಜದ ಕಟ್ಟಕಡೆಯ ವ್ಯಕ್ತಿಯ ಬದುಕನ್ನು ಸುಧಾರಿಸುವ ಜತೆಗೆ ಕರುಣೆ, ನೈತಿಕತೆ ಮತ್ತು ಮಾನವೀಯ ಮೌಲ್ಯಗಳ ಸ್ಪರ್ಶ ಹೊಂದಿದಾಗ ಮಾತ್ರ ಅದರ ನಿಜವಾದ ಉದ್ದೇಶ ಈಡೇರುತ್ತದೆ ಎಂದು ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್(Dr Shalini Rajaneesh) ಹೇಳಿದರು.
ಸತ್ಯ ಸಾಯಿ ಗ್ರಾಮದಲ್ಲಿ ರೂರಲ್ ಶೋರ್ ಸಂಸ್ಥೆ ಹಾಗೂ ಶ್ರೀ ಸತ್ಯ ಸಾಯಿ ಮಾನವ ಅಭ್ಯುದಯ ವಿಶ್ವವಿದ್ಯಾಲಯದ ಸಹಯೋಗದಲ್ಲಿ ಸ್ಥಾಪಿಸಲಾದ ಭಾರತ ರತ್ನ ಸರ್ ಎಂ.ವಿಶ್ವೇಶ್ವರಯ್ಯ ಗ್ರಾಮೀಣ ಕೃತಕ ಬುದ್ಧಿಮತ್ತೆ ಕೌಶಲ ಮತ್ತು ಅನುಭವ ಕೇಂದ್ರ (ರೈಸ್) ಅನ್ನು ಉದ್ಘಾಟಿಸಿ ಮಾತನಾಡಿದರು.
ಇದನ್ನೂ ಓದಿ: Chikkaballapur News: 'ಬೇಡ ಬ್ರೋ–ರೈಸ್ ಕರ್ನಾಟಕ' ಜಾಗೃತಿ ಜಾಥಾ: ವ್ಯಸನಮುಕ್ತ ಸಮಾಜ ನಿರ್ಮಾಣಕ್ಕೆ ಪೊಲೀಸ್ ಇಲಾಖೆಯ ಕರೆ
ಗ್ರಾಮೀಣ ಯುವಕರಿಗೆ ಎಐ ಕೌಶಲಗಳನ್ನು ಕಲಿಸುವುದಷ್ಟೇ ಅಲ್ಲ, ಸಮಾಜದ ಒಳಿತಿಗಾಗಿ ತಂತ್ರಜ್ಞಾನವನ್ನು ಹೇಗೆ ಬಳಸಬೇಕು ಎಂಬ ಮೌಲ್ಯಗಳನ್ನೂ ಬೆಳೆಸುವುದು ಅಗತ್ಯ. ಶಿಕ್ಷಣ, ಕೌಶಲಾಭಿವೃದ್ಧಿ ಹಾಗೂ ಉದ್ಯೋಗಾವಕಾಶಗಳನ್ನು ಗ್ರಾಮಗಳ ಬಾಗಿಲಿಗೆ ತಲುಪಿಸುವ ಇಂತಹ ಪ್ರಯತ್ನಗಳು ಗ್ರಾಮೀಣ ಆರ್ಥಿಕತೆಯನ್ನು ಮತ್ತಷ್ಟು ಸದೃಢಗೊಳಿಸಲಿವೆ ಎಂದು ಹೇಳಿದರು.
ಕಳೆದ 18 ವರ್ಷಗಳಿಂದ ಗ್ರಾಮೀಣ ಯುವಕರು ಉದ್ಯೋಗಕ್ಕಾಗಿ ನಗರಗಳಿಗೆ ವಲಸೆ ಹೋಗದಂತೆ, ಅವರಿರುವ ಪ್ರದೇಶದಲ್ಲಿಯೇ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತಿರುವ ರೂರಲ್ ಶೋರ್ ಸಂಸ್ಥೆಯ ಕಾರ್ಯ ಶ್ಲಾಘನೀಯವಾಗಿದೆ. ಇಂತಹ ಮಾದರಿಗಳು ಗ್ರಾಮೀಣ ಭಾರತದ ಅಭಿವೃದ್ಧಿಗೆ ಹೊಸ ದಿಕ್ಕು ತೋರಲಿವೆ ಎಂದು ಅಭಿಪ್ರಾಯಪಟ್ಟರು.
ಇಂದಿನ ವೇಗವಾಗಿ ಬೆಳೆಯುತ್ತಿರುವ ತಂತ್ರಜ್ಞಾನ ಯುಗದಲ್ಲಿ ಎಐ ಮಾನವ ಬುದ್ಧಿವಂತಿಕೆ ಮತ್ತು ಸಾಮರ್ಥ್ಯವನ್ನು ವೃದ್ಧಿಸುವ ಸಾಧನವಾಗಬೇಕು. ಸೇವಾ ಮನೋಭಾವ, ನೈತಿಕತೆ ಮತ್ತು ಮಾನವೀಯ ಮೌಲ್ಯಗಳನ್ನು ಒಳಗೊಂಡ ವಾತಾವರಣದಲ್ಲಿ ಬೆಳೆಯುವ ತಂತ್ರಜ್ಞಾನವೇ ಸಮಾಜಕ್ಕೆ ಶಾಶ್ವತ ಒಳಿತನ್ನು ತರುತ್ತದೆ. ಸತ್ಯ ಸಾಯಿ ಗ್ರಾಮದಂತಹ ಸೇವಾ ಕೇಂದ್ರದಲ್ಲಿ ಈ ಕೌಶಲ ಕೇಂದ್ರ ಆರಂಭವಾಗಿರುವುದು ಅತ್ಯಂತ ಅರ್ಥಪೂರ್ಣ ಬೆಳವಣಿಗೆಯಾಗಿದೆ ಎಂದರು.
ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ಸದ್ಗುರು ಶ್ರೀ ಮಧುಸೂದನ ಸಾಯಿ, ತಂತ್ರಜ್ಞಾನವು ಮನುಷ್ಯನ ಸ್ಥಾನವನ್ನು ಕಸಿದುಕೊಳ್ಳುವುದಕ್ಕಲ್ಲ, ಮಾನವ ಸಾಮರ್ಥ್ಯವನ್ನು ವಿಸ್ತರಿಸುವ ಸಾಧನವಾಗಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಪ್ರಭು ಜಿ., ರೂರಲ್ ಶೋರ್ ಸಂಸ್ಥೆಯ ನಿರ್ದೇಶಕ ಸಿ.ಜಿ. ಶ್ರೀನಿವಾಸನ್, ಕಾರ್ಯಾಧ್ಯಕ್ಷ ಮುರಳಿ ಉಳಗಂಟಿ, ಪ್ರಶಾಂತಿ ಬಾಲಮಂದಿರ ಟ್ರಸ್ಟ್ ಅಧ್ಯಕ್ಷ ಬಿ.ಎನ್. ನರಸಿಂಹಮೂರ್ತಿ ಹಾಗೂ ಶ್ರೀ ಸತ್ಯ ಸಾಯಿ ಮಾನವ ಅಭ್ಯುದಯ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಶ್ರೀಕಂಠಮೂರ್ತಿ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.